ಮದ್ದೂರು ವಡೆ: ಶತಮಾನದ ಮಧುರ ಕಥನ

ಮದ್ದೂರು ವಡೆ: ಶತಮಾನದ ಮಧುರ ಕಥನ

ಮದ್ದೂರು ಎಂದೊಡನೆ ತಟಕ್ಕನೆ ನೆನಪಾಗುವುದು ಮದ್ದೂರು ವಡೆ. ಈ ದೇಸಿ ತಿನಿಸಿಗೆ ೧೦೦ ವರುಷ ತುಂಬುತ್ತದೆ – ಎಪ್ರಿಲ್ ೨೦೧೭ರಲ್ಲಿ.
ಬೆಂಗಳೂರಿನಿಂದ ಸುಮಾರು ೮೦ ಕಿಮೀ ದೂರದಲ್ಲಿದೆ ಮದ್ದೂರು. ಅಲ್ಲೊಂದು ರೈಲು ನಿಲ್ದಾಣ. ಅಲ್ಲಿನ ಸಸ್ಯಾಹಾರಿ ಟಿಪಿನ್ ರೂಂನಲ್ಲಿ ಈ “ವಡೆ” ಅವತರಿಸಿದ್ದು ಎಪ್ರಿಲ್ ೧೯೧೭ರಲ್ಲಿ. ಅನಂತರ ಈ ವಿಶಿಷ್ಠ ತಿನಿಸು “ಮದ್ದೂರು ವಡೆ” ಎಂದೇ ಹೆಸರುವಾಸಿಯಾಯಿತು. ಅದೇನಿದ್ದರೂ ಈಗ ಮದ್ದೂರು ರೈಲು ನಿಲ್ದಾಣದಲ್ಲಿ ಮದ್ದೂರು ವಡೆಯ ಜನ್ಮಸ್ಥಳ ಇಲ್ಲ; ಅದನ್ನು ಮುಚ್ಚಲಾಗಿದೆ.
ಅಂದಿನಿಂದ ಇಂದಿನ ವರೆಗೆ, ಈ ನೂರು ವರುಷಗಳಲ್ಲಿ ನಾಲ್ಕೈದು ತಲೆಮಾರುಗಳ ಲಕ್ಷಗಟ್ಟಲೆ ಜನರು ಬೆಂಗಳೂರು – ಮೈಸೂರು ಹೆದ್ದಾರಿಯಲ್ಲಿ ತಮ್ಮ ವಾಹನಗಳಲ್ಲಿ ಓಡಾಡಿದ್ದಾರೆ. ಅವರಲ್ಲಿ ಹಲವರು ಮದ್ದೂರಿನಲ್ಲಿ ತಮ್ಮ ವಾಹನ ನಿಲ್ಲಿಸಿದ್ದಾರೆ - ಮದ್ದೂರು ವಡೆಯ ರುಚಿ ಚಪ್ಪರಿಸಬೇಕೆಂಬ ಒಂದೇ ಕಾರಣಕ್ಕಾಗಿ.  
ಮದ್ದೂರು ವಡೆಯ ಚರಿತ್ರೆಯನ್ನು ಮದ್ದೂರಿನಲ್ಲಿ ಹರಿಯುವ ಶಿಂಸಾ ನದಿಯ ಕತೆಯಿಂದಲೇ ಶುರು ಮಾಡೋಣ. ೨೦ನೇ ಶತಮಾನದ ಆರಂಭದಲ್ಲಿ, ಉಗಿ ಇಂಜಿನುಗಳು ಎಳೆಯುತ್ತಿದ್ದ ರೈಲುಗಳು ಮದ್ದೂರು ಮೂಲಕವೇ ಬೆಂಗಳೂರಿಗೆ ಹೋಗುತ್ತಿದ್ದವು – ಮೀಟರ್ ಗೇಜಿನ ಹಳಿಗಳಲ್ಲಿ. ಮದ್ದೂರಿನ ರೈಲು ನಿಲ್ದಾಣದಲ್ಲಿ ಎಲ್ಲ ರೈಲುಗಳದ್ದೂ ೨೦ರಿಂದ ೩೦ ನಿಮಿಷಗಳ ಠಿಕಾಣಿ – ಶಿಂಸಾ ನದಿಯಿಂದ ರೈಲಿನ ನೀರಿನ ಟ್ಯಾಂಕುಗಳಿಗೆ ನೀರು ತುಂಬಿಸಲಿಕ್ಕಾಗಿ. ಕರಾವಳಿಯ ಕುಂದಾಪುರದಿಂದ ಬಂದು ಅಲ್ಲಿ ನೆಲೆಸಿದ್ದ ರಾಮಚಂದ್ರ ಬುದ್ಯರು, ರೈಲುಗಳು ನಿಂತೊಡನೆಯೇ ತಮ್ಮ ಇಡ್ಲಿ-ವಡೆಗಳ ಮಾರಾಟ ಶುರು ಮಾಡುತ್ತಿದ್ದರು.
