ಮದುವೆಗೆ, ಏನ್ ಅಡಿಗೆ ಮಾಡಿಸೋಣ?
{ಕಳೆದ ಏಪ್ರಿಲ್ ೩೦ರಂದು, ನಮ್ಮ ರಿಚ್ಮಂಡ್ ಕನ್ನಡ ಸಂಘದ ಉಗಾದಿ ಹಬ್ಬದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಈ ನಾಟಕವನ್ನು ಆಡಲಾಯಿತು. ಓದಿ ನಿಮ್ಮ ಅಭಿಪ್ರಾಯ ತಿಳಿಸಿ}
{ಅಡಿಗೆಯವರನ್ನು ಹುಡುಕಿಕೊಂಡು ಒಬ್ಬಾತ ಬರುತ್ತಾರೆ}
ಆತ: ಸ್ವಾಮಿ ... ಸ್ವಾಮೀ ... ಭಟ್ರೇ ... ಇದ್ದೀರೋ ಮನೇಲೀ?
{ಭಟ್ಟರು, ಮಾಡ್ರನ್ನಾಗಿ, ಜೀನ್ಸ್ ಪ್ಯಾಂಟು ಟೀ ಶರಟು ಹಾಕಿಕೊಂಡು ಹೊರ ಬರುತ್ತಾರೆ}
ಭಟ್ಟರು: ಯಾರು! ಏನಾಗಬೇಕಿತ್ತು? ಯಾರು ಬೇಕಿತ್ತು?
ಆತ: {ಅನುಮಾನದಿಂದ ಅವರನ್ನು ಮೇಲಿಂದ ಕೆಳಗೆ ನೋಡಿ} ಭಟ್ಟರ ಜೊತೆ ಮಾತಾಡೋದಿತ್ತು ... ಸ್ವಲ್ಪ ನಿಮ್ಮ ತಂದೆಯವರನ್ನು ಕರಿಯಪ್ಪ!
ಭಟ್ಟರು: (ಎರಡೂ ಕೈ ಮುಗಿದು ನಂತರ ಮೇಲೆ ತೋರಿಸುತ್ತ) ಮೇಲೆ ಹೋದೋವರನ್ನ ಎಲ್ಲಿಂದ ಕರೀಲಿ ಸ್ವಾಮೀ? ... ನಿಮಗೆ ಅಡುಗೆ ಭಟ್ಟರು ತಾನೇ ಬೇಕು? ವಿಷಯ ಹೇಳಿ ... ನಾನೇ ಅಡಿಗೆ ಭಟ್ಟ ... ಬೋರ್ಡ್ ಹಾಕಿದ್ದೀನಲ್ಲ ... ಆ 'A.D.BHATTA' ನಾನೇ!
ಆತ: (ಪ್ರಶ್ನಾರ್ಥಕವಾಗಿ) ಅಲ್ಲಾ, ವಯಸ್ಸಿನಲ್ಲಿ ಚಿಕ್ಕವರ ಹಾಗೆ ಕಾಣ್ತೀರ .... ’ಸನ್ಸ್’ ಅಂತ ಬೇರೆ ಇದೆಯಲ್ಲ ಹೆಸರಿನಲ್ಲಿ ?
ಭಟ್ಟರು: (ಆರಾಮವಾಗಿ) ಮದುವೆ ಆದ ಮೇಲೆ ಆಗುತ್ತೆ ಬಿಡಿ ... ನಿಮಗೆ ಆ ಯೋಚನೆ ಬೇಡ. ಮಕ್ಕಳು ಮರಿ ಆಗಿ, business expand ಆದಾಗ ಹೆಸರು ಬದಲಿಸೋ ತಾಪತ್ರಯ ಇರೋಲ್ಲ ನೋಡಿ, ಅದಕ್ಕೆ ಹೀಗೆ. (ಅನುಮಾನಾಸ್ಪದವಾಗಿ) ಅದಿರ್ಲಿ, .... ನೀವೇನು ಅಡಿಗೆ ಕೆಲಸಕ್ಕೆ ಕರೆಯೋಕ್ಕೆ ಬಂದ್ರೋ ಅಥವಾ ನನ್ನ ತನಿಖೆಗೆ ಬಂದ್ರೋ ? ನೀವೇನು ಐ.ಟಿ’ಯವರಾ?
ಆತ: (ತಪ್ಪಾದವರಂತೆ) ಅಯ್ಯಯ್ಯೋ ... ತಾವು ಬೇಜಾರು ಮಾಡ್ಕೋಬೇಡಿ ... ನಾನು ಖಂಡಿತ I.T ’ಯವನು ಅಲ್ಲ ... ನನಗೆ ಈ ಕಂಪ್ಯೂಟರ್ ವಿಷಯ ಅರ್ಥವಾಗಲ್ಲ
ಭಟ್ಟರು: ಅಲ್ಲಾ, ಜನ I.T ಅಂದರೆ Information Technology ಅಂತ ಯಾಕೆ ತಿಳ್ಕೋತಾರೆ? ಸ್ವಾಮೀ ... I.T ಅಂದರೆ Information Technology ಅಂತ ಅಲ್ಲಾ ನಾನು ಹೇಳಿದ್ದು ... Income Tax ಅಂತ ನಾನು ಹೇಳಿದ್ದು
ಆತ: ಓ! ಹಂಗಾ ವಿಷಯ ... ನಾನು ಎರಡೂ ಜಾತಿಗೂ ಸೇರಿದವನಲ್ಲ ಬಿಡಿ ... ಅದೂ... ನಿಮ್ಮ ವೇಷಭೂಷಣ, ಜೊತೆಗೆ ಈ ಬೋರ್ಡ್ ಎಲ್ಲ ನೋಡಿ ಸ್ವಲ್ಪ ಅನುಮಾನ ಬಂತು ಅದಕ್ಕೇ ಸ್ವಲ್ಪ ಜಾಸ್ತೀನೇ ವಿಚಾರಿಸಿದೆ ಅನ್ನಿಸುತ್ತೆ... ತಾವು ಬೇಜಾರು ಮಾಡಿಕೊಳ್ಳಬೇಡಿ ...
ಭಟ್ಟರು: (ಇನ್ನೂ irritate ಆದವರಂತೆ) ಅಲ್ಲ್ರೀ ಸ್ವಾಮೀ, ಜೀನ್ಸ್ ಹಾಕಿದ್ರೆ ಅಡಿಗೆ ಮಾಡಲಿಕ್ಕೆ ಬರೋಲ್ಲ ಅಂತಾನಾ? (ಪ್ಯಾಂಟಿನ ಬಟ್ಟೆ ಹಿಡಿದು ತೋರಿಸಿ) ಈ ಜೀನ್ಸ್’ನಲ್ಲಿ ಅಲ್ಲ್ರೀ .. (ದೇಹದುದ್ದಕ್ಕೂ ಕೈ ತೋರಿಸಿಕೊಂಡು) ಈ genes’ನಲ್ಲಿ ಅಡುಗೆ ಕಲೆ ಇದೆ ... ನಿಮ್ಮ ಪ್ರಕಾರ ಕೊಳೆ ಪಂಚೆ ಉಟ್ಟರೇ ಭಟ್ಟರೋ? .... ಹೋಗ್ಲಿ ಬಿಡಿ ನಿಮಗೆ ನಾನ್ಯಾಕೆ ಬೇಜಾರು ಮಾಡಲಿ ... ಒಂದು ನಿಮಿಷ ಇರಿ ... ಈಗ ಬರ್ತೀನಿ ...
{ಎನ್ನುತ್ತ ಒಳಗೆ ಹೋಗುತ್ತಾರೆ}
ಆತ: ಅಯ್ಯೋ ... ಬೇಜಾರು ಮಾಡಿಕೊಂಡು ಒಳಗೇ ಹೊರಟು ಹೋದರಲ್ಲಾ?
{ಪ್ಯಾಂಟ್ ಮೇಲೆ ಪಂಚೆ ಉಟ್ಟು ಬರ್ತಾರೆ}
ಭಟ್ಟರು: (ವ್ಯಂಗ್ಯವಾಗಿ) ಈಗ ಸಂತೋಷಾನಾ? ಈ ಗೆಟ್ ಅಪ್ ತಾನೇ ನಿಮಗೆ ಬೇಕಾದ್ದು? ಈಗ್ಲಾದರೂ ಅಡುಗೆ ಮಾತು ಕತೆ ಶುರು ಮಾಡೋಣವೇ?
ಆತ: ಖಂಡಿತ ... ಆಗಬಹುದು ಆಗಬಹುದು
ಭಟ್ಟರು: ಮೊದಲೂ, ಮದುವೆ ದಿನದ ಸಿಹಿ ಏನು ಅನ್ನೋದ್ರಿಂದ ಶುರು ಮಾಡೋಣ.
{ಭಟ್ಟರು, ಮೊದಲು ಸ್ವಾಭಾವಿಕವಾಗೇ ಕಾಲನ್ನೆತ್ತಿ ಪಂಚೆ ಮೇಲೆ ತೆಗೆದುಕೊಂಡು ಕಟ್ಟುತ್ತಾರೆ. ನಂತರ ಮೇಜಿನ ಮೇಲಿನ ಪುಸ್ತಕ, ಪೆನ್ ತೆಗೆದುಕೊಳ್ಳುತ್ತಾರೆ. ಮೇಲೆ ಟೀ ಶರ್ಟ್, ನಂತರ ಮಂಡಿವರೆಗೂ ಪಂಚೆ ಆಮೇಲೆ ಜೀನ್ಸ್ ಕಂಡು ಮುಖ ಕಿವಿಚುತ್ತಾರೆ ಬಂದಾತ}
ಭಟ್ಟರು: (ಆತನತ್ತ ತಲೆ ಎತ್ತಿ ನೋಡಿ) ಯಾಕೆ ಸ್ವಾಮೀ? ಏನಾಯ್ತು?
