ಮದುಮಲೈ ಟೈಗರ್ ಫಾರೆಸ್ಟ್ ನಲ್ಲಿ ಜೇನು (ಭಾಗ 2)

ಮದುಮಲೈ ಟೈಗರ್ ಫಾರೆಸ್ಟ್ ನಲ್ಲಿ ಜೇನು (ಭಾಗ 2)

ಕುಮುದಾ ಜಿಂಕೆಗಳು, ಆನೆಗಳು ಕಾಡಮ್ಮೆ , ಹುಲಿಗಳೂ ಕಾಣಿಸುತ್ತಾವೆ ಎಂದು ಹೇಳುತ್ತಿದ್ದಳು. ಮೂರ್ನಾಲ್ಕು ಕಿಲೋಮೀಟರ್ ಏನು ಕಾಣಲಿಲ್ಲ.  ಒಂದಷ್ಟು ದೂರದಲ್ಲಿ ಒಂದು ಸಾರಂಗ ಕಾಣಿಸಿತು. ಅದು ಒಂಟಿ ಯಾಗಿದ್ದು ಬಹುಶಃ  ಏಕಾಂಗಿಯಾಗಿದ್ದರಿಂದಲೋ ಏನೋ ಗಾಬರಿಯಾದಂತೆ ಜೋರಾಗಿ ನಡೆದುಕೊಂಡು ಹೋಗುತ್ತಾ ಮರೆ ಆಯಿತು. ಅಬ್ಬಾ..! ನಾನು ನಮ್ಮ ಅಡವಿಗಳಲ್ಲಿ ಯಾವಾಗಲಾದರೂ ಒಮ್ಮೆ ಕಾಡುಹಂದಿಯನ್ನೋ, ನರಿಗಳನ್ನೋ ಕಾಣುತ್ತಿದ್ದ ನನಗೆ ಜಿಂಕೆ ಕಣ್ಣೆದುರಿಗೆ ಬಂದಿದ್ದು ಅದ್ಬುತ ಎಂದು ಭಾವಿಸಿದೆ. ಹಾಗೇ ನಿಧಾನವಾಗಿ ಮತ್ತೊಂದು ಕಿಲೋಮೀಟರ್ ನಷ್ಟು  ಮುಂದೆ ಬಂದರೆ  ಏನಾಶ್ಚರ್ಯ?? ನೂರಾರು ಜಿಂಕೆಗಳು ರಸ್ತೆಯ ಮೇಲೆಲ್ಲಾ ಮಲಗಿವೆ! ಸುಮಾರು ಜಿಂಕೆಗಳು ರಸ್ತೆಯ ಇಕ್ಕೆಲಗಳಲ್ಲಿ DEER WALKING ಮಾಡುತ್ತಿವೆ. ನೂರಾರು ಸಂಖ್ಯೆಯಲ್ಲಿ ಕೆಲವು ದಿನಗಳ ಹಿಂದೆ ಸುರಿದ ಮಳೆಗೆ ಚಿಗುರಿದ್ದ ಹುಲ್ಲನ್ನು ಮುಂಬು (ಸಾಲು) ಹಿಡಿದು ಮೇಯುತ್ತಿದ್ದವು. ಅವುಗಳು ನೂರಾರು ಸಂಖ್ಯೆಯಲ್ಲಿ ಪರಿಸರದಲ್ಲಿ ಸ್ವಚ್ಚಂದವಾಗಿ ಭಯ ರಹಿತವಾಗಿದ್ದುದು ಕಂಡು ಅವುಗಳ ಅಂದ, ಸೊಬಗು ನೋಡಲು ಕಣ್ಣು ಸಾಲದಾದವು. ಈ ಪ್ರಮಾಣದಲ್ಲಿ  ನಮ್ ಏರಿಯಾದಲ್ಲಿ ನಾನು  ಕುರಿಮಂದೆಗಳನ್ನು ನೋಡಿದ್ದೆ. ಆದರೆ ಮೊಟ್ಟಮೊದಲ ಬಾರಿಗೆ ಏಕಕಾಲದಲ್ಲಿ ಇನ್ನೂರು ಮುನ್ನೂರು ಸಂಖ್ಯೆಯಲ್ಲಿ ಜಿಂಕೆಗಳನ್ನು ‌ಓಪನ್ ಫಾರೆಸ್ಟ್ ಲ್ಲಿ ನೋಡಿದ್ದು ಅದೇ ಮೊದಲು. ಮನಸೋ ಇಚ್ಚೆ ಜಿಂಕೆಗಳ ಸೊಬಗನ್ನು ಕಣ್ತುಂಬಿಕೊಂಡೆವು. ಅಂದು ಕಂಡ ಸೊಬಗು ಇಂದಿಗೂ ಮರೆಯಲಾಗದ ಕ್ಷಣ... ನಮ್ ರಸ್ತೆಗಳಲ್ಲಿ ಎಮ್ಮೆಗಳು ಅಡ್ಡ ಬಂದಾಗ ಕೆಲವೊಮ್ಮೆ ಉಜ್ಜಿಕೊಂಡೋ, ಕೈಯಲ್ಲಿ ಉಯ್ಯ.. ಎಂದು ನೂಕಿಯೋ ಮುಂದೆ ಹೋಗುವಂತೆ ಅಂದು ಜಿಂಕೆಗಳನ್ನು ನಾವು ದಾಟಿ ಮುಂದೆ ಬಂದಂತಾಗಿತ್ತು. ನೂರಾರು ಸಂಖ್ಯೆಯ ವಿವಿಧ ವಯೋಮಾನದ ಜಿಂಕೆಗಳ ಹಿಂಡು. ಮುದ್ದು ಮುದ್ದಾದ ಮರಿಗಳು ಜೊತೆಗಿದ್ದವು. ಆಗ ತಾನೆ ಎದ್ದು ಮೈ ಮುರಿಯುತ್ತಿದ್ದ ಜಿಂಕೆಗಳು ದಾರಿಹೋಕರಿಂದ ತಿಂಡಿಯನ್ನು ನೀರೀಕ್ಷೆ ಮಾಡುವಂತಿತ್ತು. ಸಫಾರಿ ಹೋಗಲಿಕ್ಕೆ ಅರಣ್ಯ ಇಲಾಖೆಯ ವಾಹನಗಳು, ಕಛೇರಿ ಮತ್ತು ಪಾರ್ಕಿಂಗ್  ನೋಡಿ ನಾವು ಗಾಡಿ ನಿಲ್ಲಿಸಿ ಸಫಾರಿ ಮಾಡಲು ಎಷ್ಟು ಹಣ ವಿಚಾರಿಸಿಕೊಂಡು ಬಾ ಎಂದು ದೇವರಾಜ, ರುದ್ರೇಶನನ್ನು ಕಳುಹಿಸಿದರೆ ಹಸುವಿನ ಮೈ ಸವರುವ ಹಾಗೆ ಜಿಂಕೆಗಳ ಮೈ ದಡವುತ್ತಾ ಕೋಡುಗಳನ್ನು ಮುಟ್ಟಿ ತಲೆ  ಅಲ್ಲಾಡಿಸುತ್ತಾ ಹೋಗಿ ಕೇಳಿಕೊಂಡು ಬಂದರು. ಶುಲ್ಕ ತಲಾ ಆಗ ಎಂಟುನೂರು ಇದ್ದುದ್ದರಿಂದ  ಎಲ್ಲರಿಗೂ ಅಷ್ಟು ಶುಲ್ಕ ಭರಿಸುವ ಶಕ್ತಿ ಇರಲಿಲ್ಲ. ಆದ್ದರಿಂದ ಉಚಿತವಾಗಿ ಕಾಣುತ್ತಿದ್ದ ಪ್ರಾಣಿಗಳನ್ನೇ  ನೋಡುತ್ತಾ ಮುಂದೆ ಸಾಗಿದೆವು. ಬಹುಶಃ ರಾತ್ರಿಯ ವೇಳೆ ಸಾವಿರಾರು ಜಿಂಕೆಗಳು ಈ ಡಾಂಬರ್ ರಸ್ತೆಯ ಮೇಲೆಯೇ ಮಲಗಿಕೊಳ್ಳುವವು. ಹಾಗೂ ಇಲ್ಲಿ ಮನುಷ್ಯರ ಚಲನವಲನ ಇರುವುದರಿಂದ ಬಹುಶಃ ಹುಲಿ-ಚಿರತೆಗಳ ದಾಳಿಯಿಂದ ತಪ್ಪಿಸಿಕೊಳ್ಳಲು ಈ ಸ್ಥಳ ಆಯ್ಕೆ ಮಾಡಿಕೊಂಡಿರಬಹುದು. ಆ ಉದ್ದೇಶದಿಂದಲೇ  ಈ ರಸ್ತೆಯಲ್ಲಿ ರಾತ್ರಿಯ ವೇಳೆ ವಾಹನ ಸಂಚಾರಕ್ಕೆ ಅನುಮತಿಯನ್ನು ಕೊಟ್ಟಿರುವುದಿಲ್ಲ. ಹಾಗೆ ಮಾಂಸಹಾರಿ ಪ್ರಾಣಿಗಳು ಆಹಾರ ಹುಡುಕುವುದು, ಬೇಟೆಯಾಡುವುದು ರಾತ್ರಿಯೇ..  ಹಾಗೇ  ಪ್ರಾಣಿಗಳನ್ನೇ  ನೋಡುತ್ತಾ ನಿಧಾನವಾಗಿ ಮುಂದೆ ಬರುತ್ತಿರಲು ಕುರುಚಲು ಕಾಡಿನಂತೆ ಇದ್ದ ಮರಗಳ ಎತ್ತರ ಹೆಚ್ಚಾಯಿತು. ಆರಂಭದಲ್ಲಿ ಕಂಡ ಮರಗಳ ಎತ್ತರಕ್ಕೂ ಈಗ ಕಾಣುತ್ತಿರುವುದಕ್ಕೂ ದುಪ್ಪಟ್ಟಾಗಿವೆ  ಅರಣ್ಯನೋಡಲು ದಟ್ಟವಾಗಿಯೇ ಕಾಣುತ್ತಿದೆ. ದಪ್ಪನೆಯ ಕಾಂಡದ ಸಾಗುವಾನಿ(ತೇಗ), ಶ್ರೀಗಂಧ, ಬೀಟೆಯ, ಬಿದಿರು ಮೆಳೆಗಳ ರಾಶಿ. ಕಾಡಿನಬೆಂಕಿ ಎಂದು ಕರೆಯುವ ಮುತ್ತುಗದ ಹೂಗಳು ಕಾನನದ ಅಂದವನ್ನು ಹೆಚ್ಚಿಸಿದ್ದವು. ಹಾಗೇ ನನಗೆ ಹೆಸರು ಗೊತ್ತಿಲ್ಲದ ಅನೇಕ ಜಾತಿಯ ಹಸಿರ ವನರಾಶಿಯ ಸೊಬಗು ಮನಸೆಳೆಯುತ್ತಿತ್ತು. ಅಲ್ಲಲ್ಲಿ ಇದ್ದ ಬಿದಿರು ಅರೆಗಳು ಒಣಗಿದಂತೆಯೂ, ಅರ್ಧಂಬರ್ಧ ಚಿಗುರಿದಂತೆಯೂ ಇತ್ತು. ಎಲ್ಲರೂ ಆ ಕಡೆ ಈ ಕಡೆ ನೋಡುತ್ತಾ ಇರ್ರಿ.. ಪ್ರಾಣಿಗಳು ಕಾಣುತ್ತಿರುತ್ತಾವೆ  ಎಂದು ಸೂಚನೆ ಕೊಡುವಾಗಲೇ ಆನೆಯ ಪೋ.... ಎಂದು ಘೀಳಿಡುವ ಶಬ್ದ ಕಿವಿಗೆ ಅಪ್ಪಳಿಸಿತು.

