ಮತ್ತೊಂದು ಯುದ್ಧದ ಕಾರ್ಮೋಡ...!

ಮತ್ತೊಂದು ಯುದ್ಧದ ಕಾರ್ಮೋಡ...!

ಇನ್ನೂ ರಷ್ಯಾ ಉಕ್ರೇನ್ ಯುದ್ದದಲ್ಲಿ ಪ್ರತಿನಿತ್ಯ ರಕ್ತ ಹರಿಯುತ್ತಲೇ ಇದೆ. ಮನುಷ್ಯ ಪ್ರಾಣಿ ತನ್ನ ತೀಟೆಗೆ ಶವವಾಗುತ್ತಲೇ ಇದ್ದಾನೆ. ಅಷ್ಟರಲ್ಲಾಗಲೇ ಚೀನಾ ತೈವಾನ್ ಯುದ್ಧದ ಸಾಧ್ಯತೆಗಳು ಬಲವಾಗುತ್ತಿದೆ. ಕೋವಿಡ್ -  ಮಳೆ - ಮಂಕಿಪಾಕ್ಸ್ - ಬೆಲೆ ಏರಿಕೆ - ಧರ್ಮದ ಕೊಲೆಗಳು - ಶ್ರೀಲಂಕಾದ ದಿವಾಳಿ - ಆಲ್ ಖೈದ ಜವಾಹರಿ ಹತ್ಯೆ  ಹೀಗೆ ವಿಶ್ವಮಟ್ಟದ ಸುದ್ದಿಗಳು ಹರಿದಾಡುತ್ತಿವೆ.

ಏನಾಗಿದೆ ಈ ಜಗತ್ತಿಗೆ. ಒಬ್ಬರಿಗೊಬ್ಬರು ಹೊಡೆದಾಡಿ ಸಾಯುವುದೇ ಒಂದು ಹವ್ಯಾಸವಾದಂತಿದೆ. ನೀನು ಬಲಿಷ್ಠನೋ ನಾನು ಬಲಿಷ್ಠನೋ, ನಿನ್ನ ಬಳಿ ಇರುವ ಶಸ್ತ್ರಾಸ್ತ್ರಗಳು - ಬಾಂಬುಗಳು ಬಲಿಷ್ಠವೋ, ನನ್ನ ಬಳಿ ಇರುವ ಶಸ್ತ್ರಾಸ್ತ್ರಗಳು ಬಲಿಷ್ಠವೋ ನೋಡೇ ಬಿಡೋಣ ಎಂಬ ಸ್ಪರ್ಧೆಗೆ ಬಿದ್ದಿದ್ದಾರೆ. ನನ್ನ ತಂಟೆಗೆ ಬಂದರೆ ಸುಮ್ಮನೆ ಬಿಡಲ್ಲಾ ಎಂದು ಒಬ್ಬ, ನನ್ನ ತಂಟೆಗೆ ಬಂದರೆ ಬಿಡೊಲ್ಲ ಎಂದು ಇನ್ನೊಬ್ಬ ಹೀಗೆ ಒಬ್ಬರಿಗೊಬ್ಬರು ಧಮ್ಕಿ ಹಾಕಿಕೊಂಡು ಕಾಲು ಕೆರೆದು ಯುದ್ಧಕ್ಕೆ ನಿಂತಿದ್ದಾರೆ. ವಿಶ್ವಸಂಸ್ಥೆ ಮಾತ್ರ ಸಾವಿನ ತಲೆಗಳನ್ನು ಎಣಿಸುವುದರಲ್ಲಿ ಬಿಜಿಯಾಗಿದೆ.

ಎಷ್ಟೊಂದು ಅಹಂಕಾರದ ಅನುಮಾನಗಳು ಮೂಡಿವೆ ಎಂದರೆ ಇವನ ಪಕ್ಕದ ಸ್ನೇಹಿತನ ಜೊತೆ ಇನ್ನೊಬ್ಬ ಬಲಿಷ್ಠ ಸ್ನೇಹ ಮಾಡಿದರೆ ಅದರಿಂದ ನನಗೆ ತೊಂದರೆ ಎಂದು ಇನ್ನೊಬ್ಬ ಅವನ ಸ್ನೇಹಿತನ ಜೊತೆ ಯುದ್ಧ ಮಾಡುತ್ತಾನೆ. ಏಕೆಂದರೆ ಇಬ್ಬರೂ ಸೇರಿ ನಮ್ಮ ಮೇಲೆ ಆಕ್ರಮಣ ಮಾಡುತ್ತಾರೆ ಎಂಬ ಆತಂಕ. ಆ ಬಲಿಷ್ಠನೋ ಬೇಕಂತಲೇ ಇವರುಗಳ ಮಧ್ಯೆ ಆಟವಾಡಲು ಪ್ರಯತ್ನಿಸುತ್ತಾನೆ. ಒಟ್ಟಿನಲ್ಲಿ ಇವರುಗಳಲ್ಲಿ ಯಾರೂ‌ ಸಾಚಾ ಅಲ್ಲ. ಒಬ್ಬರಿಗೊಬ್ಬರು ತುಳಿಯುವ, ಆಕ್ರಮಿಸುವ, ನಾಶ ಮಾಡುವ, ಅವಕಾಶ ಸಿಕ್ಕರೆ ಎಲ್ಲವನ್ನೂ ಕಬಳಿಸುವ ಮನೋಭಾವ ಈ ನಾಯಕರಲ್ಲಿ ಬೆಳೆದಿದೆ. ಈ ಆಟದಲ್ಲಿ ಸಾಯುವವರು ಮಾತ್ರ ಸೈನಿಕರು ಮತ್ತು ಅಮಾಯಕ ಜನರು.

