ಮತ್ತೆ ಬ೦ದಿದೆ ಯುಗಾದಿ, ಮತ್ತದೇ ಬಾಳ ಹಾದಿಯಲ್ಲಿ;

ಮತ್ತೆ ಬ೦ದಿದೆ ಯುಗಾದಿ, ಮತ್ತದೇ ಬಾಳ ಹಾದಿಯಲ್ಲಿ;

ಬರಹ

"ಮತ್ತೆ ಬ೦ದಿದೆ ಯುಗಾದಿ, ಮತ್ತದೇ ಬಾಳ ಹಾದಿಯಲ್ಲಿ;
ಸ್ವೀಕರಿಸುವುದಷ್ಟೆ ನಮ್ಮ ಕೆಲಸ,
ನೋವೋ, ನಲಿವೋ, ಅಳುವೋ, ನಗುವೋ
ಅದುವೆ ಸ೦ವತ್ಸರದ ರಸದೌತಣ"


ಭಾರತದಲಿ ಯುಗಾದಿ ನವ ಹರುಷವ ತರುವ ನವೋಲ್ಲಾಸದ ಹಬ್ಬ. ಕರ್ನಾಟಕ,  ಆಂಧ್ರ, ಮಹಾರಾಷ್ಟ್ರಗಳಲ್ಲಿ ಯುಗಾದಿ, ಉಗಾದಿ, ಗುಡಿಪಾಡ್ವ ಎಂದು ಕರೆಸಿಕೊಳ್ಳುವ ಈ ಹಬ್ಬ ಯುಗ ಯುಗಗಳೇ ಸಾಗಲಿ ಈ ಆದಿ ಶಾಶ್ವತ ಎಂಬ ಮುನ್ನುಡಿ. ಪ್ರತಿ ವರ್ಷ ಚೈತ್ರ ಶುಕ್ಲ ಪ್ರತಿಪತ್ (ಪಾಡ್ಯ) ದಿನ ಚಾ೦ದ್ರಮನ ಯುಗಾದಿ. ಸೂರ್ಯ ಮೇಷ ರಾಶಿ ಪ್ರವೇಶಿಸುವ ಪುಣ್ಯ ಕಾಲ ಸೌರಮಾನ ಯುಗಾದಿ. ಯುಗಾದಿ ಹೊಸತನ್ನು ತರುವುದೆಂಬ ಭರವಸೆಯ ನೀಡುವ ಒಂದು ಅಭಯ ಹಸ್ತ. ಹೊಸ ವರುಷ ಹೊಸ ಹರುಷ ತರುವುದೆಂಬ ವಿಶ್ವಾಸದ ಆದಿಶಕ್ತಿ.


ಯುಗ ಯುಗಾದಿ ಕಳೆದರೂ...ನಮಗೆ ಚೈತ್ರದ ಚಿಗುರಿನ ವಸಂತನ ಆಗಮನ.. ವಿಶ್ವದ ಮತ್ತೊಂದೆಡೆ ತಮ್ಮದೂ ಹಿಂದೂಗಳ ನಾಡು, ಹಿಂದು ಸಂಸ್ಕೃತಿಯ ನೆಲೆವೀಡು ಎಂದು ಕರೆದುಕೊಳ್ಳುವ ಇಂಡೋನೇಷಿಯಾದ ಬಾಲಿಯಲ್ಲಿ ಯುಗಾದಿ ಸಂಪೂರ್ಣ ವ್ಯತಿರಿಕ್ತ ರೀತಿಯಲ್ಲಿ "ಮೌನ ದಿನಾಚರಣೆ" ನೈಪಿ ಎಂದು ಆಚರಿಸಲ್ಪಡುತ್ತದೆ. ಹಿಂದೂ ಸಂಸ್ಕೃತಿ ಆಚರಣೆಯ ಮೂಲ ಭಾರತದಿಂದ ಬಂದಿದ್ದರೂ ಅವರು ತಮ್ಮದೇ ಸ್ವಲ್ಪ ವಿಭಿನ್ನ-ವಿಶಿಷ್ಟ ಪದ್ಧತಿಯನ್ನು ತಮ್ಮ ಸಂಸ್ಕೃತಿಯ ಹಬ್ಬ ಹರಿದಿನಗಳಲ್ಲಿ, ನಾಮಕರಣ, ಚೌಲಾ, ವಿವಾಹ ಮತ್ತು ಶವಸಂಸ್ಕಾರ ಕ್ರಿಯೆಗಳಲ್ಲಿ ಅಳವಡಿಸಿಕೊಂಡಿದ್ದಾರೆ.


