ಮದುವೆ:ಅಂತರ್ಜಾಲ ಕವರೇಜ್
ಮದುವೆ:ಅಂತರ್ಜಾಲ ಕವರೇಜ್
ಬ್ರಿಟಿಷ್ ರಾಜಕುಟುಂಬದ ವಿವಾಹ ಸಮಾರಂಭವು ವಾರದ ಹೈಲೈಟ್ ಆಗಿತ್ತು.ಅಂತರ್ಜಾಲದ ಮೂಲಕವೂ ಮದುವೆಯ ಕ್ಷಣ-ಕ್ಷಣ ವಿವರಗಳು ಲಭ್ಯವಾಗಿದ್ದುವು.ಟ್ವಿಟರ್,ಫೇಸ್‌ಬುಕ್,ಯುಟ್ಯೂಬ್ ಮತ್ತು ಸಿ ಎನ್ ಎನ್ ಮೂಲಕ ಮದುವೆಯ ಬಗೆಗಿನ ತಾಜಾ ವರದಿಗಳು ಮತ್ತು ವಿಡಿಯೋಗಳು ಲಭ್ಯವಾದರೆ,ಮದುವೆಯ ಚಿತ್ರಗಳು ಫ್ಲಿಕರ್ ತಾಣದಲ್ಲಿ ಜನರಿಗೆ ಲಭ್ಯವಾದುವು.ಸಿ ಎನ್ ಎನ್ ಟಿವಿ ಮಾಧ್ಯಮದಲ್ಲಿ ಲೈವ್ ಕವರೇಜ್ ನೀಡಿದರೆ,ಯುಟ್ಯೂಬಿನಲ್ಲಿ ಅಂತರ್ಜಾಲ ಬಲಕೆದಾರರಿಗೆ ಮದುವೆಯ ವಿಡಿಯೋ ಕ್ಲಿಪ್ಪಿಂಗ್‌ಗಳು ನೇರ ಪ್ರಸಾರವಾದುವು.ಇದಕ್ಕಾಗಿ ಪ್ರತ್ಯೇಕ ಚಾನೆಲ್ ,http://www.youtube.com/user/TheRoyalChannel ಯುಟ್ಯೂಬಿನಲ್ಲಿ ಸೃಷ್ಟಿಯಾಯಿತು.ಮೈಕ್ರೋಬ್ಲಾಗಿಂಗ್ ತಾಣ ಟ್ವಿಟರಿನಲ್ಲಿ ವಿವಾಹಸಂಬಂಧೀ ಸುದ್ದಿ,ತುಣುಕುಗಳು @clarencehouseನಲ್ಲಿ ಕಾಣಿಸಿಕೊಂಡವು.ಇನ್ನು ಫೇಸ್‍ಬುಕ್ ಸಾಮಾಜಿಕ ಜಾಲತಾಣದಲ್ಲೂ ಪ್ರತ್ಯೇಕ ಪುಟದಲ್ಲಿ ಈ ವಿವಾಹಕ್ಕೆ ಸಂಬಂಧಿಸಿದ ಮಾಹಿತಿ,ಚಿತ್ರಗಳು ಸಿಕ್ಕಿದುವು.ಫ್ಲಿಕರ್ ತಾಣದಲ್ಲಿ ಚಿತ್ರಗಳು http://www.flickr.com/photos/britishmonarchy/ನಲ್ಲಿವೆ.
