ಮದುವೆಯ‌ ಅನುಬ೦ಧಾ...(ಕಥೆ)

ಮದುವೆಯ‌ ಅನುಬ೦ಧಾ...(ಕಥೆ)

 ‘ಮಗಳೇ, ಹಟ ಮಾಡ್ಬೇಡ ಮಗಳೇ... ಪರಿಸ್ಥಿತಿಯನ್ನ ಅರ್ಥ ಮಾಡಿಕೋ. ಹೋರಾಟದ ಬದುಕಿನಲ್ಲಿ ಬರೀ ನೋವುಗಳೇ ತುಂಬಿರುತ್ತವೆ.. ಮತ್ತೊಮ್ಮೆ ಯೋಚಿಸಿ ನಿನ್ನ ನಿರ್ಧಾರ ತಿಳಿಸು’ ಸದಾನಂದರ ಕಣ್ಣುಗಳು ತುಂಬಿಬಂದಿದ್ದವು.

  ‘ರೀ ಇವಳದ್ದು ಅತಿಯಾಯ್ತು ಕಣ್ರೀ.. ಇದಕ್ಕೆಲ್ಲಾ ನೀವು ಅವಳನ್ನ ಯಾವಾಗ್ಲೂ ಮುದ್ದು ಮಾಡಿ ಮುದ್ದು ಮಾಡಿ ಬೆಳೆಸಿದ್ದೇ ಕಾರಣ. ಎಲ್ಲಾರದ್ದೂ ಒಂದು ದಾರಿಯಾದ್ರೆ ನಮ್ಮೂರ ದಾಸಯ್ಯನದೇ ಒಂದು ದಾರಿ ಅನ್ನೋ ತರ ಏನೋ ಪ್ರಪಂಚಾನೇ ಬದಲಾಯಿಸೋದಿಕ್ಕೆ ಹೊರಟಿದಾಳೆ..’ ಸುಮಿತ್ರಮ್ಮನವರು ತಮ್ಮ ಅಂತರಂಗದಲ್ಲಿದ್ದ ಆಕ್ರೋಶವನ್ನು ಪದಗಳ ರೂಪದಲ್ಲಿ ಹೊರಹಾಕಿದರು.
  ‘ಹೋಗ್ಲಿ, ಯಾವೋನ್ನಾದ್ರೂ ನೋಡ್ಕಂಡಿದಾಳೋ ಏನೋ ಕೇಳಿಬಿಡ್ರಿ..’ ಕೊನೆಯ ಅಸ್ತ್ರವೆಂಬಂತೆ ಸುಮಿತ್ರಮ್ಮನವರು ತಮ್ಮ ಮಗಳನ್ನು ಸಂದೇಹದ ಸಲಾಕೆಯಿಂದ ಚುಚ್ಚಿದರು. ಇಷ್ಟು ಹೊತ್ತು ತನ್ನ ತಂದೆ-ತಾಯಿಯರ ಮಾತುಗಳನ್ನು ಮೌನವಾಗಿ ಆಲಿಸುತ್ತಿದ್ದ ರೇವತಿಗೆ ತಾಯಿಯ ಮಾತಿನಿಂದ ಮನಸ್ಸಿಗೆ ತೀವ್ರ ನೋವಾಯಿತು.
  ‘ಮಮ್ಮೀ.. ಯಾರನ್ನಾದ್ರೂ ಇಷ್ಟಪಟ್ಟಿದ್ರೆ ಅದನ್ನ ಮುಚ್ಚಿಡೋಕೆ ನಾನೇನು ಚಿಕ್ಕಹುಡುಗೀನಾ.. ಪ್ಲೀಸ್.. ನನ್ನನ್ನ ಅರ್ಥ ಮಾಡ್ಕೋ ಮಮ್ಮೀ.. ನನಗೆ ಈ ಮದುವೆ ಇಷ್ಟ ಇಲ್ಲ, ಇಷ್ಟ ಇಲ್ಲ, ಇಷ್ಟ ಇಲ್ಲಾ......’ ದುಃಖ ಒತ್ತರಿಸಿ ಬಂದು ರೇವತಿ ಸಣ್ಣಗೆ ಬಿಕ್ಕತೊಡಗಿದಳು.
  ‘ಹೋಗ್ಲಿ ಬಿಡಮ್ಮ.. ನಿನ್ ಹಣೇನಲ್ಲಿ ಆ ದೇವ್ರು ಏನು ಬರದಿದ್ದಾನೋ ಅದು ಆಗುತ್ತೆ.. ನನ್ನೆದುರಿಗೆ ನೀನು ಮಾತ್ರ ಕಣ್ಣೀರು ಹಾಕ್ಬೇಡ.. ನನಗೆ ಸಹಿಸೋದಿಕ್ಕಾಗೋದಿಲ್ಲ..’ ಬೆಳೆದ ಮಗಳ ಕಣ್ಣೀರು ನೋಡಿ ಸದಾನಂದ ತೀವ್ರ ವೇದನೆಯಿಂದ ನುಡಿದರು. ಸುಮಿತ್ರಮ್ಮನವರಿಗೆ ಕಸಿವಿಸಿಯಾಗಿ ಏನೊಂದೂ ಮಾತನಾಡದೇ ಒಳನಡೆದರು. ಬಂದಿದ್ದ ಒಳ್ಳೆಯ ಸಂಬಂಧ ಕೈತಪ್ಪಿ ಹೋಗುತ್ತದಲ್ಲಾ ಎನ್ನುವ ಆತಂಕ ಅವರದಾಗಿತ್ತು.