ಇಂಡೋನೇಶಿಯಾದ ಬಾಲಿ ದ್ವೀಪದಲ್ಲಿ ದಟ್ಟ ಅರಣ್ಯ, ಸುತ್ತಲೂ ನೀರು, ಫಲವತ್ತಾದ ಭೂಮಿ, ದೇಗುಲಗಳು ತುಂಬಿರುವ ಈ ದ್ವೀಪದಲ್ಲಿ ನೂರಕ್ಕೆ ತೊಂಬತ್ತು ಮಂದಿ ಹಿಂದೂಗಳು. ಹಿಂದೂ ಸಂಸ್ಕೃತಿ ಇಲ್ಲಿಯ ಜನ ಜೀವನದಲ್ಲಿ ಹಾಸು ಹೊಕ್ಕಾಗಿದೆ. ಇಲ್ಲಿ ದೇವಸ್ಥಾನಗಳಿಗೆ "ಮೇರು" ಎನ್ನುತ್ತಾರೆ. ರಾಮಾಯಣ, ಮಹಾಭಾರತಗಳಿಗೆ ವಿಶೇಷ ಮಾನ್ಯತೆ ಇದೆ. ಸುಮಾರು ಮೂರು ಸಾವಿರ ದ್ವೀಪಗಳನ್ನು ಒಳಗೊಂಡಿರುವ ಇಂಡೋನೇಶಿಯಾದಲ್ಲಿ ಬಹು ಸಂಖ್ಯಾತರು ಮುಸ್ಲಿಮರಾದರೂ ಹಿಂದೂ-ಮುಸ್ಲಿಮ್ ಮತೀಯ ಗಲಭೆಗಳು, ಘರ್ಷಣೆಗಳು ನಡೆದಿಲ್ಲ.


ಬಾಲಿ ದ್ವೀಪ ಹೇಗಾಯ್ತು, ಹೆಸರು ಹೇಗೆ ಬಂತು ಎಂಬುದಕ್ಕೆ-ಜಾವಾದ ಮಹಾರಾಜ ತನ್ನ ಅವಿಧೇಯ ಮಗನ ಮೇಲೆ ಕೋಪಗೊಂಡು ಅವನನ್ನು ರಾಜ್ಯದೊಳಗೆ ಬಾರದಂತೆ ಬಹಿಷ್ಕಾರ ಹಾಕಿದನು. ಅವಿಧೇಯ ಮಗ ಮರಳಿ ಬಂದರೆ ಬಲಿ ಕೊಡುವೆನೆಂದು ಘೋಷಿಸಿ, ಮಗ ಮನೆಗೆ ಮರಳಿ ಬಾರದಂತೆ ನೆಲದ ಮೇಲೆ ರೇಖೆ ಎಳೆದನಂತೆ. ತತ್‍ಕ್ಷಣ ಉತ್ತರ-ದಕ್ಷಿಣಗಳ ಸಮುದ್ರವೆರಡೂ ಸೇರಿ ಬಾಲಿ ದ್ವೀಪವಾಯಿತೆಂದು ಪ್ರತೀತಿ.


