ಮದ್ಯಪಾನದಿಂದ ಮೆದುಳಿಗೆ ಹಾನಿ

ಮದ್ಯಪಾನದಿಂದ ಮೆದುಳಿಗೆ ಹಾನಿ

ಒಬ್ಬ ವ್ಯಕ್ತಿ ಮದ್ಯಪಾನವನ್ನು ಪ್ರಾರಂಭ ಮಾಡುವಾಗ ಅದು ನೀಡುವ ಖುಷಿಯೇ ಬೇರೆ. ಆದರೆ ಕಾಲ ಕ್ರಮೇಣ ಅದು ಆ ವ್ಯಕ್ತಿಯನ್ನೇ ನುಂಗಲು ಶುರು ಮಾಡುತ್ತದೆ. ನಾನಾ ಬಗೆಯ ಕಾಯಿಲೆಗಳು, ದೇಹದ ಪ್ರಮುಖ ಅಂಗಾಂಗಗಳ ಹಾನಿ ಇವೆಲ್ಲವೂ ಪ್ರಾರಂಭವಾಗುತ್ತವೆ. ಮದ್ಯಪಾನ ಮಾಡಿದಾಗ ಅದರಲ್ಲಿರುವ ಆಲ್ಕೋಹಾಲ್ ಆ ವ್ಯಕ್ತಿಯ ಮೆದುಳನ್ನು ಘಾಸಿ ಮಾಡುತ್ತದೆ. ನಿರಂತರ ಮದ್ಯಪಾನದಿಂದ ಅನೇಕ ಸಮಸ್ಯೆಗಳು ಕಾಡುತ್ತವೆ. ಮೆದುಳಿಗೆ ಅತಿಯಾದ ಮದ್ಯಪಾನದಿಂದ ಏನೆಲ್ಲಾ ಅನಾಹುತಗಳಾಗಬಹುದು ಎಂಬುದನ್ನು ಅರಿಯೋಣ…

ನಾವು ಮದ್ಯದ ಬಾಟಲಿಯಾಗಲೀ ಸಿಗರೇಟು, ಗುಟ್ಕಾ ಪ್ಯಾಕೇಟ್ ಆಗಲಿ ಅದರ ಮೇಲೆ ಬರೆಯಲಾದ ಎಚ್ಚರಿಕೆಯ ಸಂದೇಶವನ್ನು ಗಮನಿಸುವುದೇ ಇಲ್ಲ, ಗಮನಿಸಿದರೂ ಅದು ಅಪಹಾಸ್ಯ ಮಾಡಲು ಮಾತ್ರ. ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ, ಮದ್ಯಪಾನ ಮಾಡಿ ವಾಹನ ಚಲಾಯಿಸಬೇಡಿ. ಎನ್ನುವುದೆಲ್ಲಾ ಪ್ರಾರಂಭದ ದಿನಗಳಲ್ಲಿ ಗೊತ್ತಾಗುವುದೇ ಇಲ್ಲ. ನಂತರ ಗೊತ್ತಾಗುವಾಗ ಸಮಯ ಕಳೆದುಹೋಗಿರುತ್ತದೆ. ಮದ್ಯದಲ್ಲಿರುವ ಆಲ್ಕೋಹಾಲ್ ಎಷ್ಟು ಹಾನಿಕಾರಕ ಎಂಬುದರ ಬಗ್ಗೆ ಕಾಲಕಾಲಕ್ಕೆ ಬಹಳಷ್ಟು ಸಂಶೋಧನೆಗಳು ನಡೆದಿವೆ. ಪದೇ ಪದೇ ಮದ್ಯಪಾನ ಮಾಡುವುದರಿಂದ ಆ ವ್ಯಕ್ತಿಯ ಲಿವರ್ ಮತ್ತು ಕಿಡ್ನಿಯಲ್ಲಿ ಸಮಸ್ಯೆಗಳು ಪ್ರಾರಂಭವಾಗುತ್ತವೆ. ಇದರಿಂದಾಗಿ ಆ ವ್ಯಕ್ತಿ ಸಾವನ್ನಪ್ಪಿದ್ದೂ ಇದೆ. ಇತ್ತೀಚಿನ ಅಧ್ಯಯನಗಳ ಪ್ರಕಾರ ಮದ್ಯಪಾನ ಮತ್ತು ಮೆದುಳಿನಲ್ಲಿ ಆಗುವ ರಕ್ತಸ್ರಾವಕ್ಕೆ ಸಂಬಂಧ ಇದೆ ಎನ್ನುವುದು ಧೃಢ ಪಟ್ಟಿದೆ. 

