ಮತ್ತೆ ಸುದ್ದಿಯಲ್ಲಿ ಸಸ್ಯಹಾರ ಮತ್ತು ಮಾಂಸಹಾರ ಸೇವನೆಯ ವಿಷಯ (ಭಾಗ 2)

ಮತ್ತೆ ಸುದ್ದಿಯಲ್ಲಿ ಸಸ್ಯಹಾರ ಮತ್ತು ಮಾಂಸಹಾರ ಸೇವನೆಯ ವಿಷಯ (ಭಾಗ 2)

ಈಗ ಮನುಷ್ಯ ಪ್ರಾಣಿಯ ಆಹಾರದ ಬಗ್ಗೆ ಯೋಚಿಸೋಣ. ಸಹಜವೋ, ಅಸಹಜವೋ, ಸ್ವಾಭಾವಿಕವೋ, ಕೃತಕವೋ, ಪ್ರಾರಂಭದಿಂದಲೇ ಇದು ಇತ್ತೋ ಅಥವಾ ಅನಂತರ ಬೆಳವಣಿಗೆ ಹೊಂದಿತೋ ಏನೋ ಒಟ್ಟಿನಲ್ಲಿ ವಿಶ್ವದ ಆಹಾರ ಕ್ರಮದಲ್ಲಿ ಸಸ್ಯಹಾರ ಮತ್ತು ಮಾಂಸಹಾರ ಎಂದು ಎರಡು ವಿಭಾಗಗಳು ಸೃಷ್ಟಿಯಾಗಿದೆ. ನನಗಿರುವ ಮಾಹಿತಿಯಂತೆ ವಿಶ್ವ ಜನಸಂಖ್ಯೆಯ ಸುಮಾರು ಶೇಕಡಾ 75-80% ಜನರು ಸಸ್ಯಗಳನ್ನು ಒಳಗೊಂಡ ಮಾಂಸಹಾರವನ್ನು ಮತ್ತು ಉಳಿದವರು ಸಸ್ಯಹಾರವನ್ನು ಸೇವಿಸುತ್ತಾರೆ. ( ಸಂಪೂರ್ಣ ಸಸ್ಯಹಾರ ಸಾಧ್ಯವೇ ಇಲ್ಲ ಎಂಬ ವಾದವೂ ಇದೆ. ಅದನ್ನು  ಆಹಾರ ತಜ್ಞರಿಗೆ ಬಿಟ್ಟುಬಿಡೋಣ )

ಭಾರತದ ಮಟ್ಟಿಗೆ ಈ ಆಹಾರ ಸಂಸ್ಕೃತಿ ದುರಾದೃಷ್ಟವಶಾತ್ ಇಲ್ಲಿನ ಶ್ರೇಣೀಕೃತ ಜಾತಿ ವ್ಯವಸ್ಥೆಯ ಜೊತೆ ತಳುಕು ಹಾಕಿಕೊಂಡು ಒಂದಷ್ಟು ಸಂಕೀರ್ಣ ಸಮಸ್ಯೆ ಸೃಷ್ಟಿಸಿದೆ. ಅದರಲ್ಲೂ ಹಸುವಿನ ಮಾಂಸ ಸೇವನೆ ಸದ್ಯದ ಮಟ್ಟಿಗೆ ರಾಷ್ಟ್ರೀಯ ಸಮಸ್ಯೆಯಾಗಿ ಪರಿಣಮಿಸಿದೆ. ಈ ಹಿನ್ನೆಲೆಯಲ್ಲಿ ನಾವು ಆಹಾರ ಸ್ವಾತಂತ್ರ್ಯ, ಹಕ್ಕು, ಬಹುಸಂಖ್ಯಾತರ ಭಾವನೆ, ಗೋವಿನ ವಿಶಿಷ್ಟ ಸ್ಥಾನ ಮುಂತಾದ ರಾಜಕೀಯ - ಧರ್ಮ ಪ್ರೇರಿತ ವಿಚಾರಗಳನ್ನು ವಿಮರ್ಶಿಸಬೇಕಿದೆ.