"ಮುತ್ತು ಬಂದಿದೆ ಕೇರಿಗೆ"....ಇದು ಬರೀ ಬಾಲಿಯನ್ನರಿಗೆ ಮಾತ್ರ...


ಬಾಲಿಯ ದೆನ್‍ಪಸಾರ್ ಪ್ರಾಂತ್ಯದ ಹೆಚ್ಚಾಗಿ ಬಂಜಾರರು ನೆಲೆಸಿರುವ ಒಂದು ಹಳ್ಳಿ ಸೆಸಟಾನ್. ಇಲ್ಲಿಯ ಮುಖ್ಯ ಬೀದಿಯಲ್ಲಿ ನೈಪಿ(ಯುಗಾದಿಯ) ಮಾರನೆಯ ದಿನ ಗಿಜಿ ಗಿಟ್ಟುವ ಜನ. ಅಂದು ಮೆದ್-ಮೆದಾನ್ (ಯುವಕ-ಯುವತಿಯರು) ಪರಸ್ಪರರಿಗೆ ಮುತ್ತನ್ನೀಡುವ ಹಬ್ಬ. "ಮುತ್ತು ಬಂದಿದೆ ಕೇರಿಗೆ".


ಮೌನ ದಿನಾಚರಣೆ ದಿನ ಬಂಜಾರು ದೇಗುಲದ ಎದುರಿನಲ್ಲಿ ದಕ್ಷಿಣ ದಿಕ್ಕಿಗೆ ಯುವತಿಯರು ಹಾಗೂ ಉತ್ತರ ದಿಕ್ಕಿಗೆ ಯುವಕರು ಎದುರು ಬದುರಾಗಿ ಗುಂಪುಗೂಡುತ್ತಾರೆ. ಬಂಜಾರು ಸುಖ-ದುಖ ಸಂಸ್ಥೆಯ ಮುಖಂಡ ಬಂಜಾರು ದೇವರಿಗೆ ಪ್ರಾರ್ಥನೆ ಸಲ್ಲಿಸಿ ಆರತಿಯನೆತ್ತುತ್ತಾನೆ. ನಂತರ ಯುವಕ ಯುವತಿಯರನ್ನು ಸುತ್ತುವರಿದು ಬ್ಲೆಗನ್ಜುರ್ ವಾದ್ಯವನ್ನು ಬಡಿಯುತ್ತಾ ವಾದ್ಯಗಾರರು ಮೆದ್-ಮೆದಾನರ ಸುತ್ತುತ್ತಾರೆ. ವಾದ್ಯದ ಬಡಿತ ಹೆಚ್ಚಾದಂತೆ ಎದುರು-ಬದುರು ನಿಂದ ಯುವಕ-ಯುವತಿಯರು ಕ್ಷಣಮಾತ್ರದಲ್ಲಿ ತೋಳುಗಳಿಗೆ ತೋಳು ಬಂದಿ, ತುಟಿಯ ತುಂಬಾ ತುಂಬಾ ಮುತ್ತುಕೊಡುತ್ತಾರೆ. ನಂತರ ಇವರೀರ್ವರೂ ಪರಸ್ಪರರಿಗೆ ತಲೆ ಬಾಗಿ ಹಿನ್ನಡೆಯುತ್ತಾರೆ. ಸುತ್ತನಿಂದ ಹಿರಿಯರು ಯುವ ಗುಂಪಿನ ಮೇಲೆ ತಣ್ಣೀರೆರಚುತ್ತಾರೆ. ಈ ಮುತ್ತು ಸೆಸಟಾಬ್ ಹಳ್ಳಿಯ ಒಳಿತಿಗಾಗಿ ನೀಡುವ ಮುತ್ತು.


ಬಂಜಾರು ಸುಖ-ದುಃಖ ಸಂಸ್ಥೆಯಿಂದ ಆಯೋಜನಗೊಳ್ಳುವ ಈ ಮುತ್ತಿನ ಹಬ್ಬದ ಸಂಕೇತ ಸೆಸಟಾನ್ ಹಳ್ಳಿಯಲ್ಲಿ ಅಸಂಭವ ಘಟನೆಗಳು ನಡೆಯದಿರಲಿ, ಬಂಜಾರು ಜನತೆಗೆ ಒಳ್ಳೆಯದಾಗಲಿ ಎಂಬುದರ ಸಂಕೇತವಂತೆ. ಒಂದು ಬಾರಿ ಮುತ್ತಿನ ಹಬ್ಬ ಯಾವುದೋ ಕಾರಣದಿಂದ ನಿಂತಾಗ ದೇಗುಲದ ಎದುರಿಗೆ ಎರಡು ಹಂದಿಗಳಿಗೆ ಜಗಳವಾಗಿ ಒಂದನ್ನೊಂದು ಇರಿದು ಸತ್ತವು. ಸತ್ತ ಆ ಎರಡು ಹಂದಿಗಳನ್ನು ಬೇರ್ಪಡಿಸಲಾಗಲಿಲ್ಲವಂತೆ. ಇಂತಹ ಘರ್ಷಣೆಗಳು ನಡೆಯದಿರಲಿ, ಪ್ರೀತಿ ಸೌಹಾರ್ದತೆಗಳು ತುಂಬಿರಲಿ ಎಂಬ ಕಾರಣಕ್ಕಾಗಿ ಮುತ್ತಿನ ಹಬ್ಬ ನಡೆಸುವ ಪದ್ಧತಿ ಬಾಲಿಯ ಸೆಸಟಾನ್ ಹಳ್ಳಿಯಲ್ಲಿ ಮಾತ್ರ ಚಾಲ್ತಿಯಲ್ಲಿದೆಯಂತೆ. ಮುತ್ತು ಬಂದಿದೆ ಕೇರಿಗೇ ಎಂಬಾಸೆಯಲ್ಲಿ ಮೃದು ಮಧುರ ಅಧರ ಸೋಕೇ ಎಂದು ಬಂಜಾರು ಯುವತಿಯರ ಮುತ್ತಿನ, ಮತ್ತಿನ ನಶೆಯ ತುಟಿಗಳಿಗಾಗಿ ಹಾತೊರೆದೀರಾ? ಜೋಕೆ...ಬಂಜಾರು ಹೆಣ್ಣಿನ ಸವಿ-ಸಿಹಿ ಮುತ್ತು ಎಲ್ಲರ ಪಾಲಲ್ಲ. ಅದು ಸೆಸಟಾನ್ ಬಂಜಾರ ಯುವಕರಿಗೆ ಅಂದು ಮಾತ್ರ ಮೀಸಲು.  ನೋಡಿ ಆನಂದಿಸಿರಿ ನೀವು.


ಕವಿ ಜಿ.ಎಸ್.ಎಸ್. ಅವರ ಹೂವಬಿಟ್ಟಿವೆ, ಹೂವತೊಟ್ಟಿವೆ, ಹೂವನುಟ್ಟಿವೆ ಮರಗಳು! ಚೈತ್ರಯಾತ್ರೆಗೆ ಬಂದು ನಿಂತವೊ ನೂರು ಚೆಲುವಿನ ರಥಗಳು! ಕಾಮ-ರತಿಯರು ಬಂದು ಆಡುವ ರಾಸಲೀಲಾಪಥಗಳು! ಸೃಷ್ಟಿ ಬರೆಯುವ ಚೈತ್ರ ಕಾವ್ಯದ ಮಧು ಪವಾಡದ ಕಥೆಗಳು! ನೆನಪಾದದ್ದು


