ಮದುವೆ ಅನ್ನುವುದು ಹರಕೆ ಅಲ್ಲ...!
ಮದುವೆ ಅನ್ನುವುದು ಸಂಸಾರ ದೀಕ್ಷೆ. ಅದಕ್ಕೆ ಅದರದೇ ಆದ ರೀತಿ ನೀತಿಗಳನ್ನು ತೋರಿಸಿಕೊಟ್ಟಿದೆ ತುಳುವ ಸಂಸ್ಕೃತಿ. ವ್ಯಕ್ತಿಯೊಬ್ಬನ ವಯೋ ಸಹಜತೆಗೆ ತಕ್ಕಂತೆ ಹದಿನಾರು ಸಂಸ್ಕಾರಗಳಿವೆ. ಅದರಲ್ಲಿ ಮದುವೆ ಅನ್ನುವುದು ಅತೀ ಅಮೂಲ್ಯ ಸ್ಥಾನ ಪಡೆದಿದೆ. ಯಾಕೆಂದರೆ ಮದುವೆ ಅನ್ನುವುದು ತನ್ನ ಸ್ವಂತ ಸಂಸಾರಕ್ಕೆ ಬುನಾದಿ. ಆ ಸುಂದರವಾದ ಸಂಸಾರದ ಪಂಚಾಂಗವನ್ನೇ ಸರಿಯಾಗಿ ಕಟ್ಟದೇ ಹೋದರೆ ಸಂಸಾರ ಅನ್ನವ ಸುಂದರವಾದ ಗುಡಿಗೆ ಗಂಡಾಂತರ ತಪ್ಪಿದ್ದಲ್ಲ.
ನಾನು ಇದನ್ನು ಯಾಕೆ ಬರೆಯುತ್ತಿದ್ದೇನೆ ಅಂದರೆ ತುಳುವರ ಮದುವೆಗಳ ಕಟ್ಟುಪಾಡುಗಳನ್ನು ಗಾಳಿಗೆ ತೂರಿ ಅದನ್ನು ಹೊಸ ಹೊಸ ಪ್ರಯೋಗಗಳಿಗೊಡ್ಡಲಾಗುತ್ತಿದೆ. ಒಂದು ಮದುವೆ ನಿಗದಿಯಾಯಿತೆಂದರೆ ಸಾಕು ಯಾವ ತೆರನಾಗಿ ಮಿಕ್ಕವರಿಗಿಂತ ಭಿನ್ನ ರೀತಿಯಲ್ಲಿ ನಡೆಸುವುದು ಅನ್ನುವ ಲೆಕ್ಕಚಾರ ಸುರುವಾಗುತ್ತದೆ. ಇತ್ತೀಚೆಗೆ ಹುಲಿ ಕುಣಿತ ಮಾಡಿಕೊಂಡು ಹೋಗುವ ಮದುಮಗಳು, ಸಭಾಂಗಣದಲ್ಲಿ ಬಂದ ಅತಿಥಿ ಅಭ್ಯಾಗತ ಜನರ ಮುಂದೆ ನೃತ್ಯ ಮಾಡಿಕೊಂಡು ಮಂಟಪಕ್ಕೆ ಹೋಗುವ ಮದುಮಗಳು, ಸೈಕಲಲ್ಲಿ ಹೋಗುವ ಮದುಮಗಳು ಹೀಗೆ ಮದುವೆಗಳು ನಾನಾ ಅವತಾರ ಪಡೆದುಕೊಂಡು, ಹೊಸ ಹೊಸ ಪ್ರಯೋಗಗಳಿಗೆ ತಮ್ಮ ಮದುವೆಗಳನ್ನು ಒಗ್ಗಿಸಿಕೊಂಡು ಮೀಸೆ ತಿರುವಿ ತುಳುವರು ತಮ್ಮ ಮಹೋನ್ನತ ಸಂಸ್ಕೃತಿಯನ್ನು ತುಳಿಯುತ್ತಿದ್ದಾರೆ.