ಜನ ಕಲ್ಯಾಣದ ಸರ್ಕಾರಗಳು ಆಡಳಿತ ನಡೆಸಿ ಜನರನ್ನೇ ಅಭಿವೃದ್ಧಿಯ ಕೇಂದ್ರವಾಗಿಸಿ ಜನರಿಗಾಗಿಯೇ ನಡೆಯುವ ಸರ್ಕಾರಗಳು ಎಂದು ನಂಬಿಸಿ ಈಗ ಜನರ ಜೀವ ಮತ್ತು ಜೀವನಕ್ಕೆ ಅಪಾಯ ತರುತ್ತಿರುವ ಕಾರ್ಯ ವಿಧಾನಗಳು ಅಪಾಯಕಾರಿ ಹಂತವನ್ನು ದಾಟಿದೆ. ನಾಯಕರಗಳ ಸರ್ವಾಧಿಕಾರಿ ಧೋರಣೆ ಬಯಲಾಗುತ್ತಿದೆ. ರಕ್ಷಣೆಯ ಹೆಸರಿನಲ್ಲಿ ಆಕ್ರಮಣ ಅವರ ನಡೆಯಾಗಿದೆ.

ಈಗ " ವಿಶ್ವ ಮಾನವ ಪ್ರಜ್ಞೆಯ " ವಿಶ್ವದ ಎಲ್ಲಾ ಭಾಗದ ಜನರು ಶಾಂತಿಯ ಪರವಾಗಿ ಧ್ವನಿ ಮೊಳಗಿಸುವ ಸಮಯ ಬಂದಿದೆ. ಕಾರಣಗಳು ಏನೇ ಇರಲಿ ಮಾತುಕತೆಯ ಮೂಲಕವೇ ಅಥವಾ ವಿಶ್ವ ನ್ಯಾಯಾಲಯದ ಮೂಲಕವೇ ಪರಿಹಾರ ಕಂಡುಕೊಳ್ಳಬೇಕು ಅಥವಾ ಎಲ್ಲಾ ದೇಶಗಳನ್ನು ಒಳಗೊಂಡ ವಿಶ್ವ ಮಟ್ಟದ ಮತ್ತೊಂದು ಸಂಘಟನೆಯ ಸ್ಥಾಪಿಸಿ ಅದಕ್ಕೆ ‌ಶಾಂತಿಯ ನೇತೃತ್ವ ವಹಿಸಬೇಕು. ಯಾವ ಕಾರಣಕ್ಕೂ ಯುದ್ಧ ಪರಿಹಾರ ಅಲ್ಲವೇ ಅಲ್ಲ.

ಯಾವ ದೇಶ ಮೊದಲು ಯುದ್ಧ ಪ್ರಾರಂಭಿಸುವುದೋ ಅದರ ವಿರುದ್ಧ ಇಡೀ ವಿಶ್ವ ಒಂದಾಗಿ ಕ್ರಮ ಕೈಗೊಳ್ಳಬೇಕು. ಭಯೋತ್ಪಾದನೆಯಂತ ಪರೋಕ್ಷ ಯುದ್ಧಗಳನ್ನು ಸಹ ಇದರ ಅಡಿಯಲ್ಲಿ ಶಿಕ್ಷಿಸಬೇಕು. ಈಗ ಸಾಮಾನ್ಯ ಜನ ಈ ನಿಟ್ಟಿನಲ್ಲಿ ಹೋರಾಟ ಮಾಡದಿದ್ದರೆ ಮನುಷ್ಯ ಸಂತತಿಯ ಅಸ್ತಿತ್ವಕ್ಕೆ ಧಕ್ಕೆ ಬರಬಹುದು. ಏಕೆಂದರೆ ಇತ್ತೀಚಿನ ಬೆಳವಣಿಗೆ ಮೂರನೇ ಮಹಾಯುದ್ಧದ ಸಾಧ್ಯತೆ ಹೆಚ್ಚಿಸಿದೆ. ಬಹುಶಃ ಭಾರತದ ಶಾಂತಿ ಪ್ರಿಯ ಮನಸ್ಸುಗಳು ಈ ನಿಟ್ಟಿನಲ್ಲಿ ಬಹುದೊಡ್ಡ ಕೊಡುಗೆ ಕೊಡುವ ಸಾಧ್ಯತೆ ಇದೆ. ಏಕೆಂದರೆ ಭಾರತ ಮೂಲಭೂತವಾಗಿ ಶಾಂತಿ ಪ್ರಿಯ ದೇಶ. ಅಲಿಪ್ತ ಚಳುವಳಿಯ ನೇತಾರ. ವಿಶ್ವದ ಬಹುದೊಡ್ಡ ಪ್ರಜಾಪ್ರಭುತ್ವದ ದೇಶ. ಅತಿಹೆಚ್ಚು ಜನಸಂಖ್ಯೆಯನ್ನು ಹೊಂದಿದೆ. ಅಲ್ಲದೇ ಇಲ್ಲಿ ಸಂವಿಧಾನಾತ್ಮಕ ಅಭಿವ್ಯಕ್ತಿ ಸ್ವಾತಂತ್ರ್ಯ ಒಂದು ಮೂಲಭೂತ ಹಕ್ಕಾಗಿದೆ. ಈ ಎಲ್ಲದರ ಲಾಭ ಪಡೆದು ವಿಶ್ವ ಶಾಂತಿಯ ಪರವಾಗಿ ಭಾರತದ ಪ್ರಬುದ್ಧ ಮನಸ್ಸುಗಳು ಶೀಘ್ರದಲ್ಲೇ ಧ್ವನಿ ಎತ್ತಲಿ ಎಂದು ಆಶಿಸುತ್ತಾ...

-ವಿವೇಕಾನಂದ ಹೆಚ್.ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