ಮದನಾರಿ
ಕವನ
ಒಲವಿನ ನೋಟದಿ ನಲ್ಲನ ಕಾಯುತ
ಚೆಲುವಿನ ಬುಗ್ಗೆಯ ಮದನಾರಿ|
ಬಲೆಯನು ಹೆಣೆದಿಹ ಪ್ರೀತಿಯ ಬಂಧದಿ
ನಲುಮೆಯ ಕಿನ್ನರಿ ಬಳಿಸಾರಿ||
ಇಳೆಯಲಿ ಸೀತೆಯ ತೆರದಲಿ ಕಾಂಬಳು
ಮಳೆಯಲಿ ನೆನೆದಿಹ ಮೊಗ್ಗಿನಲಿ|
ನಳಿಸುವ ಮಲ್ಲಿಗೆ ಸೌರಭ ಸೂಸುತ
ಮಿಳಿತದಿ ಕನ್ನಿಕೆ ಚಂದದಲಿ||
ಅರಿಷಿಣ ಸೀರೆಯ ನೀರೆಯ ಧರಿಸಿರೆ
ಮರೆಯಲಿ ಮೆಲ್ಲಗೆ ಮುನಿಸುತಲಿ|
ಹೆರಳಲಿ ಮಲ್ಲಿಗೆ ಸುಮವನು ಮುಡಿಯುತ
ಕರದೊಳು ಓಲೆಯ ಓದುತಲಿ||
ಗೆಜ್ಜೆಯ ನಾದವು ಸದ್ದನು ಮಾಡದೆ
ಲಜ್ಜೆಯ ಧರಿಸುತ ಕೂಡುತಿದೆ|
ಹೆಜ್ಜೆಯ ಇಡದೆಯೆ ಬೇಸರದಿಂದಲಿ
ಮಜ್ಜನವನ್ನದು ಮರೆಯುತಿದೆ||
ತನುವಲಿ ಬಿಸಿಯದು ಏರಿದೆ ಚಣದಲಿ
ಕನಸಲಿ ಬಂದಿಹ ರಾಜನನು|
ಮನಸದು ಬಯಸಿದೆ ರಮಣನ ತೋಳನು
ವಿನಯದಿ ಅಪ್ಪಿದೆ ಕಾಂತನನು||
ಜುಮಕಿಯ ನಲಿಯುತ ಹೊರಳಿದೆ ಕರ್ಣದಿ
ಗಮನವ ಕೊಡುತಲಿ ಮೊಗದಲ್ಲಿ|
ನಮನವ ಮಾಡಲು ಕರದಲಿ ಬಳೆಗಳು
ವಿಮಲದ ಭಾವವು ತನುವಲ್ಲಿ||
ಶಂಕರಾನಂದ ಹೆಬ್ಬಾಳ
ಚಿತ್ರ್