ಅಮೇರಿಕಾದಲ್ಲಿ ನಡೆದ ಇತೀಚಿನ ಒಂದು ಅಧ್ಯಯನವು ೬೫ ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿಗಳಲ್ಲಿ ಮೆದುಳಿನಲ್ಲಾಗುವ ರಕ್ತಸ್ರಾವಕ್ಕೆ ಪ್ರಮುಖ ಕಾರಣ ನಿರಂತರ ಮದ್ಯಪಾನ ಎಂದು ಸಾಬೀತಾಗಿದೆ. ವಿಪರೀತ ಮದ್ಯಪಾನದಿಂದ ವ್ಯಕ್ತಿ ಸ್ಥಿಮಿತ ಕಳೆದುಕೊಂಡು ತೂರಾಡುತ್ತಾ ಬೀಳುವುದರಿಂದ ತಲೆಗೆ ಏಟಾಗುವ ಸಾಧ್ಯತೆ ಅಧಿಕ. ಇದರಿಂದ ತಲೆಯ ಒಳಭಾಗದಲ್ಲಿ ಗಂಭೀರವಾದ ಗಾಯಗಳು ಆಗುವ ಸಾಧ್ಯತೆಗಳಿವೆ ಎಂಬುದನ್ನು ಸಂಶೋಧನೆಗಳು ಕಂಡು ಹಿಡಿದಿವೆ. ಫ್ಲೋರಿಡಾ ಅಟ್ಲಾಂಟಿಕ್ ವಿಶ್ವವಿದ್ಯಾನಿಲಯದ ಸ್ಮಿತ್ ಕಾಲೇಜ್ ಆಫ್ ಮೆಡಿಸಿನ್ ನ ಸಂಶೋಧಕರು ಸಹ ಈ ವಿಷಯವನ್ನು ಅಧ್ಯಯನ ಮಾಡಿದ್ದಾರೆ. ಅಧ್ಯಯನದ ಭಾಗವಾಗಿ, ಬೀಳುವಿಕೆಯಿಂದ ತಲೆಗೆ ಗಾಯವಾದ ಸುಮಾರು ಮೂರು ಸಾವಿರಕ್ಕೂ ಅಧಿಕ ಮಂದಿಯನ್ನು ಪರೀಕ್ಷಿದ್ದಾರೆ. ಇವರಲ್ಲಿ ಸುಮಾರು ೧೮ ಶೇಕಡಾ ಮಂದಿ ಕುಡಿತದ ಚಟ ಹೊಂದಿದ್ದು, ಶೇ ೬ ಮಂದಿ ದಿನಾಲೂ ಮದ್ಯ ಸೇವಿಸುವವರೆಂದು ತಿಳಿದು ಬಂದಿದೆ. ಸಾಂದರ್ಭಿಕವಾಗಿ ಕುಡಿಯುವವರಿಗೆ ಮೆದುಳಿನ ರಕ್ತಸ್ರಾವವು ಕುಡಿಯದವರಿಗಿಂತ ಎರಡು ಪಟ್ಟು ಹೆಚ್ಚು ಎಂದು ಕಂಡುಬಂದಿದೆ. ಅದರಲ್ಲೂ ಪ್ರತಿನಿತ್ಯ ಮದ್ಯ ಸೇವಿಸುವವರಲ್ಲಿ ಇದು ಶೇಕಡಾ ೧೫೦ರಷ್ಟು ಹೆಚ್ಚು ಎಂಬ ವಿಷಯ ಬೆಳಕಿಗೆ ಬಂದಿದೆ. ಈ ಅಧ್ಯಯನದ ವಿವರಗಳನ್ನು ‘ಜರ್ನಲ್ ಆಫ್ ದಿ ಅಮೇರಿಕನ್ ಕಾಲೇಜ್ ಆಫ್ ಎಮರ್ಜೆನ್ಸಿ ಫಿಸಿಶಿಯನ್ಸ್ ಓಪನ್' ನಲ್ಲಿ ಪ್ರಕಟಿಸಲಾಗಿದೆ.

ಮದ್ಯಪಾನದಿಂದ ಮೆದುಳಿನ ಮೇಲಾಗುವ ದುಷ್ಪರಿಣಾಮಗಳು: ತಲೆಬುರುಡೆ ಹಾಗೂ ಮೆದುಳಿನ ನಡುವೆ ಅನೇಕ ಸೂಕ್ಷ್ಮವಾದ ಸಣ್ಣ ರಕ್ತನಾಳಗಳಿವೆ. ಸಾಮಾನ್ಯವಾಗಿ ತಲೆಬುರುಡೆ ಮತ್ತು ಮೆದುಳಿನ ನಡುವೆ ಜಾಗವಿರುವುದಿಲ್ಲ. ವಯಸ್ಸು ಹೆಚ್ಚಾದಂತೆ ನಡುವಿನ ಬೂದು ದ್ರವ್ಯ ಕಡಿಮೆಯಾಗುತ್ತದೆ. ಮೆದುಳು ಗಾತ್ರ ಸ್ವಲ್ಪ ಕುಗ್ಗುತ್ತದೆ. ಈ ಪ್ರಕ್ರಿಯೆ ವಯೋಸಹಜವಾಗಿ ನಡೆಯುವಂತದ್ದು. ಅದೇ ಮದ್ಯಪಾನಿಗಳಲ್ಲಿ ಇದು ವೇಗವಾಗಿ ಮತ್ತು ಅಧಿಕ ಪ್ರಮಾಣದಲ್ಲಿ ಸಂಭವಿಸುತ್ತದೆ. ಇದು ತಲೆಬುರುಡೆ ಮತ್ತು ಮೆದುಳಿನ ನಡುವಿನ ಅಂತರವನ್ನು ಜಾಸ್ತಿ ಮಾಡುತ್ತದೆ. ಈ ಸಮಯದಲ್ಲಿ ತಲೆಗೆ ಸಣ್ಣ ಗಾಯವಾದರೂ ರಕ್ತನಾಳಗಳು ಒಡೆಯುತ್ತವೆ. ವಿಪರೀತ ರಕ್ತಸ್ರಾವವಾಗುತ್ತವೆ. ಕೆಲವು ಸಂದರ್ಭಗಳಲ್ಲಿ ಈ ರಕ್ತಸ್ರಾವವು ನಿಲ್ಲದೇ ವ್ಯಕ್ತಿಯು ಸಾಯುವ ಸಂಭವವೂ ಇದೆ.