ಆತ: (ಭಟ್ಟರನ್ನು ಕೆಟ್ಟದಾಗಿ ನೋಡುತ್ತ) ಇದೇನ್ರೀ, ನಿಮ್ಮ ಅವತಾರ?
ಭಟ್ಟರು: (ಪುಸ್ತಕ, ಪೆನ್ ಮೇಜಿನ ಮೇಲಿಟ್ಟು, ಎರಡೂ ಕೈಗಳನ್ನು ಸೊಂಟದ ಮೇಲಿಟ್ಟುಕೊಂಡು) ಥತ್! ಅಲ್ಲ್ರೀ, ನಿಮ್ದೊಳ್ಳೇ ಕಥೆ ಆಯ್ತಲ್ಲ? ರ್ರೀ, ಸ್ವಾಮಿ, ನನ್ನ ಪಂಚೆ, ಪ್ಯಾಂಟ್ ವಿಷಯ ಅತ್ಲಾಗೆ ಬಿಡ್ರೀ ... ಒಂದು ನಿಮಿಷ ಇರಿ .. ಇದು ನನ್ನ ಮನೆ. ನನಗೆ ಹೇಗೆ ಬೇಕೋ ಹಾಗೆ ಇರ್ತೀನಿ ... {ಎನ್ನುತ್ತ ಒಳಗೆ ಹೋಗುತ್ತಾರೆ}
ಆತ: ಇದೊಳ್ಳೇ ಕಥೆ ಆಯ್ತಲ್ಲ? ಮತ್ತೆ ಮತ್ತೆ ಒಳಗೆ ಹೋಗ್ತಾರಲ್ಲಾ ಈ ಭಟ್ಟರು?
{ಪಂಚೆ ಕಳಚಿ ಜೀನ್ಸ್-ಟ್-ಶರ್ಟ್’ಧಾರಿಯಾಗಿ ಪುನ: ವಾಪಸ್}
ಭಟ್ಟರು: (ಎರಡೂ ಕೈಗಳನ್ನು ಗಾಳಿಗೆ ತೂರಿಕೊಂಡು) ಈಗ ಆರಾಮ ನೋಡಿ ... ಅಡುಗೆ ಮಾತೇನು, ಬೇಕಿದ್ರೆ ಅಡುಗೇನೇ ಮಾಡಿ ಹಾಕಿಬಿಡ್ತೀನಿ ... ಹೋಗ್ಲೀ ಬಿಸಿಲಲ್ಲಿ ಬಂದಿದೀರಿ ... ಕಾಫೀ ನೆಡೆಯುತ್ತೋ ಅಥವಾ ಪಾನಕ ಮಾಡಲೋ?
ಆತ: (ಬಲಗೈಯಿಂದ ಗಾಳಿ ಬೀಸಿಕೊಳ್ಳುತ್ತ) ಹೌದು ಭಟ್ಟರೆ, ಸಿಕ್ಕಾಪಟ್ಟೆ ಬಿಸಿಲು ... ಪಾನಕ ಆಗಲಿ ... ನಿಂಬೆ ಹಣ್ಣಿನ ಪಾನಕ ದೇಹಕ್ಕೆ ಒಳ್ಳೇದಂತೆ ... ಸೀಡ್ಲೆಸ್ಸ್ ಪಾನಕ ಮಾಡಿ ಭಟ್ರೇ ... ನಿಂಬೆ ಹಣ್ಣಿನ ಬೀಜ ಬಾಯಿಗೆ ಸಿಕ್ಕರೆ ಬಾಯೆಲ್ಲ ಕಹಿ ಆಗಿಬಿಡುತ್ತೆ ... ನನಗೆ ಸರಿ ಹೋಗೋಲ್ಲ ...
ಭಟ್ಟರು: (ಗೊಣಗಿಕೊಂಡೇ) ಏನು Customer ಓ ಏನೋ ... ಅಲ್ಲಾ, ನನ್ನ ಮನೇ ಇವರ ಕಣ್ಣಿಗೆ ಹೋಟಲ್ ತರಹ ಕಾಣುತ್ತೇನೋ? ಇರಲಿ, ಅತಿಥಿ ದೇವೋ ಭವ ...
(ಭಟ್ಟರು ಒಳಗೆ ಹೋಗಿ, ಹೊರಗೆ ಬಂದು ಪಾನಕ ಅಲ್ಲೇ ಒಂದು ಮೇಜಿನ ಮೇಲೆ ಇಡ್ತಾರೆ)
ಆತ: ಓಹೋ! ರೆಡಿ ಮೇಡ್ ಪಾನಕ? (ಲೋಟ ತೆಗೆದುಕೊಂಡು, ಕುಡಿಯುತ್ತ) ಇನ್ನೊಂದು ಸ್ವಲ್ಪ ಸಕ್ಕರೆ ಬಿದ್ದಿದ್ದರೆ ಚೆನ್ನಾಗಿತ್ತು ... ಇರಲಿ ಬಿಡಿ ... ಇದೇ ಸಕ್ಕರೆ ಜಾಸ್ತಿ ಆಗಿಬಿಟ್ರೆ, ಆಮೇಲೆ ಕಾಫಿ ಕಹಿ ಬಂದುಬಿಡುತ್ತೆ ...
ಭಟ್ಟರು: (ಅಚ್ಚರಿಯಿಂದ) ಓಹೋ! ನಿಮಗೆ ಇನ್ನೂ ಕಾಫೀ ಸಮಾರಾಧನೆ ಬೇರೇ ಆಗಬೇಕೋ?
ಆತ: (ಸಮಾಧಾನ ಮಾಡುವಂತೆ) ಛೇ, ಛೇ ... ಈಗೇನೂ ಅರ್ಜಂಟ್ ಇಲ್ಲ .... (ಲೋಟ ಮೇಜಿನ ಮೇಲಿಟ್ಟು, ಕೈ ಗಡಿಯಾರ ತೋರಿಸುತ್ತ) ಒಂದು ಅರ್ಧ ಘಂಟೆ ಬಿಟ್ಟೇ ಮಾಡಿ ... ಕಾಫಿ ಸ್ವಲ್ಪ ಸ್ಟ್ರಾಂಗ್ ಆಗಿ ಇರ್ಲಿ... ಬೇಕಿದ್ರೆ ನೀವೂ ಮಾಡಿಕೊಳ್ಳಿ ... ಹುರಿದ ಗೋಡಂಬೀನೋ ಇಲ್ಲ ಖಾರದ ಅವಲಕ್ಕಿ ಜೊತೆಗೋ, ಇಬ್ಬರೂ ಆಮೇಲೆ ಕುಡಿಯೋಣ ...
ಭಟ್ಟರು: (ತಿಳುವಳಿಕೆ ನೀಡುವಂತೆ) ರ್ರೀ, ಸ್ವಾಮಿ ... ಇಲ್ಲಿ ನಿಮಗೆ ಉಪಚಾರ ಮಾಡ್ತಾ ಇರ್ಲೋ ಅಥವಾ ಅಡಿಗೆ ವಿಷಯ ಡಿಸ್ಕಸ್ ಮಾಡೋಣ್ವಾ?
ಆತ: ಆಗ್ಲಿಂದ ಡಿಸ್ಕಸ್ ಮಾಡೋಣ, ಡಿಸ್ಕಸ್ ಮಾಡೋಣ ಅನ್ನೋದೇ ಆಯ್ತು ... ಶುರು ಹಚ್ಕೊಳ್ಳಿ ಹಾಗಿದ್ರೆ ...
ಭಟ್ಟರು: (ರೇಗಿಕೊಂಡೇ) ಮೊದಲು ಸ್ವೀಟ್ ವಿಷಯಕ್ಕೆ ಬನ್ನಿ ...
ಆತ: ಅಯ್ತು ... ಜಿಲೇಬಿ ಮಾಡಿದರೆ ಹೇಗೇ?
ಭಟ್ಟರು: (ಮುಖ ಕಿವುಚಿಕೊಂಡು) ಅಯ್ಯೋ ! ಬೇಡ ಸ್ವಾಮಿ ... ನನ್ ಮಾತು ಕೇಳಿ ... ಬೇರೆ ಏನಾದ್ರೂ ಮಾಡೋಣ ....
ಆತ (ಗೊಂದಲಕ್ಕೊಳಗಾಗಿ): ಯಾಕೆ? ಮಾಡೋದು ಕಷ್ಟಾನಾ? ಅಥವಾ ನಿಮಗೆ ಮಾಡೊಕೆ ಬರೋಲ್ವಾ?
ಭಟ್ಟರು: ಅಯ್ಯೋ ... ಎರಡೂ ಅಲ್ಲ ಬಿಡಿ ... ಜಿಲೇಬಿ ಸಿಹಿ ಜಾಸ್ತಿ ನೋಡಿ ... ಅದು, ನನಗೆ ಸೇರೋಲ್ಲ
ಆತ: (ಸಿಡುಕಿಕೊಂಡು) ರ್ರೀ ಭಟ್ಟರೇ ! ಇದೇನು ನಿಮ್ಮ ಮನೆ ಮದುವೇನಾ ಅಥವಾ ನಮ್ಮ ಮನೆ ಮದುವೇನಾ?
