ಮತ್ತೊಂದು ಕಾರ್ಡ್ ಬರುತ್ತಿದೆ...ಎಚ್ಚರ ಎಚ್ಚರ !
ಈಗಾಗಲೇ ನಮ್ಮ ದೇಶದಲ್ಲಿ ಜನರ ಬಳಿ ಇರುವ ಕಾರ್ಡುಗಳ ಸಂಖ್ಯೆ ಎರಡಂಕಿ ತಲುಪಿದೆ. ಆಧಾರ್, ಪಾನ್, ರೇಷನ್, ಆಯುಷ್ಮಾನ್, ಲೈಸನ್ಸ್, ವೋಟರ್ ಕಾರ್ಡ್, ಹಿರಿಯ ನಾಗರಿಕರ ಕಾರ್ಡ್, ಬಸ್ ಪಾಸ್ ಗುರುತು ಚೀಟಿ, ಪಾಸ್ ಪೋರ್ಟ್ ಇವೆಲ್ಲರ ಜೊತೆಗೆ ನೀವು ಕಾಲಕಾಲಕ್ಕೆ ಖರೀದಿಸುವ ವಾಹನದ ರಿಜಿಸ್ಟ್ರೇಷನ್ ಕಾರ್ಡ್, ಜೀವ ವಿಮೆ, ಆರೋಗ್ಯ ವಿಮೆ, ನಿಮ್ಮ ಕೆಲಸದ ಗುರುತು ಚೀಟಿ ಇವು ಸಾಕಾಗೋಲ್ಲ ಎಂದು ಹಲವಾರು ಬಗೆಯ ಎಟಿಎಂ ಕಾರ್ಡ್, ಕ್ರೆಡಿಟ್ ಕಾರ್ಡ್, ಶಾಪಿಂಗ್ ಕಾರ್ಡ್, ಬಯೋಮೆಟ್ರಿಕ್ ಕಾರ್ಡ್ ಹೀಗೆ ಮಾಲೆ ಮಾಡಿದರೆ ಹುಲಿವೇಷಕ್ಕೆ ನವರಾತ್ರಿಯ ಸಮಯದಲ್ಲಿ ಹಾಕುವ ನೋಟಿನ ಮಾಲೆಯಂತೆ ಕಾಣಿಸಬಹುದು.
ನಿಜಕ್ಕೂ ಒಬ್ಬ ವ್ಯಕ್ತಿ ಇಷ್ಟೆಲ್ಲಾ ಕಾರ್ಡ್ ಗಳನ್ನು ಇಡುವುದಾದರೂ ಎಲ್ಲಿ. ಎಲ್ಲಾದರೂ ಇಟ್ಟರೂ ಅದನ್ನು ಕಾಲಕಾಲಕ್ಕೆ ನವೀಕರಿಸುವುದು, ಅಪ್ ಡೇಟ್ ಮಾಡುವುದು ಹೇಗೆ? ಆಧಾರ್ ಕಾರ್ಡ್ ಮೊದಲು ಬಂದಾಗ ಅದು ಕಡ್ಡಾಯವಲ್ಲ ಎನ್ನಲಾಯಿತು. ಈಗಲೂ ಕಾನೂನುಗಳ ಪ್ರಕಾರ ಅದು ಕಡ್ಡಾಯವಲ್ಲ. ಆದರೆ ನಾವು ಯಾವುದೇ ದಾಖಲಾತಿಯ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಆಧಾರ್ ಕಾರ್ಡ್ ಬೇಕು ಎನ್ನುತ್ತಾರೆ. ಪಾನ್ ಕಾರ್ಡ್ ಗೆ ಆಧಾರ್ ಲಿಂಕ್ ಆಗಬೇಕು. ಇದು ಕಡ್ಡಾಯ. ಪಾನ್ ಕಾರ್ಡ್ ಬ್ಯಾಂಕ್ ಸೇವೆಗೆ ಕಡ್ಡಾಯ. ಹೀಗಿದ್ದ ಮೇಲೆ ಆಧಾರ್ ಕಾರ್ಡ್ ಕೂಡ ಕಡ್ಡಾಯವೆಂದಾಯಿತಲ್ಲಾ? ಇದು ಹೇಗೆ ಎಂದರೆ ನಾನು ಹುಡುಗಿಯ ಅಪ್ಪನನ್ನು ಪ್ರೀತಿಸುತ್ತೇನೆ, ಅಪ್ಪ ಮಗಳನ್ನು ಪ್ರೀತಿಸುತ್ತಾಳೆ, ಆದುದರಿಂದ ಪರೋಕ್ಷವಾಗಿ ನಾನು ಅಪ್ಪನ ಮಗಳನ್ನು ಪ್ರೀತಿಸಿದಂತೆ ಆಗಲಿಲ್ಲವೇ? ನಮ್ಮ ಸರಕಾರಗಳ ಯೋಜನೆ, ಯೋಚನೆಗಳು ಹೀಗೆಯೇ…
ಅದಿರಲಿ, ಈಗ ಬರಲಿರುವ ಹೊಸ ಕಾರ್ಡ್ ಬಗ್ಗೆ ಯೋಚನೆ ಮಾಡುವ. ಹಿರಿಯ ನಾಗರಿಕರಿಗೆ ಹೇಗೂ ಗುರುತಿನ ಕಾರ್ಡ್ ಇದೆಯಲ್ಲಾ, ಸಣ್ಣ ಮಕ್ಕಳಿಗೆ/ವಿದ್ಯಾರ್ಥಿಗಳಿಗೂ ಒಂದು ಕಾರ್ಡ್ ಇರಲಿ ಎಂಬ ದಿವ್ಯ ಆಲೋಚನೆ ನಮ್ಮ ಅಧಿಕಾರಸ್ಥರಿಗೆ ಬಂದಿದೆ. ಇದರ ಹೆಸರು “ಅಪಾರ್" ಗುರುತು ಕಾರ್ಡ್. ಮೊದಲಿಗೆ ಇದು ಏನು? ಹೇಗೆ ಕಾರ್ಯನಿರ್ವಹಣೆ ಎನ್ನುವ ಬಗ್ಗೆ ತಿಳಿದುಕೊಳ್ಳುವ.