ಕುರಿ, ಕೋಳಿ, ಮೀನು, ಹಂದಿಗಳ ಆಹಾರದ ಬಗ್ಗೆ ಹೆಚ್ಚಿನ ಪ್ರತಿರೋಧ ಇಲ್ಲ.  ಸಸ್ಯಹಾರ ಒಳ್ಳೆಯದು, ಮಾಂಸಾಹಾರ ಒಳ್ಳೆಯದಲ್ಲ, ಪ್ರಾಣಿ ವಧೆ ಮಹಾಹಿಂಸೆ ಮುಂತಾದ ವಾದಗಳನ್ನು ಜಾತಿಯ ಮೇಲ್ವರ್ಗದವರು, ಜೈನರು ಮುಂತಾದವರು ಪ್ರತಿಪಾದಿಸುತ್ತಾರೆ. ಆದರೆ ಗೋವಿನ ಮಾಂಸದ ವಿಷಯದಲ್ಲಿ ಇತ್ತೀಚೆಗೆ ಅದನ್ನು  ಹಿಂಸಾತ್ಮಕವಾಗಿ ಪ್ರತಿಭಟಿಸುವಷ್ಟು ಮುಂದುವರಿದಿದ್ದಾರೆ.

ಇದಕ್ಕೆ ಪ್ರತಿಯಾಗಿ ಹಸುವನ್ನು ಸೇರಿ ಮಾಂಸಹಾರ ಕೂಡ ಮಾನವನ ಸಹಜ ಆಹಾರ ಪದ್ದತಿ, ಅದು ಮನುಷ್ಯನ ಈ ಕ್ಷಣದ ಆಹಾರ ಸಮತೋಲನದ ಅತ್ಯವಶ್ಯಕ ವಿಧಾನ, ಈಗಿನ ಜನಸಂಖ್ಯೆಯ ದೃಷ್ಟಿಯಿಂದ ಸಸ್ಯಾಹಾರ ಸಾಕಾಗುವುದಿಲ್ಲ ಮತ್ತು ಪೌಷ್ಟಿಕಾಂಶ ದೊರೆಯುವುದಿಲ್ಲ. ಪ್ರಾಣಿ ವಧೆ ಹಿಂಸೆಯಾದರೂ ಮನುಷ್ಯ ಪ್ರಕೃತಿಯ ಮೇಲೆ ಸಾಧಿಸಿರುವ ನಿಯಂತ್ರಣದ ಕಾರಣಕ್ಕೆ ಮತ್ತು ಬಹುಸಂಖ್ಯಾತರ ಆಯ್ಕೆ ಮಾಂಸಹಾರ ಆಗಿರುವುದರಿಂದ ಆತನ ಆಹಾರ ಸಂಸ್ಕೃತಿಯನ್ನು ಗೌರವಿಸಬೇಕು ಮತ್ತು ಇದು ಅನಿವಾರ್ಯ ಎಂಬ ವಾದ ಮಂಡಿಸುತ್ತಾರೆ. ವಾದಗಳೇನೋ ಸರಿ. ಸತ್ಯ ಸಹ ಎಲ್ಲೋ ಅಡಗಿದೆ. ಆದರೆ ವಾಸ್ತವ...

ಭಾರತದ ಈಗಿನ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಗತಿಗಳನ್ನು ಗಮನಿಸಿದಾಗ.. ಸಂಪೂರ್ಣ ಸಸ್ಯಹಾರದ ಸಂಪನ್ಮೂಲಗಳ ಕ್ರೋಡೀಕರಣ ಸಾಧ್ಯವಿಲ್ಲ ಮತ್ತು ಅದಕ್ಕಾಗಿ ಒತ್ತಾಯ ಒಳ್ಳೆಯದಲ್ಲ. ಹಾಗಾದರೆ ಮಾಂಸಹಾರ ಪ್ರೋತ್ಸಾಹಿಸಬೇಕೆ. ಅದೂ ಒಳ್ಳೆಯದಲ್ಲ. ಈ ಕ್ಷಣದಲ್ಲಿ ನಿಂತು ಯೋಚಿಸಿದರೆ..