ಭಟ್ಟರು: (ಸಮಾಧಾನ ಮಾಡುವಂತೆ) ಹೋಗ್ಲಿ ಬಿಡಿ ಜಿಲೇಬಿ, ವರ ಪೂಜೆ ರಾತ್ರಿ ಮಾಡೋಣ ... ನಾನು ಹೇಗಿದ್ರೂ ಒಂದು ಹೊತ್ತು ಮಾತ್ರ ಊಟ ಮಾಡೋದು ...
ಆತ: ನಿಮ್ದೊಳ್ಳೇ ಕಥೆ ಆಯ್ತಲ್ಲ ಭಟ್ಟರೇ?
ಭಟ್ಟರು: ಮದುವೆ ದಿನ ’ಚಿರೋಟಿ’ ಜೊತೆಗೆ ಕೇಸರಿ ಹಾಲು ಹೇಗಿರುತ್ತೆ?
ಆತ: (ತಲೆ ಜೋರಾಗಿ ಅಡ್ಡಡ್ಡ ಆಡಿಸುತ್ತ) ಚಿರೋಟಿ ಬೇಡವೇ ಬೇಡ ... ಅದರ ಬಗ್ಗೆ ಈಗಾಗಲೇ ಸಿಕ್ಕಾಪಟ್ಟೆ discussion ಆಗಿ ಹೋಗಿದೆ
ಭಟ್ಟರು: ಏನಂಥಾ ವಿಷಯಾ ಅಂತೀನಿ?
ಆತ: ಹುಡುಗಿ ಅಪ್ಪನ ಕೊನೇ ಚಿಕ್ಕಪ್ಪ ಇದ್ದಾರಲ್ಲ, ಅವರ ಪಕ್ಕದ ಮನೆಯಲ್ಲಿ ಸುಬ್ಬಣ್ಣ ಅಂತ ಇದ್ದಾರೆ.. ಅವರಿಗೆ ಚಿರೋಟಿ ಸೇರೋಲ್ವಂತೆ. ಅದಕ್ಕೆ ಅವರು ಚಿರೋಟಿ ಮಾಡಿಸಲೇ ಬೇಡಿ ಅಂದಿದ್ದಾರೆ... ಅದಕ್ಕೆ, ಕಾಯಿ ಹೋಳಿಗೆ ಮಾಡಿಸೋಣ.
ಭಟ್ಟರು: ಕಾಯಿ ಹೋಳಿಗೆ .. ಆಯ್ತು ಮಾಡೋಣ ಬಿಡಿ ... ನನಗೂ ಇಷ್ಟ (ಪುಸ್ತಕದಲ್ಲಿ ಬರೆದುಕೊಳ್ಳುತ್ತ) ನಿಮಗೆ ಹೋಳಿಗೆ ಮೇಲೆ, 'ADB' (ತಮ್ಮ ಬೋರ್ಡ್ ಕಡೆ ಕೈ ತೋರಿಸುತ್ತ) ಅಂತ ಒಂದು ಸೀಲ್ ಹಾಕ್ಲೋ ಬೇಡವೋ?
ಆತ: (ವ್ಯಾವಹಾರಿಕವಾಗಿ) ರೇಟ್’ನಲ್ಲಿ ಏನಾದ್ರೂ ವ್ಯತ್ಯಾಸ ಇದೆಯೇನು?
ಭಟ್ಟರು: ಕೊಡೋಣ ಬಿಡಿ. ಒಟ್ಟು ಆರ್ಡರ್ ಮೇಲೆ ೧೦% ಡಿಸ್ಕೌಂಟ್ ಕೊಡ್ತೀನಿ ... ಆಗುತ್ತಲ್ಲ?
ಆತ: (ವ್ಯಾಪಾರ ಗಿಟ್ಟದವರಂತೆ) ಬೇಡ ಬಿಡಿ .. ಆಮೇಲೆ, ಆ ಸೀಲ್ ನೋಡಿ, ಹೋಳಿಗೆ ಹೊರಗಿನಿಂದ ತರಿಸಿದ್ದೀವಿ ಅಂತ ಗಂಡಿನ ಕಡೆಯವರು ಕಿರಿಕ್ ಮಾಡಿದ್ರೆ ಕಷ್ಟ
ಭಟ್ಟರು: (ಪಟ್ಟು ಬಿಡದವರಂತೆ) ಇಂಗ್ಲೀಷ್ ಆಗದೆ ಇದ್ದರೆ, ಅಚ್ಚ ಕನ್ನಡದಲ್ಲಿ ’ಶುಭಾಶಯಗಳು’ ಅಂತ ಸೀಲ್ ಹಾಕಿದರೆ ಹೇಗೇ?
ಆತ: (ರೋಸಿ ಹೋದವರಂತೆ) ರ್ರೀ, ಸ್ವಾಮಿ ... ಸೀಲ್ ಹಾಕದೆ ಇದ್ರೆ ನಿಮಗೆ ನಿಮಗೆ ಹೋಳಿಗೆ ಮಾಡೊಕ್ಕೇ ಬರೋಲ್ವೇನ್ರೀ?
ಭಟ್ಟರು: (ವಾತಾವರಣ ತಿಳಿಯಾಗಿಸುವಂತೆ) ಸರಿ ಬಿಡಿ ಸಾರ್ .. ಹೋಳಿಗೆ ಮೇಲೆ ಹಾಕೋಲ್ಲ ... ಹೇಗಿದ್ರೂ ಬಾಳೆ ಎಲೆ ಮೇಲೆ ಹಾಕೇ ಇರ್ತೀವಲ್ಲ ... ಮತ್ತೇ, ಎಲೆ ಅಂದ ಮೇಲೆ ಈ ವಿಷಯ ಕೇಳೋದಿತ್ತು ನೋಡಿ ... ನಿಮಗೆ ಮಂಗಳೂರು ಬಾಳೆ ಎಲೆ ಬೇಕೋ, ಕೇರಳದ್ದು ಹಾಕಿಸ್ಲೋ? ಕೇರಳ ಬಾಳೆ ಎಲೆ ಅಂದರೆ ಒಂದು ತೂಕ ಇರುತ್ತೆ ... ನನ್ ಮಾತು ಕೇಳಿದ್ರೆ ಕೇರಳ ಎಲೆ ಹಾಕಿಸಿ ...
ಆತ: ಅಲ್ಲಾ ಭಟ್ರೇ, ಎಲೆ ತೂಕ ಜಾಸ್ತಿ ಇದ್ರೆ, ಎಲೆ ಎತ್ತೋರಿಗೆ ಪಾಪ ಕಷ್ಟ ಆಗೋಲ್ವೇ?
ಭಟ್ಟರು: (ತಲೆ ಚಚ್ಚಿಕೊಂಡು) ತೂಕ ಅಂದರೆ ಎಲೆ ತೂಕ ಅಲ್ರೀ ... ಕೇರಳ ಎಲೆ ಅಂದ್ರೆ ಒಂದು ಇದು (ಕೈಯಲ್ಲಿ ಲೆವೆಲ್ ಎನ್ನುವಂತೆ ತೋರುತ್ತ) ... ಅದೇ ಇದು ಇರುತ್ತೆ ಅಂತ
ಆತ: ಅಂದ್ರೇ, ಒಂದು ಲೆವಲ್ ಇರುತ್ತೇ ಅಂತ ನೀವು ಹೇಳೋದು ...
ಭಟ್ಟರು: ಹ್ಹಾ, ಅದೇ ನಾನು ಹೇಳಿದ್ದು ... ಇರ್ಲಿ ಬಿಡಿ, ನಿಮಗೆ ಅರ್ಥವಾಗೋ ಹಾಗೆ ಕಾಣಲಿಲ್ಲ ... ಮದುವೆ ಮನೆಗೆ ಜನ ಬೇಕಿದ್ರೆ ಹೇಳಿ ಸಾರ್ ... ಕರಿಸೋಣ
ಆತ: ಬೇಡ ಬಿಡಿ ಭಟ್ಟರೇ ... ಹೆಣ್ಣಿನ ಕಡೆ ದೊಡ್ಡ ಸಂಸಾರ ... ಬೇಕಾದಷ್ಟು ಜನ ಇದ್ದಾರೆ .... ಕೆಲಸಕ್ಕೆ ...
ಭಟ್ಟರು: (ಕುಹಕವಾಗಿ) ಸ್ವಾಮೀ, ನಾನು ಹೇಳಿದ್ದು ಕೆಲಸಕ್ಕೆ ಜನ ಅಲ್ಲಾ ... (ತಿನ್ನುವಂತೆ ತೋರಿಸುತ್ತ) ಊಟಕ್ಕೆ !
ಆತ: (ಅಚ್ಚರಿಯಿಂದ) ಇದ್ಯಾವ ಹೊಸಾ ಸ್ಕೀಮು? ಊಟಕ್ಕೆ ಜನರನ್ನ ಕರೆಸೋದೂ ...
ಭಟ್ಟರು: ನೋಡೀ, ಇನ್ನೂ ಈ recession effect ಕಡಿಮೆ ಆಗಿಲ್ಲ. ನಮ್ಮ ಕಡೆಯಿಂದ ಒಂದು ರೀತಿ ಸಮಾಜ ಸೇವೆ ಅಂತನೇ ಇಟ್ಕೊಳ್ಳಿ. ಜನಕ್ಕೆ ಒಂದು ಸಹಾಯ ಅಷ್ಟೇ .... ಇದರಲ್ಲಿ ನಿಮಗೇನೂ ಖರ್ಚಿಲ್ಲ. (ಪಕ್ಕಕ್ಕೆ ಬಂದು) ಬರೀ ಊಟದ ಖರ್ಚು ಅಷ್ಟೇ ... ನಮ್ ಕಡೆ ಕೆಲವರು ಸೂಟು ಬೂಟು ಹಾಕಿಕೊಂಡು ಬರ್ತಾರೆ .... ಹೆಣ್ಣಿನ ಕಡೆಯವರು ಅಂತ ವರನಿಗೆ ಪರಿಚಯ ಮಾಡಿಕೊಂಡು ಫ಼ೋಟೋ ತೆಗೆಸಿಕೊಳ್ತಾರೆ ... ಆಮೇಲೆ ಬಂದವರ ಜೊತೆ ನೆಟ್-ವರ್ಕಿಂಗ್ ... ಆ ರೀತಿ ಕೆಲ್ಸ ಸಿಕ್ಕರೆ, ಮೊದಲ ಸಂಬಳ ನನಗೆ (ಹಲ್ಲು ತೋರಿಸಿ ನಗುತ್ತಾರೆ) ... ಅವರಿಗೆ ಕೆಲಸ ಸಿಗೋವರೆಗೂ ಈ ರೀತಿ ಅವರಿಗೆ ಬಿಟ್ಟಿ ಊಟ ಹಾಕಿಸೋ ಜವಾಬ್ದಾರಿ ನಂದು .... (ವಿನೀತ ಭಾವ ತೋರುತ್ತ) ಪರೋಪರಾರ್ಥಮಿದಂ ಶರೀರಂ ಅಂತಾರಲ್ಲ ಹಾಗೆ
ಆತ (ದಂಗು ಬಡಿದವರಂತೆ): ಅಬ್ಬ ! ಕ್ರಿಮಿನಲ್ ಮೈಂಡ್ ಕಣ್ರೀ ಸ್ವಾಮಿ ನಿಮ್ದು... ಒಂದು ರೀತಿ Head Hunters ತರಹ ಬಿಸಿನೆಸ್ಸು ಅನ್ನಿ
ಭಟ್ಟರು: ತಪ್ಪು ತಪ್ಪು .... ಹೊಟ್ಟೆ ಪಾಡು, ಇದರಲ್ಲಿ ಹೆಡ್ ಎಲ್ಲಿಂದ ಬಂತು ... ಹೊಟ್ಟೆ Hunters ಅನ್ನಿ !
ಆತ: (ನಮ್ ಹತ್ತಿರ ಈ ಆಟ ನಡೆಯೋಲ್ಲ ಅನ್ನೋ ರೀತಿ) ಅಲ್ಲ, ಊಟ ನಮ್ಮದು, ಆದರೆ ದುಡ್ಡು ನಿಮಗೆ ... ಅದರ ಜೊತೆ ’ಪರೋಪರಾರ್ಥಮಿದಂ ಶರೀರಂ ’ ಅನ್ನೋ ಸ್ಲೋಗನ್ ಬೇರೆ ... ಏನು ಅನ್ಯಾಯ ಇದು?
ಭಟ್ಟರು: (ಬಿಡದವರಂತೆ) ಮತ್ತೆ ಮತ್ತೆ ತಪ್ಪು ಮಾಡ್ತಿದ್ದೀರ ... ನೀವು ಮೆಟೀರಿಯಲ್ ವ್ಯಾಲ್ಯೂ ನೋಡಬೇಡಿ ಸಾರ್ ... ಹೈ ಲೆವಲ್ ಜನ ಬಂದ್ರು ಮದುವೆಗೆ ಅಂದರೆ ಬೀಗರ ಎದುರಿಗೆ ನಿಮ್ಮ ಲೆವಲ್ ಏರೋದಿಲ್ವಾ? ಅದನ್ನು ಯೋಚನೆ ಮಾಡಿ ... ನಿಮಗೆ ಈ ಐಡಿಯಾ ಸರಿ ಹೋಗದೆ ಇದ್ರೆ, ಇನ್ನೊಂದು ಕೆಲಸ ಮಾಡಬಹುದು ... ಹೇಳಲೇನೂ?
ಆತ: ಇನ್ನೂ ಏನೇನು ಐಡಿಯಾ ಇಟ್ಟಿದ್ದೀರಾ? ಹೇಳಿ ಹೇಳಿ ... ಕೇಳೋಣವಂತೆ
ಭಟ್ಟರು: (ಎಚ್ಚರಿಕೆ ನೀಡುವಂತೆ) ಇದು ಸ್ವಲ್ಪ ಕಾಸ್ಟ್ಲಿ ... ಅರ್ಧ ಘಂಟೆಗೆ ಇಷ್ಟು ಅಂತ ಕೊಟ್ಟರೆ ಸಿನಿಮಾ ನಟನೋ ನಟೀನೋ ಸುಮ್ನೆ ಬಂದು ಹುಡುಗ-ಹುಡುಗಿ ಜೊತೆ ಫ಼ೋಟೋ ತೆಗೆಸಿಕೊಂಡು ಹೋಗ್ತಾರೆ ನೋಡಿ ... ಇದರಲ್ಲಿ ನಿಮಗೆ ಊಟದ ಖರ್ಚೂ ಇಲ್ಲ ... ನಿಮಗೆ ಯಾರು ಬೇಕು ಅಂತ ಹೇಳಿ, ಬುಕ್ ಮಾಡೋ ಜವಾಬ್ದಾರಿ ನಂದು ... (ಮೆಲ್ಲಗೆ) ಬದುಕಿರೋವ್ರ ಹೆಸರು ಮಾತ್ರ ಹೇಳಿ
ಆತ: ಓಹೋ, ರಮ್ಯಾ’ನ್ನ ಕರೆಸ್ತೀರೋ? ... ಅಲ್ಲಾ ’ಇಷ್ಟು’ ಅಂದರೆ ಎಷ್ಟು ಸಾವಿರ ಅಂತ ?
ಭಟ್ಟರು: (ಕೆಟ್ಟದಾಗಿ ನೋಡಿ) ಸಾವಿರ? ರಮ್ಯ ಮನೆ ಕೆಲಸದವಳೂ ಬರೋಲ್ಲ.... ಅಲ್ರೀ, ಈಗಿನ ಕಾಲದಲ್ಲಿ, ಛತ್ರದ ಮುಂದೆ ಭಿಕ್ಷುಕರು ಅಥವಾ ಬಲೂನ್ ಮಾರುವವನು ಬರೋದು ಬೇಡ ಅಂದರೆ ನೀವು ಸಾವಿರ ಖರ್ಚು ಮಾಡಬೇಕಾಗುತ್ತೆ ... ನಾನು ಹೇಳ್ತಿರೋದು ತಾರೆಯರ ವಿಷಯ ... glittering starsಉ .. ಲಕ್ಷದ ಮಾತು ಸ್ವಾಮಿ ಆಡ್ತಿರೋದು ...
ಆತ: (ಹೆದರಿದವರಂತೆ, ಎದೆ ಮೇಲೆ ಕೈ ಇಟ್ಟುಕೊಂಡು) ಲಕ್ಷವೇ? (ಕೈ ಮುಗಿದು) ನಟನೂ ನಟೀನೂ ಬೇಡ ... ಅವರವರ ಮನೆಯಲ್ಲಿ ಅವರು ನೆಮ್ಮದಿಯಾಗಿ ಇರಲಿ ... ಅವರನ್ನು ಕರೆಸಿಕೊಂಡು ನಮ್ ವಲ್ಯೂ ಜಾಸ್ತಿ ಮಾಡಿಕೊಳ್ಳೋ ಆಸೆ ನಮಗೇನೂ ಇಲ್ಲ ...
ಭಟ್ಟರು: ಹೋಗ್ಲೀ, ನಿಮಗೆ ಈ ಐಡಿಯಾನೂ ಸೆರಿ ಹೋಗದೆ ಇದ್ರೆ, ನನ್ನ ಹತ್ತಿರ ಇನ್ನೊಂದು ಐಡಿಯಾ ಇದೆ ... ಕೊಡ್ಲೇನೂ?
ಆತ: ನೋಡೀ, ಅವೆಲ್ಲ ಆ ಕಡೆ ಇಡಿ .... ಮಾತು ಎಲ್ಲೆಲ್ಲೋ ಹೋಗ್ತಿದೆ .... ಈಗ ವರ ಪೂಜೆ ಸಿಹಿ ಆಯ್ತು, ಮದುವೆ ದಿನದ ಸಿಹಿ ಆಯ್ತು ... ಮಿಕ್ಕ ಅಡಿಗೆ ಮಾತು ನೆಡೀಲಿ ಈಗ ...
ಭಟ್ಟರು: ಆಗಬಹುದು ... {ಯಾಕೋ ಈ ಗಿರಾಕಿಯಿಂದ ಏನೂ ಗಿಟ್ತಾಯಿಲ್ಲ ಎಂದು ಗೊಣಗುತ್ತಾರೆ}
ಆತ: ಮೊದಲು ಹಿಂದಿನ ದಿನದ ರಾತ್ರಿ ಊಟದ ಬಗ್ಗೆ ಮಾತಾಡೋಣ ...
ಭಟ್ಟರು: ಆಗಬಹುದು ... ಮುಹೂರ್ತ ಎಷ್ಟು ಹೊತ್ತಿಗೆ?
