ಮತ್ತೆ ಸುದ್ದಿಯಲ್ಲಿ ಸಸ್ಯಹಾರ ಮತ್ತು ಮಾಂಸಹಾರ ಸೇವನೆಯ ವಿಷಯ (ಭಾಗ 1)

ಮತ್ತೆ ಸುದ್ದಿಯಲ್ಲಿ ಸಸ್ಯಹಾರ ಮತ್ತು ಮಾಂಸಹಾರ ಸೇವನೆಯ ವಿಷಯ (ಭಾಗ 1)

ಮನುಷ್ಯನ ದೇಹವೇ ಜೀವಕೋಶಗಳ ರಾಶಿ. ಮಾಂಸದ ಮುದ್ದೆ. ಅದನ್ನು ತರಕಾರಿ ಹಣ್ಣು ಕಾಳುಗಳಿಂದ ಮಾಡಲಾಗಿಲ್ಲ. ಹೀಗಿರುವಾಗ.. ಏಕೆ ಮತ್ತೆ ಮತ್ತೆ ವಿಭಜಕ - ವಿಧ್ವಂಸಕ ವಿಷಯಗಳನ್ನೇ ಕೆಣಕಿ ಕೆಣಕಿ ಸಮಾಜವನ್ನು - ದೇಶವನ್ನು ಮತ್ತೆ ಮತ್ತೆ ಒಡೆಯುವ ಪರಿಸ್ಥಿತಿ ನಿರ್ಮಾಣ ಮಾಡುತ್ತೀರಿ?

ಜಾತಿಯ ಆಧಾರದ ಮೇಲೆ, 

ಧರ್ಮದ ಆಧಾರದ ಮೇಲೆ,

ಭಾಷೆಯ ಆಧಾರದ ಮೇಲೆ,

ಪಕ್ಷದ ಆಧಾರದ ಮೇಲೆ,

ಸಿದ್ದಾಂತದ ಆಧಾರದ ಮೇಲೆ ಒಡೆದ ಮೇಲೆ ಈಗ ಆಹಾರ ಸಂಸ್ಕೃತಿಯ ಆಧಾರದ ಮೇಲೆ ಮತ್ತೊಂದು ವಿಭಜನೆಯ ಸನಿಹದಲ್ಲಿ ನಾವಿದ್ದೇವೆ. ಯಾವುದು ಸಸ್ಯಹಾರ, ಯಾವುದು ಮಾಂಸಾಹಾರ, ಅದನ್ನು ನಿರ್ಧರಿಸುವುದು ಯಾರು, ಅದರ ಮಾನದಂಡಗಳು‌ ಯಾವುದು, ಅದರಿಂದಾಗುವ ಪ್ರಯೋಜನಗಳು ಏನು, ಅದಕ್ಕಾಗಿ ನಾವು ತೆರಬೇಕಾದ ಬೆಲೆ ಏನು? ಮಾಧ್ಯಮಗಳು - ಸಂಘ ಸಂಸ್ಥೆಗಳು, ಹೋರಾಟಗಾರರು ಏಕೆ ಅನಾವಶ್ಯಕವಾದ ಈ ವಿವಾದವನ್ನು ಹುಟ್ಟು ಹಾಕುತ್ತಾರೆ. ಎಷ್ಟೋ ಶತಮಾನಗಳಿಂದ ಸಹಜವಾಗಿ ನಡೆದುಕೊಂಡು ಬಂದ ಒಂದು ಪ್ರಕ್ರಿಯೆ ಈಗ ಏಕೆ ಮನಸ್ಸುಗಳನ್ನು ಒಡೆಯುತ್ತಿದೆ. ಚುನಾವಣೆ ಹತ್ತಿರ ಬರುತ್ತಿದೆ ಎಂದೇ, ಮತದಾರರು ಮೂರ್ಖರು ಎಂದೇ..? ಸಮಗ್ರವಾಗಿ ವಿಷಯವನ್ನು ಯೋಚಿಸಿ ನಿಮ್ಮ ಅಭಿಪ್ರಾಯ ರೂಪಿಸಿಕೊಳ್ಳಿ. ಈ ಕ್ಷಣದಲ್ಲಿ ನಿಂತು ಯೋಚಿಸಿದರೆ… ಮತ್ತೆ ಸುದ್ದಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮಾಂಸಾಹಾರ ಸೇವನೆ ಮತ್ತು ದೇವಾಲಯ ಅಥವಾ ಮಠದ ಪ್ರವೇಶ. ಮನುಷ್ಯನ ದೇಹವೇ ಮೂಳೆ ಮಾಂಸ ರಕ್ತ ನರಗಳು ಮತ್ತು ಚರ್ಮದ ಹೊದಿಕೆ. ಆದ್ದರಿಂದ ಇದು ವಿವಾದವೇ ಆಗಬಾರದು. ಆದರೂ ಮತ್ತೆ ಮತ್ತೆ ಸಸ್ಯಹಾರ ಮತ್ತು ಮಾಂಸಹಾರದ ಬಗ್ಗೆ ಪ್ರಶ್ನೆಗಳು ಏಳುತ್ತಲೇ ಇವೆ. ಅದಕ್ಕಾಗಿ,