ಆಹಾರ ಅವರವರ ಆಯ್ಕೆ. ಕಾನೂನಿನ ಅಡಿಯಲ್ಲಿ ನಿಷೇಧವಿಲ್ಲದ ಏನನ್ನಾದರೂ ತಿನ್ನಲಿ. ಆ ಸ್ವಾತಂತ್ರ್ಯ ಅವರಿಗಿದೆ. ಮುಖ್ಯವಾಗಿ ದನದ ಮಾಂಸದ ಬಗ್ಗೆ ಕೆಲವರಿಗೆ ಅಸಮಾಧಾನ ಮತ್ತು ಆಕ್ರೋಶವಿದೆ. ಗೋ ರಕ್ಷಣೆಗಾಗಿ ಮನುಷ್ಯರನ್ನು ಕೊಲ್ಲುವಷ್ಟು ಕ್ರೌರ್ಯವಿದೆ. ಇದು ಸರಿಯೇ ಎಂಬುದು ‌ಈಗ ಉತ್ತರ ಕಂಡುಕೊಳ್ಳಬೇಕಾದ ಪ್ರಶ್ನೆ. ಎಲ್ಲಾ ಪ್ರಾಣಿಗಳಂತೆ ಹಸು ಕೂಡ ಒಂದು ಪ್ರಾಣಿ. ಮನುಷ್ಯನ ಉಪಯೋಗದ ದೃಷ್ಟಿಯಿಂದ ಒಂದಷ್ಟು ಹೆಚ್ಚು ಪ್ರಾಮುಖ್ಯತೆ ಪಡೆದಿರಬಹುದು ಮತ್ತು ಗಾತ್ರದಲ್ಲಿ ದೊಡ್ಡದು ಸಹ. ಅದನ್ನು ಆಹಾರಕ್ಕಾಗಿ ಉಪಯೋಗಿಸುತ್ತಾರೆ ಎಂದಾಗ ಕೆಲವರು ಭಾವುಕರಾಗಬಹುದು.

ಆದರೆ ನಮ್ಮದೇ ಕೆಲವೇ ಕೆಲವು ಜನರು  ರುಚಿಗಾಗಿ, ಪೌಷ್ಟಿಕಾಂಶಕ್ಕಾಗಿ, ಬಡತನಕ್ಕಾಗಿ, ಆಹಾರ ಸ್ವಾತಂತ್ರ್ಯದ ರಕ್ಷಣೆಗಾಗಿ, ಎಲ್ಲ ಜಾತಿ ಮತ ಧರ್ಮಗಳ ಸೌಹಾರ್ದಕ್ಕಾಗಿ ಮತ್ತು ಇಂದಿನ ಸಾಮಾಜಿಕ ಸ್ವಾಸ್ಥ್ಯಕ್ಕಾಗಿ ಗೋಮಾಂಸ ಸೇವಿಸುವುದನ್ನು ಒಪ್ಪಿಕೊಳ್ಳಲೇ ಬೇಕಿದೆ. ಇಲ್ಲದಿದ್ದರೆ ಇದು ನಮ್ಮ ಸಮಾಜದ ವಿಭಜನೆಗೆ ಕಾರಣವಾಗಬಹುದು. ಗೋಮಾಂಸ ವಿರೋಧಿಸುವವರಿಗೆ ಇನ್ನೂ ಒಂದು ಆಯ್ಕೆ ಇದೆ. ಅವರು ಗೋಮಾಂಸದ ವಿರುದ್ಧ ಜನಜಾಗೃತಿ ಮೂಡಿಸಬಹುದು. ಗೋವುಗಳ ಎಲ್ಲಾ ತಳಿಗಳನ್ನು ಮತ್ತಷ್ಟು ಮತ್ತಷ್ಟು ಬೆಳೆಸಬಹುದು. ಗೋವುಗಳನ್ನು ತಮ್ಮ ಮನೆಯಲ್ಲಿ ಸಾಕಿ ಸಲುಹಿ ಪೂಜೆ ಪುನಸ್ಕಾರ ಏನು ಬೇಕಾದರೂ ಮಾಡಬಹುದು. ಆ ಎಲ್ಲಾ ಸ್ವಾತಂತ್ರ್ಯ,ಅವಕಾಶ ಮತ್ತು ಹಕ್ಕು ಅವರಿಗಿದೆ ಮತ್ತು ಅದು ಹೆಚ್ಚು ಪ್ರಜಾಸತ್ತಾತ್ಮಕವೂ ಹೌದು. ಅದು ಬಿಟ್ಟು ಗೋಮಾಂಸ ಸೇವಿಸುವವರನ್ನು ಧರ್ಮ ದ್ರೋಹಿಗಳು, ದೇಶದ್ರೋಹಿಗಳು ಎಂದು ಅವರನ್ನು ಶಿಕ್ಷಿಸುವುದು ನಮ್ಮ ಸಮಾಜದ ನೆಮ್ಮದಿಯನ್ನು ನಾವೇ ಹಾಳು ಮಾಡಿಕೊಂಡಂತ್ತಾಗುತ್ತದೆ. 

