ಮತ್ತೆ ಮತದಾನ ಬಂದಿದೆ…

ಮತ್ತೆ ಮತದಾನ ಬಂದಿದೆ…

ಹೌದು, ಮತದಾನ ಮತ್ತೆ ಬಂದಿದೆ. ಪ್ರಜಾಪ್ರಭುತ್ವದ ದೊಡ್ಡ ಹಬ್ಬವೆಂದೇ ಪರಿಗಣಿಸಲ್ಪಡುವ ಮತದಾನ ಮತ್ತೆ ಬಂದಿದೆ. ಪ್ರಸ್ತುತ ಕರ್ನಾಟಕ ವಿಧಾನ ಸಭೆಯ ಅವಧಿಯು ಮೇ ತಿಂಗಳಲ್ಲಿ ಕೊನೆಗೊಳ್ಳುತ್ತಿರುವ ಕಾರಣ ಮಾರ್ಚ್ ೨೯ರಂದು ಮುಖ್ಯ ಚುನಾವಣಾ ಆಯುಕ್ತರಾದ ರಾಜೀವ್ ಕುಮಾರ್ ಅವರು ಚುನಾವಣೆಯ ಘೋಷಣೆ ಮಾಡಿದ್ದಾರೆ. ಹಮ್ಮು-ಬಿಮ್ಮು, ಬಿರುದು-ಬಾವಲಿ, ಕಾರು-ಬಾರುಗಳನ್ನು ತ್ಯಜಿಸಿ ಅಧಿಕಾರಸ್ಥ ರಾಜಕಾರಣಿಗಳು ಸದ್ಯಕ್ಕೆ ‘ಜನ ಸಾಮಾನ್ಯ'ರಾಗಿದ್ದಾರೆ. ಇನ್ನು ಸುಮಾರು ನಲವತ್ತೈದು ದಿನಗಳಿಗೆ ಚುನಾವಣಾ ಆಯೋಗವೇ ಸುಪ್ರೀಂ. ಅವರದ್ದೇ ಯೋಜನೆ, ಯೋಚನೆ ಮತ್ತು ಅಧಿಕಾರ ಚಲಾವಣೆ. ಹೊಸ ಸರಕಾರ ಬಂದ ನಂತರ ಇದ್ದೇ ಇದೆಯಲ್ಲ ರಾಜಕಾರಣಿಗಳ ಮತ್ತೆ ಕಾರುಬಾರು…

ಕರ್ನಾಟಕ ರಾಜ್ಯದ ೨೨೪ ಕ್ಷೇತ್ರಗಳಿಗೆ ಮೇ ೧೦ರಂದು ಒಂದೇ ಹಂತದಲ್ಲಿ ಚುನಾವಣೆ ನಡೆದು ಮೇ ೧೩ರಂದು ಫಲಿತಾಂಶ ಹೊರಬೀಳಲಿದೆ. ಮತದಾನದ ಪ್ರಮಾಣ ಅಧಿಕವಾಗಬೇಕೆಂದು ಚುನಾವಣ ಆಯೋಗ ಪ್ರತೀ ಚುನಾವಣೆಯ ಸಮಯದಲ್ಲಿ ಏನಾದರೊಂದು ಕಸರತ್ತು ಮಾಡುತ್ತಲೇ ಬಂದಿದೆ. ಆದರೆ ಸಾಮಾನ್ಯ ಜನರು ರಾಜಕೀಯದಿಂದ, ರಾಜಕಾರಣಿಗಳಿಂದ ಬೇಸತ್ತು ಹೋಗಿದ್ದಾರೆ. ಈ ವರ್ಷ ಚುನಾವಣೆಗೆ ಆಯೋಗ ಪ್ರತಿಯೊಬ್ಬ ಅಭ್ಯರ್ಥಿಗೆ ೪೦ ಲಕ್ಷರೂ ಖರ್ಚು ಮಾಡಲು ಅನುಮತಿಯನ್ನು ನೀಡಿದೆ. ಇಷ್ಟು ಹಣದಲ್ಲಿ ಈಗ ಚುನಾವಣ ಪ್ರಚಾರ ಮಾಡಿ, ಓರ್ವ ಅಭ್ಯರ್ಥಿ ಗೆಲುವು ಸಾಧಿಸಲು ನಿಜವಾಗಿಯೂ ಸಾಧ್ಯವಿದೆಯೇ? ಚುನಾವಣ ಆಯೋಗದ ಯಾವುದೇ ಹದ್ದಿನ ಕಣ್ಣು ಅಥವಾ ಯಾವುದೇ ನಿಯಮಾವಳಿಗಳು ಇರಲಿ, ರಾಜಕೀಯ ಪಕ್ಷಗಳು ಹಣವನ್ನು ನೀರಿನಂತೆ ವೆಚ್ಚ ಮಾಡುತ್ತವೆ. ವಿಜೇತರಾದ ಅಭ್ಯರ್ಥಿ ನಂತರದ ದಿನಗಳಲ್ಲಿ ನಮ್ಮದೇ ಹಣವನ್ನು ಬಾಚಿ ನುಂಗಿ ಅಧಿಕಾರದ ಮಜಾ ಅನುಭವಿಸುತ್ತಾನೆ. ಇದು ಪ್ರಜಾಪ್ರಭುತ್ವದ ವ್ಯಂಗ್ಯ. 