ಅವರ ಕುಟುಂಬದಲ್ಲಿ ಕಾಲಪ್ರವಾಹದಲ್ಲಿ ಹರಿದು ಬಂದ ಮದ್ದೂರು ವಡೆಯ ಹುಟ್ಟಿನ ಕತೆ ಹೀಗಿದೆ: ಅದೊಂದು ದಿನ ಬುದ್ಯರು ಪಕೋಡ ಮಾಡಲು ತಯಾರಿ ನಡೆಸಿದ್ದರು. ಅದೇನು ಅನಿಸಿತೋ, ಪಕೋಡದ ಉಂಡೆಗಳನ್ನು ಚಪ್ಪಟೆ ಮಾಡಿ ಎಣ್ಣೆಯಲ್ಲಿ ಕರಿದರು. ಈ ಹೊಸತಿಂಡಿಗೆ ಅಂದೇ ಮದ್ದೂರು ವಡೆ ಎಂದು ನಾಮಕರಣವಾಯಿತು. ಮುಂದೆ ಅದೊಂದು ದಂತಕತೆಯಾಯಿತು.
ಮದ್ದೂರು ರೈಲು ನಿಲ್ದಾಣದಲ್ಲಿ ಮದ್ದೂರು ವಡೆ ಮಾರಲಿಕ್ಕಾಗಿ ಬುದ್ಯರು ವೆಜಿಟೇರಿಯನ್ ಟಿಫಿನ್ ರೂಮ್ ಆರಂಭಿಸಿದ್ದು ೧೯೧೭ರಲ್ಲಿ. ಅನಂತರ, ೧೯೪೮ರಲ್ಲಿ ಅದನ್ನು ವಹಿಸಿಕೊಂಡವರು ಎಚ್.ಡಿ. ಹೆಬ್ಬಾರ್. ಮದ್ದೂರು ವಡೆಯ ಹೆಸರು, ರುಚಿ, ಸ್ವಾದ ಒಂದಿಷ್ಟೂ ಕೆಡದಂತೆ ಇವರು ಟಿಫಿನ್ ರೂಮಿನ ವ್ಯವಹಾರ ಮುಂದುವರಿಸಿದರು. ಅವರ ನಂತರ, ಸಾರಥ್ಯ ವಹಿಸಿದವರು ಅವರ ಮಗ ಡಿ. ಗೋಪಾಲಯ್ಯ. ರೈಲು ನಿಲ್ದಾಣದ ಹೊರಗಡೆಯೂ ಮದ್ದೂರು ವಡೆ ಮಾರಾಟಕ್ಕಿಟ್ಟು, ವ್ಯವಹಾರ ವಿಸ್ತರಿಸಿದರು. ಇವರ ಪುತ್ರ ಜಯಪ್ರಕಾಶ್ ೧೯೮೭ರಲ್ಲಿ ಮದ್ದೂರಿನಲ್ಲಿ ಸ್ಥಾಪಿಸಿದ ಹೋಟೆಲ್ “ಮದ್ದೂರು ಟಿಫಾನೀಸ್”.