ನಾನು ಗೋಮಾಂಸ ತಿನ್ನುವುದಿಲ್ಲ. ನನ್ನನ್ನು ಯಾರಾದರೂ ಕೇಳಿದರೆ ಅದಕ್ಕಿಂತ ಉತ್ತಮ ಆಹಾರವನ್ನು ಸೂಚಿಸುತ್ತೇನೆ. ಆದರೆ ಗೋಮಾಂಸ ತಿನ್ನುವವರ ಸ್ವಾತಂತ್ರ್ಯಕ್ಕೆ ಎಂದು ಅಡ್ಡಿಪಡಿಸುವುದಿಲ್ಲ. ಅವರ ಸ್ವಾತಂತ್ರ್ಯ ಮತ್ತು ಹಕ್ಕನ್ನು ಮನಃಪೂರ್ವಕವಾಗಿ ಸ್ವಾಗತಿಸುತ್ತೇನೆ ಮತ್ತು ಗೌರವಿಸುತ್ತೇನೆ. ನನಗೆ ಗೋವಿಗಿಂತ ಮನುಷ್ಯ, ಅವನ ಆಸೆ ಆಕಾಂಕ್ಷೆ, ಅವನೊಡನೆ ಒಡನಾಟ, ಪ್ರೀತಿಯ ಸಂಬಂಧ ಬಹಳ ಮುಖ್ಯ.

ಮನುಷ್ಯರಿಂದ ನನಗೆ ಸಾಕಷ್ಟು ನೋವು ಸಂಕಷ್ಟಗಳ ಅನುಭವ ಆಗಿದೆ. ಗೋವುಗಳಿಂದ ಒಂದಷ್ಟು ಉಪಕಾರ ಆಗಿದೆ. ಆದರೂ ಗೋವು ಮತ್ತು ಮನುಷ್ಯನ ಆಯ್ಕೆಯಲ್ಲಿ ನಾನು ಮನುಷ್ಯರನ್ನೇ ಆಯ್ದುಕೊಳ್ಳುತ್ತೇನೆ. ಹಾಗೆಯೇ ಗೋವು ಮತ್ತು ದೇಶದ ಆಯ್ಕೆಯಲ್ಲಿ ದೇಶವನ್ನೇ ಆಯ್ಕೆಮಾಡಿಕೊಳ್ಳುತ್ತೇನೆ. ಏಕೆಂದರೆ ನನ್ನ ಬದುಕು ಮುನ್ನಡೆಯುತ್ತಿರುವುದೇ ಮನುಷ್ಯರಾದ ನಿಮ್ಮೊಂದಿಗೆ ಮತ್ತು ಈ ದೇಶದೊಂದಿಗೆ.

ಹಸುವಿಲ್ಲದೆ ಬದುಕಬಲ್ಲೆ. ನೀವಿಲ್ಲದೆ ನಾನಿಲ್ಲ. ಈ ದೇಶ ನೆಮ್ಮದಿಯಾಗಿರದೆ ನನ್ನ ಅಸ್ತಿತ್ವಕ್ಕೆ ಬೆಲೆಯೇ ಇಲ್ಲ. ಹಾಗೆಯೇ ಯಾವುದೇ ಸ್ಥಳದ ಪ್ರವೇಶಕ್ಕೂ ಆಹಾರಕ್ಕೂ ಯಾವುದೇ ಸಂಬಂಧವಿಲ್ಲ ಎಂಬುದನ್ನು ನೆನಪಿಸುತ್ತಾ.. ಒಟ್ಟಿನಲ್ಲಿ ಇದು ಒಂದು ಸಹಜ ಸ್ವಾಭಾವಿಕ ಅಭಿಪ್ರಾಯ. ಇದಕ್ಕಿಂತ ಭಿನ್ನ ಅಭಿಪ್ರಾಯ ನಿಮ್ಮದಾಗಿದ್ದರೆ ಅದನ್ನೂ ಗೌರವಿಸುತ್ತಾ… ವೈದ್ಯಕೀಯ ವಿಜ್ಞಾನದ ಪ್ರಕಾರ ತಿನ್ನುವ ಎಲ್ಲವೂ ಬಹುತೇಕ ಗ್ಲುಕೋಸ್ ಆಗಿ ಪರಿವರ್ತನೆ ಹೊಂದಿ ದೇಹ ಸೇರುತ್ತದೆ. ಅದಕ್ಕೆ ಸಸ್ಯ ಅಥವಾ ಮಾಂಸ ಎಂಬುದೇನು ಇಲ್ಲ. 

