ಮದರು - ಸಂಕಥನ

ಮದರು - ಸಂಕಥನ

ಪುಸ್ತಕದ ಲೇಖಕ/ಕವಿಯ ಹೆಸರು
ರಾಧಾಕೃಷ್ಣ ಕೆ. ಉಳಿಯತ್ತಡ್ಕ
ಪ್ರಕಾಶಕರು
ಮಧೂರು ಶ್ರೀ ಮದರು ಮಹನ್ಮಾತೆ ಮೊಗೇರ ಸಮಾಜ (ರಿ.) ಕಾಸರಗೋಡು. ಬದಿಯಡ್ಕ ಅಂಚೆ, ಪೆರಡಾಲ
ಪುಸ್ತಕದ ಬೆಲೆ
ರೂ. ೨೦೦.೦೦ ಮುದ್ರಣ: ೨೦೨೧

ನಿನ್ನೆಯ ಬೆನ್ನಿಗೆ ಇಂದು ಬಂದು ಅದು ನಾಳೆಗಳಾದಾಗ ಅಲ್ಲಿ ಕೆಲವೊಂದು ಇತಿಹಾಸಗಳು ಸೃಷ್ಟಿಯಾಗುತ್ತವೆ. ಆ ಇತಿಹಾಸ ನಂಬಲಾರ್ಹ ಎನ್ನಬೇಕಾದರೆ ಅದಕ್ಕೆ ಬಲವಾದ ಸಾಕ್ಷಿಗಳು ಇರಬೇಕು. ಅದು ವ್ಯಕ್ತಿ, ವಸ್ತು ಇಲ್ಲ ಕಥನಗಳಾಗಿರಬಹುದು. ತುಳುನಾಡಿನಲ್ಲಿ ಶೋಷಿತರ, ಧಮನಿತರ ಧ್ವನಿಯಾಗಿ ಕಾಣುವಂತದ್ದು ಪಾಡ್ದನಗಳು. ಅವುಗಳಲ್ಲಿ ಉಲ್ಲೇಖ ಮಾಡಲ್ಪಟ್ಟ ಸ್ಥಳ ನಾಮ, ವ್ಯಕ್ತಿ,  ವಂಶ, ಸಾಮಾಜಿಕ ಕಟ್ಟುಪಾಡುಗಳು ಇತಿಹಾಸದ ಸತ್ಯಾಸತ್ಯತೆಯನ್ನು ಬಹಳವಾಗಿ  ಪುಷ್ಟೀಕರಿಸುತ್ತದೆ.

ಈ ರೀತಿಯ ಎಲ್ಲಾ ಅರ್ಹತೆ ದಾಖಲಾತಿಗಳಿದ್ದೂ ಒಂದು ಇತಿಹಾಸ ಕಡೆಗಣಿಸಲ್ಪಡುತ್ತದೆ ಎಂದಾದರೆ ಅದರ ವಿರುದ್ಧ ದ್ವನಿ ಎತ್ತಬೇಕಾಗುತ್ತದೆ. ಕಾಸರಗೋಡಿನ ಹೆಸರಾಂತ ಕವಿ, ಚಿಂತಕ ರಾಧಾಕೃಷ್ಣ ಉಳಿಯತ್ತಡ್ಕ ಇವರ *ಮದರು ಸಂಕಥನ* ಈ ರೀತಿಯ ಒಂದು ಧ್ವನಿ. ಕೃತಿಯ ಗಟ್ಟಿತನವೇ ಇಲ್ಲಿ ಧ್ವನಿಯ, ವಾಸ್ತವದ ಗಟ್ಟಿತನ. ಶ್ರೀಯುತ ರತ್ನಾಕರ ಮಲ್ಲಮೂಲೆಯವರು ಮುನ್ನುಡಿಯಲ್ಲಿ ಹೇಳಿರುವಂತೆ “ಮದರುವಿನ ಬಗೆಗೆ ಇರುವ ಮೂರು ಪಾಡ್ದನಗಳು ಸಾಹಿತ್ಯಾತ್ಮಕವಾಗಿಯೂ, ಚಾರಿತ್ರಿಕವಾಗಿಯೂ ಬಹಳ ಪ್ರಮುಖವಾದವುಗಳು. ಅದರಲ್ಲೂ ಗಮನ ಸೆಳೆಯುವುದು ಮದರುವಿಗೆ ಶಿವಲಿಂಗ ದೊರೆತಾಗ ಅರಸರು ಆಕೆಯಲ್ಲಿಯೇ ಇದನ್ನು ಎಲ್ಲಿ ಪ್ರತಿಷ್ಠೆ ಮಾಡಲಿ? ಎಂದು ಕೇಳುವ ಪಾಡ್ದನದ ಈ ಸಾಲುಗಳು

