ಮದುಮಲೈ ಟೈಗರ್ ಫಾರೆಸ್ಟ್ ನಲ್ಲಿ ಜೇನು (ಭಾಗ 3)

ಮದುಮಲೈ ಟೈಗರ್ ಫಾರೆಸ್ಟ್ ನಲ್ಲಿ ಜೇನು (ಭಾಗ 3)

ಅಲ್ಲಿಂದ ಮುಂದೆ ಸಾಗಿದರೆ ಊಟಿಯ ರೋಡ್ ಕವಲಾಗುವುದು. ಊಟಿಗೆ ಹೋಗಲು ಎರಡು ರಸ್ತೆ. ಒಂದು ರಸ್ತೆ ತೆಪ್ಪಕಾಡುವಿನ ಮೂಲಕ ಕಲ್ಹತ್ತಿ ಘಾಟಿರಸ್ತೆಯ ಮೂಲಕ ಊಟಿ ತಲುಪುವ ರಸ್ತೆ. ಇನ್ನೊಂದು ಸಾಧಾರಣ ಘಾಟಿಯ ಕೇರಳದ ಗುಡ್ಲೂರು ಮೂಲಕ. ಈ ಗುಡ್ಲೂರು ಮಾರ್ಗ ನನಗೆ ಗೊತ್ತಿರಲಿಲ್ಲವಾದರೂ  'ಊಟಿ' ಎಂದು ಬೋರ್ಡು ಮುಖ ಮಾಡಿರುವ ಕಡೆ ಕಾರು ತಿರುಗಿಸಿದೆ. ಎತ್ತರ ಎತ್ತರವಾದ ರಕ್ಷಿತ ತೇಗದ ಮರಗಳಿರುವ ತಮಿಳುನಾಡಿನ 'ಮದುಮಲೈ' ಅರಣ್ಯದ ಒಡಲು. ಇದು ನೂರಾರು ಕಿಲೋಮೀಟರ್ ಅರಣ್ಯದ ಕೇಂದ್ರದಂತಿದೆ. ತಮಿಳುನಾಡಿನ ಅರಣ್ಯ ಇಲಾಖೆ  ಸಫಾರಿ ಟೂರಿಸಂ ಗೆ ಎಲ್ಲಾ  ಅನುಕುಲಕೂಲ ಮಾಡಿಕೊಂಡಿದ್ದಾರೆ. ವಿಶಾಲ ಅರಣ್ಯಪ್ರದೇಶ. ಅಲ್ಲಿ ಹತ್ತಾರು ಜಿಂಕೆಗಳು ರಸ್ತೆಯ ಪಕ್ಕದಲ್ಲಿ  ಹುಲ್ಲು ಮೇಯುವುದನ್ನು ಕಂಡೆವು. ಆದರೆ  ರಸ್ತೆಯ ಮೇಲೆಲ್ಲಾ  ಆನೆಗಳು ಓಡಾಡಿ  ಲದ್ದಿ ಹಾಕಿರುವ ಗುರುತುಗಳು ಹಸಿ ಹಸಿಯಾಗಿಯೇ ಇದ್ದವು. ಅಲ್ಲೆಲ್ಲಾ  ಖಾಸಗಿಯವರು ಮಹಿಂದ್ರಾ ಜೀಪ್ ಇಟ್ಕೊಂಡು ಬಂದ ಪ್ರವಾಸಿಗರ ವಾಹನಕ್ಕೆ ಕೈ ಅಡ್ಡ ಹಾಕುತ್ತಾ 'ಎಲಿಪ್ಯಾಂಟ್ ಸಫಾರಿ ಸಾರ್' ಎಂದು ಕೂಗುತ್ತಿದ್ದರು. ಸಫಾರಿ ಹೋಗುವ ಯೋಚನೆ ಇರಲಿಲ್ಲವಾದರೂ ಮಾಹಿತಿಗಾಗಿ  ಒಂದತ್ರ ನಿಲ್ಲಿಸಿ ಸಫಾರಿಯ ವಿಚಾರಿಸಿದೆ. ಆನೆ ತೋರಿಸುತ್ತೇವೆ ಒಬ್ಬರಿಗೆ ಆರುನೂರು ಎಂದ. ನೋಡಿಕೊಡ್ರಂತೆ  ಬನ್ನಿ ಸಾರ್  ಚೌಕಾಸಿಗೂ ಆಹ್ವಾನವನ್ನು ಕೊಟ್ಟ. ನಾವು ಹೋದಾಗ ಆನೆಗಳು ಕಾಣಲಿಲ್ಲ ಅಂದ್ರೆ?? ಎಂಬ  ನನ್ನ ಪ್ರಶ್ನೆಗೆ "ಆನೆ ನೋಡಿದ ಮೇಲೆನೇ ಕಾಸು ಕೊಡಿ ಸರ್" ಎಂದ ಆ ಸಫಾರಿ ಜೀಪ್ ಸವಾರ.. ಒಂದು ಒಂದುವರೆ ಸಾವಿರಕ್ಕೆ ಸಾರಸಗಟಾಗಿ ಬರುವಂತೆ ಅವನು ಕಂಡನಾದರೂ ರಿಟರ್ನ್ ಆಗುವಾಗ ಬರುತ್ತೀವಿ ಅಂದೆ. 'ಬರುವಾಗ ಈ ರೋಡಲ್ಲಿ ನೀವು ಬರಲ್ಲ ಸಾರ್...' ಎಂದು ಇವರು ಸಫಾರಿ ಸವಾರಿ ಗಿರಾಕಿಗಳಲ್ಲ ಎಂದೆನಿಸಿ ಅವನು ನಮ್ಮ ಹಿಂದೆ ಬರುತ್ತಿದ್ದ ಇತರ ವಾಹನಗಳ ಮೇಲೆ ಅವನ ಕಣ್ಣುಗಳು ಬಿದ್ದವು. 

\ಅದು ಏಕಮುಖ ರಸ್ತೆಯಾದ್ದರಿಂದ ಆ ರಸ್ತೆಯಲ್ಲಿ ವಾಹನಗಳ ಪ್ರಮಾಣ ಕಡಿಮೆಯೇ ಆಗಿತ್ತು. ಅಷ್ಟೊತ್ತಿಗೆ ಎಂಟೂವರೆ ಒಂಭತ್ತು ಸಮಯ ಆದ್ದರಿಂದ ಹೊಟ್ಟೆಯು ಸಮಾಧಾನ ಕೇಳುತ್ತಿತ್ತು. ಅದು ಕೇರಳ ತಮಿಳುನಾಡು ಕರ್ನಾಟಕ ಹೀಗೆ ಮೂರು ರಾಜ್ಯಗಳ ಬಾರ್ಡರ್ ನ ಬಿಂದು ಆಗಿತ್ತು. ಹತ್ತು ಹದಿನೈದು ಕಿಲೋಮೀಟರ್ ಅಂತರದಲ್ಲಿ ಮಾಸಿನಗುಡಿ ಬೆಟ್ಟವೊಂದು ಪರ್ವತ ಬೆಟ್ಟಗಳ ಸಾಲಿನ ಹೆಗ್ಗುರುತಿನಂತೆ ಕಾಣಿಸುತ್ತಿತ್ತು. ಹಸಿರು  ಸಸ್ಯಗಳು, ಬಿಳಿ ಮಂಜು... ಹಿನ್ನೆಲೆಯಲ್ಲಿ ನೀಲಿ ಸಾಗರದಂತ ನೋಟ ಅದು. ರಸ್ತೆಯಲ್ಲಿ ಎದುರಾದ ಅರಣ್ಯದ ತಪ್ಪಲಿನಲ್ಲಿರುವ ಸುತ್ತಲೂ ಆನೆಗಳು ಬಾರದಂತೆ ಎತ್ತರವಾದ ಪೆನ್ಸಿಂಗ್ ಹಾಕಿದ್ದ ಖಾಸಗಿ ಹೋಟೆಲ್/ರೆಸಾರ್ಟ್ ಒಂದು ಕಾಣಿಸಿತು. ಒಳಗೆ  ಹೋಗಿ ಸಿಕ್ಕಿದ್ದೆಲ್ಲವೂ  ತಿಂದು ಸುಮಾರಾಗಿ ಹೊಟ್ಟೆ ತುಂಬಿಸಿದೆವು. ನಮಗೆ ಯಾರಿಗೂ ತಮಿಳು ಬರುತ್ತಿರಲಿಲ್ಲ. ನನಗೆ ನಲ್ಲ ಇರಕ್ಕ, ತೆರಿಯಾದು, ಸಾಪಾಡ್ ಎಂಬ ಮೂರು ಪದ ಬಿಟ್ರೆ ಏನು ಗೊತ್ತಿಲ್ಲ. ಹೊಟೆಲ್ ನವರಿಗೆ ಊಟಿ ಎಷ್ಟು ದೂರ ಇದೆ ಎಂದು ಕೇಳಿದ್ದಕ್ಕೆ ಅರವತ್ತು ಕಿಮಿ ದೂರದಲ್ಲಿದೆ. ಘಾಟಿ ಇದೆಯಾ ಎಂದು ಕೇಳಿದ್ದಕ್ಕೆ , 36 ಶಾರ್ಪ್ ಏರ್ಪಿನ್ ಕರ್ವ್ ಇದ್ದಾವೆ. ಐದು ಕಿಮೀ ಮುಂದೆ ಹೋದರೆ ಘಾಟಿ ರಸ್ತೆ ಶುರು ಎಂದು ಹೇಳಿದರು. ದೂರದಲ್ಲಿ  ಪರ್ವತದಂತೆ ಎತ್ತರದ  ಹಸಿರ ಬೆಟ್ಟದ ಸಾಲು  ಕಾಣುತ್ತಿದೆ. ಮುಳ್ಳುಗಳ ಕೂಡಿದ ಸಾಧಾರಣ ದಟ್ಟವಾದ ಅರಣ್ಯ. ರಸ್ತೆಯಲ್ಲಿ ಹಾದು ಹೋಗುವಾಗ ಬಾರೆ ಗಿಡದಲ್ಲಿ ಒಂದು ಜೇನನ್ನು ನೋಡಿದೆ. ಕಾರು ನಿಧಾನವಾಗಿ ಚಲಿಸುತ್ತಲೇ ಇತ್ತು. 

ಈ ಅರಣ್ಯದ ರಸ್ತೆಯಲ್ಲಿ ಗಾಡಿ ನಿಲ್ಲಿಸುವ ಹಾಗೆ ಇರಲಿಲ್ಲ. ಆನೆಗಳು ವಾಹನಗಳನ್ನು ಹಿಮ್ಮೆಟ್ಟಿಸುವ, ತಳ್ಳುವ ವೀಡಿಯೋ ಚಿತ್ರಗಳನ್ನು ನಾನು ನೋಡಿದ್ದರಿಂದ ಸ್ವಲ್ಪ ಭಯವೂ ಇತ್ತು. ಇಲ್ಲಿಯೂ ಜೇನುಗಳು ನಮ್ಮ ಕಡೆ ಇದ್ದಂತೆಯೇ  ಇದ್ದಾವೆ ಎನಿಸಿತು. ಹಾಗೆ ನೋಡಿದರೆ  ಜೇನು ಕುರುಬರು, ಸೋಲಿಗರು ಈ ಕಾಡೇ  ಇವರ ತವರು. ಇವರ ಬದುಕಿನ ಕಾನನ.. ಸರ್ವರ ಜೀವನದ ಸೆಲೆ, ಭರವಸೆಯ ನಂಬಿಕೆಯೇ ಈ ಕಾಡುಗಳು. ಹಾಗೇ ನೂರು ಮೀಟರ್  ಮುಂದೆ ಸಾಗುತ್ತಾ ರಸ್ತೆಯ ಮೊಗ್ಗುಲಲ್ಲಿ ಆನೆಗಳು ಕಾಣಬಹುದು ಎಂಬ ಅಂದಾಜು ಇತ್ತು. ಮುಂದೆರಡು ಮೂರು ಕಿಲೋಮೀಟರ್ ಹೋದರೆ ಕಡಿದಾದ  ಎತ್ರದ ಬೆಟ್ಟಗಳು ಇರುವುದರಿಂದ ಸಮತಟ್ಟಾದ ಭೂ ಅರಣ್ಯವಾದ್ದರಿಂದ ಖಂಡಿತವಾಗಿ ಆನೆಗಳು ಇರಲೇಬೇಕಾದ ಸ್ಥಳವಾದ್ದರಿಂದ ಆನೆಗಳ ದರ್ಶನ  ಆಗಬಹುದೆಂಬ ನಿರೀಕ್ಷೆಯಿಂದ ನೋಡುತ್ತಾ ಹೋದಂತೆ  ನನಗೆ ಕಾಣಿಸಿದ್ದು ಬಟಾಬಯಲಿನಲ್ಲಿ  ಎಲೆಗಳೆಲ್ಲಾ ಉದುರಿಹೋದ  ಯಾವುದೋ ಬಳ್ಳಿಗೆ ಕಟ್ಟಿದ ಜೇನುಗೂಡು..! ಜೇನು ತೆಗೆಯಲು ಅಷ್ಟು ಶ್ರಮ ಪಡಬೇಕಾಗಿರಲಿಲ್ಲ. ಜೇನು ತೆಗೆಯಲು ಯಾವುದೇ ಅಡೆ ತಡೆಗಳು ಇಲ್ಲದೇ ಇತ್ತು. ಅಡೆ ತಡೆ ಇದ್ದದ್ದು ಆ ಕಾಡಿನಲ್ಲಿರುವ ಆನೆಗಳು ಇತರ ಪ್ರಾಣಿಗಳು  ಮಾತ್ರ. ಅದನ್ನು ಬಿಟ್ಟರೆ ನಾವು ಹೋಗುತ್ತಿದ್ದುದು ಊಟಿಗೆ... ಸಹಜವಾಗಿ ನಮಗೂ ಹೆಂಡತಿಯೊಂದಿಗೆ ಒಳ್ಳೆಯ ಪೋಟೋ ತೆಗೆದುಕೊಳ್ಳುವ ಆಸೆ ಇದ್ದೇ ಇತ್ತು. ಜೇನು ತೆಗೆಯುವಾಗ ಆಕಸ್ಮಿಕವಾಗಿ  ಜೇನು ಹುಳುಗಳು ಮುಖದ ಯಾವ ಭಾಗಕ್ಕೆ ಕಚ್ಚಿದರೂ ಅಂದವಾಗಿ ಪೋಟೋ ತೆಗೆಸಿಕೊಳ್ಳಬೇಕೆಂಬ ಆಸೆಗೆ ತಣ್ಣೀರೆರೆಚ ಬೇಕಿತ್ತು... ಅದಲ್ಲದೇ ಹನುಮಂತನ ಮೂತಿಯನ್ನು ಇಟ್ಟುಕೊಂಡು ಪೋಟೋ ತೆಗೆಸಿಕೊಂಡು ಹಾಸ್ಯಾಸ್ಪದ ಆಗುವುದು ಬೇಡವಾಗಿತ್ತು. ಆದರೆ ಬಯಲಲ್ಲಿ ಕಂಡ ಅದೂ ನಮ್ಮದಲ್ಲದ ಬೇರೆ ವಾಯುಗುಣ, ಪರಿಸರದಲ್ಲಿ ಕಟ್ಟಿದ ಜೇನು ಅಲ್ಲಿನ ಪರಿಸರದ ಹೂಗಳಿಂದ ಜೇನು ಮತ್ತು ಮಕರಂದದ ಮೇಣ ವಿಶೇಷ ಅನಿಸುವುದು. 