ಎಷ್ಟೇ ಕಟ್ಟು ನಿಟ್ಟಿನ ಕ್ರಮಗಳಿರಲಿ ಚುನಾವಣೆಗೆ ನಿಂತ ಅಭ್ಯರ್ಥಿಗಳು ಜನರಿಗೆ ಹಣ, ವಸ್ತುಗಳನ್ನು ಹಂಚುವುದಕ್ಕೆ ನಾನಾ ತರಹದ ಉಪಾಯಗಳನ್ನು ಕಂಡುಕೊಂಡಿರುತ್ತಾರೆ. ಚುನಾವಣಾ ದಿನಾಂಕ ನಿರ್ಧಾರವಾಗಿ ನೀತಿ ಸಂಹಿತೆ ಜಾರಿಯಾಗುವ ಮೊದಲೇ ಸಿಗುತ್ತಿರುವ ರಾಶಿ ರಾಶಿ ಹಣಗಳು, ಮತದಾರರಿಗೆ ಹಂಚಲು ತಂದಿರುವ ಕುಕ್ಕರ್, ಬ್ಯಾಟ್, ಹೆಲ್ಮೆಟ್, ಸೀರೆ, ಬ್ಯಾಗು ಎಲ್ಲವೂ ಸರಿಯಿಲ್ಲ ಎಂಬ ಸಂದೇಶ ನೀಡುತ್ತದೆ. ಅದೆಷ್ಟೋ ಹಣ ತಲುಪಬೇಕಾದವರಿಗೆ ಈಗಾಗಲೇ ತಲುಪಿ ಆಗಿರಬಹುದು. ಇದು ನಮ್ಮ ಪ್ರಜಾಪ್ರಭುತ್ವದ ದುರಂತ ಎಂದರೆ ತಪ್ಪಾಗದು. ಜನ ಸಾಮಾನ್ಯನೂ ಯೋಚನೆ ಮಾಡುತ್ತಾನೆ, “ಯಾರು ಜಯ ಗಳಿಸಿದರೂ ನನ್ನ ಜೀವನ ಕ್ರಮ ಬದಲಾಗುವುದಿಲ್ಲ.” ವಿಜಯಶಾಲಿಯಾದ ಅಭ್ಯರ್ಥಿ ಮತ್ತೆ ಜನರ ಕಡೆ ಹೋಗೋದು ಮುಂದಿನ ಮತದಾನದ ಸಮಯದಲ್ಲೇ. ಈ ಕಾರಣಕ್ಕಾಗಿಯೇ ಮತದಾರ ಭ್ರಷ್ಟನಾಗುತ್ತಾನೆ. ಎಲ್ಲಾ ಪಕ್ಷದವರ ಬಳಿ ಹಣ, ವಸ್ತುಗಳನ್ನು ಪಡೆದುಕೊಳ್ಳುತ್ತಾನೆ. ಮತ ಯಾರಿಗೆ ಹಾಕಿದರೇನು? ಕೇಳಲು ಯಾರು ಬರುತ್ತಾರೆ? ಯಾರಿಗೆ ಗೊತ್ತಾಗುತ್ತದೆ? ಅವನಿಗದು ಅಗತ್ಯವಾದ ವಿಷಯವೇ ಅಲ್ಲ.