ಅದೊಂದು ಕಾಲವಿತ್ತು. ಮದುಮಗಳು ಸಭಾಂಗಣಕ್ಕೆ ಬರಬೇಕಾದರೆ, ಅವಳು ನೆಲಮಸ್ತಕಳಾಗಿ ತನ್ನ ಸಂಸಾರದ ಹೆಣ್ಣೊಬ್ಬಳು ಒಂದು ಕೈಯಲ್ಲಿ ಕೊಡೆ ಹಿಡಿದು ಮತ್ತೊಂದು ಕೈಯಲ್ಲಿ ಮದುಮಗಳ ಕೈ ಹಿಡಿದು ತರುವ ಸಂಪ್ರದಾಯ. ಸಂಭಾಂಗಣದಲ್ಲೂ ಕೊಡೆ ಯಾಕೆ ಹಿಡಿಯುತ್ತಾರೆ. ಕೈ ಯಾಕೆ ಹಿಡಿದುಕೊಂಡು ಬರುತ್ತಾರೆ ಅಂದರೆ ಅದರಲ್ಲಿ ಅಪೂರ್ವ ಅರ್ಥವಿದೆ. ನಮ್ಮ ಮಗಳನ್ನು ಪ್ರೀತಿಯ ನೆರಳಲ್ಲಿ ಬೆಳೆಸಿದ್ದೇವೆ ಅನ್ನುವ ಅರ್ಥವನ್ನು ಕೊಡೆ ಹೇಳಿದರೆ, ಅರಗಿಣಿಯಂತೆ ಕೈ ಹಿಡಿದು ಪ್ರೀತಿಯಿಂದ ನಡೆಸಿದ್ದೇವೆ ಅನ್ನುವುದು ಕೈ ಹಿಡಿದು ತರುವ ಶಾಸ್ತ್ರ. ಮದುವೆ ಮಂಟಪಕ್ಕೆ ಬಂದ ನಂತರ ಕೊಡೆ ಮತ್ತು ಕೈ ಹಿಡಿದು ನಡೆಸುವ ಹಕ್ಕನ್ನು ಮದುಮಗನ ಪಾಲಿನವರು ಪಡೆದುಕೊಳ್ಳುತ್ತಾರೆ.
ಈಗೀಗ ದೇವಸ್ಥಾನದಲ್ಲಿ ತಾಳಿ ಕಟ್ಟುವ ಹೊಸ ಸಂಪ್ರದಾಯ ಕೂಡ ನಮ್ಮದಾದ ಸಂಸ್ಕೃತಿ ನಾಶಕ್ಕೆ ಕಾರಣವಾಗುತ್ತಿದೆ. ಮದುವೆ ಯಾವತ್ತೂ ದೈವಗಳಿಗೆ ಕೈ ಮುಗಿದು, ಸಂಸಾರದ ಹಿರಿ ಜೀವಿಗಳ ಮುಂದೆ ನಿಂತು ಅವರ ಆಶೀರ್ವಾದ ಮುಖೇನವಾಗಿ ನಡೆಯಬೇಕು. ಅದಕ್ಕೆ ಅದರದೇ ಆದ ರೀತಿ ರಿವಾಜುಗಳಿವೆ. ಅದು ಬಿಟ್ಟು ದೇವಸ್ಥಾನದ ಬಾಗಿಲಲ್ಲಿ ತಾಳಿ ಕಟ್ಟಲು ಮದುವೆ ಅನ್ನುವುದು ಹರಕೆಯೂ ಅಲ್ಲ. ಅಥವಾ ದೊಡ್ಡ ಸೇವೆಯೂ ಅಲ್ಲ. ದೇವಸ್ಥಾನ ಆತ್ಮೋನ್ನತಿ ಅನ್ನುವ ಸುಂದರ ಧ್ಯೇಯದಿಂದ ಎದ್ದು ನಿಂತಿದೆ. ಮದುವೆ ಅನ್ನೊದು ಆತ್ಮೋನ್ನತಿಯ ಭಾಗವಂತೂ ಖಂಡಿತವಾಗಿಯೂ ಅಲ್ಲ. ಆದರೆ ಈಗಿನ ದಾವಂತ ನೋಡಿದರೆ ಮುಂದೊಂದು ದಿನ ತುಳುನಾಡಿನ ದೇಗುಲಗಳಲ್ಲಿ ಮದುವೆ ಅನ್ನುವುದು ಹರಕೆಯ ಪಟ್ಟಿಯಲ್ಲಿ ಕಾಣ ಸಿಗುವ ದಿನ ದೂರವಿಲ್ಲ.