ಆತ: ಮದುವೆ ಮುಹೂರ್ತ ಬೆಳಿಗ್ಗೆ ಆರೂವರೆಗೆ ಘಂಟೆಗೆ
ಭಟ್ಟರು: ಅಂದ್ರೇ ..... ರಾತ್ರಿ ಮಲಗಿದರೆ, ಬೆಳಿಗ್ಗೆ ನಾಲ್ಕಕ್ಕೆಲ್ಲ ಜನ ಏಳೋಕ್ಕೆ ಶುರು ಅನ್ನಿ ... ಅಷ್ಟು ಹೊತ್ತಿಗೆ ಒಂದು ಕೊಳಗ ಕಾಫೀ ರೆಡಿ ಆಗಬೇಕು ... ಸರಿ ... (ಪುಸ್ತಕದಲ್ಲಿ ಬರೆಯುತ್ತಾರೆ) .. ಮತ್ತೇ, ವರಪೂಜೆಗೆ ಊಟಕ್ಕೆ ಹಾಗಿದ್ರೆ ಗಸ ಗಸೆ ಪಾಯ ಬೇಡ
ಆತ: (ಕುಹಕವಾಗಿ) ಇದೂ ನಿಮಗೆ ಸೇರೋಲ್ಲ ಅಂತಾನಾ ಹೇಗೆ?
ಭಟ್ಟರು: ಅದು ಹಾಗಲ್ಲ, ಒಂದು ಸಾರಿ ಹೀಗೇ ಆಗಿತ್ತು ನೋಡಿ ... ವರಪೂಜೆ ದಿನ ವರ ಊಟ ಮಾಡಿದಾಗ ರಾತ್ರಿ ಹನ್ನೊಂದು ಘಂಟೆ ... ಸೊಗಸಾಗಿದೆ ಪಾಯಸ ಅಂತ ವರ ಮಹಾಶಯ ಎರಡು ತಂಬಿಗೆ ಗಸ ಗಸೆ ಪಾಯಸ ಕುಡಿದುಬಿಡೋದೇ? ... ಬೆಳಿಗ್ಗೆ ಹಸೆ ಮಣೆ ಮೇಲೇ ಕೂತ್ಕೊಂಡೇ ತೂಕಡಿಸುತ್ತಿದ್ದ ಪಾಪ... ಪುರೋಹಿತರು ’ಗಟ್ಟಿ ಮೇಳ, ಗಟ್ಟಿ ಮೇಳ’ ಅಂತ ಕೂಗಿದರೆ, ಇವನೇನು ಕೇಳಿಸಿಕೊಂಡನೋ ಏನೋ, ಧಡಾರ್ ಅಂತ ಎದ್ದು ನಿಂತು ’ಒಂದ್ ನಿಮಿಷ ಬಸ್ ನಿಲ್ಸೀ ನಾನು ಇಳೀ ಬೇಕು’ ಅಂದ .. ನೀರು ತಟ್ಟಿ ಎಬ್ಬಿಸಿ ’ತಾಳಿ ಕಟ್ಟೋ’ ಅಂದರೆ ಅವರತ್ತೆಗೇ ಕಟ್ಟೋಕ್ಕೆ ಹೋಗಿದ್ದ ಪುಣ್ಯಾತ್ಮ ...
ಆತ: ಅಯ್ಯೋ ಶಿವನೇ .... ಒಳ್ಳೇ ಅವಸ್ತೆ ಕಣ್ರೀ ... ಈ ಮದುವೆಗೆ ಗಸ ಗಸೆ completely cancel .
ಭಟ್ಟರು: ಅದೇ ನಾನೂ ಹೇಳಿದ್ದು ....
ಆತ: ಅದಿರ್ಲೀ, ನೀವು ಅಡುಗೆ ಮನೆ ಬಿಟ್ಟು ಹಸೇ ಮಣೆ ಹತ್ತಿರ ಯಾಕಿದ್ರಿ?
ಭಟ್ಟರು: ಶುರು ಮಾಡ್ಕೊಂಡ್ರಲ್ಲ ನಿಮ್ಮ ತನಿಖೆ.... ಆ ವಿಷ್ಯ ಬಿಡಿ. ಅದು ನನ್ ಶಿಷ್ಯನ ಮದುವೆ ಅದು.... ಹಾಗಿದ್ರೆ ಗಸ ಗಸೆ ಪಾಯಸ ಬೇಡ .. ಮಾಮೂಲಿ ಎರಡು ತರಹ ಕೋಸಂಬರಿ, ಪಲ್ಯ, ಶಾವಿಗೆ ಪಾಯಸ, ಅನ್ನ, ತಿಳೀ ಸಾರು, ಹುಳಿ ... ಕೂಟು ಬೇಡ ..
ಆತ: ರಾತ್ರಿ ಊಟ ಲೈಟಾಗಿ ಇದ್ರೆ ಒಳ್ಳೇದು ...
ಭಟ್ಟರು: (ಮಾಮೂಲಾಗಿ) ಸರಿ ಹಾಗಿದ್ರೆ ... ಪಲ್ಯ, ಕೋಸಂಬರಿ, ಸಾರು, ಹುಳಿ, ಜಿಲೇಬಿ, ಅನ್ನ, ವಡೆ, ಪಾಯಸ ... ಸಾಕಲ್ವಾ?
ಆತ: (ತಡಬಡಾಯಿಸಿ) ಥೂ ನಿಮ್ಮ ... ಇದು ಮದುವೆ ಮನೆ ಅಡಿಗೆ ಕಣ್ರೀ ... ಅನ್ನ-ವಡೆ-ಪಾಯಸ ಅಂತೀರ ... ಶಾಂತಂ-ಪಾಪಂ ... ಶಾಂತಂ-ಪಾಪಂ ಬಿಡ್ತು ಅನ್ರೀ
ಭಟ್ಟರು: (ಸಮಜಾಯಿಶಿ ಕೊಡುತ್ತ) ಅಯ್ತು .. ಅಯ್ತು ... ಅದೇನಾಯ್ತೂ ಅಂದರೇ ...
ಆತ: (ಬಿಡದೆ) ಮೊದಲು ಬಿಡ್ತೂ ಅನ್ರೀ ... ಮೊದಲೇ ಎರಡೂ ಕಡೆ ವಯಸ್ಸಾದವರ ದೊಡ್ಡ ಲಿಸ್ಟ್ ಇದೆ
ಭಟ್ಟರು: ಆಯ್ತು ಸ್ವಾಮೀ ... ಬಿಡ್ತು ಬಿಡ್ತು ಬಿಡ್ತು ... ಮೊನ್ನೆ ವಾರ್ಷಿಕದ ಅಡುಗೆಗೆ ಹೋಗಿದ್ದೆ ನೋಡಿ ... ಹಾಗಾಗಿ ಅದೇ ಗಂಟಲಲ್ಲಿ ಕೂತು ಬಿಟ್ಟಿದೆ ...
ಆತ: (ಎದೆಗೆ ಕೈ ಒತ್ತಿಕೊಂಡು) ಸದ್ಯ, ನೀವು ಅಡಿಗೆ ಭಟ್ಟರು ... ಪುರೋಹಿತರಲ್ಲವಲ್ಲ ... ನಮ್ಮ ಪುಣ್ಯ
ಭಟ್ಟರು: ಈಗ, ವರಪೂಜೆಗೆ ಎಷ್ಟು ಜನ ಆಗ್ತಾರೆ?
ಆತ: ಅವರ ಕಡೆ ಒಂದ್ ನಲವತ್ತು, ನಮ್ಮ ಕಡೆ ಒಂದ್ ನಲವತ್ತು ಅಂತ ಅಂದುಕೊಳ್ಳಿ
ಭಟ್ಟರು: ಆಯ್ತು ... ಒಂದ್ ನಲವತ್ತು, ನಲವತ್ತು ಮತ್ತೆ ಇಪ್ಪತ್ತು ... ಒಂದ್ ನೂರು ಎಲೆ ಲೆಕ್ಕ ಅನ್ನಿ
ಆತ: ಕೊನೆಯಲ್ಲಿ ಅದೇನೋ ಇಪ್ಪತ್ತು ಅಂದ್ರಲ್ಲ? ಅದೇನು?
ಭಟ್ಟರು: ನಂ ಕಡೆ ಏಳು ಜನ ಅಡುಗೆಯವರು, ಅವರ ಏಳು ಜನ ಹೇಂಡತೀರು, ಏಳು ಜನ ನಂ ಕೆಲಸ ಮಾಡೊರು ... ಇಪ್ಪತ್ತೊಂದು ಆಯ್ತು ... ಒಂದು ಎಲೆ ನಿಮಗೆ ದಿಸ್ಕೌಂಟು ....
ಆತ: ಆಯ್ತು ... ಈಗ ಮದುವೆ ದಿನ ಬೆಳಿಗ್ಗೆ ತಿಂಡಿ ಎಷ್ಟು ಹೊತ್ತಿಗೆ ರೆಡಿ ಆಗುತ್ತೆ ...
ಭಟ್ಟರು: ಆರು ಘಂಟೆಗೆ ತಿಂಡಿ ಸಿದ್ದ
ಆತ: ಏನು ಮಾಡೋಣ ಅಂತೀರ?
ಭಟ್ಟರು: (ದೊಡ್ಡವರ ಸಾಲಿನತ್ತ ಕೈ ತೋರಿಸುತ್ತ) ದೊಡ್ಡೊರಿಗೆಲ್ಲ ಬೇಗಲ್ಲು .. (ಮಕ್ಕಳ ಕಡೆ ಕೈ ತೋರಿಸುತ್ತ) ಮಕ್ಕಳಿಗೆಲ್ಲ ಸೀರಿಯಲ್ಲು ... ಏನಂತೀರಾ?