ಮುತ್ತು ಬರೀ ಒಂದು ಕ್ರಿಯೆ ಅಲ್ಲ ಅದು ಪ್ರಕ್ರಿಯೆ. ಹುಟ್ಟಿನಿಂದ ಸಾಯುವವರೆಗೂ ಪಡೆದು-ಕೊಡುವ ಬೆಲೆಕಟ್ಟಲಾಗದ ಅಮೂಲ್ಯ ಪ್ರೀತಿಯ ತೋರ್ಪಡಿಕೆ. ಅಮ್ಮ, ಅಪ್ಪ, ತಂಗಿ-ಅಣ್ಣ, ನಲ್ಲ-ನಲ್ಲೆ, ಮಕ್ಕಳಿಗೆ ನೀಡುವ ಬೆಲೆ ಕಟ್ಟಲಾಗದ ಅಮೂಲ್ಯ ಕಾಣಿಕೆ, ಪ್ರೀತಿಯ ತೋರ್ಪಡಿಕೆ. ನಮ್ಮ ಪ್ರೀತಿಯ ವ್ಯಕ್ತಪಡಿಸುವಿಕೆ. ಅರಿತೋ ಅರಿಯದೆಯೋ ದೇಹಕ್ಕೆ, ಆತ್ಮಕ್ಕೆ, ಮನಕ್ಕೆ ಮುದ ನೀಡುವ ಆತ್ಮೀಯ ಭಾವ, ಬೆಚ್ಚಗಿನ ಸುಭದ್ರತೆ ನೀಡುವ ಅನುಭೂತಿ.


ಈ ಸುಮಧುರ ಅನುಭೂತಿಯ ಮುಕ್ತ ಪ್ರಣಯ ದೃಶ್ಯ ಪಾಶ್ಚಾತ್ಯ ದೇಶಗಳಲ್ಲಿ ಸರ್ವೇ ಸಾಮಾನ್ಯ. ಯಾವುದೇ ಸ್ಥಳದಲ್ಲಿ ಪ್ರಣಯಿಗಳು ಪರಸ್ಪರ ತೆಕ್ಕೆಗೆ ಬಿದ್ದು ಮುತ್ತು ಬಂದಿದೆ ಕೇರಿಗೆ, ನೋಡಿರಿ ನೀವು ಎಂದು ತಮ್ಮದೇ ಲೋಕದಲ್ಲಿರುತ್ತಾರೆ. ಸಿಂಗಪುರ, ಹಾಂಗ್‍ಕಾಂಗ್ ದೇಶಗಳಲ್ಲಿ ವರುಷಕ್ಕೊಮ್ಮೆ ನಡೆವ ಕಿಸ್ಸಿಂಗ್ ಡೇ ನೋಂದಾಯಿಸುವುವರು ಅನೇಕರು. ಇದಕ್ಕೆ ಬಹುಮಾನವೂ ಉಂಟು. ಕಮರ್ಶಿಯಲ್, ಕಮರ್ಶಿಯಲ್ ಎಂದು ಅಂಬ ಈ ಕಾಲದಲ್ಲಿ ಕಿಸ್ಸಿಂಗ್ ಕಮರ್ಶಿಯಲ್! ಅಚ್ಚರಿ ಪಡಬೇಕಿಲ್ಲ ಅಲ್ಲವೇ?


ಚೈತ್ರ ಮಾಸ, ಎಲ್ಲೆಲ್ಲೂ ಚಿಗುರೊಡೆದ ಗಿಡಮರಗಳು, ಅರಳುವ ಕುಸುಮಗಳು, ಗ೦ಧ ಸೂಸುವ ತಂಗಾಳಿ, ಕೋಗಿಲೆಯ ಗಾನಕ್ಕೆ ಮನಸೋತ ವಸಂತನಿಂದ ಯುಗ ಯುಗಗಳೇ ಸಾಗಲಿ ಈ ಆದಿ ಶಾಶ್ವತ ಎಂಬ ಮುನ್ನುಡಿ. ಎಲ್ಲರಿಗೂ ಹೊಸ ವರುಷ ಹೊಸ ಹೊಸ ಹರುಷವ ತರಲಿ....