ಮತ್ತೆ ಮಾಂಸ ತಿಂದು ದೇವಾಲಯ ಪ್ರವೇಶಿಸಬಾರದು ಎಂಬುದು ಇಲ್ಲಿ ತನ್ನ ಅರ್ಥ ಕಳೆದುಕೊಳ್ಳುತ್ತದೆ. ಕೇವಲ ಮನುಷ್ಯ ನಿರ್ಮಿತ ಒಂದು ಭ್ರಮಾತ್ಮಕ ನಂಬಿಕೆ ಮಾತ್ರ ಉಳಿಯುತ್ತದೆ. ಇದರ ಆಧಾರದ ಮೇಲೆ ಇದೊಂದು ವಿವಾದವೇ ಅಲ್ಲ. ದೇವಸ್ಥಾನಗಳ ಮುಂದೆಯೇ ಕುರಿ ಕೋಳಿಗಳನ್ನು ಬಲಿ ಕೊಟ್ಟು ದೇವರಿಗೇ ನೈವೇದ್ಯ ಅರ್ಪಿಸಿ ದೇವರ ಹೆಸರಿನಲ್ಲಿ ಅಲ್ಲಿಯೇ ಊಟ ಮಾಡಿ ಸಂಭ್ರಮಿಸಿ ತೃಪ್ತಿ ಪಟ್ಟುಕೊಳ್ಳುವ ನಮ್ಮ ಸಾಂಸ್ಕೃತಿಕ ವ್ಯವಸ್ಥೆಯಲ್ಲಿ ಕೆಲವು ದೇವಸ್ಥಾನಗಳಿಗೆ ಅವರಿಗೆ ಮಾಂಸಹಾರ ಇಷ್ಟವಿಲ್ಲ ಎಂಬ ಕಾರಣಕ್ಕಾಗಿ ಇದನ್ನು ವಿರೋಧಿಸುವುದು ಹಾಸ್ಯಾಸ್ಪದ.

ಮಾಂಸ ತಿನ್ನುವವರು ಕೆಟ್ಟವರು ಅಲ್ಲ, ಸಸ್ಯಹಾರಿಗಳು ಒಳ್ಳೆಯವರು ಅಲ್ಲ. ಅಥವಾ ಮಾಂಸಾಹಾರಿಗಳು ಒಳ್ಳೆಯವರು ಸಸ್ಯಹಾರಿಗಳು ಕೆಟ್ಟವರು ಅಲ್ಲ. ಯಾವ ದೇವರು ಇದನ್ನೇ ತಿನ್ನು ಎಂದು ಹೇಳುವುದಿಲ್ಲ. ಒಂದು ವೇಳೆ ನಮ್ಮ ಸಂಪ್ರದಾಯಗಳಲ್ಲಿ ‌ದೋಷವಿದ್ದರೆ ಅದನ್ನು ಈಗಿನ ಕಾಲಕ್ಕೆ ತಕ್ಕಂತೆ ಸರಿಪಡಿಸಿಕೊಂಡು ಮುನ್ನಡೆಯೋಣ. ಈಗ ಎಲ್ಲಕ್ಕಿಂತ ಮುಖ್ಯವಾಗಿ ಚರ್ಚೆ ಆಗಬೇಕಿರುವುದು ಎಲ್ಲಾ ಭಾರತೀಯರ ಜೀವನ ಮಟ್ಟದ ಸುಧಾರಣೆ. ನೆಮ್ಮದಿಯ ಬದುಕಿನ ಮಾರ್ಗಗಳು. ಅದನ್ನು ಹೊರತುಪಡಿಸಿ ಎಲ್ಲವೂ ಮೂರ್ಖತನದ ಪರಮಾವಧಿ. ದಯವಿಟ್ಟು ಮತ್ತೊಮ್ಮೆ ಯೋಚಿಸಿ. ಮನುಷ್ಯ ಮುಖ್ಯವೋ - ಸಮಾಜದ ಸ್ವಾಸ್ಥ್ಯ ಮುಖ್ಯವೋ - ನಿಮ್ಮ ಮೂಢನಂಬಿಕೆಯ ಗೊಡ್ಡು ಸಂಪ್ರದಾಯ ಮುಖ್ಯವೋ - ಚಾನಲ್ ಗಳ ಟಿಆರ್ಪಿ‌ ಮುಖ್ಯವೋ - ನಿರ್ಧಾರ ನಿಮ್ಮ ವಿವೇಚನೆಗೆ…

(ಮುಗಿಯಿತು).

-ವಿವೇಕಾನಂದ ಎಚ್ ಕೆ, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