ಸಸ್ಯಾಹಾರ ಮತ್ತು ಮಾಂಸಾಹಾರ ( Veg - Non Veg )

ತುಂಬಾ ಆಳವಾಗಿ ಯೋಚಿಸಿದಾಗ ಯಾರೂ ಸಂಪೂರ್ಣ ಸಸ್ಯಹಾರಿಗಳಾಗಿರಲು ಅಥವಾ ಸಂಪೂರ್ಣ ಮಾಂಸಾಹಾರಿಗಳಾಗಿರಲು ಸಾಧ್ಯವಿಲ್ಲ ಎನ್ನಲಾಗುತ್ತದೆ. ಅಷ್ಟೊಂದು ಆಳಕ್ಕೆ ಈ ಲೇಖನದಲ್ಲಿ ಹೋಗುತ್ತಿಲ್ಲ. ಕೇವಲ ದಿನನಿತ್ಯದ ಆಹಾರ ಕ್ರಮಗಳು ಮತ್ತು ಜನರ ಸಾಮಾನ್ಯ ಅಭಿಪ್ರಾಯ ಆಧರಿಸಿ ಸಸ್ಯಹಾರ ಮತ್ತು ಮಾಂಸಾಹಾರದ ಬಗ್ಗೆ ಒಂದು ಸಣ್ಣ ವಿಶ್ಲೇಷಣೆ.

ಸಾಮಾನ್ಯವಾಗಿ ಸಸ್ಯಾಹಾರಿ ಗಳಿಗೆ ಮಾಂಸಾಹಾರಿಗಳ ಬಗ್ಗೆ ಒಂದು ಅಭಿಪ್ರಾಯವಿದೆ. ಮಾಂಸಾಹಾರಿಗಳಿಗೆ ಅತಿಹೆಚ್ಚು ವೈವಿಧ್ಯಮಯ ಅಡುಗೆಗಳಿವೆ, ಅವರು ಎಲ್ಲಿ ಹೋದರು, ಯಾವುದೇ ಪ್ರದೇಶಕ್ಕೆ ಹೋದರೂ ಹೇಗೋ ಊಟದ ಸಮಸ್ಯೆಯಾಗುವುದಿಲ್ಲ, ಸಸ್ಯಹಾರಿಗಳಿಗೆ ತುಂಬಾ ಕಷ್ಟ. ಏನೋ ಹಣ್ಣು ಹಂಪಲು ತಿಂದು ಸಮಾಧಾನ ಮಾಡಿಕೊಳ್ಳಬೇಕು ಎಂದು ಗೊಣಗುತ್ತಿರುತ್ತಾರೆ. ಇದು ನಿಜವೇ ?