  ಸೋಫಾದ ಮೇಲೆ ಕುಳಿತು ತಾರಸಿಯನ್ನೇ ದಿಟ್ಟಿಸುತ್ತಿದ್ದ ರೇವತಿಯ ಮನದಲ್ಲಿ ಯೋಚನೆಗಳು ಅಲೆಅಲೆಯಾಗಿ ಹೊರಹೊಮ್ಮುತ್ತಿದ್ದವು. ನನ್ನ ನಿರ್ಧಾರ ಸರಿಯೋ ತಪ್ಪೋ ಎನ್ನುವ ದ್ವಂದ್ವ ಅವಳನ್ನು ಕಾಡತೊಡಗಿತ್ತು. ಎಷ್ಟೇ ಯೋಚಿಸಿದರೂ ಉತ್ತರ ದೊರೆಯಲಿಲ್ಲ. ಇದ್ಯಾವ ಅನಿಷ್ಠ ಪದ್ಧತಿ.. ಹಣ ಪಡೆದು ತಾಳಿ ಕಟ್ಟುವ ಮನುಷ್ಯನ ಜೊತೆ ನೆಮ್ಮದಿಯಿಂದ ಬಾಳಲಾದೀತೇ..? ಬದುಕು ಪರಸ್ಪರ ಪ್ರೀತಿಯನ್ನು ಕೊಟ್ಟು ತೆಗೆದುಕೊಳ್ಳುವ ದೀರ್ಘಾವಧಿಯ ಯೋಜನೆಯಾಗಬೇಕೇ ಹೊರತು ಹಣದ ದಾಸ್ಯಕ್ಕೊಳಗಾದ ವ್ಯಾಪಾರವಾಗಬಾರದು.. ಹೋರಾಡಬೇಕು.. ನನ್ನ ಅಂತರಂಗವನ್ನು ಅರಿತು ಭಾವನೆಗಳಿಗೆ  ಬೆಲೆ ಕೊಟ್ಟು ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಂಡಿರುವ ಹುಡುಗ ಸಿಗುವವರೆಗೆ ಹೋರಾಡಬೇಕು.. ಎಲ್ಲಾ ಹೋರಾಟಗಳಿಗೆ ಯಾವಾಗಲೂ ಪ್ರತಿರೋಧ ಇದ್ದೇ ಇರುತ್ತದೆ.. ಅವೆಲ್ಲವನ್ನೂ ಮೆಟ್ಟಿ ನಿಲ್ಲಬೇಕು.. ಯೋಚಿಸುತ್ತಿದ್ದವಳ ಮನಸ್ಸಿನಲ್ಲಿ ದೃಢಸಂಕಲ್ಪವೊಂದು ಮೂಡಿ ಮನಸ್ಸು ನಿರಾಳವಾಯಿತು.
                            *    *   *  
  ರೇವತಿ ಸದಾನಂದ-ಸುಮಿತ್ರಮ್ಮ ದಂಪತಿಗಳ ಒಬ್ಬಳೇ ಮಗಳು. ವೃತ್ತಿಯಲ್ಲಿ ಪ್ರಾಥಮಿಕ ಶಾಲಾಶಿಕ್ಷಕರಾಗಿದ್ದ ಸದಾನಂದ ಹೆಣ್ಣು ಮತ್ತು ಗಂಡುಮಕ್ಕಳಲ್ಲಿ ದೈಹಿಕ ವ್ಯತ್ಯಾಸಗಳಿವೆಯೇ ಹೊರತು ಬೇರಾವ ಅಸಮಾನತೆಗಳೂ ಇಲ್ಲ ಎಂಬ ಮನೋಭಾವ ಉಳ್ಳವರಾಗಿದ್ದು ಅವಳಿಗೆ ಯಾವ ಕುಂದು-ಕೊರತೆಯೂ ಆಗದಂತೆ ಅತೀವ ಪ್ರೀತಿಯಿಂದ ಬೆಳೆಸಿದ್ದರು. ಚಿಕ್ಕಂದಿನಿಂದಲೇ ಆಟ-ಪಾಠ ಎರಡರಲ್ಲೂ ಮುನ್ನುಗ್ಗುವ ಛಲವನ್ನು ಬೆಳೆಸಿಕೊಂಡಿದ್ದ ರೇವತಿ ಶಾಲಾಕಾಲೇಜು ದಿನಗಳಿಂದಲೂ ತರಗತಿ ಪ್ರತಿನಿಧಿಯಾಗಿ ವಿದ್ಯಾರ್ಥಿ ಸಂಘಟನೆಗಳಲ್ಲಿ ತೊಡಗಿಸಿಕೊಂಡು ಹೋರಾಟದ ಮನೋಭಾವವನ್ನು ಬೆಳೆಸಿಕೊಂಡಿದ್ದಳು. ಯಾವುದೇ ಕ್ರೀಡೆಯಾಗಲೀ, ಸಾಂಸ್ಕøತಿಕ ಚಟುವಟಿಕೆಗಳಾಗಲೀ ಸೋಲು-ಗೆಲುವಿನ ಭೀತಿಯಿಲ್ಲದೆ ಭಾಗವಹಿಸಿ ಹಲವಾರು ಬಾರಿ ಯಶಸ್ಸನ್ನು ಗಳಿಸಿ ಪ್ರಶಂಸಾಪತ್ರಗಳನ್ನೂ ಬಹುಮಾನಗಳನ್ನು ಪಡೆದುದಲ್ಲದೇ ಸಾಮಾಜಿಕ ಕಳಕಳಿಯನ್ನೂ ಮೈಗೂಡಿಸಿಕೊಂಡಿದ್ದಳು. ಇಂದಿನ ಸ್ಫರ್ಧಾತ್ಮಕ ಯುಗದಲ್ಲಿ ಸಮಾಜಕ್ಕೆ ಪ್ರತಿಭಾವಂತ ಶಿಕ್ಷಕರ ಅವಶ್ಯಕತೆ ಬಹಳಷ್ಟಿದೆ ಎನ್ನುವ ತನ್ನ ತಂದೆಯವರ  ಮಾತುಗಳಿಂದ ಪ್ರಭಾವಿತಳಾಗಿ ಆದರ್ಶ ಶಿಕ್ಷಕಿಯಾಗಬೇಕೆಂಬ ಕನಸನ್ನು ಹೊತ್ತು ಬಿಎಸ್ಸಿಯ ನಂತರ ತನ್ನ ನೆಚ್ಚಿನ ಭೌತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದು ಖಾಸಗಿ ಪದವಿಪೂರ್ವ ಕಾಲೇಜೊಂದರಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದಳು. 
