ಮತ್ತೊಬ್ಬನ ಸಂಸಾರ
ಇಂಜಿನಿಯರಿಂಗ್ ಪದವೀಧರರಾದ ವಿವೇಕ ಶಾನಭಾಗರು ತಮ್ಮ ಸಣ್ಣ ಕತೆಗಳ ಮೂಲಕ ಹೆಸರು ಮಾಡಿದವರು. ಅವರು ಸಂಪಾದಕರಾಗಿದ್ದ “ದೇಶಕಾಲ" ಎಂಬ ವಿಶಿಷ್ಟ ತ್ರೈಮಾಸಿಕ ಪತ್ರಿಕೆಯ ಮೂಲಕವೂ ಕನ್ನಡಿಗರಿಗೆ ಪರಿಚಿತರು. "ಮತ್ತೊಬ್ಬನ ಸಂಸಾರ” ಎಂಬ ಈ ಸಂಕಲನದಲ್ಲಿವೆ ಅವರ ಒಂಭತ್ತು ಕತೆಗಳು.
ಇದಕ್ಕೆ ಅಕ್ಷರ ಕೆ. ವಿ. ಬರೆದಿರುವ ಬೆನ್ನುಡಿಯ ಮಾತುಗಳು ಇಲ್ಲಿನ ಕತೆಗಳ ಬಗ್ಗೆ ಕೆಲವು ಒಳನೋಟಗಳನ್ನು ಒದಗಿಸುತ್ತವೆ: "ಯಾವುದೇ ವಸ್ತುವನ್ನು ಕುರಿತು, ಹಲವು ರೀತಿಯ ಕಥನಗಳನ್ನು ಕಟ್ಟುವುದು ಸಾಧ್ಯ. ಆದರೆ, ಒಂದೇ ಕಥನದಲ್ಲಿ ಹಲವು ಕಥಾಸಾಧ್ಯತೆಗಳನ್ನು ಒಳಗೊಳ್ಳುವುದು ಕಷ್ಟದ ಹಾದಿ. ವಿವೇಕ ಶಾನಭಾಗ ಅವರ ಈಚಿನ ಕತೆಗಳು, ಈ ಎರಡನೆಯ ಜಾತಿಯ ದುರ್ಗಮ ದಾರಿಗಳನ್ನು ಹುಡುಕಲು ಹೊರಟಂತಿವೆ. ಉದಾಹರಣೆಗೆ, ಈ ಸಂಕಲನದ ಒಂದು ಕಥೆಯಲ್ಲಿ - "ಒಬ್ಬ"ನ ಸಾದಾ ಸಂಸಾರದೊಳಗೆ, ಇದ್ದಕ್ಕಿದ್ದಂತೆ "ಮತ್ತೊಬ್ಬ"ನ ನೆರಳು ಕಾಣಿಸತೊಡಗುತ್ತದೆ. ಅದಕ್ಕಿಂತ ಭಿನ್ನವಾದ ಇನ್ನೊಂದು ಕತೆಯಲ್ಲಿ - ಊರಿಗೆಲ್ಲ “ನಿಗೂಢ"ವೆನ್ನಿಸುವಾಕೆ, ಮತ್ತೊಮ್ಮೆ ಏನೂ ವಿಶೇಷವಿಲ್ಲದ ಸಾಧಾರಣ ಹೆಂಗಸೂ ಆಗಿ ಕಾಣಿಸಿ ಕೊಳ್ಳುತ್ತಾಳೆ. ಅದೇ ರೀತಿ - ಶಾಲಾ ಮಾಸ್ತರ, ಕಿರಾಣಿ ಅಂಗಡಿಯಾತ - ಇಂಥ ಪರಿಚಿತರು ಇಲ್ಲಿ ತಟ್ಟನೆ ಅಪರಿಚಿತರೂ ಆಗಿ ಗೋಚರಿಸತೊಡಗುತ್ತಾರೆ. ಶಿರಸಿ, ಕುಮಟಾ, ಅಂಕೋಲಾದ ಸುತ್ತಮುತ್ತಲೇ ಚಿಗುರುವ ಇಲ್ಲಿಯ ಹಲವು ಕಥನಗಳು, ಹಠಾತ್ತನೆ ತಮ್ಮ ಅದೃಶ್ಯ ಬೇರುಗಳನ್ನು ದೂರದೂರದ ಪುಣೆ-ರಂಗೂನಿನ ವರೆಗೂ ಹಬ್ಬಿಸಿಕೊಳ್ಳತೊಡಗುತ್ತವೆ.”