ನಿರಂತರವಾಗಿ ಮದ್ಯಪಾನ ಮಾಡುವುದರಿಂದ ನರ ದೌರ್ಬಲ್ಯವೂ ಪ್ರಾರಂಭವಾಗುತ್ತದೆ. ಮಧುಮೇಹಿಗಳಿಗಂತೂ ಕುಡಿತ ವರ್ಜ್ಯ. ಅವರು ನಿಯಮಿತವಾಗಿ ಕುಡಿಯುವ ಅಭ್ಯಾಸ ಇಟ್ಟುಕೊಂಡಲ್ಲಿ ಸ್ನಾಯುಗಳ ದೌರ್ಬಲ್ಯ, ಸ್ಪರ್ಶ ಮತ್ತು ನೋವು ನಷ್ಟ ಮೊದಲಾದ ಸಮಸ್ಯೆಗಳು ಪ್ರಾರಂಭವಾಗುತ್ತವೆ. ದೀರ್ಘಕಾಲದ ಮದ್ಯಪಾನದಿಂದ ವಿಟಮಿನ್ ಬಿ1 ಕೊರತೆಯುಂಟಾಗುತ್ತದೆ. ಇದರಿಂದ ಮರೆವು, ಗೊಂದಲ, ವಸ್ತುಗಳು ಎರಡೆರಡಾಗಿ ಕಾಣಿಸುವುದು, ಕಣ್ಣಿನ ಸ್ನಾಯುಗಳ ಕಾರ್ಯಚಟುವಟಿಕೆ ಕಡಿಮೆಯಾಗುವುದು ಮುಂತಾದ ಸಮಸ್ಯೆಗಳು ಉಂಟಾಗುತ್ತವೆ. ಯಕೃತ್ತು ಸರಿಯಾಗಿ ಕಾರ್ಯ ನಿರ್ವಹಿಸದೇ ಇದ್ದಲ್ಲಿ ಮೆದುಳು ಹಾನಿಗೊಳಗಾಗುತ್ತದೆ. ದೇಹದಲ್ಲಿರುವ ಕೆಲವು ಭಾಗಗಳು ಸರಿಯಾಗಿ ಕೆಲಸ ಮಾಡದೇ ಇದ್ದಲ್ಲಿ ಅಮೋನಿಯಾ ಮತ್ತು ಮ್ಯಾಂಗನೀಸ್ ರಕ್ತದಲ್ಲಿ ಅಧಿಕ ಪ್ರಮಾಣದಲ್ಲಿ ಸಂಗ್ರಹವಾಗುತ್ತದೆ. ಇದರಿಂದ ಮೆದುಳು ಹಾನಿಗೊಳಗಾಗುತ್ತದೆ. ಇದು ಆ ವ್ಯಕ್ತಿಯ ಜೀವಿತಾವಧಿಯನ್ನು ಕಡಿಮೆ ಮಾಡುತ್ತದೆ.

ಮದ್ಯಪಾನ ಮಾಡುವವರಿಗೆ ಅಧಿಕ ರಕ್ತದೊತ್ತಡ ಮತ್ತು ಮಧುಮೇಹ ಸಾಮಾನ್ಯವಾಗಿ ಕಂಡು ಬರುತ್ತದೆ. ಇದರಿಂದ ಪಾರ್ಶ್ವವಾಯು ಸಂಭವಿಸುವ ಸಾಧ್ಯತೆ ಇರುತ್ತದೆ. ಕೈಕಾಲುಗಳ ಸ್ವಾಧೀನ ತಪ್ಪಿ ಹೋಗಿ ನಡೆಯಲಾಗದ ಪರಿಸ್ಥಿತಿಗೆ ಬರುತ್ತಾರೆ. ಆದುದರಿಂದ ಮದ್ಯಪಾನದ ಚಟವನ್ನು ಬಿಟ್ಟು ಬಿಡಿ. ಇದರಿಂದ ನಿಮ್ಮ ಆರೋಗ್ಯ ಸುಧಾರಿಸುವುದಲ್ಲದೇ ನಿಮ್ಮ ಮೆದುಳೂ ಸರಿಯಾಗಿ ಕಾರ್ಯನಿರ್ವಹಿಸುತ್ತದೆ.

(ಆಧಾರ)

ಕೃಪೆ: ಅಂತರ್ಜಾಲ ತಾಣ