  ತಮ್ಮ ಮಗಳು ವಿದ್ಯಾಭ್ಯಾಸ ಮುಗಿಸಿ ಯಶಸ್ವಿಯಾಗಿ ತನ್ನ ಜೀವನ ರೂಪಿಸಿಕೊಂಡದ್ದನ್ನು ಕಂಡು ಸದಾನಂದ-ಸುಮಿತ್ರಮ್ಮನವರಿಗೆ ಹೆಮ್ಮೆಯಾಗಿತ್ತು. ಅವರಿಗೆ ಆಕೆಯ ಮುಂದಿನ ಗೃಹಸ್ಥಾಶ್ರಮದ ಚಿಂತೆ ಮೂಡಿ ಅನುರೂಪನಾದ ವರನ ಹುಡುಕಾಟ ಪ್ರಾರಂಭಿಸಿದ್ದರು. ಸೌಂದರ್ಯ ಮತ್ತು ಪ್ರತಿಭೆಯ ದ್ಯೋತಕವಾಗಿದ್ದ ರೇವತಿಯನ್ನು ಹತ್ತಿರದಿಂದ ಕಂಡಿದ್ದ ಅವರ ಸಂಬಂಧಿಕರಲ್ಲಿ ಹಲವರಿಗೆ ತಮ್ಮ ಮಗನಿಗೆ ಆಕೆಯನ್ನು ತಂದುಕೊಳ್ಳಬೇಕೆಂಬ ಹಂಬಲವಿತ್ತು.
  ಸುಮಿತ್ರಮ್ಮನವರ ದೂರದ ಸಂಬಂಧಿಕರೊಬ್ಬರು ಈ ಬಗ್ಗೆ ಆಸಕ್ತಿ ವಹಿಸಿ ಸಂಬಂಧ ಬೆಳೆಸುವ ಪ್ರಸ್ತಾವನೆಯನ್ನು ಎರಡೂ ಕುಟುಂಬಗಳಿಗೆ ಹತ್ತಿರವಾಗಿದ್ದ ಸುಮಿತ್ರಮ್ಮನವರ ಚಿಕ್ಕಪ್ಪನವರ ಮುಖಾಂತರ ಸೂಚಿಸಿದ್ದರು. ಸುಮಂತ ಖಾಸಗಿ ಕಾರ್ಖಾನೆಯೊಂದರಲ್ಲಿ ಕೈತುಂಬಾ ಸಂಬಳ ಪಡೆಯುವ ಎಂಜಿನಿಯರಾಗಿದ್ದ. ಅವರ ತಂದೆ ಸರ್ಕಾರಿ ಅಧಿಕಾರಿಯಾಗಿದ್ದು ಉನ್ನತ ಹುದ್ದೆಯಲ್ಲಿದ್ದರು. ವಿಷಯ ತಿಳಿದ ಸದಾನಂದ-ಸುಮಿತ್ರಮ್ಮನವರಿಗೆ ಹಾಲು ಕುಡಿದಷ್ಟು ಸಂತೋಷವಾಯಿತು. ಶುಭಕಾರ್ಯ ಶೀಘ್ರವಾಗಿ ನೆರವೇರಲಿ ಎಂಬ ಆಶಯದಿಂದ ಹುಡುಗಿಯನ್ನು ನೋಡುವ ಕಾರ್ಯಕ್ರಮಕ್ಕೆ ಸುಮಂತನ ತಂದೆ-ತಾಯಿಯನ್ನು ಆಹ್ವಾನಿಸಿದ್ದರು. 
