ಮತ್ತೆ ಹಾಡಿತು ಕೋಗಿಲೆ

ಮತ್ತೆ ಹಾಡಿತು ಕೋಗಿಲೆ

ಪುಸ್ತಕದ ಲೇಖಕ/ಕವಿಯ ಹೆಸರು
ಎ ಆರ್ ಮಣಿಕಾಂತ್
ಪ್ರಕಾಶಕರು
ನೀಲಿಮಾ ಪ್ರಕಾಶನ, ಕೆಂಗೇರಿ, ಬೆಂಗಳೂರು- ೫೬೦೦೫೯
ಪುಸ್ತಕದ ಬೆಲೆ
ರೂ.೧೬೦.೦೦, ಮುದ್ರಣ: ೨೦೨೨

ತಮ್ಮ ಭಾವನಾತ್ಮಕ ಅಂಕಣ ಬರಹಗಳಿಗೆ ಹೆಸರುವಾಸಿಯಾದ ಲೇಖಕ ಎ ಆರ್ ಮಣಿಕಾಂತ್ ಆವರ ನೂತನ ಪುಸ್ತಕವೇ ‘ಮತ್ತೆ ಹಾಡಿತು ಕೋಗಿಲೆ'. ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾದ ಲೇಖಕರ ಅಂಕಣ ಬರಹವು ಪುಸ್ತಕ ರೂಪದಲ್ಲಿ ಪ್ರಕಟಗೊಂಡಿದೆ. ಪುಸ್ತಕದಲ್ಲಿರುವ ಪ್ರತಿಯೊಂದು ಅಧ್ಯಾಯವನ್ನು ಓದಿ ಮುಗಿಸುವಾಗ ನಿಮ್ಮ ಕಣ್ಣಂಚಿನಲ್ಲಿ ಖಂಡಿತಕ್ಕೂ ನೀರು ಜಿನುಗುತ್ತಿರುತ್ತದೆ. ಅಷ್ಟೊಂದು ಆಪ್ತವಾಗಿರುವ ಬರಹಗಳಿವೆ. ಇಲ್ಲಿ ಮುದ್ರಿತವಾಗಿರುವ ಬಹಳಷ್ಟು ಬರಹಗಳು ವ್ಯಕ್ತಿಯೊಬ್ಬರ ನಿಜ ಜೀವನಕ್ಕೆ ಸಂಬಂಧಿಸಿದವುಗಳೇ. ಸೋಲೆಂದು ಕುಸಿದು ಕೂತಿದ್ದ ವ್ಯಕ್ತಿಯೋರ್ವ ಬಾನೆತ್ತರಕ್ಕೆ ಬೆಳೆದ ಹಲವಾರು ಕಥಾನಕಗಳು ದಾಖಲೆ ಸಮೇತ ನಿಮ್ಮ ಮುಂದೆ ಇರಿಸಿದ್ದಾರೆ ಮಣಿಕಾಂತ್ ಇವರು.

ತಮ್ಮ ಪುಸ್ತಕದ ಬಗ್ಗೆ ಅವರು ಹೇಳುವುದು ಹೀಗೆ “ ಕೋಗಿಲೆ, ಮೊಟ್ಟೆಗೆ ಕಾವು ಕೊಟ್ಟು ಮರಿ ಮಾಡುವುದಿಲ್ಲ. ಕಾಗೆ ಇಲ್ಲದ ಸಂದರ್ಭವನ್ನು ನೋಡಿಕೊಂಡು ಅದರ ಗೂಡಲ್ಲಿ ಮೊಟ್ಟೆಯಿಟ್ಟು ಬಂದು ಬಿಡುತ್ತದೆ. ಈ ಕಪಟ ಗೊತ್ತಿಲ್ಲದ ಕಾಗೆ, ಕೋಗಿಲೆಯ ಮೊಟ್ಟೆಗೂ ಕಾವು ಕೊಟ್ಟು ಮರಿ ಮಾಡಿ ಅದನ್ನು ಸಾಕುತ್ತದೆ. ಮುಂದೆ ಸತ್ಯ ಗೊತ್ತಾದಾಗ, ಕೋಗಿಲೆಯ ಮರಿಯನ್ನು ಗೂಡಿಂದ ಆಚೆ ತಳ್ಳುತ್ತದೆ. ಇದು ನಮಗೆಲ್ಲಾ ಗೊತ್ತಿರುವ ಪ್ರಕೃತಿ ರಹಸ್ಯ, ಕಣ್ಣೆದುರಿನ ವಾಸ್ತವ.

