ಮದುವೆ ಉಡುಗೊರೆಯಿಂದ ವಿಟಾಮಿನ್ !

ಮದುವೆ ಉಡುಗೊರೆಯಿಂದ ವಿಟಾಮಿನ್ !

ಹೌದಾ, ಯಾವುದಪ್ಪಾ ಅಂತಹ ಉಡುಗೊರೆ? ಎಂದು ಹುಬ್ಬೇರಿಸಬೇಡಿ. ಕೆಲವು ದಿನಗಳ ಹಿಂದೆ ಹಳೆಯ ‘ಕಸ್ತೂರಿ' ಮಾಸಿಕಗಳನ್ನು ತಿರುವಿ ಹಾಕುತ್ತಿದ್ದಾಗ ಇಂತಹ ಒಂದು ಉಡುಗೊರೆಯ ಬಗ್ಗೆ ನಮೂದಾಗಿರುವ ಪುಟ್ಟ ಲೇಖನವೊಂದು ಸಿಕ್ಕಿತು. ಹೊಸ ಓದುಗರಿಗಾಗಿ ಜ್ಞಾನಾರ್ಜನೆಯ ದೃಷ್ಟಿಯಿಂದ ಆ ಲೇಖನವನ್ನು ಮರು ಪ್ರಕಟ ಮಾಡುತ್ತಿರುವೆ. ಕೆಲವೊಮ್ಮೆ ನಾವು ಏನು ಮಾಡಿದರೂ ನಮ್ಮ ಕಾರ್ಯ ಸಫಲವಾಗುವುದಿಲ್ಲ, ಆದರೆ ಅನಿರೀಕ್ಷಿತವಾಗಿ ಸಫಲತೆ ನಮ್ಮ ಕಾಲಿನ ಬುಡಕ್ಕೆ ಬಂದಿರುತ್ತದೆ. ಜಗತ್ತಿನಾದ್ಯಂತ ನಡೆದ ಹಲವಾರು ಅನ್ವೇಷಣೆಗಳು ಅನಿರೀಕ್ಷಿತವಾಗಿ ನಡೆದಿದೆ. ಅಂತಹ ಒಂದು ಸಂಶೋಧನೆಯ ಕುರಿತು ಈ ಬರಹ…

ಜಪಾನಿನ ಕ್ಯೂಟೋ ನಗರದ ಬಳಿ ಅಸಾಕಿ ಎಂಬ ಒಬ್ಬ ರೈತನಿದ್ದ. ಅವನ ಮದುವೆ ಆದಾಗ ಅವನ ಹೆಂಡತಿ ತಂದ ಉಡುಗೊರೆಯಲ್ಲಿ ಹೋಲ್ ಸ್ಟಿನ್ ತಳಿಯ ಒಂದು ಗೂಳಿ ಸಹ ಇತ್ತು. ಆದರೆ ಆ ಗೂಳಿ ತನ್ನ ವಂಶವೃಕ್ಷ ಬೆಳೆಸುವತ್ತ ತೀರಾ ಉದಾಸೀನ ಮಾಡಿ ಅಸಾಕಿಗೆ ತೊಂದರೆಯಿಟ್ಟುಕೊಂಡಿತು. ಅದಕ್ಕಾಗಿ ಆತ ಅನೇಕ ಪಶು ವೈದ್ಯರಿಂದ, ನಾಟಿ ವೈದ್ಯರಿಂದ ಮದ್ದು ತಂದು ಅದಕ್ಕೆ ಕೊಡಿಸಿದ. ಆದರೆ ಪರಿಣಾಮ ಮಾತ್ರ ಶೂನ್ಯ.