ಕೂಲಂಕಷವಾಗಿ ಪರಿಶೀಲಿಸಿ ನೋಡಿದಾಗ ವ್ಯಾಪಾರ ವ್ಯವಹಾರದ ಹೋಟೆಲುಗಳ ದೃಷ್ಟಿಯಿಂದ ಸ್ವಲ್ಪ ಮಾತ್ರ ನಿಜವೆನಿಸುತ್ತದೆ. ಆದರೆ ಸಂಪೂರ್ಣ ಸತ್ಯವಲ್ಲ. ಏಕೆಂದರೆ, ಭಾರತದ ಮಟ್ಟಿಗೆ, ಸಾಮಾನ್ಯವಾಗಿ ಕೇವಲ ಕುರಿ ( ಮೇಕೆ ) ಕೋಳಿ ಮತ್ತು ಮೀನು ಎಂಬ ಮೂರು  ಮಾತ್ರವೇ ಅತಿಹೆಚ್ಚು ಉಪಯೋಗಿಸಲ್ಪಡುವ ಮಾಂಸಾಹಾರ. ಮೊಟ್ಟೆ ಅರೆ ಮಾಂಸಾಹಾರ. ಇನ್ನು ಹಂದಿ, ನಾಯಿ, ಮೊಲ, ಉಡ, ಕಪ್ಪೆ, ದನ,ಒಂಟೆ, ಮಾಂಸವನ್ನು ಯಾರೋ ಕೆಲವರು ಅಲ್ಪ ಪ್ರಮಾಣದಲ್ಲಿ ಉಪಯೋಗಿಸುತ್ತಾರೆ.

ಇದನ್ನು ಹೊರತುಪಡಿಸಿ ಉಳಿದ ಎಲ್ಲಾ ಆಹಾರ ಪದಾರ್ಥಗಳು ಸಸ್ಯಹಾರದ ವ್ಯಾಪ್ತಿಯಲ್ಲಿ ಬರುತ್ತದೆ. ಜೊತೆಗೆ ಯಾವುದೇ ಮಾಂಸಾಹಾರಿ ಮನುಷ್ಯ ಕೇವಲ ಕುರಿ ಕೋಳಿ ಮೀನುಗಳನ್ನು ಮಾತ್ರ ತಿನ್ನುವುದಿಲ್ಲ. ಅದನ್ನು ಮುದ್ದೆ, ಚಪಾತಿ, ರೊಟ್ಟಿ, ಬ್ರೆಡ್, ಅನ್ನ, ತರಕಾರಿಗಳು, ಹಣ್ಣುಗಳು, ಸಿರಿ ಧಾನ್ಯಗಳು, ಬೇಳೆ ಕಾಳುಗಳು, ಸೊಪ್ಪು ಮುಂತಾದ ಸಸ್ಯಹಾರದ ವಸ್ತುಗಳ ಮೇಲೆಯೇ ಅವಲಂಬಿಸಿ ಊಟ ಮಾಡುತ್ತಾನೆ. ಕೇವಲ ಆ ಮೂರು ಪ್ರಾಣಿಗಳು ಮಾತ್ರ ಹೆಚ್ಚುವರಿಯಾಗಿರುತ್ತದೆ.

ಅದರಲ್ಲೂ ಇತ್ತೀಚಿಗೆ ನೀವು ಮಾಂಸಾಹಾರಿ ವಸ್ತುಗಳನ್ನು ಉಪಯೋಗಿಸಿ ಮಾಡುವ ಎಲ್ಲವನ್ನೂ ಸಸ್ಯಹಾರದಲ್ಲಿ ಅಷ್ಟೇ ಉತ್ತಮವಾಗಿ ಮತ್ತು ರುಚಿಕರವಾಗಿ ಮಾಡಲಾಗುತ್ತಿದೆ. ಮಾಂಸದ ಬದಲು ತರಕಾರಿ ಉಪಯೋಗಿಸುತ್ತಾರೆ ಅಷ್ಟೆ. ಮಸಾಲೆ ಉಪ್ಪು ಖಾರ ಮುಂತಾದ ಎಲ್ಲಾ ಪೂರಕ ವಸ್ತುಗಳು ಸೇಮ್ ಟು ಸೇಮ್. ಬಿರಿಯಾನಿ, ಕಬಾಬ್, ಮಂಚೂರಿ, ಕಟ್ ಲೆಟ್, ಸ್ಯಾಂಡ್ ವಿಚ್, ಫೀಜಾ  ಇತ್ಯಾದಿ ಎಲ್ಲವೂ ಎರಡೂ ವಿಧದಲ್ಲಿ ಸಿಗುತ್ತದೆ.