*ದೈಯೊತ ಜಾಗೆನ್ ಅರಸುಲು ಕೇಂಡೆರ್*

*ಚಿಕ್ಕ್ ಡ್ ಮೇರ್ತಿ ಕಲ್ಲ್ ತ ದೇಬೆರ್*

*ಈಯೆ ಪಣ್ ಒರ ದಿಡ್ಡೋಡು ಓವುಲು*

ಆ ಕಾಲಘಟ್ಟದಲ್ಲಿ ಅಸ್ಪೃಶ್ಯತೆ ಅಷ್ಟು ಉಚ್ಛ್ರಾಯ ಸ್ಥಿತಿಯಲ್ಲಿ ಇರುವಾಗ ಅರಸ, ‘ದೇವರು ಆಕೆಗೇ ಒಲಿದದ್ದು’ ಎಂಬ ವಿಚಾರವನ್ನು ಗಣನೆಗೆ ತೆಗೆದುಕೊಂಡು ಮುಂದಿನ ನಿರ್ಧಾರವನ್ನು ಆಕೆಗೇ ಬಿಡುವುದು!

ಈ ರೀತಿಯಲ್ಲಿ ಮೋಗೆರ ಮಹಿಳೆಗೆ ಶಿವಲಿಂಗ ದೊರೆತ ಬಹಳ ಸಾಮ್ಯತೆಯುಳ್ಳ ಕಥನ ತೊಡಿಕ್ಕಾನದ್ದು. ಅಲ್ಲಿಯ ಶಿವಲಿಂಗದಲ್ಲಿಯೂ ಗಾಯದ ಗುರುತು ಇದ್ದು ಅದಕ್ಕೆ ಗಂಧ ಹಚ್ಚಲಾಗುತ್ತದೆ ಮತ್ತು ಗಂಧವನ್ನು ತೆಗೆಯುವಾಗ ಅದು ಕೆಂಪಾಗಿರುತ್ತದೆ ಎಂದು ಅಲ್ಲಿ ಅರ್ಚಕರಾಗಿ ಸೇವೆ ಸಲ್ಲಿಸಿದ್ದ ಶ್ರೀಯುತ ನಾರಾಯಣ ಮಯ್ಯರೇ ಹೇಳುತ್ತಿದ್ದ ನೆನಪು. .

ಅಸ್ಪೃಶ್ಯತೆಯ ವಿಚಾರಗಳು ಏನೇ ಇದ್ದರೂ ಮೋಗೆರ ಜನಾಂಗವು ತುಳುನಾಡಿನ ಕೃಷಿ ಬದುಕಿನ ಪ್ರಮುಖ ಅಂಗ. ಭೂಮಿ ಪುತ್ರರು ಎಂದು ಕರೆಯಲ್ಪಡುವ ಇವರಿಗೆ ಬೆನ್ನಿಯ ಗದ್ದೆಗೆ ಮೊದಲು ಇಳಿಯುವ, ಬೆಳೆಯನ್ನು ಕಟಾವು ನಡೆಸುವ, *ಕೊಯಿಲತ್ತ* ಕೊಡುವ ಹಕ್ಕು ಮತ್ತು ಜವಾಬ್ದಾರಿ ಇದೆ. ಈ ರೀತಿಯಲ್ಲಿ ಒಂದು ನೆಲದ ಕೃಷಿ ಬದುಕಿನ ಜವಾಬ್ದಾರಿ, ಸಾಂಸ್ಕೃತಿಕ ಸಂಪತ್ತು, ಧಾರ್ಮಿಕ ಮೂಲ ಇವೆಲ್ಲವೂ ಇವರಿಂದಲೇ ಎಂದಾಗ, ಮೊಗೇರ ಅರಸರ ಬಗೆಗೆ ಕೇಳಿ ಬರುವ ವಿಚಾರಗಳಲ್ಲಿ ಹಲವು ಸತ್ಯಾಂಶಗಳು, ಇನ್ನೂ ಅರಿವಿಗೆ ಬಾರದ ಸಂಗತಿಗಳು ಅನ್ವೇಷಣೆಯನ್ನು ನಿರೀಕ್ಷಿಸುತ್ತವೆ.

