ಮತ್ತೊಬ್ಬನ ಆತ್ಮಚರಿತ್ರೆ

ಮತ್ತೊಬ್ಬನ ಆತ್ಮಚರಿತ್ರೆ

ಪುಸ್ತಕದ ಲೇಖಕ/ಕವಿಯ ಹೆಸರು
ಎ.ಕೆ.ರಾಮಾನುಜನ್
ಪ್ರಕಾಶಕರು
ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ನೃಪತುಂಗ ರಸ್ತೆ, ಬೆಂಗಳೂರು
ಪುಸ್ತಕದ ಬೆಲೆ
ರೂ. ೮.೦೦, ಮುದ್ರಣ: ೧೯೯೦

ಕನ್ನಡದಲ್ಲಿ ಲೇಖಕ-ಪ್ರಕಾಶಕ-ಓದುಗರ ನಡುವೆ ಗಾಢ ಸಂಬಂಧವನ್ನು ಏರ್ಪಡಿಸುತ್ತಾ, ಶ್ರೀಸಾಮಾನ್ಯರಲ್ಲಿ ಉತ್ತಮ ವಾಚನಾಭಿರುಚಿಯನ್ನು ಹಾಗೂ ಪುಸ್ತಕ ಪ್ರೀತಿಯನ್ನು ಮೂಡಿಸುತ್ತಾ ರಾಜ್ಯಾದ್ಯಂತ ಓದುಗರಿಗೆ ಒಳ್ಳೆಯ ಪುಸ್ತಕಗಳು ಸುಲಭ ಬೆಲೆಯಲ್ಲಿ ದೊರೆಯುವಂಥ ಸ್ಥಾಯೀ ವ್ಯವಸ್ಥೆಯೊಂದನ್ನು ರೂಪಿಸಿ, ಕನ್ನಡ ಪುಸ್ತಕೋದ್ಯಮವನ್ನು ಜನಪರವಾಗಿ ಮತ್ತು ಧೃಢವಾಗಿ ಬೆಳೆಸುವ ಉದ್ದೇಶದಿಂದ ‘ಕನ್ನಡ ಪುಸ್ತಕ ಪ್ರಾಧಿಕಾರ' ಎಂಬ ದೀರ್ಘಕಾಲಿಕ ಯೋಜನೆಯೊಂದನ್ನು ಸರ್ಕಾರವು ರೂಪಿಸಲು ಯತ್ನಿಸುತ್ತಿದೆ. ಈ ನಿಟ್ಟಿನಲ್ಲಿ ೧೯೮೯-೯೦ರ ಸಾಲಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯವು ಕೈಗೊಂಡಿರುವ 'ಜನಪ್ರಿಯ ಪುಸ್ತಕ ಮಾಲೆ' ಒಂದು ಮೊದಲ ಹೆಜ್ಜೆ. ಇಂದಿನ ಈ ಪುಸ್ತಕ ಪ್ರಕಟಣೆ ಯೋಜನೆಯು ಮುಂದೆ ‘ಪುಸ್ತಕ ಪ್ರಾಧಿಕಾರ'ವಾಗಿ ಬೆಳೆದು, ಒಂದು ಸ್ವಾಯತ್ತ ಸಂಸ್ಥೆಯಾಗಿ ರೂಪುಗೊಳ್ಳಲೆಂದು ಸದ್ಯದ ಆಶಯ. 

