ಮಧುರ ಕಂಠದ ಗಾಯಕಿ - ಬೆಳಗೆರೆ ಜಾನಕಮ್ಮ

ಮಧುರ ಕಂಠದ ಗಾಯಕಿ - ಬೆಳಗೆರೆ ಜಾನಕಮ್ಮ

ಬೆಳಗೆರೆ ಜಾನಕಮ್ಮ ಎಂಬ ಮಧುರ ಕಂಠದ ಗಾಯಕಿ, ಅದ್ಭುತ ಸಾಹಿತಿ ಬಗ್ಗೆ ತಿಳಿದವರು ಕಡಿಮೆ. ಚಿತ್ರದುರ್ಗದ ಗುಡ್ಡದಲ್ಲಿ ತನ್ನ ಹಾಡಿನ ಮೂಲಕ ಖ್ಯಾತಿಯನ್ನು ಪಸರಿಸಿದ ಗಾನ ಕೋಗಿಲೆ ಬೆಳಗೆರೆ ಜಾನಕಮ್ಮ. ಕಲಿತದ್ದು ಕೇವಲ ಎರಡನೇ ತರಗತಿಯಾದರೂ, ಯಾವುದೇ ಅಕ್ಷರ ಬಲ್ಲ ಸಾಹಿತಿಗಿಂತಲೂ ಉತ್ತಮವಾದ ಸಾಹಿತ್ಯವನ್ನು ರಚಿಸಿ, ಅದನ್ನು ತಮ್ಮದೇ ಮಧುರ ಕಂಠದಿಂದ ಹಾಡಿ ಕೇಳುಗರನ್ನು ಮಂತ್ರಮುಗ್ಧರನ್ನಾಗಿಸುತ್ತಿದ್ದರು. 

೧೯೧೨ರಲ್ಲಿ ಚಿತ್ರದುರ್ಗದ ಚಳ್ಳಕೆರೆ ತಾಲೂಕಿನ ಬೆಳಗೆರೆ ಎಂಬ ಗ್ರಾಮದಲ್ಲಿ. ಇವರ ತಂದೆ ಚಂದ್ರಶೇಖರ ಶಾಸ್ತ್ರಿಗಳು ಹಾಗೂ ತಾಯಿ ಅನ್ನಪೂರ್ಣಮ್ಮ. ಚಂದ್ರಶೇಖರ ಶಾಸ್ತ್ರಿಗಳು ‘ಲಾವಣಿ ಶಾಸ್ತ್ರಿ' ಗಳೆಂದೇ ಪ್ರಸಿದ್ಧರಾಗಿದ್ದರು. ಇವರು ಲಾವಣಿಗಳನ್ನು ಕಟ್ಟುತ್ತಾ, ಅವುಗಳನ್ನು ಹಾಡುತ್ತಾ ಊರೂರು ಸಂಚರಿಸುತ್ತಿದ್ದರು. ಅನ್ನಪೂರ್ಣಮ್ಮನವರದ್ದೂ ಕೋಗಿಲೆ ಕಂಠವೇ. ಇವರಿಬ್ಬರ ಹಾಡುಗಾರಿಕೆ, ಕಂಠ ಜಾನಕಮ್ಮನವರಿಗೆ ಬಳುವಳಿಯಾಗಿಯೇ ಬಂದಿರಬಹುದು. ಚಂದ್ರಶೇಖರ ಶಾಸ್ತ್ರಿಯವರು ಆಧುನಿಕ ಮನೋಭಾವನೆಯ ವ್ಯಕ್ತಿಗಳಾಗಿದ್ದರು. ಈ ಕಾರಣದಿಂದಾಗಿಯೇ ಜಾನಕಮ್ಮನವರನ್ನು ಶಾಲೆಗೆ ಸೇರಿಸಿದ್ದರು. ಆದರೆ ಹಳೆಯ ಮನೋಭಾವದ ಜಾನಕಮ್ಮನವರ ಅಜ್ಜಿಯ ಕಾರಣದಿಂದಾಗಿ ಅವರ ಓದು ಎರಡನೇ ತರಗತಿಗೇ ಮೊಟಕುಗೊಂಡಿತು.