ಮೊದಲ ಕತೆಯೇ ಸಂಕಲನದ ಶೀರ್ಷಿಕೆಯಾಗಿದೆ. ಈ ಕತೆಯ ನಿರೂಪಕನ ಸ್ನೇಹಿತನ ಪಕ್ಕದ ಮನೆಯಲ್ಲಿ ವಾಸವಿತ್ತು ಜಾನಕಿರಾಮ ಶ್ರೀವಾಸ್ತವ ಅವರ ಸಂಸಾರ. ಸೇಲ್ಸ್-ಮನ್ ಆಗಿದ್ದ ಜಾನಕಿರಾಮ ಪ್ರತಿ ಬುಧವಾರ ಬೆಳಗ್ಗೆ ಪ್ರವಾಸ ಹೊರಟರೆ ಹಿಂತಿರುಗಿ ಬರುತ್ತಿದ್ದದ್ದು ಶನಿವಾರ ಸಂಜೆ. ಬೀದಿಯ ಯಾರ ಜೊತೆಯೂ ಅಗತ್ಯವಿಲ್ಲದೇ ಒಂದೇ ಒಂದು ಮಾತನ್ನೂ ಆಡುವವರಲ್ಲ. ಅವರ ಮಗ ಕಾಲೇಜು ಸೇರಿದಾಗ, ಹಠಾತ್ತನೆ ಜಾನಕಿರಾಮರಿಗೆ ಅದೇ ಊರಿನಲ್ಲಿ ಇನ್ನೊಂದು ಸಂಸಾರವಿರುವ ಸಂಗತಿ ಬಯಲಾಗುತ್ತದೆ. ಕಳೆದ ಇಪ್ಪತ್ತು ವರುಷಗಳಿಂದ ಇದು ನಡೆದಿತ್ತೇ? ಒಂದೇ ದಿನದಲ್ಲಿ ಆ ಸುದ್ದಿ ಬಿರುಗಾಳಿಯಂತೆ ಊರಿನಲ್ಲಿ ಹರಡುತ್ತದೆ. ಇದಕ್ಕೆ ಜಾನಕೀರಾಮರ ಪ್ರತಿಕ್ರಿಯೆ ತೀರಾ ನಿಗೂಢ.
ಎರಡನೆಯ ಕತೆ “ಶರವಣ ಸರ್ವಿಸಸ್”. ಶ್ರೀರಂಗಪಟ್ಟಣದ ಹತ್ತಿರದ ಸಣ್ಣ ಊರಿನ ಶ್ರವಣ ಪಿಯುಸಿ ಮುಗಿಸಿ, ಹೊಟ್ಟೆಪಾಡಿಗಾಗಿ ಮಹಾನಗರ ಬೆಂಗಳೂರಿಗೆ ಬಂದ ನಂತರ ಶರವಣ ಎಂದು ಹೆಸರು ಬದಲಾಯಿಸಿಕೊಳ್ಳುತ್ತಾನೆ. ಬೆಂಗಳೂರಿನಲ್ಲಿ ಭಾರತದ ಯಾವ್ಯಾವುದೋ ಊರುಗಳಿಂದ ಹೊಟ್ಟೆಪಾಡಿಗಾಗಿ ಬಂದು ನೆಲೆ ನಿಂತ ಲಕ್ಷಗಟ್ಟಲೆ ಸಂಸಾರಗಳು. ಅವರಿಗೆ ತರಾವರಿ "ಸೇವೆಗಳು" ಬೇಕೇ ಬೇಕು. ಉದಾಹರಣೆಗೆ, ಸತ್ಯನಾರಾಯಣ ಪೂಜೆ, ಹೋಮಹವನಗಳು, ವಾಸ್ತು ಸಲಹೆ, ಮನೆ, ಫ್ಲ್ಯಾಟ್ ಅಥವಾ ಸೈಟ್ ಖರೀದಿ, ಬಾಡಿಗೆ ಮನೆ, ಬಾಡಿಗೆ ಮಳಿಗೆ. ಮೂರೇ ವರುಷದಲ್ಲಿ ಈ ದಂಧೆಯಿಂದ ಹಣ ಬಾಚಿಕೊಳ್ಳತೊಡಗಿದ ಶ್ರವಣನ ಬದುಕಿನಲ್ಲಿ ಅದೆಂತಹ ತಿರುವು!
ಬೆನ್ನುಡಿಯಲ್ಲಿ ಪ್ರಸ್ತಾಪಿಸಿದ “ನಿಗೂಢ"ವೆನ್ನಿಸುವಾಕೆಯ ಬಗೆಗಿನ ಕತೆಯೇ “ಕಾರಣ”. ದುಷ್ಟ ಶಕ್ತಿ ಇದೆಯೆಂದು ತನ್ನ ಮೇಲೆ ಬಂದ ಅಪವಾದದಿಂದಾಗಿ ಮನೆ ಬಿಟ್ಟು ಹೊರ ಬರುವುದಿಲ್ಲ ಆಕೆ. ಆದರೆ, ಕತೆಯ ಕೊನೆಯ ಪ್ರಸಂಗದಿಂದಾಗಿ ಆಕೆ ಸಾಧಾರಣ ಮಹಿಳೆಯೇ ಆಗಿದ್ದಳಲ್ಲವೇ? ಅನಿಸುತ್ತದೆ.
“ಅಂಚು" ಕತೆಯ ಶಾಲೆಯ ಪಿ.ಟಿ. ಮಾಸ್ತರು ಸುಬ್ಬರಾಯಪ್ಪ ಸದಾ ಠಾಕುಠೀಕಾಗಿ ಇರುವ ವ್ಯಕ್ತಿ. ಅದೇ ಶಾಲೆಯ ಶಿಕ್ಷಕಿ ಜೀಜಾಬಾಯಿ ಅವಿವಾಹಿತೆ. ತನ್ನ ಕೆಲಸಕ್ಕೆ ರಾಜೀನಾಮೆಯಿತ್ತ ಜೀಜಾಬಾಯಿ, ಊರು ಬಿಡುವ ಮುನ್ನಾದಿನ ರಾತ್ರಿ, ಆತನನ್ನು ತನ್ನ ಮನೆಗೆ ಕರೆಸಿಕೊಂಡು ತನ್ನ ಅಂತರಂಗ ಬಿಚ್ಚಿಟ್ಟರು. ಹಲವು ವರುಷ ಆಕೆ ಸುಮ್ಮನಿದ್ದದರ ಕಾರಣ ಮಾತ್ರ ನಿಗೂಢ.
"ಕೆಲವು ತತ್ವಗಳ ಸಲುವಾಗಿ” ಕತೆಯ ಘನಶ್ಯಾಮ ಬದುಕಿನ ಗೊತ್ತುಗುರಿಯ ಬಗ್ಗೆ ಸದಾ ಗೊಂದಲದಲ್ಲಿದ್ದ. ಆತ ಕಾಲೇಜು ಸೇರಿದಾಗ, ಎಡಪಂಥೀಯ ಚಿಂತನೆಯ ರಾಮದಾಸನ ಪ್ರಭಾವಕ್ಕೊಳಗಾದ. ಐದು ವರುಷಗಳ ನಂತರ, ರಾಮದಾಸ ಆ ಕಾಲೇಜು ತೊರೆದ. ಮುಂದೊಮ್ಮೆ ಅವರು ಭೇಟಿಯಾದಾಗ, ರಾಮದಾಸನಿಗೂ ಭ್ರಮನಿರಸನವಾಗಿತ್ತು.
“ಸರಹದ್ದು" ಕತೆಯ ಜನ್ನ ಊರಿಗೆಲ್ಲ ಬೇಕಾದವನು. ಯಾವುದೇ ಮದುವೆ, ಮುಂಜಿ ಇತ್ಯಾದಿ ಕಾರ್ಯಕ್ರಮಗಳೆಲ್ಲದಕ್ಕೂ ಅವನಿರಲೇ ಬೇಕು. ಮಕ್ಕಳಿಗಂತೂ ಅವನು ಮಹಾ ಕತೆಗಾರ. ಅಂತಹ ಜನ್ನನ ಬದುಕಿಗೇ ಯಾರೋ ಕೊಳ್ಳಿಯಿಟ್ಟ ಕತೆ ಅದು. ಎರಡನೇ ಮಹಾಯುದ್ಧದಲ್ಲಿ ರಂಗೂನಿನ ಮೇಲಿನ ಧಾಳಿಯಲ್ಲಿ ಪತಿಯನ್ನೇ ಕಳಕೊಂಡ ಸುಶೀಲೆ ಊರಿಗೆ ಮರಳಿದ ನಂತರ ಅವಳ ದಾರುಣ ಬದುಕಿನ ಚಿತ್ರಣ “ಕಾಂತಾಸಮ್ಮಿತ" ಕತೆಯ ಹೂರಣ.