ಅದು ಆ ಪರಿಸರದಲ್ಲಿ ಹೆಚ್ಚು ಇರುವ ಹೂಗಳಂತೆ ಪ್ಲೇವರ್ ಬರುತ್ತಿರುತ್ತದೆ. ವಿಶೇಷವಾಗಿರುತ್ತೆ. ಇದರಿಂದ ಔಷದೀಯ ಗುಣಗಳು ಹೆಚ್ಚಿರುತ್ತೆ. ಅದಕ್ಕಾಗಿ 'ವೈದ್ಯಕ್ಕೆ ಜೇನು' ಎಂಬ ವಿಷಯಕ್ಕೆ ಬಂದಾಗ ಜೇನು ಕೃಷಿಯ ಪೆಟ್ಟಿಗೆಗಳನ್ನು ಆ  ಪ್ರತ್ಯೇಕ ಹೂಗಳ ಸಮೀಪದಲ್ಲಿ ಇಟ್ಟು ಅದರಿಂದ ತುಪ್ಪ ಮತ್ತು ಮೇಣ ಸಂಗ್ರಹಿಸುತ್ತಾರೆ. ಅದು ವಿಶಿಷ್ಟ, ಅತ್ಯಂತ ಸ್ವಾದಿಷ್ಟ ವಾಗಿದ್ದು  ವಿಶೇಷ  ಆಯ್ದ ಕಾಯಿಲೆಗಳಿಗೆ ಔಷಧೀಯವಾಗಿ ಬಳಸುತ್ತಾರೆ. ಇಂತಹ ಜೇನು ತುಪ್ಪ ಬಹಳ ದುಬಾರಿ ಆಗಿರುತ್ತದೆ. ಇದೆಲ್ಲದರ ಅರಿವಿದ್ದ ನನಗೆ ಸಹಜವಾಗಿ ವಿಭಿನ್ನ ಪರಿಸರದಲ್ಲಿ ಕಂಡ ಜೇನು ಬಿಟ್ಟೋಗಲು ಮನಸಾಗಲಿಲ್ಲ.. ಕಾರು ನಿಲ್ಲಿಸಿ ಕೆಳಗಿಳಿದು ವಾಟರ್ ಬಾಟಲ್ ಹಿಡಿದು ನೀರು ಕುಡಿಯುತ್ತಾ ಸಮೀಪದಲ್ಲಿಯೇ ಆನೆಗಳು ಘೀಳಿಡುವ, ಇತರ ಪ್ರಾಣಿಗಳ ಕೂಗಾಟದ ಶಬ್ಧ ಏನಾದರೂ ಕೇಳುತ್ತಿದೆಯಾ ಎಂದು  ಪರಿಸ್ಥಿತಿ ಅವಲೋಕಿಸಿದೆ. ನವಿಲು ಮತ್ತು ಕೆಲವು ಸಣ್ಣ  ಸಣ್ಣ ಹತ್ತಾರು ಪಕ್ಷಿಗಳ ಕಲವರವ ಬಿಟ್ಟರೆ  ರಸ್ತೆಯಲ್ಲಿ ಬರುತ್ತಿದ್ದ ವಾಹನಗಳ ಶಬ್ಧ ಹೊರತು ಬೇರೇನು ಕೇಳುತ್ತಿರಲಿಲ್ಲ. ದೇವರಾಜನನ್ನು ಮಾತ್ರ ಕೆಳಗಿಳಿಸಿ ಕಾರಿನ ignition On ಲ್ಲೇ ಇಟ್ಟು ಆಚೆ ಈಚೆ ಯಾವ ವಾಹನಗಳು ಬಾರದೇ ಇರುವ ಗ್ಯಾಪ್ ನೋಡಿ ಕೆಲವೇ ಸೆಂಕೆಂಡ್ ಗಳಲ್ಲಿ ಆ ಜೇನಿನ ಕೊನೆಯನ್ನು ಅಲ್ಲಾಡಿಸಿ ಹುಳುಗಳ ಎಬ್ಬಿಸಿದೆ.  