ಮತ್ತೊಂದು ಯುದ್ಧ ಬೇಡ

ಜಾಗತಿಕ ರಾಜಕೀಯದ ಸ್ಥಿತಿಗತಿಗಳು ಸಾಗುತ್ತಿರುವ ದಾರಿ ನೋಡಿದರೆ ನಾಳೆಗಳ ಬಗ್ಗೆ ಖಂಡಿತ ಆತಂಕವಾಗುತ್ತದೆ. ೨೦೨೨ರ ಫೆಬ್ರವರಿಯಲ್ಲಿ ಆರಂಭವಾದ ರಷ್ಯಾ ಮತ್ತು ಉಕ್ರೇನ್ ನಡುವಿನ ಸಮರ ಇನ್ನೂ ಮುಂದುವರಿದಿದೆ. ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ನಡುವಿನ ಯುದ್ಧ ಕೂಡಾ ನಿಲ್ಲುವ ಲಕ್ಷಣಗಳು ಗೋಚರಿಸುತ್ತಿಲ್ಲ. ಈ ವರ್ಷದ ಜನವರಿಯಲ್ಲಿ ಎರಡನೇ ಅವಧಿಗೆ ಅಮೇರಿಕದ ಅಧ್ಯಕ್ಷರಾದ ಡೊನಾಲ್ಡ್ ಟ್ರಂಪ್ ಈಗಾಗಲೇ ಹಲವು ದೇಶಗಳೊಂದಿಗೆ ಸಾರಿರುವ ವಾಣಿಜ್ಯ ಸಮರವೂ ಜಾಗತಿಕ ಆರ್ಥಿಕತೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಇಸ್ರೇಲ್ - ಇರಾನ್ ನಡುವಿನ ಉದ್ವಿಗ್ನತೆ ಮುಂದುವರಿದಿದೆ. ಅಫ್ಘಾನಿಸ್ತಾನ ತಾಲಿಬಾನ್ ಕೈಗೆ ಸಿಲುಕಿ ಕೆಲ ವರ್ಷಗಳೇ ಆಗಿವೆ. ಮತ್ತೊಂದು ಬಿಕ್ಕಟ್ಟು ಅಮೇರಿಕ ಮತ್ತು ಇರಾನ್ ನಡುವೆ ಉದ್ಭವಿಸಿದೆ. ಪಾಶ್ಚಾತ್ಯ ರಾಷ್ಟ್ರಗಳ ವಿರೋಧದ ನಡುವೆಯೂ ಇರಾನ್ ತನ್ನ ಪರಮಾಣು ಕಾರ್ಯಕ್ರಮಗಳನ್ನು ಅಕ್ರಮವಾಗಿ ಮುಂದುವರೆಸಿರುವುದು ಅಮೇರಿಕದ ಕಣ್ಣು ಕೆಂಪಾಗಿಸಿದೆ. ಹೀಗಾಗಿ, ಈ ಬಾರಿ ಟ್ರಂಪ್ ಬೆದರಿಕೆ ದನಿಯಲ್ಲಿ ಮಾತನಾಡಿದ್ದಾರೆ. ‘ಹೊಸದಾಗಿ ಪರಮಾಣು ಒಪ್ಪಂದ ಮಾಡಿಕೊಳ್ಳದಿದ್ದರೆ ಇರಾನ್ ಮೇಲೆ ಬಾಂಬ್ ದಾಳಿ ನಡೆಸಲಾಗುವುದು. ನಾಲ್ಕು ವರ್ಷಗಳ ಹಿಂದೆ ವಿದಿಸಿದಂತೆ ಹೆಚ್ಚುವರಿ ಸುಂಕ ವಿಧಿಸಲಾಗುವುದು’ ಎಂದು ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.
೨೦೧೭-೨೧ರ ಅವಧಿಯಲ್ಲಿ ಮೊದಲ ಬಾರಿಗೆ ಅಧ್ಯಕ್ಷರಾಗಿದ್ದ ಟ್ರಂಪ್, ಇರಾನ್ ಹಾಗೂ ವಿಶ್ವದ ಪ್ರಮುಖ ರಾಷ್ಟ್ರಗಳ ನಡುವೆ ೨೦೧೫ರಲ್ಲಿ ಮಾಡಿಕೊಳ್ಳಲಾದ ಒಪ್ಪಂದದಿಂದ ಹಿಂದೆ ಸರಿದಿದ್ದರು. ಈ ಒಪ್ಪಂದವು, ಇರಾನ್ ಮೇಲೆ ನಿರ್ಬಂಧ ಹೇರುವ ಬದಲಾಗಿ ವಿವಾದಿತ ಪರಮಾಣು ಚಟುವಟಿಕೆಗಳ ಮೇಲೆ ಕಠಿಣವಾದ ಕಟ್ಟುಪಾಡುಗಳನ್ನಷ್ಟೇ ವಿಧಿಸುತ್ತದೆ ಎಂದು ಅವರು ಆರೋಪಿಸಿದ್ದರು. ಆದ್ದರಿಂದ, ಹೊಸ ಪರಮಾಣು ಒಪ್ಪಂದ ಏರ್ಪಡಬೇಕೆಂದು ಟ್ರಂಪ್ ಪಟ್ಟು ಹಿಡಿದಿದ್ದಾರೆ. ಇದಕ್ಕಾಗಿ ಎರಡು