ಹೀಗೆ ಒಂದು ಶತಮಾನದ ಕಾಲ ಮದ್ದೂರು ರೈಲು ನಿಲ್ದಾಣದ ಮರೆಯಲಾಗದ ಭಾಗವಾಗಿದ್ದ ಸಸ್ಯಾಹಾರಿ ಟಿಫಿನ್ ರೂಮನ್ನು ಈ ವರುಷ ಮುಚ್ಚಬೇಕಾಯಿತು. ಅದರ ಮಾಲೀಕರಲ್ಲಿ ಒಬ್ಬರಾದ ಡಿ.ಎನ್. ಚತುರ “ಅಲ್ಲಿ ಹತ್ತುಹಲವು ಸಮಸ್ಯೆಗಳು ಎದುರಾದವು” ಎಂದು ತಿಳಿಸುತ್ತಾರೆ. “ಮದ್ದೂರು ರೈಲ್ವೇ ಸ್ಟೇಷನಿನಲ್ಲಿ ರೈಲುಗಳು ಕೆಲವೇ ನಿಮಿಷ ನಿಲ್ಲುತ್ತವೆ. ರೈಲುಗಳು ನಿಂತ ಕೂಡಲೇ ಹತ್ತಾರು ಪರವಾನಗಿಯಿಲ್ಲದ ಮಾರಾಟಗಾರರು ತಮ್ಮತಮ್ಮ ಮದ್ದೂರು ವಡೆಗಳೊಂದಿಗೆ ಬೋಗಿಗಳಿಗೆ ನುಗ್ಗುತ್ತಾರೆ. ಅವರದೇ ಮಾರಾಟದ ಭರಾಟೆ. ರೈಲ್ವೇ ಅಧಿಕಾರಿಗಳಂತೂ ವಡೆಯನ್ನು ಹತ್ತು ರೂಪಾಯಿಗಿಂತ ಹೆಚ್ಚಿನ ಬೆಲೆಗೆ ಮಾರಬಾರದೆಂದು ತಾಕೀತು ಮಾಡುತ್ತಾರೆ” ಎಂದು ವಿವರಿಸುತ್ತಾರೆ ಚತುರ. ಈ ಎಲ್ಲ ಕಾರಣಗಳಿಂದಾಗಿ, ಮದ್ದೂರು ರೈಲು ನಿಲ್ದಾಣದ ಚಾರಿತ್ರಿಕ ಹೋಟೆಲೊಂದು ೨೮ ಜನವರಿ ೨೦೧೭ರಂದು ಚರಿತ್ರೆಯ ಪುಟಗಳನ್ನು ಸೇರಿತು.
ಮದ್ದೂರಿನ ಹೊರವಲಯದಲ್ಲಿರುವ ದೊಡ್ಡ ಫಲಕ “ಮದ್ದೂರು ಟಿಫಾನೋಸ್”ಗೆ ನಿಮ್ಮನ್ನು ಸ್ವಾಗತಿಸುತ್ತದೆ: ಅಲ್ಲಿ ದಕ್ಷಿಣ ಭಾರತದ ಹೆಸರುವಾಸಿ ತಿಂಡಿಗಳೆಲ್ಲ ಲಭ್ಯ: ಅಕ್ಕಿರೊಟ್ಟಿ, ಇಡ್ಲಿ, ದೋಸೆ, ಉದ್ದಿನವಡೆ ಮತ್ತು ಮದ್ದೂರು ವಡೆ.
ಅಲ್ಲಿನ ಅಡಿಗೆಮನೆ ಸಾವಿರಾರು ಮದ್ದೂರು ವಡೆಗಳ ತಯಾರಿಗೆ ಸರ್ವರೀತಿಯಲ್ಲಿ ಸಜ್ಜಾಗಿದೆ. ಮೂರು ಜನರ ಎರಡು ತಂಡಗಳಿಂದ ಅಲ್ಲಿ ಎರಡು ಶಿಫ್ಟುಗಳಲ್ಲಿ ಮದ್ದೂರು ವಡೆ ತಯಾರಿ. ಅದಕ್ಕೆ ಬೇಕಾದ ಈರುಳ್ಳಿ ಪುಣೆಯಿಂದ ತರಿಸಿಕೊಳ್ಳುತ್ತಾರೆ – ವಡೆಗೆ “ನಿಜವಾದ ರುಚಿ” ಬರಬೇಕಾದರೆ ಅದೇ ಈರುಳ್ಳಿ ಅಗತ್ಯ. ಈ ಮೂರು ಜನರ ತಂಡದ ಮುಖ್ಯಸ್ಥರೇ ಮದ್ದೂರು ವಡೆಯ “ರುಚಿಯ ಗುಟ್ಟು” ಬಲ್ಲವರು. ಒಂದು ತಂಡದ ಮುಖ್ಯಸ್ಥರಾದ ಸುಬ್ಬಣ್ಣರಿಗೆ ಈಗ ವಯಸ್ಸು ೫೧. ಅವರಿಗಿಂತ ಮುಂಚಿನ ಮುಖ್ಯಸ್ಥರು ವಡೆಗೆ ಬೇಕಾದ್ದನ್ನು ಹೇಗೆ ಮಿಶ್ರಣ ಮಾಡುತ್ತಿದ್ದರು ಎಂಬುದನ್ನು ನೋಡುತ್ತ ನೋಡುತ್ತ ಇವರೂ “ಆ ಗುಟ್ಟು” ಕಲಿತರು.