-------------------------------------------
ಅಮೇಜಾನ್ ಸೇವೆಗೆ ಮೋಡ
ಕ್ಲೌಡ್ ಕಂಪ್ಯೂಟಿಂಗ್ ಸೇವೆಯು ವಾರಕಾಲ ಬಾಧಿತವಾಗಿ,ಇವರ ಸೇವೆಯನ್ನವಲಂಬಿಸಿದ ಅಂತರ್ಜಾಲ ತಾಣಗಳು,ಅಂತರ್ಜಾಲದಲ್ಲಿ ವಾರಕಾಲ ಮರೆಯಾದುವು.ಅಮೇಜಾನ್ ಕಂಪೆನಿಯು ತನ್ನ ಕ್ಲೌಡ್ ಕಂಪ್ಯೂಂಟಿಂಗ್ ಸೇವೆ ಮುಖಾಂತರ ಹಲವು ತಾಣಗಳಿಗೆ ಅಗತ್ಯವಾದ ಸರ್ವರ್,ಸ್ಮರಣಶಕ್ತಿ,ನೆಟ್ವರ್ಕಿಂಗ್ ಮುಂತಾದ ಮೂಲಸೌಕರ್ಯವನ್ನು ಒದಗಿಸುತ್ತಿದೆ.ಸೇವೆಯ ಈ ಲೋಪ,ಯಾವುದೇ ಭದ್ರತಾ ಲೋಪದ ಕಾರಣ ಆಗದೆ,ಅಮೇಜಾನ್ ಕಂಪೆನಿಯು ತನ್ನ ಸೇವೆಯ ನಿರ್ವಹಣೆಯಲ್ಲಿ ಮಾಡಿದ ತಪ್ಪಿನ ಕಾರಣದಿಂದಾಗಿದೆ.ಇದಕ್ಕೆ ಕಂಪೆನಿಯು ತನ್ನ ಬಳಕೆದಾರರರಲ್ಲಿ ಕ್ಷಮೆ ಯಾಚಿಸಿ,ಎಲ್ಲರ ಸೇವಾವಧಿಯನ್ನು ಒಂದುವಾರ ಕಾಲ ವಿಸ್ತರಿಸುವ ಕೊಡುಗೆ ನೀಡಿದೆ.ಬಾಧಿತವಾದ ತಾಣಗಳಲ್ಲಿ ಫೋರ್‌ಸ್ಕ್ವೇರ್,ರೆಡ್ಡಿಟ್ ಮುಂತಾದುವುಗಳೂ ಇದ್ದುವು.
--------------------------------------------------------------
ಸ್ಪಾರ್ಕ್ ಪ್ಲಗ್:ವಿದಾಯ?
ಲೇಸರ್ ಕಿರಣಗಳ ಮೂಲಕ ಇಂಜಿನ್ ಒಳಗೆ ದಹನಕ್ರಿಯೆಯನ್ನು ಶುರು ಮಾಡುವುದು ಸಾಧ್ಯವೆಂದು ಸಿದ್ಧವಾಗಿದೆ.ಹೀಗಾಗಿ,ಸ್ಪಾರ್ಕ್ ಪ್ಲಗ್ ಮೇಲೆ ಅವಲಂಬನೆಗೆ ವಿದಾಯ ಹೇಳಲು ಭೂಮಿಕೆ ಸಿದ್ಧವಾಗಿದೆ.ಎರಡು ಅಥವಾ ಮುರು ಲೇಸರ್ ಕಿರಣಗಳನ್ನು ಕೇಂದ್ರೀಕರಿಸಿ,ಪೆಟ್ರೋಲ್-ಗಾಳಿ ಮಿಶ್ರಣ ದಹನವನ್ನು ಆರಂಭಿಸಲು ಸಾಧ್ಯವೆಂದು ಸಂಶೋಧಕರ ತಂಡವು ನಿರೂಪಿಸಿದೆ.ಸ್ಪಾರ್ಕ್ ಪ್ಲಗ್‌ಗಳು ಇಲೆಕ್ಟ್ರೋಡುಗಳ ನಡುವೆ ಉಂಟಾಗುವ ಅತ್ಯಂತ ಹೆಚ್ಚು ವಿಭವಾಂತರದ ಕಾರಣ ಮೂಡುವ ಕಿಡಿಯ ಕಾರಣ ಉಂಟಾಗುವುದರಿಂದ,ದಹನಕ್ರಿಯೆಯ ಆರಂಭ ಹೆಚ್ಚು ದಕ್ಷತೆಯಿಂದಾಗದು.