ಒಮ್ಮೆ ಆಲೋಚನೆ ಮಾಡಿ. ಈಗ ಸಾಮಾನ್ಯವಾಗಿ ಚಲಾವಣೆಯಾಗುವ ಮತಗಳ ಪ್ರಮಾಣ ಎಷ್ಟು? ಶೇಕಡಾ ೬೫ ರಿಂದ ೭೫ ಇರಬಹುದು ಅಲ್ಲವೇ? ಹಾಗಾದರೆ ಇನ್ನುಳಿದ ೨೫ ಶೇಕಡಾ ಜನರು ಮತದಾನ ಮಾಡಲು ಬರುವುದೇ ಇಲ್ಲ. ಮತ ಚಲಾಯಿಸುವ ಸುಮಾರು ೭೫ ಶೇಕಡಾ ಜನರಲ್ಲಿ ೫೦ ಶೇಕಡಾ ಜನರು ವಿವಿಧ ಪಕ್ಷಗಳ ಅಭಿಮಾನಿಗಳು, ಕಾರ್ಯಕರ್ತರೇ ಆಗಿರುತ್ತಾರೆ. ಇವರಲ್ಲಿ ಬಹುತೇಕರು ತಮ್ಮ ಪಕ್ಷ ನಿಷ್ಟೆಯನ್ನು ಬದಲಾಯಿಸುವುದಿಲ್ಲ. ಉಳಿದ ೧೫-೨೫ ಶೇ. ಮಂದಿ ಮಾತ್ರ ತಮ್ಮ ನಿರ್ಧಾರಗಳನ್ನು ಕಾಲಕ್ಕೆ ಸರಿಯಾಗಿ ಬದಲಾಯಿಸುತ್ತಾ ಹೋಗುತ್ತಾರೆ. ಬಹಳಷ್ಟು ಮಂದಿ ಈಗ ವಿದ್ಯಾವಂತರಾಗಿದ್ದಾರೆ. ಈ ಕಾರಣದಿಂದ ಮೊದಲಿನಂತೆ ಕಣ್ಣು ಮುಚ್ಚಿ ಮತಚಲಾಯಿಸಿ ಬರಬೇಕೆಂದಿಲ್ಲ. ನಿಮಗೆ ಬೇಕಾದ, ನೀವು ಕಂಡುಕೊಂಡ ಉತ್ತಮ ಅಭ್ಯರ್ಥಿಗೇ ಮತ ಚಲಾಯಿಸಬಹುದು. ಕನಿಷ್ಟ ೯೦ ಶೇ. ಮತದಾನವಾದಲ್ಲಿ ಬಹುಮತದ ಅಭ್ಯರ್ಥಿ ಚುನಾವಣೆಯಲ್ಲಿ ಜಯಶಾಲಿಯಾಗುವ ಸಾಧ್ಯತೆ ಖಂಡಿತಾ ಇದೆ. ನಿಮಗೆ ಯಾವುದೇ ವ್ಯಕ್ತಿಗೆ ಮತಚಲಾಯಿಸಲು ಇಷ್ಟವಿಲ್ಲದ ಪಕ್ಷದಲ್ಲಿ ‘ನೋಟಾ’ ಮತದಾನ ಮಾಡಬಹುದು. ಮುಂದೊಂದು ದಿನ ಈ ನೋಟಾಗೆ ಬಿದ್ದ ಮತಗಳು ಚುನಾವಣೆಗೆ ನಿಂತಿರುವ ಅಭ್ಯರ್ಥಿಗಳಿಗಿಂತ ಅಧಿಕವಾಗುವ ಸಾಧ್ಯತೆಯೂ ಇಲ್ಲವೆನ್ನುವಂತಿಲ್ಲ. ಆ ಸಮಯ ‘ನೋಟಾ’ ಆಯ್ಕೆಗೂ ಬಲ ಬರಬಹುದು. ಈಗಾಗಲೇ ಹಲವೆಡೆ ನೋಟಾಕ್ಕೆ ಚಲಾವಣೆಯಾದ ಮತಗಳ ಅಂತರದಿಂದಲೇ ಒಂದೆರಡು ಅಭ್ಯರ್ಥಿಗಳು ಸೋಲು ಅನುಭವಿಸಿದ್ದೂ ಇದೆ. ಹೀಗಾಗಿ ಮತದಾನ ಖಂಡಿತಾ ಮಾಡಿ. ಅದು ನಿಮ್ಮ ಹಕ್ಕು.