ಇಲ್ಲಿ ಸಸ್ಯಹಾರ ಮತ್ತು ಮಾಂಸಾಹಾರದಲ್ಲಿ ಯಾವುದು ಉತ್ತಮ ಎಂಬ ಯಾವ ಅಭಿಪ್ರಾಯವನ್ನು ಸಹ ಹೇಳುತ್ತಿಲ್ಲ. ನಾನು ಆಹಾರ ತಜ್ಞನೂ ಅಲ್ಲ. ಆಹಾರ ಸ್ವಾತಂತ್ರ್ಯ ಅವರವರ ಆಯ್ಕೆ. ನಮ್ಮ ನಾಲಿಗೆಯ ರುಚಿ, ಮನೆತನದ ಸಂಪ್ರದಾಯ, ಆರೋಗ್ಯದ ಕಾಳಜಿ, ವೈದ್ಯರ ಸಲಹೆ, ದೇಶದ ಕಾನೂನಿನ ತಿಳಿವಳಿಕೆಯ ಆಧಾರದಲ್ಲಿ ಯಾವುದೇ ಆಹಾರ ಸೇವಿಸಬಹುದು.

ಆದರೆ ಮಾಂಸಾಹಾರಿಗಳು ಮಾತ್ರ ಏನೋ ವಿಶೇಷ ಖಾದ್ಯಗಳನ್ನು ತಿನ್ನುತ್ತಾರೆ ಎಂದು ಸಸ್ಯಹಾರಿಗಳು ಹೊಟ್ಟೆ ಉರಿ ( ತಮಾಷೆಗಾಗಿ ) ಪಡುವುದು ಬೇಡ. ಸಸ್ಯಹಾರದ ಅವಲಂಬನೆ ಇಲ್ಲದೆ ಮಾಂಸಾಹಾರ ಇಲ್ಲವೇ ಇಲ್ಲ. ಊಟದ ಜೊತೆಗೆ ಉಪ್ಪಿನಕಾಯಿಯಂತೆ ಮಾತ್ರ ಹೆಚ್ಚುವರಿಯಾಗಿ ಮಾಂಸಾಹಾರ ಸೇವಸುತ್ತಾರೆ ಅಷ್ಟೇ… ಹಾಗೆಯೇ ಇನ್ನೊಂದು ಮುಖ್ಯ ವಿಷಯ...

ಯಾವುದೇ ಪ್ರಾಣಿಯನ್ನು ಹತ್ಯೆ ಮಾಡುವುದು ನೋವಿನ ವಿಷಯವೇ.. ಅದು ಹಾವು, ಸೊಳ್ಳೆ, ತಿಗಣೆ, ನಾಯಿ, ಹಸು, ಹುಲಿ, ಜಿಂಕೆ, ಕೋಳಿ, ಮೀನು, ಹಂದಿ, ಮನುಷ್ಯ ಏನೇ ಆಗಿರಲಿ ಅದಕ್ಕೆ ನಾವು ಜೀವ ಕೊಡಲಿಕ್ಕೆ ಸಾಧ್ಯವಿಲ್ಲದಿರುವುದರಿಂದ ಅದನ್ನು ಹತ್ಯೆ ಮಾಡುವ ಯಾವ ಅಧಿಕಾರವೂ ಇಲ್ಲ. ಅದೇ ರೀತಿ ಸಸ್ಯಗಳಿಗೂ ಜೀವ ಇರುವುದರಿಂದ ಅವು ತಮ್ಮ ವಂಶಾಭಿವೃದ್ಧಿಗಾಗಿ ನೀಡುವ ಹೂ ಹಣ್ಣು ಫಸಲುಗಳನ್ನು ಸಹ ನಾವು ಕಿತ್ತು ಕಡಿದು ಉಪಯೋಗಿಸುವುದು ನ್ಯಾಯವಲ್ಲ. ಇದು ಒಂದು ರೀತಿಯ ವಾದ ಮತ್ತು ಮೇಲ್ನೋಟಕ್ಕೆ ಸರಿ ಎನಿಸುತ್ತದೆ.