ಕವನಗಳನ್ನು ಬರೆದು ಹಾಡುವ ತುಡಿತ ಜಾನಕಮ್ಮನವರಿಗೆ ಬಾಲ್ಯದಿಂದಲೂ ಇತ್ತು. ತಮ್ಮ ಹತ್ತನೇ ವಯಸ್ಸಿಗೇ ಸೋದರತ್ತೆಯ ಮಗನಾದ ಮಲ್ಲೂರು ಕೃಷ್ಣಶಾಸ್ತ್ರಿಯ ಜೊತೆ ಮದುವೆಯಾಯಿತು. ಹದಿನೇಳನೇ ವಯಸ್ಸಿನಲ್ಲಿ ಮೊದಲ ಮಗ ಪದ್ಮನಾಭನ ಜನನ. ನಂತರ ಇಪ್ಪತ್ತೊಂದನೇ ವಯಸ್ಸಿನಲ್ಲಿ ಪ್ರಸನ್ನಕುಮಾರನ ಜನನ. ಹೀಗೆ ಇಪ್ಪತ್ತೊಂದು ವಯಸ್ಸು ತುಂಬುವ ಹೊತ್ತಿಗೆ ಎರಡು ಮಕ್ಕಳ ತಾಯಿಯಾಗಿ ಸಂಸಾರದ ನೊಗವನ್ನು ಹೊತ್ತಿದ್ದರು ಜಾನಕಮ್ಮ. ತಮಗೆ ಹೆಚ್ಚು ಓದಲಾಗಲಿಲ್ಲ ಎಂಬ ಕೊರಗು ಅವರನ್ನು ದಿನಂಪ್ರತಿ ಕಾಡುತ್ತಿತ್ತು. ಒಂದೆಡೆ ಅವರು ಬರೆದ  “ನಿಸ್ಪೃಹ ಮನಸಿನ / ನಮ್ಮೀ ಸೀತೆಗೆ ಓದುವುದೆಂದರೆ ಹಿರಿಯಾಸೆ... ಹೇಳಲು ಬಾರದ ಸುಖವನು ನೀಡುವ ಕಲೆಗಳ ಕಂಡರೆ ಬಹುಪ್ರೀತಿ” ‘ಎಚ್ಚರಿಕೆ’ ಎಂಬ ಕವನದ ಸಾಲುಗಳು ಅವರ ಮನದಾಸೆಯನ್ನು ಬಿಂಬಿಸುವಂತಿದೆ. 

ನಮಗೆ ತಿಳಿದಷ್ಟನ್ನು ಬರೆದು, ಮನದಾಳದ ಮಾತುಗಳನ್ನು ಅಕ್ಷರಗಳ ಮೂಲಕ ತೆರೆದಿಡುವ ಪ್ರಯತ್ನ ಮಾಡುತ್ತಿದ್ದರು. ತಾವು ಬರೆದ ಅಕ್ಷರಗಳ ತಪ್ಪುಗಳನ್ನು ತಮ್ಮ ಸಹೋದರ ಸಹೋದರಿಯರಿಂದ ತಿದ್ದಿಸಿಕೊಳ್ಳುತ್ತಿದ್ದರು. ಬರೆಯಲು ಪೆನ್ಸಿಲ್ ಸಿಗದೇ ಹೋದರೆ ಇದ್ದಿಲಿನಲ್ಲಿ ಗೋಡೆಗಳ ಮೇಲೆ ಬರೆಯುತ್ತಿದ್ದರಂತೆ. ಹೀಗೆ ಸ್ವಲ್ಪ ಸಮಯದ ಬಳಿಕ ಬೇರೆಯವರಿಂದ ತಿದ್ದಿಸಿಕೊಂಡರೆ ಅದು ಮೂಲ ಬರಹವಾಗಲಾರದು ಎಂಬ ಸತ್ಯ ತಿಳಿದು ಕೊಂಡರು. ಆ ಕಾರಣದಿಂದ ಅವರು ಬೇರೆಯವರಿಂದ ತಮ್ಮ ಬರಹಗಳನ್ನು ತಿದ್ದಿಸುವುದಕ್ಕೆ ತಿಲಾಂಜಲಿಯಿತ್ತರು. ತಮಗೆ ತಿಳಿದಷ್ಟು ಮಟ್ಟಿಗೆ ಬರೆದು ಹಾಡುತ್ತಿದ್ದರು.