  ಕೆಲಸಕ್ಕೆ ಬಿಡುವಿದ್ದ ಒಂದು ಭಾನುವಾರದ ಬೆಳಿಗ್ಗೆ ಸುಮಂತ, ಆತನ ತಂದೆ-ತಾಯಿಯವರೊಂದಿಗೆ ಕಾರಿನಲ್ಲಿ ಬಂದಿಳಿದ. ಸದಾನಂದ-ಸುಮಿತ್ರಮ್ಮನವರು ಸಂಬಂಧ ಕೂಡಿ ಬರುವುದೋ ಇಲ್ಲವೋ ಎಂಬ ಸಹಜ ಆತಂಕವನ್ನು ಮನದಲ್ಲಿ ತುಂಬಿಕೊಂಡಿದ್ದರೂ ಕೂಡ ಬಂದವರನ್ನು ಆದರಿಸಿ ಸಡಗರದಿಂದ ಸತ್ಕರಿಸಿದರು. ಉಭಯ ಕುಶಲೋಪರಿ ಮತ್ತು ಲಘು ಉಪಹಾರದ ನಂತರ ರೇವತಿಯನ್ನು ನೋಡಿ ಕಣ್ಣುತುಂಬಿಸಿಕೊಂಡ ಸುಮಂತ ಮೊದಲ ನೋಟದಲ್ಲಿಯೇ ಆಕೆಯ ಸೌಂದರ್ಯಕ್ಕೆ ಮರುಳಾಗಿದ್ದ. ಸುಮಂತನ ನೀಳಕಾಯ, ನಿರ್ಮಲವಾದ ಮುಖದಲ್ಲಿನ ಭಾವಪೂರ್ಣ ಕಣ್ಣುಗಳನ್ನು ಕಂಡು ರೇವತಿಗೆ ಕನಸಿನಲ್ಲಿ ಕಂಡ ರಾಜಕುಮಾರ ಎದುರಿನಲ್ಲಿಯೇ ಬಂದು ನಿಂತಂತಾಗಿ ದೇಹವೆಲ್ಲಾ ಪುಳಕಿತಗೊಂಡಿತ್ತು. ಮಗಳ ಮುಗುಳ್ನಗೆಯ ಮುಖಮುದ್ರೆಯನ್ನು  ಗಮನಿಸಿದ ತಂದೆ-ತಾಯಿ ಸಂಭ್ರಮಗೊಂಡಿದ್ದರು. ಹುಡುಗಿಯನ್ನು ನೋಡುವ ಕಾರ್ಯಕ್ರಮ ಸುಖಾಂತ್ಯಗೊಂಡು ಎರಡೂ ಕುಟುಂಬಗಳವರ ಮುಖಗಳಲ್ಲಿ  ಸಂತೃಪ್ತಭಾವ ಮನೆಮಾಡಿತ್ತು.
  ಮರುದಿನವೇ ಸುಮಂತನ ಮನೆಯವರಿಂದ ಒಪ್ಪಿಗೆ ಸೂಚಿತವಾದ ಕರೆ ಬಂದಾಗ ಸದಾನಂದ-ಸುಮಿತ್ರಮ್ಮನವರಿಗೆ ಆಕಾಶದಲ್ಲಿದ್ದ ಚಂದ್ರಮನನ್ನು ಕೈಯಲ್ಲಿ ಹಿಡಿದುಕೊಂಡಷ್ಟು ಸಂತೋಷವಾಗಿತ್ತು. ಮಗಳನ್ನು ಎದುರಿನಲ್ಲಿ ಕುಳ್ಳಿರಿಸಿಕೊಂಡು ಇಷ್ಟಾನಿಷ್ಟದ ಬಗ್ಗೆ ಪ್ರಶ್ನೆ ಕೇಳಿ ಅವಳ ನಾಚಿಕೆಯಿಂದ ಕೆಂಪಾದ ಮುಖ ಕಂಡು ಅವರುಗಳ ಮನಸ್ಸು ಹಿರಿಹಿರಿ ಹಿಗ್ಗಿತ್ತು. ರೇವತಿ ಮನಸಾರೆ ಸುಮಂತನನ್ನು ಇಷ್ಟಪಟ್ಟು ಒಪ್ಪಿಗೆ ಸೂಚಿಸಿದ್ದಳು.
  ಸುಮಂತನ ಮನೆಗೆ ಹೋಗಿ ಮದುವೆಯ ಮಾತುಕತೆ ಮುಗಿಸಿಕೊಂಡು ಬರುವವರೆಗೆ ಎಲ್ಲವೂ ಆನಂದಮಯವಾಗಿತ್ತು. ಮನೆಗೆ ಬಂದ ಸದಾನಂದ-ಸುಮಿತ್ರಮ್ಮನವರ ಮನಸ್ಸಿನಲ್ಲಿ ಮದುವೆಯೊಂದು ಸುಸೂತ್ರವಾಗಿ ಮುಗಿದುಬಿಟ್ಟರೆ ನಮ್ಮ ಜವಾಬ್ದಾರಿ ಮುಗಿದು ಉಳಿದ ಕಾಲವನ್ನು ನೆಮ್ಮದಿಯಾಗಿ ಕಳೆಯಬಹುದೆಂಬ ಆಶಯ ಮೂಡಿತ್ತು. ಯಾವುದನ್ನೂ ಎಂದೂ ತನ್ನ ಮಗಳಿಂದ ಮುಚ್ಚಿಡದ ಸದಾನಂದ, ಸುಮಂತನ ಮನೆಯಲ್ಲಿ ಮದುವೆಯ ಬಗ್ಗೆ ನಡೆದ ಮಾತುಕತೆಗಳ ಸಂಪೂರ್ಣ ವಿವರಗಳನ್ನು ರೇವತಿಗೆ ನೀಡಿದರು 