ಹೀಗೆ ದಿಢೀರನೆ ಬೀದಿಗೆ ಬೀಳುತ್ತದಲ್ಲ ; ಅದು ಕೋಗಿಲೆಯ ಬದುಕಿನ ಮೊದಲ ಸೋಲು. ನಂತರದ ಅದೆಷ್ಟೋ ದಿನಗಳನ್ನು ತಬ್ಬಲಿತನ, ಅಸಹಾಯಕತೆ, ಅನಾಥಭಾವ, ಕಷ್ಟ, ಕಣ್ಣೀರು, ನೋವು, ನಿಟ್ಟುಸಿರಿನ ಜತೆಗೇ ಕಳೆಯುವ ಕೋಗಿಲೆಯ ಬದುಕಿನಲ್ಲಿ ಕಡೆಗೂ ‘ಬಂಗಾರದ ಕ್ಷಣವೊಂದು' ಬಂದುಬಿಡುತ್ತದೆ. ಮಾಮರದಲ್ಲಿ ಚಿಗುರು ಕಾಣಿಸಿದ ಕ್ಷಣದಿಂದಲೇ ಕೋಗಿಲೆಯ ಕೊರಳು ಸಂಗೀತದ ಆಲಯವಾಗುತ್ತದೆ. ಕುಹೂ..ಕುಹೂ ದನಿಯಲ್ಲಿ ಸಪ್ತಸ್ವರ ಕೇಳಿಸುತ್ತದೆ. ಆ ಸುಮಧುರ ದನಿಗೆ ಜಗತ್ತು ತಲೆದೂಗುತ್ತದೆ. ಕುಣಿದು, ನಲಿದು, ಮಣಿದು ಕೃತಜ್ಞತೆ ಸಲ್ಲಿಸುತ್ತದೆ. ನಿರಂತರ ಪರಿಶ್ರಮ ಮತ್ತು ಹೋರಾಟಕ್ಕೆ ಬಳುವಳಿಯಾಗಿ ದೊರೆಯುವ ಗೆಲುವು ಎಂಬ ಅಮೃತ ಸಿಂಚನಕ್ಕೆ ಸಿಗುವ ಗೌರವ ಇದು.

ಕಷ್ಟಗಳ ಕುಲುಮೆಯಲ್ಲಿ ಬೇಯುತ್ತಲೇ ಅಂಥದೊಂದು ಅಮೃತ ಘಳಿಗೆಗೆ ಹಂಬಲಿಸಿದ, ಸೋಲುಗಳ ಸರಪಳಿಯನ್ನು ತುಂಡರಿಸಿ ಗೆಲುವಿನ ಗಾಳಿಪಟವನ್ನು ಮುಗಿಲಿಗೆ ಹಾರಿಬಿಟ್ಟ, ಅಂತಃಕರಣವನ್ನೇ ಉಸಿರಾಗಿಸಿಕೊಂಡ ಹೃದಯವಂತರ ಕಥೆಗಳು ಈ ಪುಸ್ತಕದ ಪುಟಗಳನ್ನು ತುಂಬಿಕೊಂಡಿವೆ.”