ಆತ: (ವ್ಯಂಗ್ಯವಾಗಿ) ಒಂದು ಕೆಲ್ಸ ಮಾಡೋಣ .... ಹಾಗಿದ್ರೆ ಮಧ್ಯಾನ್ನ ಊಟಕ್ಕೆ ಡಾಮಿನೋಸ್ ಪಿಜ್ಜಾ ತರಿಸಿಬಿಡೋಣ ಏನಂತೀರಾ ..... ನಿಮ್ಮ ಅವಶ್ಯಕತೇನೇ ಇರೋಲ್ಲ ... ಅಹಾಹಾ, ಏನು ಭಟ್ಟರು ಕಣ್ರೀ ನೀವು ... ಸಲಹೆ ಕೇಳಿದ್ರೆ, ಇಂಥಾ ಘನಂಧಾರಿ ಸಲಹೇನಾ ಕೊಡೋದು?
ಭಟ್ಟರು: ಸುಮ್ಮನೆ ತಮಾಶೆಗೆ ಅಂದ್ರೆ, ನೀವು ಇಷ್ಟೊಂದು ರೇಗೋದೇ? ಉಪ್ಪಿಟ್ಟು-ಕೇಸರಿಬಾತ್-ಕಾಫಿ ಆಗಬಹುದಲ್ವಾ?
ಆತ: ಮತ್ತೆ ಉಪ್ಪಿಟ್ಟು-ಕೇಸರೀಬಾತ್ ... ಬೇರೆ ಏನಾದ್ರೂ ಮಾಡೋಣವೇ?
ಭಟ್ಟರು: ಹೋಗ್ಲೀ, ಇಡ್ಲಿ-ವಡೆ ಮಾಡಿದ್ರೆ
ಆತ: ಮತ್ತೆ ವಡೆ ಅಂತೀರಲ್ರೀ.... ಶಾಂತಂ-ಪಾಪಂ ಶಾಂತಂ-ಪಾಪಂ .... ಬಿಡ್ತು ಅನ್ರೀ
ಭಟ್ಟರು: ಬಿಡ್ತು ಬಿಡ್ತು ಬಿಡ್ತು .... ಬಿಸ್ ಬಿಸಿ ಇಡ್ಲಿ - ಕಾಯಿ ಚಟ್ನಿ ಮಾಡೋಣ ಬಿಡಿ
ಆತ: ಬೇರೆ ಏನಾದ್ರೂ ಐಡಿಯಾ ಕೊಡ್ರೀ ...
ಭಟ್ಟರು (ರೋಸಿದವರಂತೆ): ಎಲ್ಲರಿಗೂ ರಾಗಿ ರೊಟ್ಟಿ ಮಾಡಿದ್ರೆ ಹೇಗೆ?
ಆತ: ಏನ್ ಮಾತಾಡ್ತೀರಾ ಭಟ್ಟರೇ? ಮದುವೆ ಮನೆಯಲ್ಲಿ ರೊಟ್ಟಿ ತಟ್ತಾ ಕೂತ್ಕೋತೀರಾ?
ಭಟ್ಟರು: ಮತ್ತೆ, ನೀವೇ ತಾನೇ ಹೇಳ್ತಿರೋದು, ಬೇರೆ ಯೋಚನೆ ಮಾಡೀ, ಬೇರೆ ಯೋಚನೆ ಮಾಡೀ ಅಂತ ... ಅದಕ್ಕೇ ಹೇಳ್ದೆ .. ನಾನು ಹೇಳ್ತೀನಿ ಕೇಳಿ ... ಸುಮ್ನೆ, ಇಡ್ಲಿ ಜೊತೆ ಬಿಸಿ ಚಟ್ನಿ ಮಾಡೊಣ
ಆತ: ಬಿಸೀ ಚಟ್ನೀನಾ
ಭಟ್ಟರು: ಅಯ್ಯೋ ... ಬಿಸಿ ಇಡ್ಲಿ - ಚಟ್ನೀ ಸ್ವಾಮೀ ... ಕರ್ಮ ಕಾಂಡ .. ಈಗ ಅಡುಗೆ ವಿಷಯಕ್ಕೆ ಬರೋಣ
ಆತ: ನೋಡಿ ಭಟ್ಟರೆ, ಹನ್ನೊಂದೂವರೆ ಹೊತ್ತಿಗೆ ಊಟ ಸಿದ್ದ ಆಗಿರಬೇಕು ...
ಭಟ್ಟರು: ಆಗಬಹುದು ... ಮಧ್ಯಾನ್ನ ಊಟಕ್ಕೆ ಎಷ್ಟು ಜನ ಆಗಬಹುದು? ನಂ ಕಡೆಯಿಂದ ಮೂವತ್ತೈದು ಜನ ಹಾಕೊಳ್ಳಿ
ಆತ: ಗಂಡಿನ ಕಡೆಯವರಿಗಿಂತ ನಿಂ ಡಿಮ್ಯಾಂಡೆ ಜಾಸ್ತಿ ಇದೆಯಲ್ರೀ .... ತಿಳೀ ಸಾರು, ಹಪ್ಪಳ, ಖಾರ ಬೂಂದಿ, ಇಡ್ಲಿ, ಲಾಡು ...
ಭಟ್ಟರು: ಏನ್ ಸ್ವಾಮೀ ಇದು, ನನಗೆ reverse gearಉ .... ಇಡ್ಲಿ-ಲಾಡು ... ಏನ್ ಕಾಂಬಿನೇಷನ್ನೂ ... ಮದುವೆ ಮನೆ ಅಡಿಗೆ ಹೇಳ್ತಿದ್ದೀರ ಅಥವಾ ???
ಆತ: ಈಗ ನಾನು ಹೇಳಿದ್ದು, ನೀವು ಹೇಳಿದ್ರಲ್ಲಾ ಆ ಮೂವತ್ತೈದು ಜನರಿಗೆ ....
ಭಟ್ಟರು: ಆ?
ಆತ: ಈಗ, ಗಂಡು-ಹೆಣ್ಣಿನ ಕಡೆ ಬರೋ ಮಿಕ್ಕ ಮುನ್ನೂರು ಜನಕ್ಕೆ, ಪಲ್ಯ, ಕೋಸಂಬರಿ, ತಿಳೀ ಸಾರು, ಗಟ್ಟಿ ಕೂಟು, ಹಪ್ಪಳ, ಗಸ ಗಸೆ ಪಾಯಸ, ಆಂಬೋಡೇ, ಬಾದೂಷಾ, ಕೇಸರಿ ಹಾಲು, ಗಟ್ಟಿ ಮೊಸರು ... ಅರ್ಥವಾಯಿತೇ?
ಭಟ್ಟರು: ಆಯ್ತು ಆಯ್ತು ಆಯ್ತು (ಎಲ್ಲ ಬರೆದುಕೊಳ್ಳುತ್ತ, ಜನ ಬರೀ ತಿನ್ನೋಕ್ಕೇ ಬರ್ತಾರೋ ಏನೋ ಅಂತಾರೆ) ಈಗ reception ಅಡುಗೆ ಏನು ಬೇಕು?
ಆತ: ಶುದ್ದ week day ಮದುವೆ ... ನಮ್ ಹುಡುಗೀ ಕಡೆ ಆಫೀಸಿನವರು, ಫ್ರೆಂಡ್ಸೂ ಎಲ್ಲ ಸಂಜೆಗೇ ಜಾಸ್ತಿ ಬರೋದು ... ವರ ಬೇರೆ ದೊಡ್ಡ business manಉ ... ಅವರ ಕಂಪನಿ ಸ್ಟಾಫು, ಫ್ರೆಂಡ್ಸೂ, ಹೀಗೇ ... ಸ್ವಲ್ಪ ಅಡುಗೆ ಮಾಡ್ರನ್ ಆಗಿ ಇರಲಿ
ಭಟ್ಟರು (ಹೇಳಿದ ವಿಷಯ ತೂಗಿ ನೋಡುವಂತೆ): business man ಅಂತೀರಾ ... ವಾರದ ದಿನ ಅಂದ್ರಿ ... ಒಂದು ಇನ್ನೂರು ಜನ ಅಂತ ಲೆಕ್ಕ ಇಟ್ಕೊಳ್ಳೋಣವೇ?
ಆತ: ಹೌದು ಆಗುತ್ತೆ ... ಒಂದ್ ಇನ್ನೊರು ಆಗುತ್ತೆ
ಭಟ್ಟರು: buffet arrange ಮಾಡಿಬಿಡೋನ .... ಬಾಳೇಕಾಯಿ ಚಿಪ್ಸ್, ಬಿಸಿ ಬೇಳೇ ಬಾತ್, ಕಾಶೀ ಹಲ್ವ, ಬೇಕಿದ್ರೆ ಜೊತೆಗೆ ಮೈಸೂರು ಪಾಕ್, ದಾಳಿಂಬೆ-ದ್ರಾಕ್ಷಿ-ಗೋಡಂಬಿ ಹಾಕಿ ಮೊಸರನ್ನ, ಸಾಫ್ಟ್ ಡ್ರಿಂಕ್ಸ್ ಸಾಕಾ?
ಆತ: ಅಬ್ಬಬ್ಬ ... ನನಗೆ ಈಗ್ಲೇ ಬಾಯಲ್ಲಿ ನೀರು ಬರ್ತಿದೆ ... ಅದ್ಬುಥ ಭಟ್ಟರೇ ಅದ್ಬುಥ ...
ಭಟ್ಟರು: ಈಗ ಕೊನೇ ಐಟಂ ... ನೀವು ಆ ಸಂಜೆಗೇ ಛತ್ರ ಖಾಲೀ ಮಾಡ್ತೀರೋ ಇಲ್ಲಾ ಮಾರನೇ ದಿನ ಬೆಳಿಗ್ಗೆ ಅಡುಗೆ ಆಗಬೇಕಾ?