  ಸರಳ ಮದುವೆ, ಸಾಂಕೇತಿಕ ಉಡುಗೊರೆ, ಮಿತವಾದ ಖರ್ಚು ಎಂದು ತನ್ನ ಮದುವೆಯ ಬಗ್ಗೆ ನೂರಾರು ಕನಸುಗಳನ್ನು ಕಟ್ಟಿಕೊಂಡಿದ್ದ ರೇವತಿಗೆ ತನ್ನ ತಂದೆಯವರು ನೀಡಿದ ವಿವರಗಳಿಂದ ಗರಬಡಿದಂತಾಯಿತು. ಪ್ರತಿಷ್ಠಿತ ಕಲ್ಯಾಣ ಮಂಟಪದಲ್ಲಿ ಮದುವೆ, ವರನಿಗೆ ಐವತ್ತು ಗ್ರಾಂ ತೂಕದ ಚಿನ್ನದ ಒಡವೆಗಳು, ಎರಡು ಲಕ್ಷ ನಗದು.. ಇದು ಮದುವೆಯಲ್ಲ.. ವ್ಯಾಪಾರ.. ಇಳಿವಯಸ್ಸಿನಲ್ಲಿ ಕಷ್ಟಪಟ್ಟು ತಾವು ಉಳಿಸಿದ ಹಣದೊಂದಿಗೆ ನೆಮ್ಮದಿಯಾಗಿರಬೇಕಾಗಿದ್ದ ನನ್ನ ತಂದೆ-ತಾಯಿಯರನ್ನು ಸಂಕಷ್ಟಕ್ಕೆ ಸಿಲುಕಿಸುವ ಸಂಚು. ನೆನದೊಡನೆಯೇ ಮನಸ್ಸಿಗೆ ಜುಗುಪ್ಸೆಯಾಗಿ ಆಕೆಯ ಮೈಯೆಲ್ಲಾ ಬೆಂಕಿ ಹತ್ತಿಕೊಂಡು ಉರಿದಂತಾಯಿತು. ‘ನನಗೆ ಈ ಮದುವೆ ಇಷ್ಟವಿಲ್ಲ, ಅವರಿಗೆ ತಿಳಿಸಿಬಿಡಿ ಅಪ್ಪಾ..’ ಎಂದು ಹೇಳಿ ಎದ್ದು ತನ್ನ ರೂಮಿಗೆ ಹೋದ ಮಗಳನ್ನು ಕಂಡು ಸದಾನಂದ-ಸುಮಿತ್ರಮ್ಮನವರಿಗೆ ತೀವ್ರ ಆಘಾತವಾಯಿತು.  ತನ್ನ ಹಿಂದೆಯೇ ಓಡೋಡಿ ಬಂದ ತಂದೆ-ತಾಯಿಗೆ ‘ಹಣದ ಹಿಂದೆ ಬಿದ್ದಿರುವವರ ಜೊತೆ ನನಗೆ ಬಾಳಲು ಇಷ್ಟವಿಲ್ಲ. ಯಾವುದೇ ವರದಕ್ಷಿಣೆ-ವರೋಪಚಾರವಿಲ್ಲದೆ ಸರಳ ಮದುವೆಗೆ ಒಪ್ಪುವ ಹುಡುಗನೊಂದಿಗೆ ಮಾತ್ರ ನನ್ನ ಮದುವೆ’ ಎಂದು ಖಡಾಖಂಡಿತವಾಗಿ ನುಡಿದ ಮಗಳನ್ನು ಕಂಡು ಸದಾನಂದ-ಸುಮಿತ್ರಮ್ಮನವರಿಗೆ ದಿಗ್ಭ್ರಾಂತಿಯಾಯಿತು. 
  ನಾವು ನಿನ್ನ ಮದುವೆಗೆಂದೇ ಸಾಕಷ್ಟು ಹಣ ಉಳಿತಾಯ ಮಾಡಿದ್ದೇವೆಂದೂ, ಇದರಿಂದಾಗಿ ನಮಗೆ ಆರ್ಥಿಕವಾಗಿ ಯಾವುದೇ ಹೊರೆಯಾಗುವುದಿಲ್ಲವೆಂದೂ ಸದಾನಂದರು ಪರಿಪರಿಯಾಗಿ ಹೇಳಿಕೊಂಡರೂ ರೇವತಿಯ ನಿರ್ಧಾರ ಬದಲಾಗಲಿಲ್ಲ. ದಿಕ್ಕು ಕಾಣದ ದಂಪತಿಗಳು ಮತ್ತೊಮ್ಮೆ ಯೋಚಿಸಿ ನಿನ್ನ ನಿರ್ಧಾರ ತಿಳಿಸು ಎಂದು ಎರಡು ದಿನಗಳ ಸಮಯ ನೀಡಿದ್ದರು.