ಚುನಾವಣಾ ಆಯೋಗ ನೀಡಿದ ಅಧಿಕೃತ ಪಟ್ಟಿಯಂತೆ ರಾಜ್ಯದ ಅಧಿಕೃತ ಮತದಾರರ ಸಂಖ್ಯೆ ೫,೨೪,೧೧,೫೫೭. ಇದರಲ್ಲಿ ಪುರುಷರ ಸಂಖ್ಯೆ ೨,೬೩,೩೨,೪೪೫ ಮತ್ತು ಮಹಿಳೆಯರ ಸಂಖ್ಯೆ ೨,೬೦,೨೬,೭೫೨ ಆಗಿದೆ. ಮತದಾನದಲ್ಲಿ ಪಾಲ್ಗೊಳ್ಳಲಿರುವ ತೃತೀಯ ಲಿಂಗಿಗಳ ಸಂಖ್ಯೆ ೪,೭೫೧. ಈ ಚುನಾವಣೆಗೆ ೮೦ ವರ್ಷ ಮೇಲ್ಪಟ್ಟ ಮತದಾರರು ಮತಗಟ್ಟೆಗೆ ಬಾರದೇ ಮನೆಯಲ್ಲೇ ಮತ ಚಲಾಯಿಸುವ ಅವಕಾಶವನ್ನು ಚುನಾವಣ ಆಯೋಗ ನೀಡಿದೆ. ಇದರಿಂದ ೧೨,೧೫,೧೪೨ ಮಂದಿ ವೃದ್ಧ ಮತದಾರರಿಗೆ ಉಪಯೋಗವಾಗಲಿದೆ. ಎಪ್ರಿಲ್ ೧೧ರ ತನಕ ಮತದಾರರ ಪಟ್ಟಿಗೆ ಸೇರ್ಪಡೆಗೊಳ್ಳಲು ಅವಕಾಶವೂ ಇದೆ. ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಚುನಾವಣಾ ಕಾರ್ಯ ನಿಮಿತ್ತ ಸರಕಾರೀ ಕೆಲಸಗಳಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದ್ದೇ ಇದೆ. ನಗರಪಾಲಿಕೆ, ಪಂಚಾಯತ್, ಜಿಲ್ಲಾಧಿಕಾರಿ ಕಚೇರಿಗಳಲ್ಲಿ ನಿಮ್ಮ ಕೆಲಸ ನಿಧಾನಗತಿಯಲ್ಲಿ ಆಗುವ ಸಾಧ್ಯತೆ ಇದೆ. ಈ ಬಗ್ಗೆ ಸ್ವಲ್ಪ ಮಟ್ಟಿಗೆ ಅನನುಕೂಲವಾಗುವ ಸಾಧ್ಯತೆ ಜನಸಾಮಾನ್ಯರಿಗೆ ಇದೆ. 

ಮತದಾನ ಎಂಬುದು ಪ್ರಜಾಪ್ರಭುತ್ವ ವ್ಯವಸ್ಥೆ ನಮಗೆ ನೀಡಿದ ಒಂದು ವರ. ಅದನ್ನು ಬಳಸಿಕೊಳ್ಳುವುದರಲ್ಲೇ ಜಾಣತನವಿದೆ. ನಾನೊಬ್ಬ ಮತ ಹಾಕದಿದ್ದರೆ ಏನಾಗುತ್ತದೆ? ಎಂಬ ನಿರ್ಲಕ್ಷ್ಯ ಬೇಡ. ಹಲವು ಬಾರಿ ಒಂದು ಮತದ ಅಂತರದಿಂದ ಅಭ್ಯರ್ಥಿ ಗೆಲುವು ಸಾಧಿಸಿದ ನಿದರ್ಶನಗಳಿವೆ. ನಿಮ್ಮ ಆಯ್ಕೆಯ ಅರ್ಹ ಅಭ್ಯರ್ಥಿಗೆ ಮತ ಚಲಾಯಿಸಿ, ಮುಂದೆ ಆ ವ್ಯಕ್ತಿ ಉತ್ತಮ ರೀತಿಯಲ್ಲಿ ಕೆಲಸ ಮಾಡದೇ ಇದ್ದಾಗ ಕನಿಷ್ಟ ಪಕ್ಷ ಆತನನ್ನು ಪ್ರಶ್ನೆ ಮಾಡುವ ಹಕ್ಕಾದರೂ ನಿಮಗೆ ಇರುತ್ತದೆ. ನೀವು ಮತವನ್ನೇ ಹಾಕದೆ, ಮುಂದಿನ ದಿನಗಳಲ್ಲಿ ಆತನನ್ನು ವಿರೋಧಿಸುವುದು ಸೈಧಾಂತಿಕವಾಗಿ ತಪ್ಪಾಗುತ್ತದೆ. ಮತದಾನಕ್ಕೆ ತಯಾರಾಗಿ, ಇನ್ನೂ ಹಲವಾರು ದಿನಗಳು ಇವೆ. ವಿವಿಧ ಪಕ್ಷಗಳು ನಡೆಸುವ ಸರ್ಕಸ್ ಗಳನ್ನು, ಇವನ್ನು ದಿನವಿಡೀ ಹಾಟ್ ನ್ಯೂಸ್, ಬ್ರೇಕಿಂಗ್ ನ್ಯೂಸ್ ಎಂದು ಬಿತ್ತರಿಸುವ ದೃಶ್ಯ ಮಾಧ್ಯಮಗಳನ್ನು ನೋಡುತ್ತಾ ಮನೋರಂಜನೆ ಪಡೆದುಕೊಳ್ಳುತ್ತಾ ನಿಮ್ಮ ವಿವೇಚನೆಯನ್ನು ಬಳಸಿ ಮತ ಚಲಾಯಿಸಿ. ಏಕೆಂದರೆ ಅದು ನಮ್ಮ-ನಿಮ್ಮೆಲ್ಲರ ಹಕ್ಕು !

ಚಿತ್ರ ಕೃಪೆ: ಅಂತರ್ಜಾಲ ತಾಣ