ಪತ್ರಕರ್ತ, ಅಂಕಣಕಾರರಾದ ನಾಗೇಶ್ ಹೆಗಡೆ ಇವರು ಪುಸ್ತಕಕ್ಕೆ ಮುನ್ನುಡಿಯನ್ನು ಬರೆದಿದ್ದಾರೆ. ಅವರು ಈ ಬರಹಗಳನ್ನು ‘ಲೇಖನಿಯ ಮೊನೆಯಲ್ಲಿ ಮಿನುಗುತ್ತಿರುವ ಮಣಿಗಳು' ಎಂದು ಅಭಿಪ್ರಾಯ ಪಟ್ಟಿದ್ದಾರೆ. ಪುಸ್ತಕದ ಕೆಲವು ಅಧ್ಯಾಯಗಳಿಂದ ತಮಗೆ ಇಷ್ಟವಾದ ಘಟನೆಗಳನ್ನು ಹೆಕ್ಕಿ ಅವರು ಇಲ್ಲಿ ನೀಡಿದ್ದಾರೆ. ಅವರು ಹೇಳುವ ಉದಾಹರಣೆಗಳು ಹೀಗಿವೆ “ಶ್ರಮಜೀವಿ ದೇವ್ ಮಿಶ್ರಾ ಆಕಸ್ಮಿಕವಾಗಿ ರೈಲು ಹಳಿಯ ಮೇಲೆ ಬಿದ್ದು ಎರಡೂ ಕಾಲುಗಳನ್ನು ಕಳೆದುಕೊಳ್ಳುತ್ತಾನೆ. ಮುಂಬೈಗೆ ಬಂದು ಕೆಲಸ ಹುಡುಕುತ್ತಾ ಬೀದಿಯಲ್ಲಿ ತೆವಳುತ್ತಿದ್ದಾಗ ಆಭರಣ ವಿನ್ಯಾಸಕಿ ಫರ್ಹಾ ಖಾನ್ ಅಲಿ ಅವನನ್ನು ಅಕ್ಷರಶಃ ಮೇಲೆತ್ತುತ್ತಾರೆ. ಹಣ ಕೊಟ್ಟು ಓಡಾಡಲು ಗಾಲಿ ಕುರ್ಚಿ ಕೊಟ್ಟು, ಉದ್ಯೋಗ ಕೊಟ್ಟು ಪೋಷಿಸುತ್ತಾರೆ. ಮುಂದೆ ದೇವ್ ಉತ್ತಮ ಬಾಡಿ ಬಿಲ್ಡರ್ ಆಗಿ ನೃತ್ಯಪಟುವಾಗಿ ಗೆಲ್ಲುತ್ತಾನೆ. ‘ಕಾಲಿಲ್ಲದಿದ್ದರೂ ಆತ ವಿಧಿಯ ಎದುರೇ ನಿಂತು ತೊಡೇ ತಟ್ಟಿದ್ದಾನೆ' ಎನ್ನುತ್ತಾರೆ ಮಣಿಕಾಂತ್.

ಶಫಿ ಮೊಹಮ್ಮದ್ ಹಗಲೆಲ್ಲಾ ದಿನಗೂಲಿ ಕಟ್ಟಡ ಕಾರ್ಮಿಕ. ರಾತ್ರಿ ಕೂತು ಸಾಹಿತ್ಯ ಕತೆಗಳನ್ನು ತಮಿಳಿನಿಂದ ಮಲಯಾಳಂಗೆ ಅನುವಾದ ಮಾಡುತ್ತಾ ಜನಪ್ರಿಯ ಸಾಹಿತಿಯಾಗುತ್ತಾರೆ. ಎಸ್ ಎಸ್ ಎಲ್ ಸಿ ಯಲ್ಲಿ ನಪಾಸಾಗಿ ಬೆಂಗಳೂರಿನಲ್ಲಿ ಕೂಲಿ ಕೆಲಸ ಆರಂಭಿಸಿದ ಇವರು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಗೆಲ್ಲುವಷ್ಟು ಎತ್ತರಕ್ಕೆ ಬೆಳೆದಿದ್ದಾರೆ. 