ತಂಡದ ಒಬ್ಬರು ಕತ್ತರಿಸಿದ ಈರುಳ್ಳಿಯನ್ನು (ಬೆಂಗಳೂರಿನ ನಿರ್ದಿಷ್ಟ ಮಿಲ್ಲಿನಿಂದ ತಂದ) ಸೋಜಿ, ಮೈದಾ, ಉಪ್ಪು, ತುಪ್ಪ ಮತ್ತು ಬೆಣ್ಣಿ ಜೊತೆ ಬೆರೆಸುತ್ತಾರೆ ಸುಬ್ಬಣ್ಣ. “ಪರಿಮಳಕ್ಕಾಗಿ ತುಪ್ಪ ಮತ್ತು ಗರಿಗರಿಯಾಗಲಿಕ್ಕಾಗಿ ಬೆಣ್ಣೆ” ಎನ್ನುತ್ತಾರೆ. ಇವನ್ನೆಲ್ಲ ಕರಾರುವಾಕ್ಕಾಗಿ ಮಿಶ್ರ ಮಾಡಿ, ಮಿಶ್ರಣವನ್ನು ಮೂರನೆಯವರಿಗೆ ದಾಟಿಸುತ್ತಾರೆ. ಇವರು ಅದರಿಂದ ಉಂಡೆಗಳನ್ನು ಮಾಡಿ, ಅವನ್ನು ಚಪ್ಪಟೆಯಾಗಿಸಿ, ಕರಿಯಲಿಕ್ಕಾಗಿ ನಿಧಾನವಾಗಿ ಬಿಸಿ ಎಣ್ಣೆಗೆ ಜಾರಿಸುತ್ತಾರೆ. ಒಂದು ನಿಮಿಷದಲ್ಲಿ ಸುಮಾರು ೫೦ ಮದ್ದೂರು ವಡೆ ರೆಡಿ. ಒಂದು ಶಿಪ್ಟಿನಲ್ಲಿ ಮೂರು ಜನರ ಒಂದು ತಂಡ ತಯಾರಿಸುವ ವಡೆಗಳ ಸಂಖ್ಯೆ ೫೦೦. ಮದ್ದೂರು ವಡೆಗಳನ್ನು ಯಾವತ್ತೂ ಪುನಃ ಬಿಸಿ ಮಾಡಬಾರದು (ಮಾಡಿದರೆ ರುಚಿ ಕೆಡುತ್ತದೆ.)

ಗರಿಗರಿಯಾಗಿ ಮೃದುವಾಗಿರುವ, ಮುಟ್ಟಿದರೆ ಹುಡಿಹುಡಿಯಾಗುವ ಮದ್ದೂರು ವಡೆಯ ನೆನಪೇ ಸಾಕು – ಒಮ್ಮೆ ತಿಂದವರ ಬಾಯಿಯಲ್ಲಿ ಮತ್ತೆಮತ್ತೆ ನೀರೂರಲು. ಆದ್ದರಿಂದಲೇ, ಮದ್ದೂರಿನಿಂದ ಹಾದು ಹೋಗುವವರೆಲ್ಲ ತಮ್ಮ ವಾಹನ ನಿಲ್ಲಿಸುತ್ತಾರೆ – ಇನ್ನೊಮ್ಮೆ, ಮತ್ತೊಮ್ಮೆ ಮದ್ದೂರು ವಡೆ ಮೆಲ್ಲಲಿಕ್ಕಾಗಿ. ಬಹುಶಃ ಇವರ ಮಕ್ಕಳು ಮೊಮ್ಮಕ್ಕಳೂ ತಮ್ಮ ಹೆತ್ತವರು ಮೊದಲ ಬಾರಿ ಮದ್ದೂರು ವಡೆ ತಿನ್ನಿಸಿದ್ದ ಮಧುರ ನೆನಪಿನೊಂದಿಗೆ ಮತ್ತೆಮತ್ತೆ ಮದ್ದೂರು ವಡೆಯನ್ನು ಸವಿಯಬಹುದು – ಇನ್ನೊಂದು ನೂರು ವರುಷಗಳ ಕಾಲಮಾನದಲ್ಲಿ.

 (ಚಿತ್ರ ಕೃಪೆ: ಕಲಿಡೊಸೊಪೆ.ಇನ್)