ಎಲ್ಲರೂ 'ಆನೆ' ಎಂದು ಉದ್ಗಾರ ತೆಗೆದೆವು. ಎಂಟತ್ತು ಸೆಕೆಂಡ್ ನಂತರ ಮತ್ತೊಮ್ಮೆ ಅದೇ ಆನೆಯು ಘೀಳಿಡುವ ಶಬ್ಧ...!! ಕುಮುದಾ  ಇಲ್ಲೆಲ್ಲೋ ಆನೆ  ಕೂಗುತ್ತಿದೆ. ಗ್ಲಾಸ್ ಎತ್ಕೊಳಿ  ಎಂದೆ. ಎಲ್ಲಿದೆ ಎಂದು ಸುತ್ತಮುತ್ತ ನೋಡಿದರೆ ಆನೆಯ ದೇಹ ಮಾತ್ರ ಎಲ್ಲಿಯೂ ಕಾಣುತ್ತಿಲ್ಲ. ಹಾಗೆ ನೋಡುತ್ತ ಇರಲು ಎಡಗಡೆಯ ಹಳ್ಳದಂತಿರುವ ಬಿದಿರುಮೆಳೆಗಳ ಆಚೆ  ನಮ್ಮ ಸಮಾಂತರವಾಗಿ ಕೂಗತ್ತಾ ಹೋಗುತ್ತಿದೆ. ಏಳೆಂಟು ವರ್ಷದ ಪಡ್ಡೆಯಾನೆಯೊಂದು ರಸ್ತೆಯ ಪಕ್ಕದ ಹಳ್ಳದಲ್ಲಿ ಹೆಜ್ಜೆ ಹಾಕುತ್ತಾ ಘೀಳಿಡುತ್ತಾ ದೊಡ್ಡ ಹೆಜ್ಜೆಹಾಕುತ್ತಾ ಹೋಗುತ್ತಿತ್ತು. ಒಂದು ಕ್ಷಣ ಭಯ ಅನಿಸಿತು. ಕಾರನ್ನು ನಿಲ್ಲಿಸಲೋ ಅಥವಾ ವೇಗವಾಗಿ ಹೋಗಲೋ ಗೊಂದಲವಾಯಿತು. ಯಾವುದಕ್ಕೂ Alert ಇರ್ರಿ ಎನ್ನುತಲೇ ಮುಂದೆ ಸಾಗಿದೆವು.

ನಾಟ್ಯ ಮಯೂರಗಳಂತೂ ಅಗಣಿತ ಸಂಖ್ಯೆಯಲ್ಲಿ ಇದ್ದವು. ಹಾಗೆ ಅರಣ್ಯದಲ್ಲಿ  ಮುಂದೆ ಸಾಗುತ್ತಿರುವಾಗ ಮುಂದೆ ಕಂಡಿದ್ದು ರಸ್ತೆಯ ಪಕ್ಕದಲ್ಲಿ ನಿಂತಿರುವ ಗಜರಾಜ, ಬೃಹತ್ ಸಲಗ. ಅಷ್ಟು ದೊಡ್ಡ ಆನೆಯನ್ನು ರಸ್ತೆಯ ಪಕ್ಕದಲ್ಲೇ ಕಂಡ ನನಗೆ ಎದೆಯ ಬಡಿತವೇ ಜೋರಾಯಿತು. ನಿಲ್ಲಿಸೋಣ ಎಂದರೆ ಇತರೆ ಗಾಡಿಗಳು ಮುಂದೆ ಹೋಗಿದ್ದನ್ನು ನೋಡಿ ಅದನ್ನು ನೋಡುತ್ತಾ ಮುಂದೆ ಬಂದೆ.

