ಮತ್ತೊಮ್ಮೆ ಬಾ ತಂದೆ…
ಕವನ
ಗೋವಿಂದ ಹರಿಗೋವಿಂದ ಹರಿಗೋವಿಂದ
ನಿನ್ನ ನಾಮ ಸ್ಮರಣೆಯಿಂದ ಮನಕಾನಂದ
ಹರಿಯೆ ನಿನ್ನ ಕರುಣೆಯಿಂದ ನಮಗಾನಂದ||ಪ||
ಬೇಡಲು ಬಂದಿರುವೆ ಬಾಳಲಿ ನೋವಿಂದ
ಕರುಣದಿ ಪರಿಹರಿಸೊ ಹರಿ ಗೋವಿಂದ
ಮರೆತೆನು ಬದುಕಿನಲಿ ಗೋವಿಂದ ನೆನೆಯದೆಲೆ
ನೀ ಬಂದು ಮನ್ನಿಪುದು ಶ್ರೀ ಗೋವಿಂದ
ಕಷ್ಟದಿ ಸಿಲುಕಿರುವೆ ನಿನ್ನಯ ದಯೆ ಇರಲಿ
ದೂರ ತಳ್ಳಿ ನೋಯಿಸದೆ ಬಾ ಒಲವಿಂದ
ಹರಿಯೆ ನಿನ್ನ ದಯೆಗಾಗಿ ನಾನಿಂದು ಬಂದೆ||
ಮಾನವ ರೂಪಿಂದ ದೇವಕಿ ಉದರದಲಿ
ಧರೆಯೊಳು ಅವತರಿಸಿ ಬಂದೇ ತಂದೆ
ಪುನರಪಿ ನೀನಿಲ್ಲಿ ತಾಳೆಯ ಅವತಾರ
ಲೋಕವು ಉಳಿಯುವುದು ಹರಿ ನಿನ್ನಿಂದೇ
ಅಚ್ಚುತನೆ ಗಿರಿಧರನೆ ಮಣಿದಿರುವೆ ಚರಣದಲಿ
ಬೇಡಿ ನಿಂದೆ ಕರಮುಗಿದು ನಾ ಭಕ್ತಿಯಿಂದ
ಹೃದಯ ಇಂದು ಮಿಡಿಯುತಿದೆ ಹರಿನಾಮದಿಂದ||
-ಪೆರ್ಮುಖ ಸುಬ್ರಹ್ಮಣ್ಯ ಭಟ್
(ಚಿತ್ರ ಕೃಪೆ ಅಂತರ್ಜಾಲ)
ಚಿತ್ರ್
