ಮದ್ದು ಗುಂಡಿನ ಕಿಡಿಯು ಹಾರಿಸಿ...
(ಭಾಮಿನಿ ಷಟ್ಪದಿ)
ದೀಪ ಹಚ್ಚುತ ತಮವದೂಡುತ
ಧೂಪ ಬೆಳಗಿ ಜ್ಞಾನ ತುಂಬಿದೆ
ರೂಪನಂದನ ಪೂಜೆ ಮಾಡುವ ದಿವ್ಯದಂಗಳದಿ
ಛಾಪು ಮೂಡಿಸಿ ಕಳೆಯು ಚೆಲ್ಲಿದೆ
ದಾಪುಗಾಲಿನ ರಂಗ ಕುಣಿಯುತ
ಕಾಪು ಮಾಡುತ ಮನವ ಗೆಲ್ಲುತ ಶುಭವ ಕೋರುತಿದೆ||
ಸಾಲು ಹಣತೆಯ ಬೆಳಗಿ ಮನೆಯಲಿ
ಹಾಲಿನಂದದಿ ಹೊಳೆದು ಕಾದಿದೆ
ಬಾಲ ಕಲರವ ಮಿಂಚಿ ಮುಳುಗುತ ತೇಲಿ ಮೆರೆಯುತಿದೆ
ಮೇಲು ಕೀಳು ಬೇಧವಳಿಸುತ
ಲಾಲಿ ಹಾಡು ಕೇಳಿ ನಡೆಯುತ
ಮಾಲೆ ಸರವನು ದೈವ ಸನ್ನಿಧಿ ಮುಡಿಸಿ ನಲಿಯುತಿದೆ||
ಜನರ ಕಲ್ಮಶದೂಡಿ ಸಾಗುತ
ಮನದಿ ಬೇಡುತ ದೇವನೊಲಿಸುತ
ಬನದ ಸಿರಿಯದು ಬೆಳೆದು ನಿಂತು ನೆರಳು ನೀಡುತಲಿ
ಧನದ ಮದವನು ಹಣದ ಸಿರಿಯನು
ವಿನಯ ಭಾವದಿ ದೂರ ತಳ್ಳುವ
ದಿನದ ಪೂರ್ತಿಯು ದೇವ ವಂದಿಸಿ ಭಕ್ತಿ ಪೂರ್ವಕವು||
ಮದ್ದು ಗುಂಡಿನ ಕಿಡಿಯು ಹಾರಿಸಿ
ಸದ್ದು ಮಾಡುತ ಬೆಳಕು ಚೆಲ್ಲುತ
ಗುದ್ದು ನೀಡುವ ಮಾತು ಬೆರೆಸುತ ಭವ್ಯದಂಗಳದಿ
ಬದ್ಧವಾಗಿಯೆ ಪೂಜೆ ಮಾಡುತ
ಸಿದ್ಧರಾಗಿಯೆ ಹೊಸತು ಬಟ್ಟೆಯ
ಸುದ್ಧಿ ಮಾಡುತ ಧರಿಸಿ ನಲಿಯುತ ಹಬ್ಬ ದಿನದಂದು||
ಹಬ್ಬ ದಿನದಲಿ ಮುದ್ದು ಮಾಡುತ
ದಿಬ್ಬದಲ್ಲಿನ ದೈವ ನಮಿಸುತ
ಹಬ್ಬಿನಿಂತಿಹ ಬೆಳೆಯ ಸಿರಿಯನು ನೋಡಿ ಸಂತಸದಿ|
ದಬ್ಬಿ ತಮವನು ಚಣದಿ ದೂಕುತ
ಮಬ್ಬು ಕತ್ತಲೆ ಸರಿದು ಬೆಳಕದು
ಕಬ್ಬು ಸಕ್ಕರೆ ಮನದ ನೆಮ್ಮದಿ ಸಿರಿ ಪ್ರಣತಿಯಿದು||
-*ಅಭಿಜ್ಞಾ ಪಿ ಎಮ್ ಗೌಡ*
ರೂಪದರ್ಶಿ: ಕಶ್ವಿ, ಬೋಂದೇಲ್ ಕಂಬ್ಳ, ಮಂಗಳೂರು