ಮಧುಮಿತಾ ಶುಕ್ಲಾ ಹತ್ಯೆ

ಮಧುಮಿತಾ ಶುಕ್ಲಾ ಹತ್ಯೆ

ಪುಸ್ತಕದ ಲೇಖಕ/ಕವಿಯ ಹೆಸರು
ರವಿ ಬೆಳಗೆರೆ
ಪ್ರಕಾಶಕರು
ಬಿ.ಬಿ.ಸಿ.ಪಬ್ಲಿಕೇಶನ್ಸ್, ಗಾಂಧಿ ಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು- ೫೬೦೦೦೪
ಪುಸ್ತಕದ ಬೆಲೆ
ರೂ. ೧೦೦.೦೦, ಮುದ್ರಣ : ಫೆಬ್ರವರಿ ೨೦೧೩

ಮಧುಮಿತಾ ಶುಕ್ಲಾ ಹತ್ಯೆ-ದಿ ಮರ್ಡರ್ ಮಿಸ್ಟ್ರಿ ಎಂದು ಮುಖಪುಟದಲ್ಲೇ ಮುದ್ರಿಸುವ ಮೂಲಕ ರವಿ ಬೆಳಗೆರೆಯವರು ಪುಸ್ತಕದ ಹೂರಣವನ್ನು ತೆರೆದಿಡುವ ಪ್ರಯತ್ನ ಮಾಡಿ ಕುತೂಹಲ ಕೆರಳಿಸಿದ್ದಾರೆ. ತಮ್ಮ ಬೆನ್ನುಡಿಯಲ್ಲಿ ಅವರೇ ಬರೆದಿರುವಂತೆ ‘ಇಪ್ಪತ್ನಾಲ್ಕು ವರ್ಷ ವಯಸ್ಸಿನ ಕವಯತ್ರಿ ಮಧುಮಿತಾ ಶುಕ್ಲಾ, ಕೊಲೆಯಾಗಲಿಕ್ಕೆ ಮೂರು ವರ್ಷ ಮುಂಚೆ ಉತ್ತರ್ ಪ್ರದೇಶ್ ನ ಬಲಿಷ್ಟ ಮಂತ್ರಿ ಅಮರ್ ಮಣಿ ತ್ರಿಪಾಠಿಯನ್ನು ಕವಿ ಸಮ್ಮೇಳನವೊಂದರಲ್ಲಿ ಭೇಟಿಯಾಗಿ ಅವನೆಡೆಗೆ ಆಸೆ ಅರಳಿಸಿಕೊಳ್ಳುವುದಕ್ಕೆ ಮುಂಚೆಯೇ ಅನೇಕ ಮಂತ್ರಿ ಮಾಗಧರನ್ನು ನೋಡಿದ್ದಳು.

ಸ್ವತಃ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಈ ಹುಡುಗಿ ಇಷ್ಟವಾಗಿದ್ದಳು. ಬಾಳಾ ಸಾಹೇಬ ಠಾಕ್ರೆಗೆ ಮಧುಮಿತಾಳ ಕವಿತೆಗಳು ಇಷ್ಟವಾಗಿದ್ದವು. ಅವಳದಿನ್ನೂ ಒಂದೇ ಒಂದೂ ಕವಿತಾ ಸಂಕಲನ ಪ್ರಕಟವಾಗಿರಲಿಲ್ಲ ; ಆಗಲೇ ಕೆಸೆಟ್ ಸಾಮ್ರಾಟ ಗುಲ್ಶನ್ ಕುಮಾರ್, ಅವಳ ಕವಿತಾ ವಾಚನದ ಕೆಸಟ್ಟಿನ ಸಾವಿರಾರು ಪ್ರತಿಗಳನ್ನು ಮಾರುಕಟ್ಟೆಗೆ ತಂದಿದ್ದ. ಚಿತ್ರ ಜಗತ್ತಿನ, ಕಿರುತೆರೆಯ ಪ್ರಪಂಚದ ಅಧಿನೇತಾ ರಮಾನಂದ ಸಾಗರ್ ಗೆ ಮಧುಮಿತಾಳ ಕವಿತೆಗಳು ಇಷ್ಟವಾಗುತ್ತಿದ್ದವು.

ಏಕೆಂದರೆ, ಮಧೂ ಪಾಕಿಸ್ತಾನದ ವಿರುದ್ಧ ಪದ್ಯ ಬರೆಯುತ್ತಿದ್ದಳು. ಭಾರತೀಯತೆಯ ಕುರಿತು ಬರೆಯುತ್ತಿದ್ದಳು. ಅಷ್ಟು ಚಿಕ್ಕ ಹುಡುಗಿಯ ಬಾಯಲ್ಲಿ ಪಾಕಿಸ್ತಾನದ ವಿರುದ್ಧ ಬೆಂಕಿಯುಗುಳುವಂತಹ ಕವಿತೆಗಳನ್ನು ತುಂಬಿದ ಸಭೆಗಳಲ್ಲಿ ಕೇಳಲು ಎಂಥವರಿಗೂ ಖುಷಿಯಾಗುತ್ತಿತ್ತು. ಆದರೆ ೧೯೯೯ನೇ ಇಸವಿಯ ನವೆಂಬರ್ ಮೂರನೇ ವಾರದಲ್ಲಿ ಗೋರಖಪುರದಲ್ಲಿ ಕವಿ ಸಮ್ಮೇಳನ ನಡೆದಾಗ, ಎದುರು ಸಾಲಿನಲ್ಲಿ ಕುಳಿತ ರಾಜಕಾರಣಿ ಅಮರ್ ಮಣಿ ತ್ರಿಪಾಠಿಯ ಕಣ್ಣುಗಳಲ್ಲಿ ಕಾಣಿಸಿದ ಖುಷಿಯೇ ಬೇರೆ…

