ಮತ್ತೊಂದು ಸಾಮಾಜಿಕ ಸಮಸ್ಯೆಯೊಂದರ ಪ್ರಾರಂಭಿಕ ಲಕ್ಷಣಗಳು…!

ಮತ್ತೊಂದು ಸಾಮಾಜಿಕ ಸಮಸ್ಯೆಯೊಂದರ ಪ್ರಾರಂಭಿಕ ಲಕ್ಷಣಗಳು…!

ಮದುವೆಯಾಗಲು ಹೆಣ್ಣು ಕೊಡಿಸುವಂತೆ ಪ್ರಾರ್ಥಿಸಿ ಸುಮಾರು 100 ಬ್ರಹ್ಮಚಾರಿಗಳು ಮಲೆಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ನಡೆಸಿದ್ದಾರೆ. ಮದುವೆಗೆ ಹೆಣ್ಣು ಸಿಗುತ್ತಿಲ್ಲ ಎಂದು ಇತ್ತೀಚೆಗೆ ಒಬ್ಬರು ಒಂದು ಊರಿನಲ್ಲಿ ಪ್ರತಿಭಟನೆ ಮತ್ತು ಸತ್ಯಾಗ್ರಹ ನಡೆಸಿದರು. ಮತ್ತೊಂದು ಊರಿನಲ್ಲಿ ಮತ್ತೊಬ್ಬರು ಆತ್ಮಹತ್ಯೆ ಮಾಡಿಕೊಂಡರು. ಮತ್ತೊಂದು ನಗರದಲ್ಲಿ ಇದರಿಂದ ಬೇಸತ್ತು ತಾನು ಜೀವನ ಪರ್ಯಂತ ಬ್ರಹ್ಮಚಾರಿ ಆಗಿರುವುದಾಗಿ ಪ್ರತಿಜ್ಞೆ ಮಾಡಿದರು. ಇದು ಸುದ್ದಿಯಾದ ಘಟನೆಗಳು. 

ಇನ್ನು ಸುದ್ದಿಯಾಗದ ಆದರೆ ನಮ್ಮ ಸುತ್ತಮುತ್ತಲಿನ ಅನುಭವಕ್ಕೆ ಬರುತ್ತಿರುವ ಲಕ್ಷಾಂತರ ಯುವಕರಿದ್ದಾರೆ. ಬಹುತೇಕ ದೇವಾಲಯಗಳಿಗೆ ಯುವಕರು ಹೆಚ್ಚಾಗಿ ಹೋಗುತ್ತಿರಲು ಕಾರಣ ಅವರು ವಧುವಿಗಾಗಿ ದೇವರಲ್ಲಿ ಬೇಡಿಕೆ ಮತ್ತು ಹರಕೆ ಸಲ್ಲಿಸಲು ಎಂಬುದರಲ್ಲಿ ಸ್ವಲ್ಪ ಸತ್ಯವಿದೆ. ತೊಂಬತ್ತರ ದಶಕದ ಜಾಗತೀಕರಣದಿಂದಾಗಿ ಅತಿಹೆಚ್ಚು ನಷ್ಟಕ್ಕೆ ಒಳಗಾಗಿದ್ದು ಭಾರತದ ರೈತ ಸಮುದಾಯ. ಅವರು ಜಾಗತಿಕ ಸ್ಪರ್ಧೆಗೆ ಸಿದ್ದರಾಗೇ ಇರಲಿಲ್ಲ. ಹಾಗೆಯೇ ವಿಶ್ವದ ಮುಕ್ತ ಮಾರುಕಟ್ಟೆಯ ಪರಿಣಾಮ ಹೆಚ್ಚು ಅನುಕೂಲವಾಗಿದ್ದು ಭಾರತದ ವಿದ್ಯಾವಂತ ಮಹಿಳೆಯರಿಗೆ.

ಮುಖ್ಯವಾಗಿ ಉದ್ಯೋಗ ಮತ್ತು ಆರ್ಥಿಕ ಭದ್ರತೆಯ ದೃಷ್ಟಿಯಿಂದ ಹೆಣ್ಣು ಮಕ್ಕಳು ಹೆಚ್ಚು ಸ್ವತಂತ್ರರು, ಬಲಿಷ್ಠರು, ಮಹತ್ವಾಕಾಂಕ್ಷೆಗಳು ಮತ್ತು ತಮ್ಮ ಆಯ್ಕೆಯ ಸ್ವಾತಂತ್ರ್ಯವನ್ನು ಗಳಿಸಿದರು. ಅದರ ದೂರದ ಕೆಲವು ಸಾಮಾಜಿಕ ಪರಿಣಾಮಗಳಲ್ಲಿ ಈಗ ನಿಧಾನವಾಗಿ ಉದ್ಭವಿಸುತ್ತಿರುವ ಮದುವೆಗೆ ಹೆಣ್ಣುಗಳು ಸಿಗದಿರುವ ಒಂದು ಸಮಸ್ಯೆ.