ಹಸಿ ಕಡ್ಡಿಗೆ ಇಟ್ಟಿದ್ದರಿಂದ ಅದನ್ನು ಸುರಕ್ಷಿತವಾಗಿ ಮುರಿಯುವುದು  ಕೊಂಚ ಸಮಯ ತೆಗೆದುಕೊಂಡಿತು. ಜೇನು ಕಟ್ಟಿದ ಬಳ್ಳಿ ಒಂಥರಾ ರಬ್ಬರ್ ನಂತಹ ಬಳ್ಳಿ... ರಬ್ಬರ್ ನಂತೆ ಯಾವಕಡೆ  ಬಗ್ಗಿಸಿದರೂ ಸ್ವಲ್ಪವೂ ಮುರಿಯದೇ ಬಗ್ಗುತ್ತಿತ್ತು... ಅಲ್ಯೂಮಿನಿಯಂ ರೀತಿ ಹತ್ತಾರು ಸಲ ಬಗ್ಗಿಸಿದಾಗಲೂ ಮುರಿಯಲಿಲ್ಲ.. ಆಗ ಕೊಂಚ ಒಳ ಹೋಗಿ ಆ ಬಳ್ಳಿ ಕವಲೊಡೆದ ಜಾಗದಿಂದ ಎಳೆದು ಜಗ್ಗಬೇಕಾಯಿತು.

ಕಾರಲ್ಲಿ ಎಲ್ಲಾ ರೀತಿಯ Tools ಇದ್ದವಾದರೂ 'ಮಾನವ ಅತಿಕ್ರಮಣ ನಿಷೇಧಿಸಿದ ರಕ್ಷಿತಾರಣ್ಯ'ದಲ್ಲಿ tools ತೆಗೆದುಕೊಳ್ಳಲಿಲ್ಲ. ಯಾರಾದರೂ ಅರಣ್ಯ ಇಲಾಖೆಯ ಗಾರ್ಡ್ಸ್ ನೋಡಬಹುದು ಎಂದು ಬಲ ಹಾಕಿ ಬಳ್ಳಿ ಸಮೇತ ಎಳೆದು ಕಿತ್ತು ತಂದೆ.. ದೇವರಾಜ ಮಾತ್ರ ಪ್ರವಾಸಿಗರ ಕಾರುಗಳು ಹಾದು ಹೋಗುವಾಗ ನೀರು ಕುಡಿಯುವಂತೆ ವಾಟರ್ ಬಾಟಲ್ ಹಿಡಿದು ಪೋಸ್ ಕೊಡುತ್ತಲೇ ಇದ್ದ. ತುಪ್ಪ ಇರುವ ತಲೆಯ ಭಾಗವನ್ನು ಮಾತ್ರ ತೆಗೆದುಕೊಂಡು ಮರಿ ಇರುವ ರೊಟ್ಟಿಯನ್ನು ಕಿತ್ತು ಜೇನು ಮುರಿದ ಕೊನೆಗೆ ಅಡ್ಡಲಾಗಿ ಸಿಕ್ಕಿಸಿದೆ. ತುಪ್ಪದ ಕಡ್ಡಿ ಇರುವ ಬಳ್ಳಿಯನ್ನು ಯಾವ ಕಾಲದಲ್ಲೋ ಮುರಿದು ಬಿದ್ದ ಮುಳ್ಳತಂತಿ ಕಂಬದ ಏಣಿಗೆ ಉಜ್ಜಿ ಕತ್ತರಿಸಿ ಹಿಡಿದು  ತಂದ ನಾನು ಕುಮುದಾಳ ಕೈಗಿಟ್ಟು ಕಾರ್ ಸ್ಟೀರಿಂಗ್ ಹಿಡಿದು ಕಾರು ಮುಂದೆ ಚಲಾಯಿಸುತ್ತಾ ಬಂದೆ... ಅವತ್ತು ಊಟಿಯ ನಿಸರ್ಗಧಾಮದಲ್ಲಿ ಒಳ್ಳೆಯ  ಒಳ್ಳೆಯ ಪೋಟೋಗಳನ್ನು ತೆಗೆಸಿಕೊಳ್ಳಲು ಜೇನುಹುಳಗಳಿಂದ ಯಾವುದೇ ತೊಂದರೆ ಆಗಲಿಲ್ಲ. ಅರ್ಥಾತ್ ಒಂದು ಹುಳುವೂ  ಕಚ್ಚಲಿಲ್ಲ. ಪಯಣ ಸಾಗುತ್ತಲೇ ಇತ್ತು. ಕುಮುದಾ ಒಂದು use and through ಪ್ಲೇಟ್ ಲ್ಲಿ ಜೇನು ಹಾಕಿಕೊಂಡು ಎಲ್ಲರಿಗೂ ಹಂಚಿದಳು. ನಾನು ಕೈಯಲ್ಲಿ ತೆಗೆದುಕೊಂಡರೆ ಸ್ಟೀರಿಂಗ್ ಎಲ್ಲಾ ತುಪ್ಪ ಆಗುವುದು. ಇಲ್ಲ... ಕಾರು ನಿಲ್ಲಿಸಬೇಕಾದ್ದರಿಂದ ಕುಮುದಾಳೇ ತುಪ್ಪ ಬಾಯಿಗಿಟ್ಟಳು. ನನಗೆ ತುಪ್ಪಕ್ಕಿಂತ  ಹೂವಿನ ಮಕರಂದದ ಸಂಗ್ರಹವಾದ ಮೇಣ  ಬಹಳ ಇಷ್ಟ ಆಗುತ್ತಿತ್ತು. ಈ ಮೇಣ ಅಲ್ಲಿನ ಪರಿಸರದ ಎಲ್ಲಾ ಹೂಗಳ ಸಾರ. ನುಣ್ಣನೆಯ ನಾನಾ ಹೂಗಳ ಮಕರಂದ...!! ಅದು ನಮ್ಮ ಭಾಗದ ಮೇಣಕ್ಕಿಂತ ವಿಭಿನ್ನ ಮತ್ತು  ಸುವಾಸಿತ ಪ್ಲೇವರ್ ನೊಂದಿಗೆ ಅದ್ಭುತ ರುಚಿಯಾಗಿತ್ತು. ನಾನು ಸಾವಿರಾರು ಜೇನುಗಳ ಮೇಣ ತಿಂದಿರುವೆನಾದರೂ ಆಯಾ ಪರಿಸರದಿಂದ ಪರಿಸರಕ್ಕೆ ವಿಭಿನ್ನ ಪ್ಲೇವರ್ ನಿಂದ ಕೂಡಿರುತ್ತದೆ. ಇಂತಹ ಆಯ್ದ ಹೂವುಗಳ ಮೇಣವೇ ಇಂದು ಒಂದು ತೊಲಕ್ಕೆ (ಹತ್ತು ಗ್ರಾಂ) ಹತ್ತರಿಂದ ಇಪ್ಪತ್ತೈದು ಸಾವಿರ ಬೆಲೆಯಿದೆ. ನೀಲಗಿರಿ ಬೆಟ್ಟದ ಸಾಲಿನ ಪಾದಗಳಂಚಿಗೆ ಧಾವಿಸಿದ ನಾವು ಇನ್ನೂ ಘಾಟಿಯ ಆರಂಭ ಆಗಬೇಕಿತ್ತು. 

