ಮಧುರ ನಿನ್ನಯ ಲಾಲಿ ನನ್ನ ಕಿವಿಗಳಿಗಿಂಪು

ಮಧುರ ನಿನ್ನಯ ಲಾಲಿ ನನ್ನ ಕಿವಿಗಳಿಗಿಂಪು

ಬರಹ

 ಅಮ್ಮ

 


ನನ್ನ ಎದೆಯಾಳದಲಿ ಬಚ್ಚಿಟ್ಟ  ಕನಸಿನಲೂ
ಕಂತು ಕಂತಿಗೂ  ನಿನ್ನ ನೆನಪಿನಳಲೂ

ಎಲ್ಲ ನೋವನು ತನ್ನ ಮನದಲ್ಲೇ ಬಚ್ಚಿಟ್ಟು
ಹೊರಗೆ ಅರಳುವೆ ನೀನು ಪ್ರೀತಿ ಕೊಟ್ಟು

ಮಧುರ ನಿನ್ನಯ ಲಾಲಿ ನನ್ನ  ಕಿವಿಗಳಿಗಿಂಪು
ಮತ್ತೆ ಬಿಸಿಯುಸಿರ ಆ ