ಮತ್ತೊಮ್ಮೆ ಗಾಂಧಿ...
" ಕೀವ್ ನಲ್ಲಿ ಗಾಂಧೀಜಿ ಪ್ರತಿಮೆಗೆ ನಮಿಸಿದೆ. ಗಾಂಧೀಜಿಯವರ ಚಿಂತನೆಗಳು ಜಾಗತಿಕವಾಗಿದ್ದು, ಕೋಟ್ಯಾಂತರ ಜನರ ಭರವಸೆಯಾಗಿದೆ. ಅವರು ತೋರಿದ ಮಾನವೀಯತೆಯ ಹಾದಿಯಲ್ಲಿ ನಾವು ಹೆಜ್ಜೆ ಹಾಕಬೇಕಾಗಿದೆ " ಎಂದು ಎಕ್ಸ್ ನಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಸಂದೇಶ ಹಂಚಿಕೊಂಡಿದ್ದಾರೆ. ಯುದ್ಧ ಪೀಡಿತ ಉಕ್ರೇನ್ಗೆ ಭೇಟಿ ನೀಡಿ ಅಲ್ಲಿನ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಜೊತೆ ಮಾತನಾಡುತ್ತಾ ಮಹಾತ್ಮ ಗಾಂಧಿಯವರ ಹೆಸರನ್ನು ಪ್ರಸ್ತಾಪಿಸಿದ್ದಾರೆ. ಜಗತ್ತಿನ ಶಾಂತಿಗೆ ಗಾಂಧೀಜಿಯವರ ಚಿಂತನೆಗಳು ಪರಿಹಾರವಾಗುತ್ತದೆ ಎಂದು ಹೇಳಿದ್ದಾರೆ.
ಹೌದು, ನರೇಂದ್ರ ಮೋದಿಯವರು ಹಾಗೆ ಹೇಳಲೇಬೇಕು ಮತ್ತು ಪ್ರತಿ ಬಾರಿಯೂ ಹೇಳುತ್ತಲೇ ಇರುತ್ತಾರೆ. ಹಿಂದಿನ ಅಮೆರಿಕಾದ ಅಧ್ಯಕ್ಷ ಬರಾಕ್ ಒಬಾಮ, ಖ್ಯಾತ ಮಾನವ ಹಕ್ಕುಗಳ ಹೋರಾಟಗಾರ ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಸಹ ಹೇಳಿದ್ದಾರೆ. ದಕ್ಷಿಣ ಆಫ್ರಿಕಾದ ವರ್ಣಭೇದ ನೀತಿಯ ಹೋರಾಟಗಾರರಾದ ನೆಲ್ಸನ್ ಮಂಡೇಲಾ, ಪ್ಯಾಲಿಸ್ಟೇನ್ ಸ್ವಾತಂತ್ರ್ಯ ಹೋರಾಟಗಾರ ಯಾಸಿರ್ ಅರಾಫತ್, ಜಗತ್ತಿನ ಅತ್ಯಂತ ಬುದ್ಧಿವಂತ ವ್ಯಕ್ತಿ ಎಂದು ಕರೆಯಲಾಗುವ ಆಲ್ಬರ್ಟ್ ಐನ್ ಸ್ಟೈನ್, ಭಾರತದ ಮಾಜಿ ಅಧ್ಯಕ್ಷ ಡಾಕ್ಟರ್ ಎಪಿಜೆ ಅಬ್ದುಲ್ ಕಲಾಂ ಸಹ ಹಾಗೆ ಹೇಳಿದ್ದಾರೆ ಮತ್ತು ಬುದ್ಧಿ ಇರುವ, ಹೃದಯವಿರುವ, ಮಾನವೀಯತೆಗೆ ಮಿಡಿಯುವ ಯಾರೇ ಆಗಲಿ ಮೊದಲು ಹೇಳುವುದು ಅದು ಮಹಾತ್ಮ ಗಾಂಧಿ ಹೆಸರು.
ಜಗತ್ತಿನ ಮತ್ಯಾವುದೇ ಹೋರಾಟಗಾರರು, ದಾರ್ಶನಿಕರು ಅಥವಾ ಧಾರ್ಮಿಕ ನಾಯಕರು ಗಾಂಧಿಯವರಷ್ಟು ಪರಿಣಾಮಕಾರಿಯಾದ ಶಾಂತಿದೂತರಾಗಲು ಸಾಧ್ಯವಿಲ್ಲ. ಇದನ್ನು ಭಾರತದ ಒಂದಷ್ಟು ಮಹಾತ್ಮ ಗಾಂಧಿಯ ದ್ವೇಷಿಗಳು ಅರ್ಥ ಮಾಡಿಕೊಳ್ಳಬೇಕು. ಮಹಾತ್ಮ ಗಾಂಧಿಯನ್ನು ವಿರೋಧಿಸಲು, ವಿಮರ್ಶಿಸಲು ಅವರವರಿಗೆ ಅವರವರದೇ ಕಾರಣಗಳಿರಬಹುದು. ಅವರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಾವು ಗೌರವಿಸಬೇಕು. ಆದರೆ ಖಂಡಿತವಾಗಿಯೂ ಗಾಂಧಿಯವರನ್ನು ದ್ವೇಷ ಮಾಡುವಷ್ಟು ಕೆಟ್ಟ ಮನುಷ್ಯ ಅವರಾಗಿರಲಿಲ್ಲ. ಅವರ ಯಾವುದೇ ರಾಜಕೀಯ ನಿರ್ಧಾರಗಳನ್ನು ಪ್ರಶ್ನಿಸುವ, ಟೀಕಿಸುವ ಸ್ವಾತಂತ್ರ್ಯ ಎಲ್ಲರಿಗೂ ಇದೆ. ಆದರೆ ಅವರ ಬದುಕಿನ ಬಹು ಮುಖ್ಯ ಪ್ರಯೋಗಗಳಾದ ಸತ್ಯ, ಅಹಿಂಸೆ, ಸರಳತೆ, ಪಾರದರ್ಶಕತೆ, ಮಾನವೀಯತೆ, ನೈತಿಕತೆ, ಶಾಂತಿ ಇದನ್ನು ಯಾರು ಸಹ ಅಲ್ಲಗಳೆಯುವಂತಿಲ್ಲ.
ಶರಣ ಸಂಸ್ಕೃತಿಯ ನಡೆ ನುಡಿ ಸಿದ್ಧಾಂತ ಬಹುತೇಕ ಗಾಂಧಿಯವರಲ್ಲಿ ತಿಳುವಳಿಕೆಯಾಗಿ ನಡುವಳಿಕೆಯಾಗಿತ್ತು. ನನ್ನ ಜೀವನವೇ ನನ್ನ ಸಂದೇಶ ಎನ್ನುವ ಮಹಾತ್ಮ ಗಾಂಧಿಯವರ ಮಾತುಗಳು, ಸತ್ಯದೊಂದಿಗೆ ಅವರು ನಡೆಸಿದ ಬದುಕಿನ ಪ್ರಯೋಗಗಳು ಇಡೀ ವಿಶ್ವದಲ್ಲಿ ತೀರಾ ಅಪರೂಪ. ಇವತ್ತಿನ ಅನೇಕ ರಾಜಕೀಯ, ಸಾಮಾಜಿಕ, ಧಾರ್ಮಿಕ ಫಲಿತಾಂಶಗಳ ಆಧಾರದ ಮೇಲೆ ಗಾಂಧಿಯವರನ್ನು ನಿರ್ಧರಿಸುವುದು ಇತಿಹಾಸಕ್ಕೆ ಮಾಡುವ ಅಪಚಾರವಾಗುತ್ತದೆ. ಗಾಂಧಿಯನ್ನು ಅರ್ಥ ಮಾಡಿಕೊಳ್ಳಲೇ ನಮಗೂ ಕೂಡ ಸಾಕಷ್ಟು ಅನುಭವ, ಅನುಭಾವ, ಸಂವೇದನಾಶೀಲತೆ ಬೇಕಾಗುತ್ತದೆ.
ಯಾರದೋ ಮೇಲಿನ ದ್ವೇಷದಿಂದ, ಇನ್ಯಾರದೋ ಮೇಲಿನ ಕೋಪದಿಂದ, ಮತ್ಯಾರದೋ ವಿದ್ವಂಸಕ ಕೃತ್ಯಗಳಿಂದ ಆ ಭಾರವನ್ನು ಮಹಾತ್ಮ ಗಾಂಧಿಯನ್ನು ದ್ವೇಷಿಸಲು ಉಪಯೋಗಿಸುವ ಕೆಲವು ಮೂಲಭೂತವಾದಿ ವ್ಯಕ್ತಿಗಳು, ಸಂಘಟನೆಗಳು ಅವರ ವಿಷಯದಲ್ಲಿ ಮತ್ತೊಮ್ಮೆ ಆತ್ಮವಿಮರ್ಶೆ ಮಾಡಿಕೊಳ್ಳಬೇಕು. ಶಸ್ತ್ರ, ಶಾಸ್ತ್ರ, ರಕ್ತ, ಹೊಡೆದಾಟಗಳಿಂದ ಈ ದೇಶಕ್ಕೆ ಸ್ವಾತಂತ್ರ್ಯ ಲಭಿಸಿದೆ ಎನ್ನುವ ಹುಚ್ಚು ವಿಮರ್ಶೆಗಳಿಗೆ ಹೆಚ್ಚು ಮಹತ್ವ ಕೊಡಬಾರದು. ಸ್ವತಂತ್ರಕ್ಕಾಗಿ ಬಲಿಯಾದ ಎಲ್ಲ ತ್ಯಾಗ ಜೀವಿಗಳ ಹುತಾತ್ಮರ ತ್ಯಾಗವನ್ನು ಸ್ಮರಿಸುತ್ತಾ…
ಗಾಂಧಿ ಎಂದೆಂದಿಗೂ ಈ ನೆಲದ ಮಹಾತ್ಮ. ಅನೇಕರು ಮೇಲ್ನೋಟಕ್ಕೆ ಮಾತ್ರ ಗಾಂಧಿಯನ್ನು ಸ್ಮರಿಸುತ್ತಾ ಒಳಗಡೆ ಅವರನ್ನು ಸಾಕಷ್ಟು ದ್ವೇಷಿಸಿ, ಅವರ ಕೊಂದವರನ್ನು ವಿಜೃಂಭಿಸುವುದು, ಪ್ರಶಂಶಿಸುವುದು ನಡೆಯುತ್ತಲೇ ಇದೆ. ಇತ್ತೀಚಿನ ವರ್ಷಗಳಲ್ಲಿ ಗಾಂಧಿಯನ್ನು ಈ ನೆಲದಿಂದಲೇ ಓಡಿಸುವ, ಅವರನ್ನು ವಿಲನ್ ಆಗಿ ಚಿತ್ರಿಸುವ ಅನೇಕ ಅಜ್ಞಾನದ ಪ್ರಯತ್ನಗಳು ನಡೆಯುತ್ತಿದೆ. ನನ್ನ ವೈಯಕ್ತಿಕ ಅಭಿಪ್ರಾಯದಲ್ಲಿ ಗಾಂಧಿಯನ್ನು ಮರೆತ ದೇಶ ನೈತಿಕವಾಗಿ ಕುಸಿಯುತ್ತಲೇ ಹೋಗುತ್ತದೆ. ಮುಂದೊಂದು ದಿನ ದೇಶ ಆರ್ಥಿಕವಾಗಿ ಅಭಿವೃದ್ಧಿಯಾದರೂ ಆತ್ಮವಿಲ್ಲದ ಶರೀರದಂತೆ ಮಾನವೀಯ ಮೌಲ್ಯಗಳು ನಶಿಸಿರುತ್ತದೆ. ಮನುಷ್ಯ ಅನಾಗರಿಕವಾಗಿ, ವಸ್ತು ಸಂಸ್ಕೃತಿಯ ಬಲೆಯೊಳಗೆ ಸಿಲುಕಿ, ನಿರ್ಜೀವ ಶವದಂತೆಯೇ ಅಪನಂಬಿಕೆ, ಅಸಮಾಧಾನ, ಅಸಹಿಷ್ಣುತೆಯ ಬಲೆಯೊಳಗೆ ಸಿಲುಕಿ ಬದುಕಬೇಕಾಗುತ್ತದೆ. ಆದ್ದರಿಂದ ದಯವಿಟ್ಟು ಗಾಂಧಿಯನ್ನು ಟೀಕಿಸುವ ಮೊದಲು ಸಾಕಷ್ಟು ವಿವೇಚನೆ ಬಳಸಿ ಅವರನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿ.
-ವಿವೇಕಾನಂದ. ಎಚ್. ಕೆ., ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
Comments
ಕರಮಚಂದರನ್ನು ನೀವೆಷ್ಟೇ ಹೇಳಿ…
ಕರಮಚಂದರನ್ನು ನೀವೆಷ್ಟೇ ಹೇಳಿ ಮನನ ಮಾಡಿಸಿದರೂ ಎಲ್ಲಾ ಸಂಧರ್ಭಗಳಲ್ಲೂ ಒಪ್ಪಲು ಹಾಗೂ ಈ ನೆಲದ ಮಹಾತ್ಮ ಅಂದುಕೊಳ್ಳಲು ಸದ್ಯವೇ ಇಲ್ಲ ಹಲ ಕೆಲವು ಸನ್ನಿವೇಶಗಳಲ್ಲಿ ಸುಮಾರಿಸಬಹುದು
ನೀವು ಅವರನ್ನು ಅತೀಮಾನವರಂತೆ ವಿಜ್ರುಂಭಿಸುವುದರಲ್ಲಿ ಅರ್ಥವಿಲ್ಲ ಎಂದು ನನ್ನ ಅನಿಸಿಕೆ
ಬರಹ ನಿಮ್ಮದು ಊಹೆಗಳು ನಿಮ್ಮವು ನನಗದರಿಂದ ನಷ್ಟವಿಲ್ಲ ಲಾಭವೂ ಇಲ್ಲ