ಇದಕ್ಕೆ ಹಲವಾರು ಕಾರಣಗಳು ಇರಬಹುದು ಆದರೆ ಪರಿಹಾರ ಮಾತ್ರ ಸಾಮಾಜಿಕ ವ್ಯವಸ್ಥೆಯೊಂದಿಗೆ ಮತ್ತು ಕಾಲದೊಂದಿಗೆ ಬೆಸೆದು ಕೊಂಡಿದೆ. ಈ ಕ್ಷಣದಲ್ಲಿ ಯಾವುದೇ ನಿರ್ದಿಷ್ಟ ಮತ್ತು ನಿಶ್ಚಿತ ಪರಿಹಾರವಿಲ್ಲ. ಏಕೆಂದರೆ ಮದುವೆ ಎಂಬುದು ಅತ್ಯಂತ ಖಾಸಗಿ ವಿಷಯ ಮತ್ತು ಎರಡು ವ್ಯಕ್ತಿ ಅಥವಾ ಕುಟುಂಬಗಳ ಸ್ವತಂತ್ರ ಆಯ್ಕೆಯ ವಿಷಯ. ಅವರು ಯಾರನ್ನು ಬೇಕಾದರೂ ಒಪ್ಪಬಹುದು ಅಥವಾ ಯಾರನ್ನು ಬೇಕಾದರೂ ತಿರಸ್ಕರಿಸಬಹುದು. ವೈದ್ಯರನ್ನು, ಶಿಕ್ಷಣರನ್ನು, ಸೈನಿಕರನ್ನು, ರೈತರನ್ನು, ವ್ಯಾಪಾರಿಗಳನ್ನು, ಕಾರ್ಮಿಕರನ್ನು ಹೀಗೆ ಬೇರೆ ಯಾರನ್ನಾದರೂ ಮದುವೆಯಾಗಿ ಎಂದು ಹೇಳಲು ಸಾಧ್ಯವಿಲ್ಲ.

ನಮ್ಮ ಒಟ್ಟು ವ್ಯವಸ್ಥೆಯೇ ಮದುವೆ ವಿಷಯದಲ್ಲಿ ಬೇಡಿಕೆ ಮತ್ತು ಪೂರೈಕೆಯ ನಡುವೆ ಸ್ವತಃ ತನ್ನಿಂದ ತಾನೇ ಸಮನ್ವಯ ಸಾಧಿಸಿಕೊಳ್ಳಬೇಕು. ಆ ಸಮಯದಲ್ಲಿ ಜೀವಿಸಿರುವವರು ಅದರ ಆಗುಹೋಗುಗಳನ್ನು ಅನುಭವಿಸಲೇ ಬೇಕು. ಸತಿ ಸಹ ಗಮನ ಪದ್ದತಿಯ ಸಂದರ್ಭದಲ್ಲಿ, ದಾಳಿಕೋರರ ಅತ್ಯಾಚಾರದ ಸಮಯದಲ್ಲಿ, ವರದಕ್ಷಿಣೆಗಾಗಿ ಹೆಣ್ಣುಮಕ್ಕಳನ್ನು ಪೀಡಿಸುತ್ತಿದ್ದ ಸನ್ನಿವೇಶದಲ್ಲಿ ಸಾಕಷ್ಟು ಹೆಣ್ಣು ಮಕ್ಕಳು ಆಗಿನ ಸಾಮಾಜಿಕ ಪರಿಸ್ಥಿತಿ ಅನುಭವಿಸಿದ್ದಾರೆ. ಈಗ ಅವರಲ್ಲಿ ಕೆಲವರಿಗೆ ಅನುಕೂಲಕರ ವಾತಾವರಣ ಇದೆ. ಈಗ ಬೇರೆ ರೂಪದಲ್ಲಿ ಗಂಡು ಮಕ್ಕಳಿಗೆ ಸ್ವಲ್ಪ ಸಮಸ್ಯೆ ಆಗಿದೆ. ಅವರೂ ಅದನ್ನು ಸ್ವೀಕರಿಸಲೇ ಬೇಕು.

