ಮತ್ತೆ ಬಾ ಬಸವಣ್ಣ....!!
ನೀ ಹಚ್ಚಿದ ಕಿಡಿ
ಉರಿಯುತ್ತಲೆ ಇದೆ
ತೊಟ್ಟ ಜನಿವಾರವ ಬಿಸುಟಿ ಬಿಟ್ಟೆ,
ಗೊಡ್ಡು ಸಂಪ್ರದಾಯಗಳ
ತಿರಸ್ಕರಿಸಿ ಕೈ ಬಿಟ್ಟೆ,
ಮೇಲು ಕೀಳೆಂಬ ಕಟ್ಟುಪಾಡುಗಳ
ಕಡಿದೊಗೆಯಲು ಪಣತೊಟ್ಟೆ.!
ಜಾತವೇದ ಮುನಿಗಳ ಶಿಷ್ಯನಾದೆ,
ಸಮಾಜದ ಓರೆಕೊರೆಗಳನ್ನು
ತಿದ್ದಲು ಹೊರಟಿರುವೆ ಅಣ್ಣ..!!
ಕಿರೀಟವಿಲ್ಲದ ರಾಜನಾಗಿ
ಕಲ್ಯಾಣದಲ್ಲಿ ಕ್ರಾಂತಿಗೈದೆ,
ಸಮಾನತೆಯ ತತ್ವವ
ಸಾರಿ ಬಿಟ್ಟೆ,
ಸಹಿಸಿಕೊಳ್ಳದ ಮನಗಳು
ಎಲ್ಲೆಲ್ಲೂ ನಾಯಿಕೊಡೆಯಂತೆ
ಏಳುತ್ತಿವೆ,
ನೀನು ಮಾತ್ರ ತಲೆಕೆಡಿಸಿಕೊಳ್ಳಲಿಲ್ಲ..!!
ಪೀಠವೇರಲಿಲ್ಲ ಪಾಠಕಲಿಸಿದೆ
ಆತ್ಮ ಸಾಕ್ಷಾತ್ಕಾರದ ದಾರಿ
ಇಷ್ಟಲಿಂಗದಿ ತೋರಿಸಿದೆ,
ಅನುಭವಕ್ಕೆ ತೋಚಿದ್ದನ್ನು
ಕೂಡಲ ಸಂಗನ ಹೆಸರಲ್ಲಿ
ಗೀಚಿಟ್ಟಿರುವೆ,
ಅನುಭವಿಕರ ಅನುಭಾವದ
ಮುಕ್ತವಾದ ಚರ್ಚೆಗೆ
ಅನುಭವ ಮಂಟಪ ಕಟ್ಟಿದೆ...!!
ರಾಜರದು ಅರಮನೆ
ನಿನ್ನದು ಮಹಾಮನೆ
ಅಲ್ಲಿ ವೈಭೋಗ,ಆಡಳಿತ,ದರ್ಪ
ಇಲ್ಲಿ ಬೇಧಭಾವವಿಲ್ಲದ
ಮಹಾಮಂತ್ರ ಸಾರಿದೆ!
ಮಹಾ ಆದರ್ಶಗಳ
ರೂಢಿಸಿಕೊಂಡೆ ಅಣ್ಣ..!!
ಕಾಯಕದ ಕೈಲಾಸವೆಂದೆ
ಅನುಭವದ ಬುತ್ತಿ ಹಂಚುತಿರುವೆ,
ದಯ ತೋರುವ ಗುಣಬೇಕಂದೆ,
ನಿನ್ನ ಏಳಿಗೆಯ ಸಹಿಸದವರು!
ಬಗಲಲ್ಲಿ ಚೂರಿಯಂತೆ ನಿನ್ನ
ಜೊತೆಗಿದ್ದರೂ ನೀ ನೋಡಲಿಲ್ಲ!
ನೀ ನಡೆದ ದಾರಿ ಮುಳ್ಳುಕಂಟಿ
ಹಚ್ಚಿದವರುಂಟು,
ಹಳ್ಳ ತೋಡಿದವರುಂಟು
ನೀ ಸಾಗಿದೆ!
ಶರಣೆಂದು ಶಿರಬಾಗಿದೆ..!!
ಮಹಾಮನೆಯಲ್ಲಿ
ಅಂತರ್ಜಾತಿ ವಿವಾಹಕ್ಕೆ
ಕೈಹಾಕಿ ಕೈಸುಟ್ಟುಕೊಂಡೆ,
ರಾಜನಾಕ್ರೋಶಕ್ಕೆ ಗುರಿಯಾದೆ
ಒಳಗೊಳಗೆ ನೊಂದುಕೊಂಡೆ!
ಬಿಜ್ಜಳನ ವಿದ್ವಂಸಕ ಕೃತ್ಯದಿಂದ
ಬೇಸತ್ತು ಸಂಗಮನಲ್ಲಿ ಐಕ್ಯನಾದೆ!
ಜಗಕ್ಕೆಲ್ಲ ಜ್ಯೋತಿಯಾದೆ..!!
ಆದರೂ ನೀ ಹಚ್ಚಿದ ಕಿಡಿ
ಧಗಧಗನೆ ಉರಿಯುತ್ತಿದೆ
ನೋಡಲು ನೀನಿಲ್ಲ
ಮರಳಿ ಮತ್ತೆ ಬಾ ಬಸವಣ್ಣ...!!
-*ಶಂಕರಾನಂದ ಹೆಬ್ಬಾಳ*
ಚಿತ್ರ: ಗೂಗಲ್