ಆರು ಬಾರಿ ಕ್ಯಾನ್ಸರ್ ಕಾಯಿಲೆಗೆ ಸಿಕ್ಕು ಆರೂ ಬಾರಿ ಗೆದ್ದು ಬಂದ ಜಯಂತ್ ಕಂಡಾಯ್ ಕತೆ ಇನ್ನೂ ರೋಚಕವಾಗಿದೆ. ಕೇವಲ ೩೬ ಕಿಲೋ ತೂಕದ ಈ ಯುವಕ ತನ್ನ ಮೇಲಿನ ಕ್ಯಾನ್ಸರ್ ದಾಳಿಗಳನ್ನು ಎದುರಿಸುತ್ತಲೇ ಇತರ ಕ್ಯಾನ್ಸರ್ ರೋಗಿಗಳ ಚಿಕಿತ್ಸೆಗಾಗಿ ಸಂಘಟನೆಯನ್ನು ಆರಂಭಿಸುತ್ತಾನೆ.

ಕಣ್ಣಿಲ್ಲದ ಭವೇಶ್ ಭಾಟಿಯಾ ತನ್ನಂಥ ದೃಷ್ಟಿಹೀನ ೨೫೦ಕ್ಕೂ ಹೆಚ್ಚಿನವರಿಗೆ ಮೋಂಬತ್ತಿ ತಯಾರಿಸುವ ಉದ್ಯೋಗ ನೀಡಿ ಕೋಟ್ಯಾಧಿಪತಿಯಾಗಿದ್ದಾರೆ. ಬೆಳಕನ್ನೇ ಕಾಣದವರು ಇವರಿಂದಾಗಿ ಲೋಕಕ್ಕೆ ಬೆಳಕು ನೀಡುತ್ತಿದ್ದಾರೆ. (ಭಾಟಿಯಾ ಬಗ್ಗೆ ಸವಿವರಗಳನ್ನು ನೀಡುವ ಪುಸ್ತಕವನ್ನು ಖ್ಯಾತ ಲೇಖಕಿ ‘ನೇಮಿಚಂದ್ರ' ಇವರು ಬರೆದಿದ್ದಾರೆ) ನಾಳಿನ ಬದುಕಿನ ನಕ್ಷೆಯನ್ನು ರೂಪಿಸಲು ಪರದಾಡುವವರಿಗೆ ಇಲ್ಲಿನ ಒಂದೊಂದು ಕತೆಯೂ ಸುಂದರ ನೀಲನಕ್ಷೆಯನ್ನು ಬಿಡಿಸಿಡುವಂತಿದೆ”.

ಪುಸ್ತದ ಪರಿವಿಡಿಯಲ್ಲಿ ೩೧ ಅಧ್ಯಾಯಗಳಿವೆ. ಪ್ರತಿಯೊಂದು ಸ್ಪೂರ್ತಿದಾಯಕ ಕತೆಗಳೇ. ಪ್ರತೀ ಕಥೆಗೆ ಸೂಕ್ತ ಛಾಯಾ ಚಿತ್ರಗಳಿವೆ. ೧೬೨ ಪುಟಗಳ ಈ ಪುಸ್ತಕವನ್ನು ಮಣಿಕಾಂತ್ ಇವರು ‘ಪುಸ್ತಕದ ಕಾರಣದಿಂದಲೇ ನಾಡಿನುದ್ದಕ್ಕೂ ಸಿಗುತ್ತಿರುವ ಅಭಿಮಾನಿ ಓದುಗರೆಂಬ ಹೂ ಮನಸ್ಸಿನ ಬಂಧುಗಳಿಗೆ...' ಅರ್ಪಣೆ ಮಾಡಿದ್ದಾರೆ. ನಿಮಗೆ ಬದುಕಿನಲ್ಲಿ, ಕೆಲಸದಲ್ಲಿ ಸೋಲಾಗಿದ್ದರೆ, ಒಮ್ಮೆ ಈ ಪುಸ್ತಕ ಓದಿದರೆ ನೀವು ಸೋಲನ್ನೂ ಸೋಲಿಸಬಹುದು.