ದೇಶದ ನಾಗರಿಕರಿಗೆ ಆಧಾರ್ ಕಾರ್ಡ್ ಇರುವಂತೆಯೇ ದೇಶದಾದ್ಯಂತ ಇರುವ ವಿದ್ಯಾರ್ಥಿಗಳಿಗೆ ‘ಅಪಾರ್' ಎನ್ನುವ ಗುರುತಿನ ಚೀಟಿಯನ್ನು ವಿಶಿಷ್ಟ ಗುರುತಿನ ಸಂಖ್ಯೆಯ ಜೊತೆಗೆ ನೀಡಲು ಕೇಂದ್ರ ಸರಕಾರ ನಿರ್ಧರಿಸಿದೆ. ಅಪಾರ್ ಗುರುತಿನ ಚೀಟಿಯಲ್ಲಿನ ಸಂಖ್ಯೆಯು ‘ಒಬ್ಬ ವಿದ್ಯಾರ್ಥಿ ಒಂದು ಐಡಿ ಸಂಖ್ಯೆ' ಎನ್ನುವಂತೆ ಕಾರ್ಯನಿರ್ವಹಿಸಲಿದೆ. “ಅಟೋಮ್ಯಾಟಿಕ್ ಪರ್ಮನೆಂಟ್ ಅಕಾಡೆಮಿಕ್ ಅಕೌಂಟ್ ರಿಜಿಸ್ಟ್ರಿ' ಎಂಬ ವಿಸ್ತ್ರತ ಹೆಸರಿರುವ ಈ ‘ಅಪಾರ್' ಕಾರ್ಡ್ ಒಂದು ಮಗು ತನ್ನ ಶಾಲಾ ದಿನಗಳನ್ನು ಪ್ರಾರಂಭಿಸುವ ಸಮಯದಲ್ಲಿ ನೀಡಲಾಗುತ್ತದೆ. ಆಗ ಆ ಮಗು ಹೊಂದಿರುವ ಸಂಖ್ಯೆಯು ಆತ ಅಥವಾ ಆಕೆ ಬೆಳೆದು ದೊಡ್ಡವರಾಗಿ ಉನ್ನತ ಶಿಕ್ಷಣ ಪಡೆಯುವವರೆಗೂ ಚಾಲ್ತಿಯಲ್ಲಿರುತ್ತದೆ. ಈ ವಿಶಿಷ್ಟ ಗುರುತಿನ ಸಂಖ್ಯೆಯ ಮಹತ್ವದ ಯೋಜನೆಯನ್ನು ಕೇಂದ್ರ ಸರಕಾರ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಡಿ ಜಾರಿಗೊಳಿಸಲು ಉದ್ದೇಶಿಸಿದೆ. ಆದರೆ ಕಾರ್ಡ್ ಹೊಂದಬೇಕಾದಲ್ಲಿ ವಿದ್ಯಾರ್ಥಿಗೆ ತನ್ನ ಪೋಷಕರ ಅನುಮತಿ ಕಡ್ಡಾಯವಾಗಿರುತ್ತದೆ. ಅಪಾರ್ ಕಾರ್ಡ್ ಬೇಡವೆಂದಾದಲ್ಲಿ ಪೋಷಕರು ಸರಕಾರವನ್ನು ಕೋರಿ ರದ್ದು ಮಾಡಿಕೊಳ್ಳಬಹುದು.