೧೯೪೭ರಲ್ಲಿ ಅಮೇರಿಕಾ ‘ಶಾಂತಿಗಾಗಿ ಆಹಾರ' ಎಂಬ ಯೋಜನೆಯನ್ನು ಜಾರಿಗೆ ತಂದಿತ್ತು. ಆ ಯೋಜನೆಯಡಿ ಅಸಾಕಿಗೆ ಗೋಧಿಯ ಜೀವಾಂಕುರದ ಎಣ್ಣೆ (Wheat germ oil) ಯ ಒಂದು ಬಾಟಲಿ ದೊರೆಯಿತು. ಆತ ಅದನ್ನು ತನ್ನ ಗೂಳಿಗೆ ಓಟ್ಸ್ ಹಾಗೂ ನೀರಿನ ಜೊತೆಯಲ್ಲಿ ನೀಡಿದ. ಆದರೆ ಗೂಳಿ ಅದನ್ನು ತಿನ್ನಲು ನಿರಾಕರಿಸಿತು. ಕೊನೆಗೆ ಅವನು ಉಪ್ಪು ನೆಕ್ಕಲಿನ ಜೊತೆಯಲ್ಲಿ ಈ ಎಣ್ಣೆಯನ್ನು ಬೆರೆಸಿ ಕೊಟ್ಟ. ಆಗ ಅದನ್ನು ಗೂಳಿ ನೆಕ್ಕಲಾರಂಬಿಸಿತು. ಆದಾದ ಬಳಿಕ ಗೂಳಿಗೆ ಉತ್ತಮ ನಿದ್ರೆ ಬಂತು. ನಿದ್ರೆಯಿಂದ ಎದ್ದ ಗೂಳಿ ಹತ್ತಿರವಿರುವ ದನಗಳ ಕೊಟ್ಟಿಗೆಯ ಹತ್ತಿರ ಹೋಗಲಾರಂಭಿಸಿತು. ಕೆಲವೇ ದಿನಗಳಲ್ಲಿ ಅದು ತನ್ನ ಲೈಂಗಿಕಾಸಕ್ತಿಯನ್ನು ವೃದ್ಧಿಸಿಕೊಂಡಿತು. ವಂಶಾಭಿವೃದ್ಧಿಯೂ ಆಯಿತು. 

ಇದರಿಂದ ಸಂತೋಷ ಭರಿತ ಅಚ್ಚರಿಗೆ ಒಳಗಾದ ಅಸಾಕಿ ಸ್ಥಳೀಯ ಪಶು ವೈದ್ಯಾಧಿಕಾರಿಗಳನ್ನು ಸಂಪರ್ಕಿಸಿ ತನ್ನ ಗೂಳಿಯಲ್ಲಾದ ಬದಲಾವಣೆಯ ಬಗ್ಗೆ ತಿಳಿಸಿದ. ಅವರಿಗೂ ಗೂಳಿಯಲ್ಲಾದ ಪರಿವರ್ತನೆ ಆಶ್ಚರ್ಯ ತಂದಿತು. ಅಸಾಕಿ ತಾನು ಬಳಸಿದ ಎಣ್ಣೆಯನ್ನು ಅವರಿಗೆ ನೀಡಿದ. ಅವರು ಅದನ್ನು ಕ್ಯೂಟೋಗೆ ತೆಗೆದುಕೊಂಡು ಹೋಗಿ ಪ್ರಯೋಗ ಮಾಡಿದರು. ಆಗ ಆ ಎಣ್ಣೆಯಲ್ಲಿ ಅಲ್ಪ ಪ್ರಮಾಣದಲ್ಲಿ ಟೋಕೋಫೆರೋಲ್ ಎಂಬ ಅಂಶ ಒಳಗೊಂಡಿರುವ ಬಗ್ಗೆ ತಿಳಿದು ಬಂತು. ಈ ಬಗ್ಗೆ ಇನ್ನಷ್ಟು ಸಂಶೋಧನೆ ಮಾಡುವ ಅಗತ್ಯವನ್ನು ಮನಗೊಂಡ ವೈದ್ಯರು ಅದನ್ನು ಅಮೇರಿಕಾಗೆ ಕಳುಹಿಸಿಕೊಟ್ಟರು. ಆದರೆ ಅಮೇರಿಕಾದ ವ್ಯವಸಾಯ ಇಲಾಖೆಯ ಸಂಶೋಧಕರು ಅಲ್ಪ ಟೋಕೋಫೆರೋಲ್ ಬಗ್ಗೆ ಅಧಿಕ ಆಸಕ್ತಿಯನ್ನು ತೆಗೆದುಕೊಳ್ಳಲಿಲ್ಲ. ಆ ಇಲಾಖೆಯ ಸಂಶೋಧಕರು ಅದನ್ನು ಆಹಾರ ಇಲಾಖೆಗೆ ಕಳುಹಿಸಿ ಸುಮ್ಮನಾದರು.