ಹೀಗಾಗಿ ದಹನವು ಉಂಟು ಮಾಡುವ ಮಾಲಿನ್ಯವೂ ಹೆಚ್ಚು.ಕಿರಿದಾದ ಲೇಸರ್ ಕಿರಣಗಳು ಹೆಚ್ಚು ಶಾಖವನ್ನುಂಟು ಮಾಡಿ,ದಕ್ಷತೆ ಹೆಚ್ಚಿಸುವುದಲ್ಲದೆ,ದಹನವಾಗದೆ ಉಳಿಯುವ ಅನಿಲಗಳ ಪ್ರಮಾಣವನ್ನು ಕಡಿಮೆ ಮಾಡುತ್ತದೆ.ಇಂತಹ ವ್ಯವಸ್ಥೆಯನ್ನು ಬಳಸುವಾಗ,ಸ್ಪಾರ್ಕ್ ಪ್ಲಗ್‌ನ ಇಲೆಕ್ಟ್ರೋಡುಗಳು ಆವಿಯಾಗಿ ಸ್ಪಾರ್ಕ್ ಪ್ಲಗ್ಗನ್ನು ಆಗಾಗ ಬದಲಿಸಬೇಕಾದ ಪ್ರಮೇಯವೂ ಇರದು.
------------------------------------------
ಬಿಳಿ ಐಫೋನ್ ಮಾರಾಟಕ್ಕೆ
ಐಫೋನ್‌ನ ಬಿಳಿ ಬಣ್ಣದ ಮಾದರಿ ತನ್ನ ತಾಂತ್ರಿಕ ಸಮಸ್ಯೆಗಳನ್ನು ಸರಿ ಪಡಿಸಿಕೊಂಡು ಮಾರಾಟಕ್ಕೆ ಸಿದ್ಧವಾಗಿದೆ.ಹಿಂದಿನ ಮಾದರಿಯ ಜತೆಗೇ ಬಿಳಿ ಐಫೋನ್ ಮಾರಾಟಕ್ಕೆ ಲಭ್ಯವಾಗ ಬೇಕಿತ್ತು.ಆದರೆ ಬಿಳಿ ಐಫೋನ್‌ನಲ್ಲಿ ಕಂಡು ಬಂದ ತಾಂತ್ರಿಕ ಸಮಸ್ಯೆಯನ್ನು ಬಗೆಹರಿಸಲು ಆಪಲ್ ಕಂಪೆನಿಯ ಇಂಜಿನಿಯರುಗಳಿಗೆ ಸಮಯ ಹಿಡಿಯಿತು.ಫೋನಿನ ಕ್ಯಾಮರಾವು ಪೋಟೋ ಹಿಡಿಯುವಾಗ,ಬಿಳಿ ಬಣ್ಣದ ಮೇಲ್ಮೈಯ ಕಾರಣ ಹೆಚ್ಚು ಬೆಳಕನ್ನು ಪ್ರತಿಫಲಿಸಿ,ಕ್ಯಾಮರಾ ಸೆನ್ಸರನ್ನು ದಾರಿ ತಪ್ಪಿಸುವ ಕಾರಣ,ಕ್ಯಾಮರಾದ ಸೆಟಿಂಗ್‌ಗಳು ತಪ್ಪಾಗುತ್ತಿತ್ತು.ಕ್ಯಾಮರಾದಲ್ಲಿ ಮೂಡುವ ಚಿತ್ರಗಳು ಅಸ್ಪಷ್ಟವಾಗುತ್ತಿದ್ದುವು.ತಡವಾದ ಕಾರಣ,ಬಿಳಿ ಐಫೋನಿಗೆ ಹೆಚ್ಚಿನ ಬೇಡಿಕೆಯೂ ಬರುವುದು ನಿಶ್ಚಿತ.ಮೊದಲೇ ಆಪಲ್ ಕಂಪೆನಿಯು ತನ್ನ ಉತ್ಪನ್ನಗಳನ್ನು ದುಬಾರಿ ಬೆಲೆಗೆ ಒದಗಿಸುತ್ತಿದೆ,ಜತೆಗೆ ಜನ ಮುಗಿ ಬಿದ್ದು ಖರೀದಿಸುತ್ತಾರೆ.ಪರಿಣಾಮವಾಗಿ ಆಪಲ್ ದಿನೆ ದಿನೇ ಹೆಚ್ಚಿನ ಲಾಭ ಗಳಿಸುತ್ತಿದೆ.ಲಾಭದ ಪ್ರಮಾಣದಲ್ಲಿ ಆಪಲ್ ಕಂಪೆನಿಯು ಮೈಕ್ರೋಸಾಫ್ಟನ್ನೂ ಹಿಂದೆ ಹಾಕಿದೆ.