ಈ ಆಶಯದಂತೆ ‘ಜನಪ್ರಿಯ ಪುಸ್ತಕ ಮಾಲೆ' ಸರಣಿಯಲ್ಲಿ ಪ್ರಕಟವಾದ ಪುಸ್ತಕ ಎ.ಕೆ.ರಾಮಾನುಜನ್ ಅವರ ‘ಮತ್ತೊಬ್ಬನ ಆತ್ಮಚರಿತ್ರೆ'. ಇದರ ಮುನ್ನುಡಿಯನ್ನು ಬರೆದವರು ಜಿ.ಬಿ.ಜೋಶಿಯವರು. ಅವರು ತಮ್ಮ ಮುನ್ನುಡಿಯಲ್ಲಿ “ ಈ ‘ಮತ್ತೊಬ್ಬನ ಆತ್ಮಚರಿತ್ರೆ’ಯನ್ನು ಬರೆದವರು ಎ.ಕೆ.ರಾಮಾನುಜನ್, ಇದು ಏನು ಅಂದರೆ, ಕತೆಯಲ್ಲ, ಕಾದಂಬರಿ. ಆತ್ಮೀಯ ಬರವಣಿಗೆಯ ರೂಪ ಹೊತ್ತು ಪರರ ಅನುಭವದ ಸೊಗಡನ್ನು ಹುದುಗಿಸಿರುವ ಈ ಕೃತಿ, ಆತ್ಮ ಕತೆಯಲ್ಲ, ಕಾದಂಬರಿ. 

‘ಕಾಂತಾಸಮ್ಮಿತಿ' ಯ ಸ್ನೇಹ-ಶೈಲಿಯನ್ನು ಕೇವಲ ಆತ್ಮ ನಿವೇದನೆಗೆಂದು ಬಳಸದೆ, ಒಬ್ಬ ಕಸಬುಗಾರ ತನ್ನ ಕುಶಲಕಲೆ ಪ್ರಕಟಣೆಗಾಗಿ ಉಪಯೋಗಿಸಿದಂತಿರುವ ಇದು, ಅದೂ ಹೌದು, ಇದೂ ಹೌದು ಎಂಬಂತೆ ಕಾಣಿಸುತ್ತದೆ. ತೀರಾ ಹತ್ತಿರದಿಂದ ದಿಟ್ಟಿಸಿದಾಗ, ಅದೂ ಅಲ್ಲ, ಇದೂ ಅಲ್ಲ ಎಂದು ಅನಿಸಿದರೂ ಅನಿಸುತ್ತದೆ. ಇಂಥ ಮಾಯೆ ಈ ಕೃತಿಯನ್ನು ಆವರಿಸಿದೆ. ಇಂತಹ ಆಕರ್ಷಕ ಮೋಡಿಯ ಈ ಅನನ್ಯ ಕೃತಿಯನ್ನು ನಮ್ಮ ಗ್ರಂಥಮಾಲೆಗಾಗಿ ಬರೆದುಕೊಟ್ಟ, ಇಬ್ಬರಲ್ಲದ ಒಬ್ಬರೇ ಒಬ್ಬರಾದ ಶ್ರೀ ಎ.ಕೆ.ರಾಮಾನುಜನ್ ಅವರಿಗೆ ಕೃತಜ್ಞತೆಗಳು.” ಎಂದು ಬರೆದಿದ್ದಾರೆ. 

ಪುಸ್ತಕದಲ್ಲಿ ೨೨ ಅಧ್ಯಾಯಗಳಿವೆ. ಪುಸ್ತಕ ಓದಲು ಪ್ರಾರಂಭಿಸಿದಾಗ ಗೊಂದಲವಾಗುವಂತೆ ತೋರಿದರೂ, ಓದುತ್ತಾ ಓದುತ್ತಾ ಕಥಾ ಹಂದರ ಹದಕ್ಕೆ ಬರುತ್ತದೆ. ನೀವು ಅದನ್ನು ಆಸ್ವಾದಿಸಲು ಪ್ರಾರಂಭಿಸುತ್ತೀರಿ. ಸುಮಾರು ೧೨೫ ಪುಟಗಳಿರುವ ಈ ಪುಸ್ತಕವನ್ನು ಲೇಖಕರು ವಿಂದಾ ಕರಂದಿಕರ್ ಅವರಿಗೆ ಅರ್ಪಣೆ ಮಾಡಿದ್ದಾರೆ. ಈ ಹಳೆಯ ಪುಸ್ತಕ ಮಾರುಕಟ್ಟೆಯಲ್ಲಿ ಅಲಭ್ಯವಾಗಿದ್ದರೂ ಆಸಕ್ತರಲ್ಲಿ ಅಥವಾ ಗ್ರಂಥಾಲಯದಲ್ಲಿ ಸಿಕ್ಕಿದರೆ ಅವಶ್ಯ ಓದಿ.