                             *    *   *  
  ಸದಾನಂದರಿಗೆ ಹುಡುಗನ ಮನೆಯವರಿಗೆ ಒಂದು ಬಾರಿ ಒಪ್ಪಿಗೆ ಸೂಚಿಸಿ ಈಗ ತಮ್ಮ ಮಗಳು ಈ ಮದುವೆ ಇಷ್ಟವಿಲ್ಲವೆಂದು ಹಟ ಹಿಡಿದಿದ್ದಾಳೆ ಎಂದು ಹೇಗೆ ಹೇಳುವುದು ಎಂದು ತೊಳಲಾಟ ಶುರುವಾಗಿ ಇದ್ದ ವಿಷಯವನ್ನು ಇದ್ದಂತೆಯೇ ತಿಳಿಸಿದರು. ಇದರಿಂದಾಗಿ ಸುಮಂತನ ತಂದೆ-ತಾಯಿ ಕೆರಳಿದರು. ಸ್ವಲ್ಪ ಕುಳ್ಳಗಿದ್ದ ರೇವತಿ ಬಗ್ಗೆ ‘ಇನ್ನೊಂದು ಎರಡಿಂಚು ಎತ್ರ ಇದ್ರೆ ಇನ್ನೂ ಎಷ್ಟು ಆಡ್ತಾ ಇದ್ಲೋ.. ಎಂಜಿನಿಯರ್ ಗಂಡ ಪುಕ್ಸಟ್ಟೆ ಸಿಕ್ತಾನೆ ಅಂತ ತಿಳ್ಕಂಡಿದಾಳೆ.. ಯಾವೋನಾದ್ರೂ ಇವಳನ್ನ ಹಾರಿಸ್ಕಂಡೋಗಕ್ಕೆ ಇವಳೇನು ಫಿಲ್ಮ್ ಸ್ಟಾರಾ.. ಈಗ್ಲೇ ಇಷ್ಟು ಧಿಮಾಕಾದ್ರೆ ಮುಂದೆ ಇವಳನ್ನ ಕಟ್ಕೊಂಡೋನ ಗತಿ ಗೋವಿಂದ’ ಎಂದು ಸುಮಂತನ ತಾಯಿ ಬಂಧುಬಾಂಧವರ ಬಳಿ ತಮ್ಮ ಹತಾಶೆಯನ್ನು ವ್ಯಕ್ತಪಡಿಸಿದರು. ಕಿವಿಯಿಂದ ಕಿವಿಗೆ ಸುದ್ದಿ ಹರಡಿ ಹುಡುಗಿ ದುರಹಂಕಾರಿ ಎಂಬ ಬಿರುದು ರೇವತಿಗೆ ಬಳುವಳಿಯಾಗಿ ಬಂದಿತು. ಈ ಜನ್ಮದಲ್ಲಿ ಅವಳಿಗೆ ಮದುವೆಯಾಗುವುದಿಲ್ಲ ಎಂದು ಜನರಾಡುತ್ತಿದ್ದ ಮಾತುಗಳು ಸದಾನಂದ-ಸುಮಿತ್ರಮ್ಮನವರಿಗೆ ತಿಳಿದು ಅವರು ತೀವ್ರವಾಗಿ ನೊಂದುಕೊಂಡರೇ ಹೊರತು ರೇವತಿಯ ನಿರ್ಧಾರ ಬದಲಾಗಲಿಲ್ಲ.
  ಇದಾದ ನಂತರ ದಿನಗಳು ವೇಗವಾಗಿ ಉರುಳಿ ಆರು ತಿಂಗಳುಗಳು ಕಳೆದವು. ಸದಾನಂದ ತನ್ನ ಆತ್ಮೀಯರಲ್ಲಿ ಮಗಳ ನಿರ್ಧಾರವನ್ನು ತಿಳಿಸಿ ಸರಳ ಮದುವೆಗೆ ಒಪ್ಪುವ ಸಂಬಂಧ ಯಾರಾದರೂ ಇದ್ದರೆ ತಿಳಿಸಿ ಎಂದು ಅಲವತ್ತುಕೊಂಡರು. ಆದರೆ ಅದರಿಂದ ಯಾವುದೇ ಪ್ರಯೋಜನವಾಗಲಿಲ್ಲ. ಹುಡುಗಿ ಕೊಬ್ಬಿನವಳು ಎಂದು ರೇವತಿಯ ಬಗ್ಗೆ ಹರಡಿದ್ದ ಸುಳ್ಳು ಸುದ್ದಿಯಿಂದಾಗಿ ಯಾರೂ ಆಸಕ್ತಿ ತೋರಿಸಲಿಲ್ಲ. ದಿನ ಕಳೆದಂತೆಲ್ಲಾ ಬಾಡುತ್ತಿದ್ದ ತನ್ನ-ತಂದೆ-ತಾಯಿಯರ ಮುಖ ಕಂಡು ರೇವತಿಗೆ ಇನ್ನಿಲ್ಲದ ಆತಂಕವಾಗತೊಡಗಿತು. ಮತ್ತೆ ತನ್ನ ನಿರ್ಧಾರ ಸರಿಯೋ ತಪ್ಪೋ ಎನ್ನುವ ಗೊಂದಲ ಅವಳನ್ನು ಕಾಡತೊಡಗಿತು.
  ಹೀಗಿದ್ದಾಗ ಒಂದು ದಿನ ಸದಾನಂದರಿಗೆ ಅವರ ಸ್ನೇಹಿತರೊಬ್ಬರು ಕಾಲೇಜೊಂದರಲ್ಲಿ ರೇವತಿಯಂತೆಯೇ ಉಪನ್ಯಾಸಕನಾಗಿ ಕೆಲಸ ಮಾಡುತಿದ್ದ ಹುಡುಗನೊಬ್ಬನ ಬಗ್ಗೆ ತಿಳಿಸಿ ‘ಒಳ್ಳೆಯ ಕುಟುಂಬದವನು, ಅಷ್ಟೇನೂ ನಿರೀಕ್ಷೆಗಳಿಲ್ಲ, ಸರಳ ಮದುವೆಗೆ ಒಪ್ಪಿದ್ದಾನೆ.  ಮದುವೆಯ ಖರ್ಚಿಗೆಂದು ಒಂದೈವತ್ತು ಸಾವಿರ ಕೊಟ್ಟರೆ ಸಾಕು ಯೋಚಿಸಿ ನೋಡಿ’ ಎಂದು ತಿಳಿಸಿದರು. ಸದಾನಂದ ರಾತ್ರಿಯೆಲ್ಲಾ ಯೋಚಿಸಿ ಮರುದಿನ ಬೆಳಿಗ್ಗೆ, ಕಾಲೇಜಿಗೆ ಹೊರಟು ನಿಂತ ಮಗಳ ಬಳಿ ಹಿಂಜರಿಯುತ್ತಲೇ ವಿಷಯವನ್ನು ತಿಳಿಸಿದಾಗ ರೇವತಿಗೆ ಅವರ ಇಳಿದುಹೋಗಿದ್ದ ಮುಖ ಕಂಡು ತೀವ್ರ ವೇದನೆಯಾಯಿತು. ಖರ್ಚಿಗೆ ಐವತ್ತು ಸಾವಿರ ಎಂದು ಕೇಳಿ ಎಷ್ಟಾದರೂ ಅದು ಮತ್ತೆ ವ್ಯಾಪಾರವೇ..  ಎನಿಸಿತು. ನನ್ನ ಹೋರಾಟಕ್ಕೆ ಕೊನೆಗೂ ಫಲ ಸಿಗಲೇ ಇಲ್ಲವಲ್ಲ ಎಂಬ ಕೊರಗನ್ನು ಮನಸ್ಸಿನಲ್ಲಿ ತುಂಬಿಕೊಂಡು ದೀನನಾಗಿ ಎದುರಿಗೆ ನಿಂತುಕೊಂಡಿದ್ದ ತನ್ನ ತಂದೆಯ ಮುಖವನ್ನು ನೋಡಲಾಗದೇ ‘ಆಯಿತಪ್ಪಾ.. ಈ ವಾರವೆಲ್ಲಾ ನನಗೆ ಬಿಡುವಿಲ್ಲ. ಪರೀಕ್ಷಾ ಇನ್ವಿಜಲೇಷನ್ ಕೆಲಸವಿದೆ. ಮುಂದಿನ ವಾರ ಬರಲು ತಿಳಿಸಿ’ ಎಂದು ಹೇಳಿ ಖಿನ್ನವದನಳಾಗಿ ಕಾಲೇಜು ತಲುಪಿದಳು.