ಅಪಾರ್ ಕಾರ್ಡ್ ಓರ್ವ ವಿದ್ಯಾರ್ಥಿಯ ಶೈಕ್ಷಣಿಕ ಚಟುವಟಿಕೆಗಳಿಗೆ ಮಾತ್ರ ಸೀಮಿತವಾಗಿರುತ್ತದೆ. ವಿದ್ಯಾರ್ಥಿಯ ಪ್ರಾಥಮಿಕ ಶಿಕ್ಷಣದಿಂದ ಉನ್ನತ ಶಿಕ್ಷಣದವರೆಗೂ ಈ ಕಾರ್ಡ್ ನ ಸಂಖ್ಯೆ ಮುಂದುವರಿಯುತ್ತದೆ. ಈ ಕಾರ್ಡಿನಲ್ಲಿ ವಿದ್ಯಾರ್ಥಿಯ ಶಾಲೆ/ಕಾಲೇಜು, ವಿಳಾಸ, ಹೆತ್ತವರ ವಿವರ, ರಕ್ತದ ಗುಂಪು, ಎತ್ತರ, ತೂಕ, ಪ್ರತೀ ತರಗತಿಯಲ್ಲಿ ಪಡೆದ ಅಂಕಗಳು, ಪಠ್ಯೇತರ ಚಟುವಟಿಕೆಯ ಮಾಹಿತಿ, ಕ್ರೀಡಾ ಸಾಧನೆ ವಿವರಗಳು ಇದರಲ್ಲಿ ಅಡಕವಾಗಿರುತ್ತವೆ. ಒಂದು ಪಕ್ಷ ವಿದ್ಯಾರ್ಥಿಯು ತನ್ನ ಶಾಲೆ/ ಕಾಲೇಜು ಬದಲಾಯಿಸಿದರೆ ಇದರ ವಿವರಗಳೂ ಈ ಕಾರ್ಡಿನಲ್ಲಿರುತ್ತವೆ. ಸಮಗ್ರವಾಗಿ ಓರ್ವ ವಿದ್ಯಾರ್ಥಿಯ ಶೈಕ್ಷಣಿಕ ಜೀವನದ ಮಾಹಿತಿ ಈ ಕಾರ್ಡಿನಲ್ಲಿ ಒಳಗೊಂಡಿರುತ್ತದೆ. ವಿದ್ಯಾರ್ಥಿಯ ಆಧಾರ್ ನಲ್ಲಿರುವ ಮಾಹಿತಿಗಳೂ ಈ ಕಾರ್ಡಿನಲ್ಲಿರುತ್ತವೆ. ಆದರೆ ಇದನ್ನು ಆಧಾರ್ ಕಾರ್ಡ್ ಗೆ ಪರ್ಯಾಯವಾಗಿ ಬಳಸುವಂತಿಲ್ಲ ಎನ್ನುತ್ತಿದೆ ಕೇಂದ್ರ ಸರಕಾರ.
ಈಗ ಹುಟ್ಟಿಕೊಳ್ಳುವ ಪ್ರಶ್ನೆಗಳು ಹಲವಾರು. ವಿದ್ಯಾರ್ಥಿಯೊಬ್ಬನಿಗೆ ಶೈಕ್ಷಣಿಕ ಚಟುವಟಿಕೆಯ ಕಾರ್ಡ್ ಕೊಡುವುದು ಅಪೇಕ್ಷಣೀಯವೇ ಆದರೂ ಈ ಕಾರ್ಡ್ ನ ವಿವರಗಳನ್ನು ಆತನ ಆಧಾರ್ ಕಾರ್ಡ್ ಜೊತೆಗೇ ಸೇರಿಸಬಹುದಲ್ವಾ? ಹೇಗೂ ಆಧಾರ್ ಸಂಖ್ಯೆ ಪ್ರತಿಯೊಬ್ಬರಿಗೂ ಭಿನ್ನ ಭಿನ್ನವಾಗಿರುವುದರಿಂದ ಮತ್ತೊಂದು ವಿಶಿಷ್ಟ ಸಂಖ್ಯೆಯನ್ನು ನೀಡುವ ಅಗತ್ಯ ಇದೆಯೇ? ಈಗ ಕಡ್ಡಾಯವಲ್ಲ ಎಂದು ನಂತರದ ವರ್ಷಗಳಲ್ಲಿ ಕಡ್ದಾಯ ಎಂದರೆ ಹಳೆಯ ದಾಖಲೆಗಳನ್ನು ವಿದ್ಯಾರ್ಥಿ ಸಂಗ್ರಹಿಸಿಕೊಳ್ಳುವ ಬಗೆ ಏನು? ಈಗಾಗಲೇ ಪ್ರತೀ ಶಾಲಾ-ಕಾಲೇಜು ತಮ್ಮದೇ ಆದ ಗುರುತಿನ ಚೀಟಿಯನ್ನು ವಿದ್ಯಾರ್ಥಿಗಳಿಗೆ ನೀಡುತ್ತಿದೆ. ಅದರ ಜೊತೆಗೆ ಈ ಕಾರ್ಡನ್ನೂ ತೆಗೆದುಕೊಂಡು ಹೋಗಬೇಕಾಗುತ್ತದೆಯೋ? ಪ್ರಶ್ನೆಗಳು ಹಲವಾರು ಇವೆ. ನೋಡುವ, ಮುಂದಿನ ದಿನಗಳಲ್ಲಿ ‘ಅಪಾರ್' ಕಾರ್ಡ್ ಏನೆಲ್ಲಾ ತಿರುವುಗಳನ್ನು ಪಡೆದುಕೊಳ್ಳುತ್ತದೆ ಎಂದು.
ಚಿತ್ರ ಕೃಪೆ: ಅಂತರ್ಜಾಲ ತಾಣ