------------------------
ಸ್ಯಾಮ್‌ಸಂಗ್ ಕಂಪೆನಿಯ ನೆಟ್‌ಬುಕ್:ಕ್ರೋಮ್ ಆಪರೇಟಿಂಗ್ ವ್ಯವಸ್ಥೆ
ಅಲೆಕ್ಸ್ ಎನ್ನುವ ಸ್ಯಾಮ್‌ಸಂಗ್ ನೆಟ್‌ಬುಕ್‌ನಲ್ಲಿ ಗೂಗಲ್ ಕ್ರೋಮ್ ಆಪರೇಟಿಂಗ್ ವ್ಯವಸ್ಥೆಯನ್ನು ಬಳಸುವ ಸೂಚನೆಯಿದೆ.ಗೂಗಲ್ ಆಪರೇಟಿಂಗ್ ವ್ಯವಸ್ಥೆ ಬಳಸುವ ಪ್ರಥಮ ಸಾಧನ ಇದಾಗಲಿದೆಯೆಂಬ ವದಂತಿಗಳು ಕೇಳಿಸುತ್ತಿವೆ.ಗೂಗಲ್‌ನ ಆಪರೇಟಿಂಗ್ ವ್ಯವಸ್ಥೆಯು ನೆಟ್‌ಬುಕ್‌ನಂತಹ ಅಂತರ್ಜಾಲ ಜಾಲಾಡುವ ಸಾಧನಗಳಿಗೋಸ್ಕರವೆ ವಿಶೇಷವಾಗಿ ತಯಾರಾಗುತ್ತಿರುವ ವ್ಯವಸ್ಥೆಯಾಗಿದೆ.ಇದರಲ್ಲಿ ಹೆಚ್ಚು ಅಪ್ಲಿಕೇಶನ್‌ಗಳನ್ನು ಅನುಸ್ಥಾಪಿಸದೆ,ಬ್ರೌಸರನ್ನೆ ಪ್ರಧಾನವಾಗಿ ಒದಗಿಸಲಾಗುತ್ತದೆ.ಕೌಡ್‌ಕಂಪ್ಯೂಂಟಿಂಗ್ ಮೂಲಕವೇ ತಂತ್ರಾಂಶಗಳನ್ನೂ ಪಡೆಯುವ ಯೋಜನೆಗೋಸ್ಕರ ಇಂತಹ ಸಾಧನಗಳನ್ನು ಸಿದ್ಧ ಪಡಿಸಲಾಗಿದೆ.
------------------------------------------------------------
ತುಷಾರ:ವಾರ್ಷಿಕ ಚಂದಾ ಗೆಲ್ಲಿ!