ಹೀಗೆಯೇ ಅನೇಕ ವರ್ಷಗಳು ಉರುಳಿದವು. ಯಾರೂ ಅಲ್ಪ ಟೊಕೋಫೆರೋಲ್ ಒಂದು ವಿಟಾಮಿನ್ ಎಂದು ಒಪ್ಪಲು ಸಿದ್ಧರಿರಲಿಲ್ಲ. ಕೊನೆಯದಾಗಿ ೧೯೬೦ರಲ್ಲಿ ಈ ಅಂಶಕ್ಕೆ ವಿಟಾಮಿನ್ -ಇ ಎಂದು ನಾಮಕರಣ ಮಾಡಲಾಯಿತು. ಪ್ರಪಂಚದಾದ್ಯಂತ ವೈದ್ಯರು, ವಿಜ್ಞಾನಿಗಳು ತಮ್ಮ ಲೇಖನಗಳಲ್ಲಿ ದನಗಳ ಸಂತಾನಾಭಿವೃದ್ಧಿಯಲ್ಲಿ ಈ ವಿಟಾಮಿನ್ ಪಾತ್ರವನ್ನು ಪ್ರಶಂಸಿಸಿ ಲೇಖನಗಳನ್ನು ಬರೆದರು. 

ದನಗಳಲ್ಲಿ ಮಾತ್ರವೇ ಅಲ್ಲ, ಆಮೇಲೆ ಜನಗಳಲ್ಲಿ ಸಹ ಈ ವಿಟಾಮಿನ್ ಉಪಯೋಗಿಸಿಕೊಂಡು ಬಂಜೆತನವನ್ನು ವಾಸಿಮಾಡಲು ಸಾಧ್ಯವೇ ಎಂಬ ಪ್ರಯೋಗಗಳು ನಡೆದವು. ಈ ವಿಟಾಮಿನ್ ಮನುಷ್ಯರ ದಾಂಪತ್ಯ ಜೀವನಕ್ಕೆ ಸಂಬಂಧ ಪಟ್ಟ ಕೆಲವು ತರಹದ ರೋಗಗಳನ್ನು ನಿವಾರಿಸಿ ಅವರ ಜೀವನದಲ್ಲಿ ಉತ್ಸಾಹ ತುಂಬಲು ಸಹಾಯ ಮಾಡುತ್ತದೆ ಎಂದು ಆಗಿನ ಸಂಶೋಧನೆಗಳು ಹೇಳುತ್ತಿವೆ. 

ಅಂತೂ ವಿಟಾಮಿನ್ -ಇ ಸಂಶೋಧನೆಗೆ ಕಾರಣವಾದುದು ಒಂದು ಮದುವೆಯ ಉಡುಗೊರೆ ಎಂಬ ಮಾತನ್ನು ಮಾತ್ರ ಒಪ್ಪಲೇ ಬೇಕು ಅಲ್ಲವೇ? ಅಂದಿನ ಈ ಸಂಶೋಧನೆ ಭವಿಷ್ಯದ ಅನೇಕ ಸಂಶೋಧನೆಗಳಿಗೆ ನಾಂದಿಯಾಯಿತು. ಪಶುಗಳ ಬಂಜೆತನ ಜೊತೆಗೆ ಮಾನವರ ಬಂಜೆತನದ ನಿವಾರಣೆಗಾಗಿ ಹಲವಾರು ಸುಧಾರಿತ ಕ್ರಮಗಳು ಹಾಗೂ ಔಷಧಿಗಳು ಈಗ ಬಂದಿವೆ. ಆದರೂ ಪ್ರಾರಂಭಿಕ ಅನ್ವೇಷಣೆಯ ಮಹತ್ವವನ್ನು ಮಾತ್ರ ಅಲ್ಲಗಳೆಯಲಾಗದು. 

(ಕಸ್ತೂರಿ ಡಿಸೆಂಬರ್ ೧೯೭೩ರ ಸಂಚಿಕೆಯಿಂದ ಸಂಗ್ರಹಿತ)

ಸಾಂದರ್ಭಿಕ ಚಿತ್ರ ಕೃಪೆ : ಅಂತರ್ಜಾಲ ತಾಣ