ಮತ್ತೆ ಮರಳುತ ಗೂಡಿಗೆ

ಮತ್ತೆ ಮರಳುತ ಗೂಡಿಗೆ

ಕವನ

 ಹಾರಿ ಗಗನಕೆ ರೆಕ್ಕೆ ಬಡಿಯುತ

ದಿಗ್ದಿಗಂತವನೆ ಮೀರಿದೆ |

ನವ್ಯ ಭಾವಕೆ ಸಂದು ಮಿಡಿಯುತ

ತೆರದು ಮನವನು ಹಾಡಿದೆ ||

 

ಹೊಸ ಪ್ರಪಂಚವು ಹೊನ್ನ ಮಡಿಲದು

ಬತ್ತು ಮಡಿಯದಿಹ ನದಿಗಳು |

ರಮ್ಯನಾಕವಿದರೊಡಲು ಒನಪದು

ಮುತ್ತು ಸುರಿಸುತಲಿ ತಿಂಗಳು ||

 

ಮೌನ ದ್ವೀಪದಿ ಸುಪ್ತಲೋಕದಿ

ಹಿಗ್ಗಿ ತನುಮನವರಳಿತು |

ತೊರೆದ ನಾಡನು ಹುಚ್ಚುಭಾವದಿ

ಜಗ್ಗಿ ಪರಿಪರಿ ನಳಿಸಿತು ||

 

 

ಎರಡೆ ದಿನದಲಿ ಹೊಸತು ಹಳಸಲು

ಮನವು ಕೊರಗುತ ಬಾಡಿತು |

ನೆನಹು ಕಾಡುತ ಮರುಕ ಮೂಡಲು

ಹಳತನರಸುತ ಚದುರಿತು ||

 

ಶಪಿಸಿ ದೂರಿದ ಹಳತರೊಡಲಲಿ

ಹೊಸತು ಮೂಡುತ ಸೆಳೆಯಲು |

ಮರಳಿ ಹಾರಿತು ಮರೆತ ಬಾಳಲಿ

ಕಲೆತು ಸುಖಿಸುತ ಮಡಿಯಲು ||

 

ವಿಶ್ವದಾಚೆಯ ಸುಪ್ತನಾಕವ

ಹುಡುಕಿ ಅಲೆಯುವುದೇತಕೆ ?

ಕ್ಷಣಗಳೆರಡರ ಬಾಳ ಭವನವ

ತೊಡಕ ಬಾರದು ಏತಕೆ ?

Comments