ಅವಳ ಘೋರ ಹತ್ಯೆಯ ಕಥಾನಕವಿದು.” ಎಂದಿದ್ದಾರೆ ಲೇಖಕರಾದ ರವಿ ಬೆಳಗೆರೆ. ಅವರ ವಿಭಿನ್ನ ಬರಹಾ ಶೈಲಿ ಈ ಹತ್ಯಾಕಾಂಡದ ಕಥೆಯನ್ನು ಒಂದು ಕ್ರೈಂ ಥ್ರಿಲ್ಲರ್ ನಂತೆ ಓದಿಸಿಕೊಂಡು ಹೋಗುತ್ತದೆ. ಭವಿಷ್ಯದಲ್ಲಿ ಉತ್ತಮ ಕವಿಯತ್ರಿಯಾಗುವ ಎಲ್ಲ ಲಕ್ಷಣಗಳನ್ನು ಹೊಂದಿದ್ದ ಯುವತಿಯೋರ್ವಳು ಮಾಡಿಕೊಂಡ ಯಡವಟ್ಟಿನಿಂದಾಗಿ ಅಕಾಲವಾಗಿ ಮೃತ್ಯುವಿಗೆ ಗುರಿಯಾಗಿರುವುದು ಬಹಳ ಖೇದಕರ ಸಂಗತಿ. 

ಮಧುಮಿತಾ ಶುಕ್ಲಾ ಹತ್ಯೆ ಪುಸ್ತಕದಲ್ಲಿನ ಈ ನಾಲ್ಕು ಸಾಲುಗಳನ್ನು ನೀವು ಓದಿಕೊಂಡರೆ ನಿಮಗೆ ನಿಜಕ್ಕೂ ಬೇಸರವಾಗುತ್ತದೆ, ಮನಸ್ಸು ಕುಗ್ಗುತ್ತದೆ. “ನಾನು ಅವಳ ತಾಯಿ: ಶಾಂತಿ ಶುಕ್ಲಾ... ಹೀಗೆ ಆರಂಭವಾಗುತ್ತದೆ ಕವಯತ್ರಿ ಮಧುಮಿತಾ ಶುಕ್ಲಾ ಮರ್ಡರ್ ಕೇಸ್. ಒಮ್ಮೆ ಪೋಸ್ಟ್ ಮಾರ್ಟಂ ಮಾಡಿ, ವಾರಸುದಾರರಿಗೆ ಶವ ಒಪ್ಪಿಸಿ, ಅದನ್ನವರು ಮಧುಮಿತಾಳ ಹುಟ್ಟೂರಾದ ಲಖೀಮ್ ಪುರ್ ಖೀರಿ ಎಂಬಲ್ಲಿಗೆ ಕೊಂಡೊಯ್ಯುತ್ತಿರುವಾಗ ಅರ್ಧ ದಾರಿಯಲ್ಲಿ ಶವವಿದ್ದ ವ್ಯಾನನ್ನು ವಾಪಾಸು ಲಖನೌ ಗೆ ಕರೆಯಿಸಲಾಯಿತು. ಎರಡನೆಯ ಬಾರಿಗೆ ಪೋಸ್ಟ್ ಮಾರ್ಟಂ ಮಾಡಲಾಯಿತು. ಆಗ ಅವಳ ಗರ್ಭದಿಂದ ತೆಗೆದದ್ದು ಏಳು ತಿಂಗಳ ಬಲಿತ ಭ್ರೂಣ. ಅದು ಉತ್ತರ ಪ್ರದೇಶದ ಮಹಿಳಾ ಮುಖ್ಯಮಂತ್ರಿ ಮಾಯಾವತಿಯ ಸಂಪುಟದಲ್ಲಿ ಮಂತ್ರಿಯಾಗಿದ್ದಾತನ ಅನೈತಿಕ ಸೃಷ್ಟಿ. ಆತನ ಹೆಸರು : ಅಮರ್ ಮಣಿ ತ್ರಿಪಾಠಿ!”

ಪುಸ್ತಕದ ತುಂಬೆಲ್ಲಾ ಮಧುಮಿತಾಳಿಗೆ ಸಂಬಂಧಿಸಿದ ಹಲವಾರು ಜನಸಾಮಾನ್ಯರಿಗೆ ತಿಳಿಯದ ವಿವರಗಳಿವೆ. ಭಾವಚಿತ್ರಗಳಿವೆ. ಈ ಹತ್ಯಾಕಾಂಡದ ತನಿಖೆಯನ್ನು ಸಿಬಿಐಗೆ ಒಪ್ಪಿಸಿ, ಅವರು ಅಮರಮಣಿ ಮತ್ತು ಅವನ ಪತ್ನಿ ಮಧುಮಣಿಯವರನ್ನು ಬಂಧಿಸುವವರೆಗಿನ ಮಾಹಿತಿ ಈ ಪುಸ್ತಕದಲ್ಲಿ ಇದೆ.

ಸುಮಾರು ೯೦ ಪುಟಗಳ ಈ ಪುಸ್ತಕವನ್ನು ರವಿ ಬೆಳಗೆರೆಯವರು ತಮ್ಮ ಆತ್ಮೀಯ ಗೆಳತಿ ಕವಯತ್ರಿ ಶಶಿಕಲಾ ವಸ್ತ್ರದ್ ಇವರಿಗೆ ಅರ್ಪಿಸಿದ್ದಾರೆ. ಮೋನಪ್ಪನವರು ವಿನ್ಯಾಸ ಮಾಡಿದ ಮುಖಪುಟ ಈ ಪುಸ್ತಕಕ್ಕೆ ಇದೆ.