ಆದರೆ ಆನೆಗಳ ಲದ್ದಿಯಂತೂ ರಸ್ತೆಯ ತುಂಬೆಲ್ಲಾ ತುಂಬಿ ವಾಹನಗಳಿಂದ ರಚ್ಚುಗೊಚ್ಚಾಗಿ ಹೋಗಿತ್ತು. ನಮ್ಮ ಭಾಗದಲ್ಲಿ ದನಗಳನ್ನೋ, ಕುರಿಗಳನ್ನೊ  ಮೇಯಿಸಲು ಹೊರಡಿಸಿದಾಗ ಹಟ್ಟಿಯ ಭಾಗಿಲಲ್ಲಿ, ದಾರಿಯೆಲ್ಲೆಲ್ಲಾ ಪಿಚ್ಗೆ, ಸಗಣಿ ತೊಪ್ಪೆ ಹಾಕಿದಂತೆ ಆನೆಗಳು ರಸ್ತೆಯ ತುಂಬೆಲ್ಲಾ  ಲದ್ದಿಯ ಹಾಕಿದ್ದವು. ಆ ಲದ್ದಿಯ ನೋಡಿಯೇ  ಹಠತ್ತಾಗಿ ಆನೆಗಳು ಕಾರಿನತ್ತ ನುಗ್ಗಿ ಬಂದರೇ??? ಎಂಬ ದಿಗಿಲು ಒಂದೆಡೆ ಆದರೆ ರಾತ್ರಿ ಹೊತ್ತು ಈ ರಸ್ತೆಯಲ್ಲೇ ಆನೆಗಳು ನಡೆದಾಡುತ್ತಾ ಹೋಗಿರುತ್ತಾವೆ.  ಎತ್ತರದ ಏರುದಿಬ್ಬಗಳ Hairpin curve ಗಳಲ್ಲಿ  ಮೇಲಕ್ಕೆ ಹತ್ತಲಾಗದೇ ವಾಪಾಸು ಬಂದಿರಬಹುದು. ಬರುವಾಗ ರಸ್ತೆಯ ಅಕ್ಕಪಕ್ಕ ಎಲೆ ಸೊಪ್ಪು ತಿಂದು ರಸ್ತೆಯಲೆಲ್ಲಾ ಈ ತೆರನಾಗಿ ಅವಾಂತರ ಮಾಡಿರಬೇಕು ಎಂದು ನಮಗೆ ನಾವೇ ಮಾತಾಡುತ್ತಾ ಐದ-ಆರನೇ ತಿರುವಿನಲ್ಲಿ ಕಾರು ನಿಲ್ಲಿಸಿ ಎಲ್ಲರೂ ಜೇನು ತಿಂದು ಕೈ ತೊಳೆದುಕೊಂಡೆವು. ರುದ್ರ ನನಗೆ ಘಾಟಿ ರಸ್ತೆಯಲ್ಲಿ vomit ಬರತ್ತೆ ಎಂದು ಕಡ್ಡಿಯನ್ನು ಹಿಡಿದು ಚೀಪುತ್ತಲೇ ಇದ್ದ... ಅನೇಕ ತಿರುವುಗಳನ್ನು ತಿರುಗಿದ ಮೇಲೆ ಎಲ್ಲರ ಕಿವಿ ಮುಚ್ಚಿಕೊಂಡಂತಾದವು.. ಸಮುದ್ರ ಮಟ್ಟಕ್ಕಿಂತ ಹೆಚ್ಚು ಮೇಲಕ್ಕೆ ಹೊದಂತೆಲ್ಲಾ ವಾತಾವರಣವೇ ಬದಲಾಗಿ ಹೋಯಿತು. ತೆಪ್ಪಕಾಡುವಿನ ಜೇನನ್ನು ಕದ್ದುತಿಂದು 'ಕಲ್ಲಹತ್ತಿ' ಘಾಟ ನ್ನು ತೆಪ್ಪಗೆ ಹತ್ತುತ್ತಾ.. ಸುತ್ತಮುತ್ತಲಿನ ನಿಸರ್ಗ ಸೌಂದರ್ಯ ಸವಿಯುತ್ತಾ ನೀಲಗಿರಿ ಸಾಲಿನ ರಮ್ಯತಾಣ, ನಿಸರ್ಗಧಾಮ ಊಟಿಗೆ ಹೋದೆವು.

(ಮುಗಿಯಿತು)

-ನಾಗೇಂದ್ರ ಬಂಜಗೆರೆ, ಬಳ್ಳಾರಿ

ಸಾಂದರ್ಭಿಕ ಚಿತ್ರ ಕೃಪೆ: ಇಂಟರ್ನೆಟ್ ತಾಣ