ಕ್ರಮೇಣ ಇವರ ಹಾಡುಗಾರಿಕೆಯ ಖ್ಯಾತಿ ಹಲವು ಖ್ಯಾತನಾಮರ ಗಮನ ಸೆಳೆಯಿತು. ಹಿರಿಯ ಸಾಹಿತಿಗಳಾದ ಜಿ.ಪಿ.ರಾಜರತ್ನಂ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಶಿವ ಚೆನ್ನಬಸವೇಶ್ವರ, ಪ್ರಣವಾನಂದ ಸ್ವಾಮಿ ಮುಂತಾದವರು ಜಾನಕಮ್ಮನವರ ಮನೆಗೆ ಬಂದು ತಮ್ಮ ಕವನಗಳನ್ನು ಹಾಡಿಸುತ್ತಿದ್ದರು. ಜಾನಕಮ್ಮನವರ 'ಮೊರೆ' ಎಂಬ ಕವನವು ಮಾಸ್ತಿಯವರ ‘ಜೀವನ' ಎಂಬ ಪತ್ರಿಕೆಯಲ್ಲಿ ಪ್ರಕಟವಾಯಿತು. ಇದು ಅವರ ಮುಂದಿನ ಹಾದಿಗೆ ನಾಂದಿಯಾಯಿತು. ನಂತರ ನಿರಂತರವಾಗಿ ಜಾನಕಮ್ಮನವರ ಕವನಗಳು ‘ಜಯ ಕರ್ನಾಟಕ' ಮತ್ತು ‘ಪ್ರಬುದ್ಧ ಕರ್ನಾಟಕ' ಪತ್ರಿಕೆಗಳಲ್ಲಿ ಪ್ರಕಟವಾಗತೊಡಗಿದವು. ಇದರಿಂದ ಸಹಜವಾಗಿಯೇ ಅವರಿಗೆ ಹಿರಿಯ-ಕಿರಿಯ ಸಾಹಿತಿಗಳ ಸಾಂಗತ್ಯ ದೊರೆಯಲಾರಂಬಿಸಿತು. 

ಖ್ಯಾತ ಸಾಹಿತಿ ದ ರಾ ಬೇಂದ್ರೆಯವರು ಜಾನಕಮ್ಮನವರ ಕವನಗಳನ್ನು ಓದಿ “ಕ್ಷೀರಸಗದಲೆ/ತಲೆಯ ಪೆರೆಯೆ/...ವಿಷಯ ವಿಷ ವಿಷಮವನು/ತಳ್ಳಿ ಪದತಲದಾಚೆ/ ಸಪ್ತ ಸ್ವರ್ಗವ ಸೀಳಿ/ ಮೇಲೆ ಹಾರು” ಎಂದು ಕವನದ ಮೂಲಕವೇ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನವೋದಯ ಕಾಲದ ಕವಯತ್ರಿಗಳಲ್ಲಿ ಮೊದಲನೆಯವರಾಗಿ, ಸ್ತ್ರೀಪರ ಕಾಳಜಿಯನ್ನು ಹೊಂದಿದ್ದರು ಜಾನಕಮ್ಮನವರು. ಅಂದಿನ ಕಾಲದ ಸ್ತ್ರೀಯರ ಕಷ್ಟಗಳ ಬಗ್ಗೆ, ಸಮಾಜದಲ್ಲಿ ಸ್ತ್ರೀಗೆ ಇರುವ ಬಂಧನ, ಕಟ್ಟುಪಾಡುಗಳ ಬಗ್ಗೆ ಧೈರ್ಯದಿಂದ ಕವನಗಳ ಮೂಲಕ ತಮ್ಮ ಅಭಿಪ್ರಾಯವನ್ನು ವ್ಯಕ್ತ ಪಡಿಸುತ್ತಿದ್ದರು. 