ಆತ: ಬಹಳ ಗ್ರಾಂಡ್ ಮದುವೆ ಕಣ್ರೀ ... ಮೂರು ದಿನದ ಮದುವೆ ... ಮಾರನೇ ದಿನ ಕೂಡ ಇರ್ತೀವಿ ...
ಭಟ್ಟರು: ಇನ್ನೊಂದೆರಡು ದಿನ ಇರಿ, ನಂದೇನು ಗಂಟು ಹೋಗಿದ್ದು ... ಅಲ್ಲಾ, ಹೇಗಿದ್ರೂ ತಾಳಿ ಕಟ್ಟಿ ಆಗಿರುತ್ತೆ, ಅವತ್ತಿನ ಬೇಲಿಗ್ಗೆ ಸಿಂಪಲ್ ಅಡುಗೆ ಸಾಕಲ್ವಾ?
ಆತ: ಹೌದು, ಹೌದು ... ಎರಡು ಕೋಸಂಬರಿ, ಎರಡು ಪಲ್ಯ ... ಸೊಪ್ಪಿನ ಹುಳಿ, ಪಳಿದ್ಯ, ಅನ್ನ, ಶಾವಿಗೆ ಪಾಯಸ, ಕೇಸರೀ ಬಾತ್ ಸಾಕು
ಭಟ್ಟರು: ಆಯ್ತು, ಆಯ್ತು ... ಇದನ್ನ ಸಿಂಪಲ್ ಅಡುಗೆ ಅಂತ ಯಾರು ಅಂತಾರೋ ..... ನೋಡಿ ಸ್ವಾಮೀ, ಎಲೆಗೆ ನೂರೈವತ್ತು ರುಪಾಯಿ ನೋಡಿ
ಆತ: ಏನು ಸ್ವಾಮೀ ಅನ್ಯಾಯ ಇದು ... ಎಲೆಗೇ ನೂರೈವತ್ತಾದರೆ, ಇನ್ನು ಅದರ ಮೇಲಿರೋ ಅಡುಗೆ ಎಷ್ಟು?
ಭಟ್ಟರು: ಅಯ್ಯಯ್ಯ ... ಸ್ವಾಮೀ ... ಎಲೆಗೆ ನೂರೈವತ್ತು ಅಂದರೆ ಎಲೆ ಮತ್ತೆ ಅಡುಗೆ ಎರಡೂ ಸೇರಿ
ಆತ: Unlimited ತಾನೇ?
ಭಟ್ಟರು: ಅಲ್ರೀ, ಜೀವನದಲ್ಲಿ ಮದುವೇ ಮನೆ ಊಟಾನೇ ಮಾಡಿಲ್ಲದವರ ಹಾಗೆ ಮಾತಾಡ್ತೀರಲ್ರೀ? ರೇತ್ ಒಪ್ಪಿಗೆ ತಾನೇ? ನೀವು ಹೂ ಅಂದ್ರೆ ರೇಟ್ ಲಾಕ್ ಆಗುತ್ತೆ.
ಆತ: ಆಯ್ತು ಬಿಡಿ. ನನ್ನ ಜೇಬಿನಿಂದ ಕೊಡ್ತೀನಾ? ಇಲ್ವಲ್ಲಾ?
ಭಟ್ಟರು (ಬೆಚ್ಚಿಬಿದ್ದವರಂತೆ): ಏನ್ರೀ ಹಾಗಂದ್ರೇ? ಹುಡುಗೀ, ನಿಮಗೆ ಏನಾಗಬೇಕೂ ... ನಿಮ್ಮನ್ನ ನೋಡಿದರೆ ನಿಮ್ಮ ಮಗಳು ಅಂತ ಹೇಳೋಕ್ಕೆ ಆಗ್ತಿಲ್ಲ ... ನಿಮ್ಮ ತಂಗಿ ಆಗಿದ್ರೆ, ಈ ರೀತಿ ಅಡ್ಡಾದಿಡ್ಡಿ ಮಾತಾಡ್ತಾ ಇರಲಿಲ್ಲ. ಹುಡುಗಿ ನಿಮಗೆ ಏನಾಗಬೇಕೂ?
ಆತ: ನಮ್ಮದು ಒಂದು ರೀತಿ volunteer ಕೆಲಸ. ಆಗ್ಲೇ ಹೇಳಿದ್ರಲ್ಲ ’ಪರೋಪಕಾರಾರ್ಥಂ ಇದಂ ಶರೀರಂ’ ಅಂತ ಹಾಗೆ ... ಹೆಣ್ಣಿನ ಮನೆ ಕಡೆಯವರಿಗೆ ನಮ್ಮದೊಂದು ಸೇವೆ ಅಷ್ಟೇ ... ನಿಮಗೆ ಕೊಡೋ ದುಡ್ಡೆಲ್ಲ, ಅವರು ಕೊಡ್ತಾರೆ ... ನಮ್ಮದು ಬರೀ ಈ ರೀತಿ extended help ಅಷ್ಟೇ.
ಭಟ್ಟರು: ತುಂಬಾ ಒಳ್ಳೇ ಕೆಲಸ ಮಾಡ್ತಿದ್ದೀರಾ ... ದೇವರು ನಿಮಗೆ ಒಳ್ಳೇದು ಮಾಡಲಿ ... (ಲಿಸ್ಟ್ ಮತ್ತೊಮ್ಮೆ ಪರಿಶೀಲಿಸಿ ನೋಡಿ) ಅಯ್ಯೋ ..... ಮುಖ್ಯ ವಿಷಯಾನೇ ಕೇಳಲಿಲ್ಲವಲ್ಲಾ?
ಆತ: ಏನು ಸ್ವಾಮೀ ಅದು ?
ಭಟ್ಟರು: ಮದುವೆಯ ದಿನ ಯಾವುದೂ ಅಂತ
ಆತ: ಅಯ್ಯೋ ... ನಿಮ್ಮ ಸೀಡ್ಲೆಸ್ ಪಾನಕ ಕುಡಿದು ನನಗೆ ಆ ವಿಷಯ ಹೇಳೋದೇ ಮರೆತು ಹೋಯ್ತು ನೋಡಿ .... ಜೂನ್ ಒಂಬತ್ತಕ್ಕೆ ....
ಭಟ್ಟರು: ಏನು ಜೂನ್ ಒಂಬತ್ತಾ ?????
ಆತ: ಒಂಬತ್ತು ಒಂಬತ್ತು ಒಂಬತ್ತು ತೋಳ ಹಳ್ಳಕ್ಕೆ ಬಿತ್ತು ಅಂತಾರಲ್ಲ ಹಂಗೆ ... ಮದುವೆ ಅನ್ನೋ ಹಳ್ಳಕ್ಕೆ ಬೀಳೋದಕ್ಕೆ ಸರಿಯಾದ ದಿನ ...
ಭಟ್ಟರು: Interesting ... ಛತ್ರ ಯಾವುದು ???
ಆತ: ನಿತ್ಯಾನಂದ ಚೌಲ್ಟ್ರಿ ...
{ಭಟ್ಟರು ಪುಸ್ತಕ ಪೆನ್ಸಿಲ್ ಪಕ್ಕಕ್ಕೆ ಇಡ್ತಾರೆ}
ಆತ: ಅಲ್ಲಾ ಭಟ್ಟರೇ? ಯಾಕೋ ಒಂದು ಥರಾ ಇದ್ದೀರಲ್ಲ ಏನಾಯ್ತು? ಪುಸ್ತಕ-ಪೆನ್ಸಿಲ್ ಪಕ್ಕಕ್ಕೆ ಇಟ್ಟುಬಿಟ್ರೀ ...
ಭಟ್ಟರು: more and more Interesting ಸುಮ್ನೆ ನನ್ ಟೈಮ್ ವೇಸ್ಟ್ ಆಯ್ತು ... ಜೂನ್ ಒಂಬತ್ತು ... ನನಗೆ ಆಗೋಲ್ಲ ... ನಾನು ಬಹಳ ಬ್ಯುಸಿ
ಆತ: ಅಯ್ಯೋ ಶಿವನೇ? ಇಷ್ಟು ಹೊತ್ತೂ ಮಾತನಾಡಿ ಈಗ ಆಗಲ್ಲ ಅಂದುಬಿಟ್ರೆ ಹೇಗೆ ಸ್ವಾಮಿ. ನಮ್ಮ ಸಂತಾನ ಲಕ್ಷ್ಮಿ ಮದುವೆಗೆ ನಿಮ್ ಕೈ ಅಡುಗೆ ಇಲ್ದೆ ಹೋದ್ರೆ ಹೇಗೆ ಭಟ್ಟರೆ?
ಭಟ್ಟರು: ಭಟ್ಟರು ಗಿಟ್ಟರು ಅಂದರೆ ನಾನು ಸುಮ್ಮನೆ ಇರೋಲ್ಲ ನೋಡಿ
ಆತ: ಏನಾಯ್ತು ಸ್ವಮೀ ನಿಮಗೆ ಸಡನ್ನಾಗಿ ... ಇಷ್ಟು ಹೊತ್ತೂ ಚೆನ್ನಾಗಿದ್ರೀ?