ನಮ್ಮದೇ ವಾಹನದಲ್ಲಿ ನಿಧಾನಗತಿಯಲ್ಲಿ ಸಫಾರಿ ಮುಂದುವರೆಸಿದೆವು. ಒಂದು ಕೆಸರು ಮೆತ್ತಿಕೊಂಡಿದ್ದ ಗಂಡು ಹಂದಿ ರಸ್ತೆಯ ಒಂದಷ್ಟು ದೂರದಲ್ಲಿ ತನ್ನ ಕೋರೆಹಲ್ಲಿನಿಂದ ನೆಲ ಗೂರಿ ಮಣ್ಣು ತೆಗೆಯುತ್ತಿತ್ತು. ಅದು ನೋಡಿದರೆ ಪೇಟೆಯಲ್ಲಿ ಸಾಕಿರುವ ಜಾಡಾಗಿರುವ ಹಂದಿತರನೇ ಕಾಣಿಸುತ್ತಿತ್ತು. ಅದು ಹಗಲಲ್ಲಿ ಆಹಾರ ಹುಡುಕುತ್ತಿದ್ದುದರಿಂದ ಮತ್ತು ಅಲ್ಲಿ ಕಾಡುಜನಗಳ ಒಂದು ಜನವಸತಿಯೂ ಇದ್ದುದ್ದರಿಂದ ಯಾರೊ ಇವುಗಳನ್ನು ಸಾಕಿರಬೇಕು ಎಂದೆನಿಸಿತು. ನೋಡಿದರೆ ಹಂದಿಗಳು ಮತ್ತು ಜಿಂಕೆಗಳು ಜೊತೆಯಲ್ಲಿಯೇ ಮೇಯುತ್ತಿವೆ.!ನಮ್ಮ ಅಡವಿಯಲ್ಲಿ ಮನುಷ್ಯರನ್ನು ಕಂಡ ತಕ್ಷಣವೇ ಪ್ರಾಣ ಭಯದಿಂದ ಓಡುವ ಪ್ರಾಣಿಗಳು ಹಗಲು ಹೊತ್ತಿನಲ್ಲೂ ಅವುಗಳ ಪಾಡಿಗೆ ಅವು ತಮ್ಮ ಹೊಟ್ಟೆಪಾಡು ನೋಡಿಕೊಳ್ಳುತ್ತಿದ್ದವು.

ನಮ್ಮದು ಬಂಡೀಪುರ ಕಾಡಿನಲ್ಲಿ  ಹುಲಿ ಚಿರತೆಗಳನ್ನು ನೋಡುವುದಾಗಿತ್ತು. ಹುಲಿ ಚಿರತೆಗಳ ತಾಣ ಬೇರೆಕಡೆ ಇರತ್ತೆ ಅದಕ್ಕೇ ಸಫಾರಿ (ಕಾಡಿನ ಒಳಗೆ ಸವಾರಿ) ಹೋಗಬೇಕು. ರಸ್ತೆಯಲ್ಲಿ ವಾಹನಗಳು ಜನರ ಕೂಗಾಟಗಳಿಗೆ  ಅವು ಇತ್ತ ಕಡೆ ಬರಲಿಕ್ಕಿಲ್ಲ. ಅದಕ್ಕೇ ಇಷ್ಟೊಂದು ಜಿಂಕೆಗಳು ರಸ್ತೆಯ ಪಕ್ಕದಲೆಲ್ಲಾ ಓಡಾಡುತ್ತಿರುವುದು. ಎಂದು ಮಾತನಾಡುತ್ತಾ ಬರುತ್ತಿರುವಾಗ ತಮಿಳುನಾಡಿನ ಬಾರ್ಡರ್ ಎದುರಾಯಿತು. ಇಲ್ಲಿಂದಲೇ 'ಮದುಮಲೈ'  ಅರಣ್ಯ ಶುರು. ಬಲಕ್ಕೆ ಹೋದರೆ ಕೇರಳ ಕಾಡು. ಇಲ್ಲಿ ಭೌಗೋಳಿಕವಾಗಿ ಭೂ ಪ್ರದೇಶವನ್ನು