ಜೀವಿಗಳಿಗೆ ಗಾಳಿ ನೀರು ಆಹಾರ ಜೀವನಾವಶ್ಯಕ ಅಂಶಗಳು. ಅದು ಇಲ್ಲದೇ ಒಂದು ಕ್ಷಣವೂ ಮುಂದುವರಿಯಲು ಸಾಧ್ಯವಿಲ್ಲ. ಹಾಗಾದರೆ ಪ್ರಾಣಿ ಪಕ್ಷಿ ಮನುಷ್ಯ ಏನನ್ನು ತಿನ್ನಬೇಕು ಎಂಬ ಪ್ರಶ್ನೆ ಉದ್ಭವಿಸುತ್ತದೆ. ವಾದದ ದೃಷ್ಟಿಯಿಂದ ಸಸ್ಯಗಳನ್ನು ಇದರಿಂದ ಹೊರಗಿಡೋಣ. ಅವುಗಳನ್ನು ನಿರ್ಜೀವ ವಸ್ತುಗಳೆಂದು ಪರಿಗಣಿಸೋಣ. ಅಂದ ಮೇಲೆ ಈ ಭೂಮಿಯಲ್ಲಿನ ಎಲ್ಲಾ ಜೀವಿಗಳು ಕೇವಲ ಸಸ್ಯಗಳು ಮತ್ತು ಆ ಜಾತಿಗೆ ಸೇರಿದ ಹಣ್ಣು, ತರಕಾರಿ ಮುಂತಾದುವುಗಳನ್ನು  ಮಾತ್ರ ಸೇವಿಸಿ ಬದುಕುವುದು ಸಹಜ ಮತ್ತು ಸ್ವಾಭಾವಿಕ ನ್ಯಾಯ ಮತ್ತು ಜೀವನ ಕ್ರಮ ಎಂಬ ತೀರ್ಮಾನಕ್ಕೆ ಬರೋಣವೇ ? 

ಇಲ್ಲಿ ಇನ್ನೂ ಒಂದು ರಿಯಾಯಿತಿ ಕೊಡಬಹುದು. ಅನೇಕ ಪ್ರಾಣಿಗಳಿಗೆ ಮನುಷ್ಯರಿಗಿರುವ ಬುದ್ದಿಶಕ್ತಿ, ಯೋಚನಾ ಕ್ರಮ, ನಾಗರಿಕತೆ, ರೂಪಿತ ನೀತಿ ನಿಯಮಗಳು ಇಲ್ಲದಿರುವುದರಿಂದ ಅದಕ್ಕೆ ಸಿಕ್ಕ ಸಸ್ಯವೋ ಪ್ರಾಣಿಯೋ ಯಾವುದೋ ಆ ಕ್ಷಣದ ಆಹಾರದ ಅವಶ್ಯಕತೆಗಳನ್ನು ಪೂರೈಸಿಕೊಳ್ಳುವುದರಿಂದ ಅದಕ್ಕೆ ತಿಳಿವಳಿಕೆ ಹೇಳಲು ಸಾಧ್ಯವಿಲ್ಲ. ಅದು ಅವುಗಳ ಸಹಜ ಆಹಾರ ಎಂದು ನಿರ್ಲಕ್ಷಿಸಬಹುದು. ಕೆಲವು ಕಾಡು ಪ್ರಾಣಿಗಳು ಮನುಷ್ಯರನ್ನು ತಿನ್ನುತ್ತವೆ. ಅದಕ್ಕೆ ಬುದ್ದಿ ಹೇಳಲು ಆಗುವುದಿಲ್ಲ. ಹೇಳಿದರೂ ಅದಕ್ಕೆ ಅರ್ಥವಾಗುವುದಿಲ್ಲ. ನಮ್ಮ ರಕ್ಷಣೆ ಮಾಡಿಕೊಂಡು ಅವುಗಳನ್ನು ಅದರ ಪಾಡಿಗೆ ಬಿಟ್ಟು ಬಿಡೋಣ.

(ಇನ್ನೂ ಇದೆ)

-ವಿವೇಕಾನಂದ ಎಚ್ ಕೆ, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