ಈಗಿನ ಪರಿಸ್ಥಿತಿಯಲ್ಲಿ ಹೆಣ್ಣುಮಕ್ಕಳ ಮತ್ತು ಅವರ ಪೋಷಕರ ಬೇಡಿಕೆ ಹೆಚ್ಚಾಗಿದೆ ಎಂಬುದು ಬಹಿರಂಗ ಸತ್ಯ. ಸ್ವಂತ ಮನೆ, ಸರ್ಕಾರಿ ಉದ್ಯೋಗ ಅಥವಾ ಖಾಸಗಿಯಾದರೆ ಜಾಸ್ತಿ ಸಂಬಳ, ಒಂದು ವೇಳೆ ಹೆಣ್ಣು ಮದುವೆಯ ನಂತರ ಕೆಲಸಕ್ಕೆ ಹೋಗಲು ಇಚ್ಛಿಸಿದರೆ ಅನುಮತಿ ನೀಡಬೇಕು, ಅವರ ಸಂಬಳದ ಹಣವನ್ನು ಕೇಳಬಾರದು, ಅಡುಗೆ ಸೇರಿ ಮನೆಗೆಲಸ ಮಾಡಲು ಒತ್ತಾಯ ಮಾಡಬಾರದು, ಮನೆ ಬಾಡಿಗೆಯ ಆದಾಯ ಇರಬೇಕು ಹೀಗೆ ಸಾಲು ಸಾಲು ಕರಾರುಗಳು ನಗರದ ಮಧ್ಯಮ ವರ್ಗದ ಕುಟುಂಬಗಳಲ್ಲಿ ಕಾಣಬಹುದು. ಇದನ್ನು ಪೂರೈಸಲು ಬಹಳಷ್ಟು ಗಂಡು ಮಕ್ಕಳಿಗೆ ಸಾಧ್ಯವಾಗುತ್ತಿಲ್ಲ. ಅವರ ಮನಸ್ಥಿತಿ 20 ವರ್ಷಗಳಷ್ಟು ಹಿಂದೆ ಇದೆ.

ಶ್ರೀಮಂತ ಅಥವಾ ಕಡು ಬಡವರ ಸ್ಥಿತಿ ಸ್ವಲ್ಪ ಸಮಾಧಾನಕರ. ಮಧ್ಯಮ ವರ್ಗದವರ ಪರಿಸ್ಥಿತಿ ಅಪಾಯಕಾರಿ ಹಂತದಲ್ಲಿದೆ. ಪುರುಷರು ಸಹ ಹಿಂದಿನ ಕೆಲವು ಅನುಭವಗಳ ಆಧಾರದ ಮೇಲೆ ಹೆಣ್ಣು ಮಕ್ಕಳ ಪೋಷಕರ ನಂಬಿಕೆಯನ್ನು ಕಳೆದುಕೊಂಡಿದ್ದಾರೆ. ಆದ್ದರಿಂದಲೇ ತಮ್ಮ ಮಗಳ ಜೀವನ ಭದ್ರತೆಯ ವಿಷಯದಲ್ಲಿ ಅವರು ಅತ್ಯಂತ ಜಾಗರೂಕತೆ ವಹಿಸುತ್ತಿದ್ದಾರೆ. ಅದನ್ನು ಸಹ ನಾವು ಒಪ್ಪಿಕೊಳ್ಳಬೇಕಾಗುತ್ತದೆ. ಹಾಗೆಂದು ಇದು ಶಾಶ್ವತ ಸಮಸ್ಯೆಯಲ್ಲ. ಮುಂದೆ ಕೆಲವೇ ವರ್ಷಗಳಲ್ಲಿ ವಾತಾವರಣ ಮತ್ತೆ ಉಲ್ಟಾ ಪಲ್ಟಾ ಆಗಬಹುದು. ಆಗ ಆ ವ್ಯವಸ್ಥೆಯನ್ನು ಆ ಪೀಳಿಗೆ ಅನುಭವಿಸುತ್ತದೆ. ಇದನ್ನು ವೈಯಕ್ತಿಕ ಅನುಭವದ ಆಧಾರದ ಮೇಲೆ ನಿರ್ಧರಿಸಬಾರದು. ಸಮಾಜದ ಒಟ್ಟು ಪರಿಸ್ಥಿತಿ ಅವಲೋಕನ ಮಾಡಿಕೊಂಡು ಅಭಿಪ್ರಾಯ ರೂಪಿಸಿಕೊಳ್ಳಬೇಕು.

-ವಿವೇಕಾನಂದ ಎಚ್. ಕೆ., ಬೆಂಗಳೂರು

ಸಾಂಕೇತಿಕ ಚಿತ್ರ ಕೃಪೆ: ಇಂಟರ್ನೆಟ್ ತಾಣ