ಬಹಳಷ್ಟು ಚಾರಿತ್ರಿಕವಾಗಿ ಗುರುತಿಸಬೇಕಾದ ವ್ಯಕ್ತಿ ವಿವರಗಳು ಈ ಪುಸ್ತಕದಲ್ಲಿ ಇವೆ. ಚರಿತ್ರೆಯನ್ನು ಉಳ್ಳವರು ಮಾತ್ರ ಕಟ್ಟುವುದಲ್ಲ. ಇಲ್ಲಿ ಬಾಳಿ ಬದುಕಿದ ಪ್ರತಿಯೊಬ್ಬರೂ ಮುಖ್ಯವಾಗುತ್ತಾರೆ. ಅದರಲ್ಲೂ ಬಹಳಷ್ಟು ಕಾಡುವುದು ಉಪೇಂದ್ರ ಆಚಾರ್ಯ ಅವರ ಮಾಹಿತಿಯ *ಗುರುವ* ಎಂಬ ವ್ಯಕ್ತಿಯ  ಬಗೆಗಿನ ಘಟನೆ. ಒಬ್ಬ ಮುಗ್ಧ ಮನುಷ್ಯನಿಗೆ ಒದಗಿದ ಸತ್ವ ಪರೀಕ್ಷೆ ಮತ್ತು ಸಂದ ಗೌರವ. ಇದು ಕಾಕತಾಳೀಯ ಎಂದು ನಾವು ಹೇಳಬಹುದು. ಹಾಗೆ ನೋಡಿದರೆ ಎಲ್ಲವೂ ಕಾಕತಾಳೀಯವೇ. ಆದರೆ ಆ ಘಟನೆ ನೀಡುವ ಸಂದೇಶ ಮತ್ತು ನೀತಿಯನ್ನು ನಾವು ತಿರಸ್ಕರಿಸಲು ಖಂಡಿತಾ ಸಾಧ್ಯವಿಲ್ಲ.

*ದೇವರ ಶಾಪ ತಟ್ಟಿ ಕಲ್ಲಾದವರು* ಎನ್ನುವುದು ಕಹಿ ವಾಸ್ತವದ ಅನಾವರಣ. ಒಂದು ಸಮುದಾಯವನ್ನು ಅವರ ಸಹಜ ಹಕ್ಕಿನಿಂದ ವಂಚಿತರನ್ನಾಗಿ ಮಾಡುವುದಕ್ಕೆ ಯಾವ ಮಟ್ಟಕ್ಕೂ ಇಳಿಯಲಾಗುತ್ತದೆ ಎಂಬುದಕ್ಕೆ ದೃಷ್ಟಾಂತವಿದು. ಹೀಗಿರುವ ಘಟನೆಗಳು ಇಂದೂ ನಡೆಯುತ್ತಿವೆ ಎಂದಾಗ ಆಧುನಿಕ ಸುಶಿಕ್ಷಿತ ಸಮಾಜ ತಲೆ ತಗ್ಗಿಸಬೇಕಾಗುತ್ತದೆ. ಹಿಂಧೂ ಧರ್ಮದ ಒಳ ಮರ್ಮ, ಉಧಾತ್ತ ಅಂಶಗಳನ್ನು ಅರಿಯದ ಮಂದಿ ಈ ಮೂಲಕ ಮತಾಂತರದ ಆಕರ್ಷಣೆಗೆ ಹಲವಾರು ಶೋಷಿತ ಸಮುದಾಯಗಳನ್ನು ಪ್ರೇರೇಪಿಸುತ್ತಿದ್ದಾರೆ ಎಂಬುದು ಒಪ್ಪಬೇಕಾದ ಕಹಿ ಸತ್ಯ.