  ಆ ದಿನದ ಪರೀಕ್ಷಾ ಇನ್ವಿಜಲೇಷನ್ ಕೆಲಸ ಮುಗಿಸಿ ಸಂಜೆ ಸ್ಟಾಫ್‍ರೂಮಿಗೆ ಬಂದು ಕುಳಿತಾಗ ತಲೆ ಧಿಮ್ಮೆನ್ನುತ್ತಿತ್ತು. ಅಷ್ಟರಲ್ಲಿ ಅಟೆಂಡರ್ ರಂಗಯ್ಯ ಬಂದು ‘ಮೇಡಂ ಯಾರೋ ಮಧ್ಯಾಹ್ನವೇ ನಿಮ್ಮನ್ನ ಹುಡುಕ್ಕಂಡು ಬಂದು ಆಚೆ ನಿಂತು ಕಾಯ್ತಾ ಇದಾರೆ.. ಒಳಗೆ ಬಂದು ಕುಂತ್ಕಳಿ ಅಂದ್ರೂ ಪರವಾಗಿಲ್ಲ ಹೊರಗೆ ಇರ್ತೀನಿ ರೇವತಿ ಮೇಡಂ ಬಂದ್ಮೇಲೆ ಹೇಳಪ್ಪ ಅಂದ್ರು’ ಎಂದ. ನನ್ನನ್ನು ಹುಡುಕಿಕೊಂಡು ಬಂದಿರುವವರು ಯಾರಿರಬಹುದು ಎಂದು ದಿಗಿಲಾಗಿ ಖುರ್ಚಿಯಿಂದೆದ್ದು ಹೊರಬಂದ ರೇವತಿಗೆ ಕಾಂಪೌಂಡಿನಿಂದಾಚೆ ಕೈಕಟ್ಟಿಕೊಂಡು ನಿಂತಿದ್ದ ಸುಂದರ ಯುವಕನೊಬ್ಬ ಕಾಣಿಸಿ ಬೆರಗಾಯಿತು. ಆತನನ್ನು ಎಲ್ಲೋ ನೋಡಿದ ನೆನಪಾಗಿ ಆಕೆಯ ಮನಸ್ಸಿನಲ್ಲಿ ಅಚ್ಚೊತ್ತಿದ್ದ ಸುಮಂತನೇ ಎದುರಿಗೆ ನಿಂತಿರುವುದು ತಿಳಿದು ಕಸಿವಿಸಿಯಾಯಿತು. ರೇವತಿಯನ್ನು ಕಂಡು ಅವನೇ ಹತ್ತಿರ ಬಂದು ‘ನನ್ನ ಗುರುತು ಸಿಕ್ತಾ..? ನಿಮ್ಮ ಬಳಿ ಸ್ವಲ್ಪ ಮಾತನಾಡಬೇಕಿತ್ತು’ ಎಂದಾಗ ‘ಹೂಂ.. ಏನು ಹೇಳಿ’ ಎಂದು ತುಸು ಗಡುಸಾಗಿ ಅಸಹನೆಯಿಂದಲೇ ನುಡಿದಳು.
