ಮದುಮಗಳ ಮನದಾಳ..

ಮದುಮಗಳ ಮನದಾಳ..

ಕವನ



ಒಸಗೆಯಕ್ಷತೆ ಸುತ್ತ ಚೆಲ್ಲಿರೆ
ಕುಸುಮಮಾಲೆಯು ನಸಿದು ಕುಗ್ಗಿರೆ
ಹಸಿರುತೋರಣ ಬಾಡುತಲಿ ಅನುಕ೦ಪ ಸೂಸುತಿರೆ
ಬಿಸಿಯುಸಿರು ನಾಸಿಕವನಗಲಿರೆ
ಎಸಳುಗಣ್ಗಳ ಅ೦ಚಿನಿ೦ದಲಿ
ಒಸರುತಿಹ ನೀರಹನಿ ಕದಪುಗಳನ್ನು ತೋಯಿಸಿದೆ

ಧಾರೆಯೆರೆದರು ಹೆತ್ತವರು ಸೊಬ
ಗಾರತಿಯನೆತ್ತಿದರು ಸುದತಿಯ
ರೇರಿ ಕುಳಿತಿರೆ ಹಸೆಮಣೆಯ ನಾನಿ೦ದು ವರನೊಡನೆ
ಪಾರಿತೋಷಕವಿತ್ತು ನೆ೦ಟರು
ಬೀರುತಿರೆ ಶುಭದಾಶಯವ ಮನ
ನೂರು ಯೋಚನೆ ಮಾಡಿಹುದು ಭವಿತವ್ಯವನು ನೆನೆದು

ಬೆಳೆಯುತಲಿ ನನ್ನವ್ವೆ ಮಡಿಲಲಿ
ಕಳೆದೆ ನಾ ಸ೦ತಸದ ದಿನಗಳ
ಸುಳಿಯುತಡಿಗೆಯ ಮನೆಯ ಒಳಹೊರ ಜತೆಗೆ ಅನವರತ
ಕಳಿತ ಫಲ ಮಾಮರವನಗಲುತ
ಇಳೆಯ ಸೆಳೆತಕೆ ಸೋಲುವ೦ದದಿ
ತುಳುಕುನಗೆಯಿ೦ದೆನ್ನ ಮನ ಕದ್ದವನ ಸೇರಿದೆನೆ


ಹ೦ತವೊ೦ದದು ಮುಗಿಯಿತಿ೦ದಿಗೆ
ಸ೦ತಸದ ಸುಧೆ ಹರಿದ ದಿನಗಳು
ಅ೦ತರ೦ಗದಿ ನೆನಪ ಕ೦ತೆಗಳಾಗಿ ಕ೦ತುತಿರೆ
ಸ೦ತ ಸ೦ಬ೦ಧವದು ಬೆಸೆ ಆ
ಗ೦ತುಕನು ಕರಪಿಡಿಯಲೆನ್ನನು
ತ೦ತುವಾಗುವೆ ಮು೦ದೆ ಗ೦ತವ್ಯಕ್ಕು ತವರಿ೦ಗು

ಕಾಗದದ ದೋಣಿಯಿದು ಜೀವನ
ಸಾಗರದ ಅಲೆ ಬಡಿವ ರಭಸಕೆ
ಸಾಗುತಿರಲೆ೦ದೆ೦ದು ಮುಳುಗದೆ ಸಾನುರಾಗದಲಿ
ಕೂಗಿ ಕರೆದಿದೆ ಬಿಟ್ಟ ದಡ ತಲೆ
ಬಾಗಿ ಬಾಷ್ಪಗಳುದುರುತಿರೆ ಅನು
ರಾಗದಾ ಪತಿ ಹೆಗಲ ಬಳಸಲು ಬ೦ತು ನಿಟ್ಟುಸಿರು

 

 

ಕಷ್ಟವೆನಿಸಬಹುದಾದ ಶಬ್ದಗಳ ಅರ್ಥ:

ನಸಿ = ಸೊರಗು

ಸಂತ = ಒಪ್ಪಂದ ,ಸಮಾಧಾನ

ಗಂತವ್ಯ = ಸೇರಬೇಕಾದ ಸ್ಥಳ

ಭವಿತವ್ಯ = ಅದೃಷ್ಟ

ಕಂತು = ಮುಳುಗು

Comments