*ಎಕ್ಕಳೆ ಕುಟ್ಟ ಎಲಿಮದರ* ಎಂಬ ಒಂದು ಉದ್ಗಾರ ಇನ್ನೂ ಜನರ ನಡುವೆ ಉಳಿದಿದೆ ಎಂದರೆ ಮದರುವಿಗೆ ಶಿವಲಿಂಗ ದೊರೆತ ಘಟನೆ ಆ ಕಾಲದ ಒಂದು ಪ್ರಮುಖ ಸಂಗತಿಯಾಗಿರಬೇಕು. *ಪಕ್ಕಿ ಪಾರುಂಬೊ ಬೊಗ್ಗ  ಪಿಡಿಕ್ಕು* ಎಂಬುದು ಒಂದು  ನಿಜವಾದ ಘಟನೆಯ ವಿವರ. ಆ ಮಹಾ ಮಾಂತ್ರಿಕ ಶಕ್ತಿ ಹೊಂದಿದ ಕುಂಞಿ ಪಕ್ಕಿ ಬ್ಯಾರಿಯ ಕುರಿತು ಹಲವು ಕಥೆಗಳು ಹಿರಿಯರ ಮಾತಿನ ನಡುವೆ ಪ್ರಸ್ತಾಪಿಸಲ್ಪಡುತ್ತವೆ.  ಇನ್ನು ಮಾಯಿಲರಸು ಎಂಬ ರಾಜ ಇದ್ದನೇ? ಏನಾದ? ಎಂಬ ವಿಚಾರ ಆಗಾಗ ಪ್ರಸ್ತಾಪಕ್ಕೆ ಬರುವುದಲ್ಲದೆ ಅದಕ್ಕೆ ಸಮರ್ಪಕ ನಿರೂಪಣೆ ಇಲ್ಲ. ಆದರೆ ಮಾಯಿಲಂಕೋಟೆಗಳು ಇದ್ದವು. ಈಗಲೂ ಹಲವು ಕಡೆಗಳಲ್ಲಿ ಕಂಡು ಬರುವ ಮಾನವ ನಿರ್ಮಿತ ಗುಹೆಗಳು ಆತನ ಸೈನಿಕರ ತಂಗುದಾಣಗಳು ಎಂದು ಹೇಳುವ ಹಲವಾರು ಹಿರಿಯರು ಇದ್ದಾರೆ. ಕನ್ನಡಿಗ ಅರಸರು ತುಳುನಾಡಿನ ಈ ಭಾಗಕ್ಕೆ ಬರುವ ಮೊದಲು ಮೋಗೆರ  ಅರಸರ ಆಡಳಿತ ಇದ್ದಿರಬೇಕು ಎನ್ನುವುದನ್ನು ದೃಢಪಡಿಸಲು ವಿಸ್ತೃತ ಅಧ್ಯಯನಗಳು ಬೇಕು. ಕಾಸರಗೋಡಿಗೆ ಸಂಬಂಧಪಟ್ಟಂತೆ ಮಲೆಯಾಳೀಕರಣದ ದೊಡ್ಡ ಹೊಡೆತ ಸ್ಥಳ ನಾಮಗಳ ಬದಲಾವಣೆ. ಆ ಮೂಲಕ ಒಂದು ಹೆಸರಿನ ಹಿಂದಿರುವ ಭೌಗೋಳಿಕ ಮತ್ತು ಐತಿಹಾಸಿಕ, ಸಾಂಸ್ಕೃತಿಕ ಮಾಹಿತಿಗಳು ಕೈ ಜಾರಿ ಹೋಗುತ್ತಿದೆ. ನಾವು ಎಚ್ಚೆತ್ತುಕೊಳ್ಳುವ ಅನಿವಾರ್ಯತೆ ಇದೆ. 

ಕೃತಿಯಲ್ಲಿ ಹಲವಾರು ಸ್ಮರಣ ಸಂಚಿಕೆಗಳಿಂದ ಆಯ್ದ, ಈ ವಿಷಯಕ್ಕೆ ಸಂಬಂಧಿಸಿದ ಗಣ್ಯರ ಲೇಖನಗಳಿವೆ. ಇವು ಪೂರಕ ಮಾಹಿತಿಗಳಾಗಿ ನಿಲ್ಲುತ್ತವೆ. ನಂಬಿಕೆ ಆರಾಧನೆಯ ನೆಲೆಯಲ್ಲಿ ಪ್ರಸಿದ್ಧವಾದ ಒಂದು ದೇವಕ್ಷೇತ್ರದ ಇತಿಹಾಸದ ಜೊತೆ ಮಾತೆಯೊಬ್ಬಳ ಹೆಸರು ಮೊದಲಿಂದಲೇ ಜೋಡಿಕೊಂಡಿದೆ ಎಂದಾದರೆ ಆಕೆಯ ಸಂಕಲ್ಪ, ಸಾನಿಧ್ಯ ಅಲ್ಲಿ ಬೇಕು ಎಂಬ  ಸಹಜ ನಿರೀಕ್ಷೆ ಹುಸಿಯಾದಾಗ ಅದನ್ನು ಪ್ರತಿಭಟಿಸುವುದು ನ್ಯಾಯ ಸಮ್ಮತ. ಈ ನಿಟ್ಟಿನಲ್ಲಿ ಇಲ್ಲಿ ಹಲವರ ಅಭಿಪ್ರಾಯ ಮಂಡನೆ ಆಗಿದೆ.