ಈ ಪ್ರಶ್ನೆಗೆ ಸರಿಯುತ್ತರ ಕಳುಹಿಸಿ,ತುಷಾರ ಮಾಸಿಕದ ವಾರ್ಷಿಕ ಚಂದಾ ಗೆಲ್ಲಿ! ಬಹುಮಾನ ಪ್ರಾಯೋಜಿಸಿದವರು ಮಾಳದ ಡಾ.ನಿರಂಜನ್ ಚಿಪ್ಳೂಣ್‌ಕರ್,ಉಪಪ್ರಾಂಶುಪಾಲ,ಎನ್ ಎಮ್ ಎ ಎಂ ತಾಂತ್ರಿಕ ಮಹಾವಿದ್ಯಾಲಯ,ನಿಟ್ಟೆ.
(ಉತ್ತರಗಳನ್ನು nistantusansaara@gmail.comಗೆ ಮಿಂಚಂಚೆ ಮಾಡಿ ವಿಷಯ:NS29 ನಮೂದಿಸಿ.)
*ಹೊಸ ಉಬುಂಟು ಬಳಸಿದವರು,ಅದರ ಬಳಕೆ ಹೇಗನಿಸಿತು ಎಂದು ಸಂಕ್ಷಿಪ್ತವಾಗಿ ಬರೆಯಿರಿ.
ಕಳೆದ ವಾರದ ಸರಿಯುತ್ತರಗಳು:
*CAD ಎಂದರೆ Computer Aided Design- ಕಂಪ್ಯೂಟರ್ ಆಧಾರಿತ ವಿನ್ಯಾಸ.
*ಮೆಕಾನಿಕಲ್ ವಿಭಾಗವಲ್ಲದೆ ಕಂಪ್ಯೂಟರ್ ಚಿಪ್ ತಯಾರಿಕೆಯಲ್ಲೂ CAD ಚಿಪ್ ವಿನ್ಯಾಸ ಕಾರ್ಯಕ್ಕೆ ಬಳಕೆಯಾಗುತ್ತದೆ. ಬಹುಮಾನ ಗೆದ್ದವರು ವಿಕಾಸ್ ಹೆಗ್ಡೆ,ಬೆಂಗಳೂರು. ಅಭಿನಂದನೆಗಳು.
-------------------------------------------------------
ಓದುಗರ ಪತ್ರ
ಓದುಗ ಪ್ರದೀಪ್ ಶೆಟ್ಟಿ ರಸಪ್ರಶ್ನೆಗೆ ತಾವು ಕಳುಹಿಸಿದ ಉತ್ತರವೂ ಸರಿಯಿದ್ದರೂ,ತಮಗೇಕೆ ಬಹುಮಾನ ಕೊಟ್ಟಿಲ್ಲ ಎಂದು ವಿಚಾರಿಸಿದ್ದಾರೆ.ಪ್ರತಿವಾರ ಓರ್ವ ವಿಜೇತನಾಗುವ ಕಾರಣ,ಮೊದಲ ಸರಿಯುತ್ತರಕ್ಕೆ ಬಹುಮಾನ ನೀಡಬೇಕಾಗುತ್ತದೆ.ಹಾಗಾಗಿ ಉಳಿದವರಲ್ಲಿ ಹಲವರ ಉತ್ತರ ಸರಿಯಿದ್ದರೂ ಬಹುಮಾನ ಸಿಗದು.ಹಲವರು ಉತ್ತರ ಕಳುಹಿಸಿದರೆ,ಲಾಟರಿ ಮೂಲಕ ವಿಜೇತರನ್ನು ಆಯ್ಕೆ ಮಾಡಬೇಕೆಂಬ ಪ್ರದೀಪ್ ಶೆಟ್ಟಿಯವರ ಸಲಹೆಯಂತೆ ವಿಜೇತರನ್ನು ಆಯಲಾಗುವುದು.ಇಷ್ಟರವರೆಗೆ ವಿಜೇತರಾದವರಿಗೆ ಬಹುಮಾನಗಳನ್ನು ಕಳುಹಿಸಲಾಗಿದೆ.
*ಅಶೋಕ್‌ಕುಮಾರ್ ಎ