ಭಟ್ಟರು: ನೀವು ನನ್ನನ್ನು ಭಟ್ಟರು ಅನ್ನೋ ಹಾಗಿಲ್ಲ ... ಯಾಕೆ ಅಂದರೆ ಆ ನಿಮ್ಮ ಸಂತಾನಲಕ್ಷ್ಮೀನ್ನ ಮದುವೆ ಆಗ್ತಿರೋದು ನಾನೇ .... ADB and sons company proprietor ಅನ್ನ ದಾನ ಭಟ್ಟ ನಾನೇ ... ಅಲ್ರೀ, ಮದುವೆ ಗಂಡು, ಅವನ ಮದುವೆ ದಿನ ಅಡುಗೆ ಮನೆಯಲ್ಲಿ ಇರ್ತಾನೇನ್ರೀ?
ಆತ: ಬೇರೇ ಕಡೆ ಹುಡುಕಿಕೊಂಡು ಹೋಗಬೇಕೇ ಈಗ?
ಭಟ್ಟರು: ನೋಡ್ರೀ (ಎನ್ನುತ್ತ ಲಿಸ್ಟ್ ಅವರ ಕೈಯಲ್ಲಿಟ್ಟು)... ಇಷ್ಟು ಹೊತ್ತೂ menu discuss ಮಾಡಿದ್ದು ಇಲ್ಲಿದೆ... ಈ ಅಡುಗೆ ಯಾವ್ದೂ ಇರಬಾರದು ಆಯ್ತಾ?
ಆತ: ಆಯ್ತು ... ಆಯ್ತು
ಭಟ್ಟರು: ಆಯ್ತು .. ತಾವು ದಯಮಾಡಿಸಿ ... ನನಗೆ ನೂರೆಂಟು ಅಡುಗೆ Status Call ಇದೆ ... ಲಾಗಿನ್ ಆಗಬೇಕು ... ತಾವಿನ್ನು ಹೊರಡಬಹುದು {ಭಟ್ಟರು ಒಳಗೆ ಹೋಗುತ್ತಾರೆ}
ಆತ: (ಅವರು ಹೋಗುವ ದಿಕ್ಕಿಗೇ ನೋಡುತ್ತ) ಇದ್ಯಾವ ಕೇಸು ಸ್ವಾಮೀ? ಅವರ ಮನೆಗೆ ಬಂದಿದ್ದಾರೆ, ಅವರೇ ಹಿಂಗೆ ಒಳಗೆ ಹೊರಟುಹೋಗೋದೇ? ಹೋಗ್ಲಿ ಬಿಡಿ ... ಈಗ ಅಡುಗೆ ಮಾಡದೇ ಇದ್ದರೆ ಏನು? ಮದುವೆ ಆದ ಮೇಲೆಮಾಡಲೇಬೇಕಲ್ಲ! ಅಲ್ಲಾ, ನನ್ನನ್ನ ಇವರು ಏನಂದುಕೊಡಿದ್ದಾರೆ? ಮದುವೇ ಡೇಟ್ ಹೇಳಡೆ ಯಾರಾದ್ರೂ ಮದುವೆ ಅಡುಗೆ ಬಗ್ಗೆ ಮಾತಾಡ್ತಾರಾ? ಹುಡುಗಿಯ ತಂದೆ ಬಲೇ ಹುಷಾರು. ಹುಡುಗ ಹೇಗೆ ಏನು ಅಂತ ತಿಳಿದುಕೊಂಡು ಬನ್ನಿ ನಮಗೆ ಹೇಳಿದ್ದರು ... ನಾವು ಅಂದರೆ ’ಸೀಕ್ರೆಟ್ ಸರ್ವೀಸ್’ ... ನಿಮಗೂ ಏನಾದ್ರೂ ಹೆಲ್ಪ್ ಬೇಕಿದ್ರೆ ಕೇಳಿ ... ಮಾಡೋಣಂತೆ ... ಹುಡುಗ, ಪರವಾಗಿಲ್ಲ ... ಏನೇನೋ ಐಡಿಯಾ ಇಟ್ಟಿದ್ದಾನೆ ... ಎಲ್ಲಿದ್ರೂ ಬದುಕ್ಕೋತಾನೆ ... ನನ್ನ ಕಡೆಯಿಂದ ಓಕೆ. ಸೆರಿ... ನಾನಿನ್ನು ಬರಲೇ? ಎಲ್ರೂ ಮದುವೆಗೆ ಬಂದು ಬಿಡಿ ... ಬರ್ತೀನಿ
Written by: Srinath Bhalle
ಚಿತ್ರ: india-tourism.co.in
Comments
ಉ: ಮದುವೆಗೆ, ಏನ್ ಅಡಿಗೆ ಮಾಡಿಸೋಣ?
In reply to ಉ: ಮದುವೆಗೆ, ಏನ್ ಅಡಿಗೆ ಮಾಡಿಸೋಣ? by Jayanth Ramachar
ಉ: ಮದುವೆಗೆ, ಏನ್ ಅಡಿಗೆ ಮಾಡಿಸೋಣ?
ಉ: ಮದುವೆಗೆ, ಏನ್ ಅಡಿಗೆ ಮಾಡಿಸೋಣ?
In reply to ಉ: ಮದುವೆಗೆ, ಏನ್ ಅಡಿಗೆ ಮಾಡಿಸೋಣ? by Harish Athreya
ಉ: ಮದುವೆಗೆ, ಏನ್ ಅಡಿಗೆ ಮಾಡಿಸೋಣ?
In reply to ಉ: ಮದುವೆಗೆ, ಏನ್ ಅಡಿಗೆ ಮಾಡಿಸೋಣ? by bhalle
ಉ: ಮದುವೆಗೆ, ಏನ್ ಅಡಿಗೆ ಮಾಡಿಸೋಣ?
In reply to ಉ: ಮದುವೆಗೆ, ಏನ್ ಅಡಿಗೆ ಮಾಡಿಸೋಣ? by Harish Athreya
ಉ: ಮದುವೆಗೆ, ಏನ್ ಅಡಿಗೆ ಮಾಡಿಸೋಣ?
ಉ: ಮದುವೆಗೆ, ಏನ್ ಅಡಿಗೆ ಮಾಡಿಸೋಣ?
In reply to ಉ: ಮದುವೆಗೆ, ಏನ್ ಅಡಿಗೆ ಮಾಡಿಸೋಣ? by sm.sathyacharana
ಉ: ಮದುವೆಗೆ, ಏನ್ ಅಡಿಗೆ ಮಾಡಿಸೋಣ?
ಉ: ಮದುವೆಗೆ, ಏನ್ ಅಡಿಗೆ ಮಾಡಿಸೋಣ?
In reply to ಉ: ಮದುವೆಗೆ, ಏನ್ ಅಡಿಗೆ ಮಾಡಿಸೋಣ? by MADVESH K.S
ಉ: ಮದುವೆಗೆ, ಏನ್ ಅಡಿಗೆ ಮಾಡಿಸೋಣ?
ಉ: ಮದುವೆಗೆ, ಏನ್ ಅಡಿಗೆ ಮಾಡಿಸೋಣ?
In reply to ಉ: ಮದುವೆಗೆ, ಏನ್ ಅಡಿಗೆ ಮಾಡಿಸೋಣ? by partha1059
ಉ: ಮದುವೆಗೆ, ಏನ್ ಅಡಿಗೆ ಮಾಡಿಸೋಣ?
ಉ: ಮದುವೆಗೆ, ಏನ್ ಅಡಿಗೆ ಮಾಡಿಸೋಣ?
In reply to ಉ: ಮದುವೆಗೆ, ಏನ್ ಅಡಿಗೆ ಮಾಡಿಸೋಣ? by ksraghavendranavada
ಉ: ಮದುವೆಗೆ, ಏನ್ ಅಡಿಗೆ ಮಾಡಿಸೋಣ?
ಉ: ಮದುವೆಗೆ, ಏನ್ ಅಡಿಗೆ ಮಾಡಿಸೋಣ?
In reply to ಉ: ಮದುವೆಗೆ, ಏನ್ ಅಡಿಗೆ ಮಾಡಿಸೋಣ? by Aravind M.S
ಉ: ಮದುವೆಗೆ, ಏನ್ ಅಡಿಗೆ ಮಾಡಿಸೋಣ?
ಉ: ಮದುವೆಗೆ, ಏನ್ ಅಡಿಗೆ ಮಾಡಿಸೋಣ?
In reply to ಉ: ಮದುವೆಗೆ, ಏನ್ ಅಡಿಗೆ ಮಾಡಿಸೋಣ? by ಉಉನಾಶೆ
ಉ: ಮದುವೆಗೆ, ಏನ್ ಅಡಿಗೆ ಮಾಡಿಸೋಣ?
In reply to ಉ: ಮದುವೆಗೆ, ಏನ್ ಅಡಿಗೆ ಮಾಡಿಸೋಣ? by ಉಉನಾಶೆ
ಉ: ಮದುವೆಗೆ, ಏನ್ ಅಡಿಗೆ ಮಾಡಿಸೋಣ?
In reply to ಉ: ಮದುವೆಗೆ, ಏನ್ ಅಡಿಗೆ ಮಾಡಿಸೋಣ? by ಗಣೇಶ
ಉ: ಮದುವೆಗೆ, ಏನ್ ಅಡಿಗೆ ಮಾಡಿಸೋಣ?
ಉ: ಮದುವೆಗೆ, ಏನ್ ಅಡಿಗೆ ಮಾಡಿಸೋಣ?
In reply to ಉ: ಮದುವೆಗೆ, ಏನ್ ಅಡಿಗೆ ಮಾಡಿಸೋಣ? by gopaljsr
ಉ: ಮದುವೆಗೆ, ಏನ್ ಅಡಿಗೆ ಮಾಡಿಸೋಣ?