ತುಳುವರೇಕೆ ಹೀಗೆ ದಾರಿ ತಪ್ಪುತ್ತಿದ್ದಾರೆ.? ಕಟೀಲಿನ ದೇಗುಲದಲ್ಲಿ ಕೆಲವೊಂದು ದಿನ ಐನೂರು ಮದುವೆಗಿಂತಲೂ ಹೆಚ್ಚಿನ ಮದುವೆ ನಿಗದಿಯಾಗಿ ಅಂದರೆ ಬಾಗಿಲ ಬಳಿಯಲ್ಲಿ ತಾಳಿ ಕಟ್ಟಿಸಿಕೊಂಡು ನಮ್ಮ ಸಂಸ್ಕೃತಿಗೆ ಎಳ್ಳುನೀರು ಬಿಡುತ್ತಿದ್ದಾರೆ. ಅಲ್ಲಿ ಇಷ್ಟರವರೆಗಿನ ದಾಖಲೆಯನ್ನು ತಡಕಾಡಿದರೆ ಒಬ್ಬನೇ ಒಬ್ಬ ಬ್ರಾಹ್ಮಣ ಪಂಗಡದವರು, ಕೊಂಕಣಿಗಳು ಅಥವಾ ವಿಶ್ವಕರ್ಮ ಪಂಗಡದ ಜನ ಆ ತರ ಮದುವೆ ಮಾಡಿಕೊಂಡ ನಿದರ್ಶನಗಳು ಸಿಗುವುದಿಲ್ಲ. ಯಾಕೆಂದರೆ ಅವರು ಯಾವ ಯಾವ ಸಂಸ್ಕಾರವನ್ನು ಯಾವ ಯಾವ ರೀತಿ ಮಾಡಿಕೊಂಡರೆ ಒಳ್ಳೆಯದು ಅನ್ನುವುದನ್ನು ಅರಿತು ಅದರಂತೆಯೇ ನಡೆದುಕೊಂಡಿದ್ದಾರೆ.
ಅವರು ಸಂಸ್ಕಾರ ಮತ್ತು ಸಂಸ್ಕೃತಿಯೊಂದಿಗೆ ಮುಂದಡಿಯಿಡುತ್ತಿದ್ದಾರೆ. ಖಂಡಿತವಾಗಿಯೂ ಅವರು ಈ ಮಟ್ಟಿಗೆ ಪ್ರಶಂಸೆಗೆ ಪಾತ್ರರಾಗುವವರು. ನಾವು ನಮ್ಮ ಮದುವೆಗಳನ್ನು ಪ್ರಯೋಗಶಾಲೆಯನ್ನಾಗಿ ಮಾಡುತ್ತಿರುವುದನ್ನು ಮೊದಲಾಗಿ ನಿಲ್ಲಿಸೋಣ. ನಮ್ಮದೇ ಸಂಸ್ಕಾರಗಳನ್ನು ಉಳಿಸಿ ಬೆಳೆಸೋಣ. ಇಲ್ಲವಾದರೆ ಮದುವೆಯ ಛತ್ರಕ್ಕೂ ನಾಟಕದ ಶಾಲೆಗೂ ಖಂಡಿತವಾಗಿಯೂ ವ್ಯತ್ಯಾಸವೇ ಉಳಿಯುವುದಿಲ್ಲ.
-ಚಂದ್ರಕಾಂತ ಶೆಟ್ಟಿ ಕಾರಿಂಜ
ಚಿತ್ರ ಕೃಪೆ: ಇಂಟರ್ನೆಟ್ ತಾಣ