‘ಶತಮಾನದ ಇತಿಹಾಸವಿದೆ, ಶಿಥಿಲವಾದ ವೀರಗಲ್ಲುಗಳಿಗೆ, ಅಕ್ಷರಗಳ ಮಸುಕಾದ ಶಾಸನಗಳಿಗೆ, ನಿರ್ಮಾಣ ಹಂತದಲಿ ಬಲಿಯಾದವರ,ಶತ್ರುಗಳ ಸದೆಬಡಿದು ಹುತಾತ್ಮರಾದವರ ಹೆಸರಿಲ್ಲ ರಾಜಮಹಾರಾಜರ ಪ್ರತಾಪದ ರಮ್ಯ ರೋಚಕ ಕಥೆಯಿದೆ.'

ರಾಧಾಕೃಷ್ಣ ಉಳಿಯತ್ತಡ್ಕ ಅವರದೇ *ಅರ್ಧ ಸತ್ಯದ ಬೆಳಕು* ಕವಿತೆಯ ಸಾಲುಗಳು ಇಲ್ಲಿ ಬಹುವಾಗಿ ಕಾಡುತ್ತವೆ. ಯಾಕೆಂದರೆ *ಡಾ.ರಾಧಾಕೃಷ್ಣ ಬೆಳ್ಳೂರು* ಅವರು ‘ಬೆಂಕಿ ನುಂಗುವ ಹುಡುಗ’ ಕೃತಿ ಸಮೀಕ್ಷೆಯಲ್ಲಿ ಉಳಿಯತ್ತಡ್ಕ ಅವರ ಬಗ್ಗೆ  ‘ತಾನು ಕಂಡ ಬದುಕಿನ ಅನುಭವಗಳನ್ನು ತನಗೆ ಪ್ರಾಮಾಣಿಕವಾಗಿ ಅನ್ನಿಸಿದ್ದನ್ನು ಹಸಿಯಾಗಿ ಬಿಸಿಯಾಗಿ ಶಕ್ತ ಭಾಷೆಯಲ್ಲಿ ಹೇಳಬಲ್ಲವರು’ ಎಂದು ಹೇಳಿದ್ದಾರೆ. ಅವರ ಬರಹ, ಬದುಕು ಹೀಗಿರುವುದಕ್ಕೆ ಈ ಕೃತಿ ಹೀಗಿದೆ.

ಒಟ್ಟಾರೆಯಾಗಿ ಇದೊಂದು ಎಲ್ಲಾ ರೀತಿಯಿಂದಲೂ ಅಮೂಲ್ಯವಾದ ಕೃತಿ. ಒಂದು ವಿಷಯಕ್ಕೆ ಸಂಬಂಧಿಸಿದ ವಿವರವಾದ ಮಾಹಿತಿಯ ಲಭ್ಯತೆ ಒಂದೆಡೆಯಾದರೇ ಈ ಮಾಹಿತಿಗಳು ಇತಿಹಾಸವನ್ನು ತಿರುಚದ ಹಾಗೆ ಕಾವಲು ನಿಲ್ಲುವ ಕೆಲಸ ಯಾವತ್ತೂ ಮಾಡುತ್ತದೆ. ಮಧೂರಿಗೆ ಮಾತ್ರ ಸೀಮಿತವಾಗದೆ ತುಳುನಾಡಿನ ಇತರ ಕ್ಷೇತ್ರಗಳು, ದೈವ ಸಾನಿದ್ಯಗಳ ಹಿಂದಿನ ಇತಿಹಾಸದ ದಾಖಲೀಕರಣಕ್ಕೆ ಮಾದರಿಯಾಗಿ ನಿಲ್ಲಬಲ್ಲ ತಾಕತ್ತಿರುವ ಸಮೃದ್ಧ ಕೃತಿಯಾಗಿ ಮೌಲ್ಯವನ್ನು ಹೆಚ್ಚಿಸಿಕೊಂಡಿದೆ. 

‘ಗಟ್ಟಿ ಧ್ವನಿಯಲ್ಲಿ ದಿಟ್ಟವಾಗಿ ಮಾತನಾಡಬಲ್ಲ ಸಂವೇದನಾಶೀಲ ಕವಿ’ ಎಂದು ಪ್ರೋ .ವೇಣುಗೋಪಾಲ ಕಾಸರಗೋಡು ಅವರಿಂದ ಉಲ್ಲೇಖಿಸಲ್ಪಟ್ಟ ರಾಧಾಕೃಷ್ಣ ಉಳಿಯತ್ತಡ್ಕ ಅವರ ಈ ಯಶಸ್ವೀ ಪ್ರಯತ್ನಕ್ಕೆ ಯುವ ತಲೆಮಾರು ಖಂಡಿತಾ ತಲೆಬಾಗುತ್ತದೆ.

-ರಾಜಶ್ರೀ ಟಿ. ರೈ, ಪೆರ್ಲ