ಜಾನಕಮ್ಮನ ಕವಿತೆಗಳಲ್ಲಿ ತಮ್ಮ ಜೀವನದಲ್ಲಿ ಕಂಡ ಅನುಭವಗಳ ಸತ್ಯತೆ ಇತ್ತು. ತಮ್ಮ ಗಾಯನ ಹಾಗೂ ಕವನದ ಮೂಲಕ ಸಮಾಜದಲ್ಲಿ ಮೆಚ್ಚುಗೆಯನ್ನು ಪಡೆಯುತ್ತಿದ್ದ ಜಾನಕಮ್ಮನವರಿಗೆ ಮನೆಯ ಒಳಗಡೆ ನಿಧಾನವಾಗಿ ಅಸಮಾಧಾನದ ಹೊಗೆ ಏಳಲು ಪ್ರಾರಂಭವಾಯಿತು. ಪ್ರಾರಂಭದಲ್ಲಿ ಇವರ ಸಾಹಿತ್ಯ ಆಸಕ್ತಿಗೆ ಪತಿ ಬೆಂಬಲ ನೀಡಿದರೂ ಕ್ರಮೇಣ ಇವರನ್ನು ಕಾಣಲು ಬರುವ, ಅಭಿಪ್ರಾಯ ಆಲಿಸಲು ಬರುವ ಹಾಗೂ ಕವನಗಳನ್ನು ಹಾಡಿ ಕೇಳುವ ವ್ಯಕ್ತಿಗಳನ್ನು ನೋಡಿ ತಮ್ಮ ಅಸಮಾಧಾನವನ್ನು ಹೊರಹಾಕಲು ಪ್ರಾರಂಭಿಸಿದರು. ನಿಧಾನವಾಗಿ ಗಂಡ ಹೆಂಡಿರ ನಡುವೆ ವಾಗ್ವಾದಗಳು ನಡೆಯಲು ಪ್ರಾರಂಭವಾದವು. ತಮ್ಮ ಪತ್ನಿಯ ಖ್ಯಾತಿಯನ್ನು ಅರಗಿಸಿಕೊಳ್ಳಲು ಜಾನಕಮ್ಮನವರ ಪತಿಗೆ ಬಹಳ ಕಷ್ಟವಾಗತೊಡಗಿತು. ಅದೇ ಸಮಯ ಜಾನಕಮ್ಮನವರ ಆರೋಗ್ಯ ಕ್ಷೀಣಿಸಲಾರಂಭಿಸಿತು. ಅವರ ಎರಡನೇ ಹೆರಿಗೆಯ ಸಮಯದಲ್ಲಿ ಕಂಡು ಬಂದ ನೋವು, ನಿಧಾನವಾಗಿ ಅವರನ್ನು ಕೊಲ್ಲಲಾರಂಭಿಸಿತು. ಕೊನೆಗೆ ತಮ್ಮ ಮೂರನೇ ಹೆರಿಗೆಯ ಸಮಯದಲ್ಲಿ ಜಾನಕಮ್ಮನವರು ಆ ನೋವನ್ನು ತಡೆಯಲಾರದೇ ನಿಧನ ಹೊಂದಿದರು.

ಬೆಳಗೆರೆ ಜಾನಕಮ್ಮನವರು ೧೯೪೮ರಲ್ಲಿ ನಿಧನ ಹೊಂದಿದಾಗ ಅವರಿಗೆ ಕೇವಲ ೩೬ ವರ್ಷ ವಯಸ್ಸಾಗಿತ್ತು. ಇದೇನೂ ಸಾಯುವ ವಯಸ್ಸಾಗಿರಲಿಲ್ಲ. ಜಾನಕಮ್ಮನವರ ಪ್ರತಿಭೆಯ ಸಂಪೂರ್ಣ ಅನಾವರಣ ಆಗುವ ಮೊದಲೇ ಅವರನ್ನು ಸಾರಸ್ವತ ಲೋಕ ಕಳೆದುಕೊಂಡಿತು. ‘ಕನ್ನಡದ ಮೊದಲ ಕವಯತ್ರಿ’ ಎಂದೇ ಹೆಸರುವಾಸಿಯಾಗಿದ್ದ ಬೆಳಗೆರೆ ಜಾನಕಮ್ಮ ತಮ್ಮ ಅಲ್ಪಾಯುಷ್ಯವನ್ನು ಮುಗಿಸಿ ಇನ್ನು ಹಿಂದಿರುಗಿ ಬಾರದ ಲೋಕಕ್ಕೆ ಹೋಗಿ ಬಿಟ್ಟರು. ಆದರೆ ಅವರ ಕವನಗಳು ಇನ್ನೂ ಜೀವಂತವಾಗಿವೆ.

(ಆಧಾರ) 

ಚಿತ್ರ ಕೃಪೆ: ಅಂತರ್ಜಾಲ ತಾಣ