ಮಾತ್ರ ರಾಜ್ಯದ ಗಡಿಗಳಾಗಿ ಗುರುತಿಸಿಕೊಂಡಿದ್ದಾರೆ. ಇನ್ನೂ ಕೆಲವೇ ಕಿಲೋಮೀಟರ್ ಮುಂದೆ ಹೋದರೆ ಕೇರಳ ರಾಜ್ಯದ ವೈನಾಡು ಅರಣ್ಯ... ಮೂರು ರಾಜ್ಯಗಳ ಗಡಿ ಹಂಚಿಕೊಂಡ ಬೃಹತ್ ಅರಣ್ಯಪ್ರದೇಶ ಇದು. ಆದರೆ ಇಲ್ಲಿ ಮನುಷ್ಯ ಪ್ರಾಣಿಗಳಿಗೆ ಮಾತ್ರ ಬಾರ್ಡರ್ ಆಗಿ ನಿಜ ವನ್ಯಜೀವಿಗಳಿಗೆ ಯಾವುದೇ BORDER ಇರುವುದಿಲ್ಲ.. ಯಾವ ಪ್ರಾಣಿ ಯಾವ ರಾಜ್ಯದ ಕಾಡಲ್ಲಿ ಬೇಕಾದರೂ ಓಡಾಡಬಹುದು. ಅವುಗಳಿಗೆ ಕಾಡು ಎಲ್ಲಾ ರಾಜ್ಯದ್ದೂ ಒಂದೇ. ಕಾಡಿನ ಪ್ರಾಣಿಗಳು ರಾಷ್ಟ್ರೀಯ ಸಂಪತ್ತು ಆಗಿದ್ದರಿಂದ ಇದು ನಮ್ಮ ಹುಲಿ. ಅದು ನಿಮ್ಮ ಆನೆ ಅಂತ ಜಗಳ ಆಡುವ ಹಾಗೆ ಇಲ್ಲ... ಯಾವ ರಾಜ್ಯದ ಭೂ ಪ್ರದೇಶದಲ್ಲಿ ಯಾವ ಪ್ರಾಣಿ ಇರುತ್ತಾವೋ ಅವು ಆ ರಾಜ್ಯಕ್ಕೆ ಕಾನೂನಾತ್ಮಕವಾಗಿ ಸೇರಿದವು. ಇತ್ತೀಚಿಗೆ ಕೆಲವು ಪ್ರಾಣಿಗಳಿಗೆ ರೇಡಿಯೋ ಕಾಲರ್ ಎಂಬ ತಂತ್ರಜ್ಞಾನದ ಚಿಪ್ ಅಳವಡಿಸಿರುವುದರಿಂದ ಇದು ನಮ್ಮದೇ ಪ್ರಾಣಿ ಎಂದು ಹಕ್ಕು ಪ್ರತಿಪಾದಿಸಬಹುದು. ತಮಿಳುನಾಡಿನ 'ಮುದುಮಲೈ ಟೈಗರ್ ಪಾರೆಸ್ಟ್ ಚೆಕ್ ಪೊಸ್ಟ್ ನಲ್ಲಿ ಯೆಲ್ಲೋ ಬೋರ್ಡಿನ ವಾಹನದವರೆಲ್ಲಾ ಗಾಡಿ ನಿಲ್ಲಿಸಿ ಪರ್ಮಿಟ್ ತೋರಿಸಿ ದಕ್ಷಿಣೆಯ ಹಾಕಿ ಬರುತ್ತಿದ್ದರೆ ವೈಟ್ ಬೋರ್ಡು ವೆಹಿಕಲ್ ಗಳಿಗೆ  ಯಾವುದೇ ನಿರ್ಬಂಧ ಇರಲಿಲ್ಲ. ಆನೆ ಸವಾರಿ ಮಾಡುವವರಿಗೂ ಇಲ್ಲಿ ಅವಕಾಶ ಇತ್ತು.

(ಇನ್ನೂ ಇದೆ)

-ನಾಗೇಂದ್ರ ಬಂಜಗೆರೆ, ಬಳ್ಳಾರಿ

ಸಾಂದರ್ಭಿಕ ಚಿತ್ರ ಕೃಪೆ: ಇಂಟರ್ನೆಟ್ ತಾಣ