  ‘ರೇವತಿಯವ್ರೇ ದಯವಿಟ್ಟು ನನ್ನನ್ನ ಕ್ಷಮಿಸಿಬಿಡಿ.. ಆವತ್ತು ನಾನು ನಿಮ್ಮನ್ನ ನೋಡಿ ಮನಸಾರೆ ಇಷ್ಟಪಟ್ಟೆ. ಆದರೆ ನಿಮ್ಮ ನಿರ್ಧಾರ ತಿಳಿದು ನಮ್ಮ ತಂದೆ-ತಾಯಿಯರಿಗಷ್ಟೇ ಅಲ್ಲದೆ ನನಗೂ ನೀವು ಒಬ್ಬ ದುರಹಂಕಾರಿ ಹೆಣ್ಣು ಎನಿಸಿತು. ನಂತರ ನಾನು ಶಾಂತಚಿತ್ತದಿಂದ ಕುಳಿತು ಯೋಚಿಸಿದಾಗ ವರದಕ್ಷಿಣೆಯ ವಿರುದ್ಧದ ನಿಮ್ಮ ದಿಟ್ಟ ಏಕಾಂಗಿ ಹೋರಾಟ ನ್ಯಾಯಯುತವಾಗಿಯೇ ಇದೆ ಎಂಬುದು ಅರಿವಾಯಿತು. ಒಬ್ಬ ವಿದ್ಯಾವಂತನಾಗಿ ನಿಮ್ಮ ಸಾಮಾಜಿಕ ಕಳಕಳಿಯ ಹೋರಾಟಕ್ಕೆ ಕೈ ಜೋಡಿಸದಿದ್ದರೆ ನನ್ನಂತಹ ಸ್ವಾರ್ಥಿ ಮತ್ತು ಮೂರ್ಖ ಈ ಜಗತ್ತಿನಲ್ಲಿಯೇ ಬೇರೊಬ್ಬನಿಲ್ಲ ಎಂದು ನನ್ನ ಬಗ್ಗೆ ನನಗೇ ನಾಚಿಕೆಯಾಯಿತು. ನಂತರ ನನ್ನ ತಂದೆ-ತಾಯಿಯರು ನಿಮ್ಮ ಮೇಲೆ ಹಟಕ್ಕೆ ಬಿದ್ದವರಂತೆ ಲಕ್ಷ-ಲಕ್ಷ ವರದಕ್ಷಿಣೆ ನೀಡಲು ತಯಾರಿದ್ದ ಬರೀ ಶ್ರೀಮಂತರ ಮನೆಯ ಹುಡುಗಿಯರನ್ನು ತೋರಿಸತೊಡಗಿದರು. ಅವರು ಎಷ್ಟೇ ಪ್ರಯತ್ನಿಸಿದರೂ ಅವರು ತೋರಿಸಿದ ಯಾವ ಹುಡುಗಿಯನ್ನೂ ನಾನು ಒಪ್ಪಲಿಲ್ಲ. ಕೊನೆಗೆ ಕಾರಣ ಕೇಳಿದಾಗ ವರದಕ್ಷಿಣೆ ತೆಗೆದುಕೊಂಡು ಮದುವೆಯಾಗುವುದಿಲ್ಲ ಎಂಬ ನನ್ನ ದೃಢಸಂಕಲ್ಪವನ್ನು ಸ್ಪಷ್ಟಪಡಿಸಿದೆ. ಏನೋ ನೀನು ಸುಖವಾಗಿ ಇರ್ಲೀ ಅಂತ ಅಲ್ವಾ ನಾವು ಮಾಡ್ತಾ ಇರೋದು ಅಂದರು. ನನ್ನ ಸುಖ ಮತ್ತು ಸಂಪಾದನೆ ಎರಡೂ ನನ್ನ ಕೈಯಲ್ಲಿಯೇ ಇವೆ, ಮದುವೆಯಾಗಿ ಜೀವನಪೂರ್ತಿ ಜೊತೆಯಲ್ಲಿರಬೇಕಾದ ಹೆಣ್ಣಿನ ಕುಟುಂಬದವರನ್ನು ಶೋಷಿಸುವ ಕೆಟ್ಟ ಮನಸ್ಸಿನ ವ್ಯಕ್ತಿ ನಾನಾಗಲಾರೆ ಎಂದು ಹೇಳಿ ನನ್ನ ತಂದೆ-ತಾಯಿಯರಿಗೆ ಮನವರಿಕೆ ಮಾಡಿಕೊಟ್ಟಿದ್ದೇನೆ. ನಿಮ್ಮ ಆಶಯದಂತೆ ಯಾವುದೇ ವರದಕ್ಷಿಣೆ ವರೋಪಚಾರವಿಲ್ಲದೇ ನಿಮ್ಮನ್ನು ಸರಳ ವಿವಾಹವಾಗಲು ಸಿದ್ಧನಾಗಿದ್ದೇನೆ. ನಮ್ಮಿಬ್ಬರ ಮದುವೆಗೆ ನನ್ನ ತಂದೆ-ತಾಯಿಯರೂ ಒಪ್ಪಿದ್ದಾರೆ. ಯೋಚಿಸಿ ನಿಮ್ಮ ನಿರ್ಧಾರ ತಿಳಿಸಿ’ ಎಂದು ಹೇಳಿ ಹೊರಟ ಸುಮಂತನನ್ನು  ಕಂಡು ರೇವತಿ ಆನಂದದಿಂದ ಕೂಗಿ ಹೇಳಿದಳು. 
‘ರೀ ಸುಮಂತ್.. ಎಲ್ಲಿಗೋಗ್ತಾ ಇದೀರಾ.. ಮನೆಗೆ ಹೋಗೋಣ ಬನ್ನೀ...’
 

Comments

Submitted by sathishnasa Wed, 03/13/2013 - 12:56

ರೇವತಿ ಮತ್ತು ಸುಮಂತ್ ಇಬ್ಬರ ನಿರ್ಧಾರಗಳು ಮೆಚ್ಚುವಂತದು ಹಾಗೆ ಈಗಿನ ಯುವ ಪೀಳಿಗೆಗೆ ಅನುಕರಣೀಯ. ಒಳ್ಳೆಯ ಕಥೆ ತಿಮ್ಮಪ್ಪನವರೇ ಧನ್ಯವಾದಗಳೊಂದಿಗೆ .......ಸತೀಶ್