ತಿಂಗಳ ಗಡುವು ಕೂಡಾ ವಿಧಿಸಿದ್ದಾರೆ. ಆದರೆ, ಈ ಹಿಂದೆಯೂ ಅಮೇರಿಕದ ಬೆದರಿಕೆಯನ್ನು ನಿರ್ಲಕ್ಷಿಸಿ ವ್ಯಾಪಕ ಪ್ರಮಾಣದಲ್ಲಿ ಪರಮಾಣು ಕಾರ್ಯಕ್ರಮಗಳನ್ನು ಕೈಗೊಂಡಿದ್ದ ಇರಾನ್ ಈ ಬಾರಿಯೂ ಟ್ರಂಪ್ ಗೆ ತಕ್ಕ ಪ್ರತ್ಯುತ್ತರ ನೀಡಿದೆ. ‘ಅಮೇರಿಕ ಬಾಂಬ್ ದಾಳಿ ನಡೆಸಿದರೆ ಇರಾನ್ ಅದಕ್ಕೆ ತಕ್ಕ ಪ್ರತ್ಯುತ್ತರ ಮತ್ತು ಬಲವಾದ ಹೊಡೆತ ನೀಡಲಿದೆ’ ಎಂದು ಇರಾನ್ ನ ಸರ್ವೋನ್ನತ ನಾಯಕ ಆಯತುಲ್ಲಾ ಅಲಿ ಖಮೇನಿ ಎಚ್ಚರಿಸಿದ್ದಾರೆ. ಅಲ್ಲದೆ, ಇರಾನಿನ ಆಂತರಿಕ ವ್ಯವಹಾರಗಳಲ್ಲಿ ಅಮೇರಿಕ ಪದೇ ಪದೆ ಹಸ್ತಕ್ಷೇಪ ಮಾಡುತ್ತಿದೆ ಎಂದು ಖಮೇನಿ ಅಂತರಾಷ್ಟ್ರೀಯ ವೇದಿಕೆಗಳಲ್ಲಿ ಹಲವು ಬಾರಿ ಆರೋಪಿಸಿದ್ದಾರೆ. ಮತ್ತೊಂದೆಡೆ, ಪರಮಾಣು ಶಸ್ತ್ರಾಸ್ತ್ರಗಳ ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳುವ ಗುಪ್ತ ಕಾರ್ಯಸೂಚಿ ಇರಾನ್ ನದ್ದು ಎಂದು ಪಾಶ್ಚಾತ್ಯ ರಾಷ್ಟ್ರಗಳು ಆರೋಪಿಸುತ್ತಾ ಬಂದಿವೆ.
ಈ ಎಲ್ಲ ಬೆಳವಣಿಗೆಗಳನ್ನು ಅವಲೋಕಿಸಿದರೆ ಅಮೇರಿಕ ಮತ್ತು ಇರಾನ್ ನಡುವೆ ಯುದ್ಧಾತಂಕದ ಕಾರ್ಮೋಡ ಕವಿದಿರುವುದು ಸ್ಪಷ್ಟ. ಈಗಾಗಲೇ ಜಾಗತಿಕವಾಗಿ ಆರ್ಥಿಕ ಸಂಕಷ್ಟ ಹೆಚ್ಚಿದ್ದು, ಉದ್ಯೋಗನಷ್ಟ ಪ್ರಮಾಣವೂ ಏರಿಕೆಯಾಗಿದೆ. ಹೀಗಾಗಿ, ಬೃಹತ್ ರಾಷ್ಟ್ರಗಳು ಪ್ರತಿಷ್ಟೆಯನ್ನು ಬಿಟ್ಟು ಮಾತುಕತೆ ಮೂಲಕ ವಿವಾದಗಳಿಗೆ ಪರಿಹಾರ ಕಂಡುಕೊಳ್ಳಬೇಕು. ಎಲ್ಲಾ ಸಮಸ್ಯೆಗಳಿಗೂ ಯುದ್ಧವೇ ಪರಿಹಾರವಲ್ಲ. ಪರಮಾಣು ಒಪ್ಪಂದ ಕುರಿತ ವಿವಾದ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲು ಸಾಧ್ಯವಿಲ್ಲದಷ್ಟು ಜಟಿಲ ಸಮಸ್ಯೆಯೇನಲ್ಲ. ಆದರೆ, ಜಾಗತಿಕ ನಾಯಕರೆನಿಸಿಕೊಂಡವರಿಗೆ ಈ ನಿಟ್ಟಿನಲ್ಲಿ ಇಚ್ಛಾಶಕ್ತಿ ಮತ್ತು ಬದ್ಧತ್ರ್ ಮುಖ್ಯ. ವೈರಿ ರಾಷ್ಟ್ರಗಳು ಪರಸ್ಪರ ಬಾಂಬ ದಾಳಿ ಮಾಡುತ್ತ ಹೋದರೆ ಜಗತ್ತೇ ನಿರ್ನಾಮವಾಗುತ್ತದೆ. ಪರಮಾಣು ಕಾರ್ಯಕ್ರಮಗಳನ್ನು ನಿಲ್ಲಿಸುವುದರಲ್ಲಿಯೇ ತನ್ನ ಮತ್ತು ಜಗತ್ತಿನ ಹಿತವಿದೆ ಎಂದು ಇರಾನ್ ಕೂಡ ಅರಿಯಬೇಕಿದೆ.
ಕೃಪೆ: ವಿಜಯವಾಣಿ, ಸಂಪಾದಕೀಯ, ದಿ: ೦೧-೦೪-೨೦೨೫
ಚಿತ್ರ ಕೃಪೆ: ಅಂತರ್ಜಾಲ ತಾಣ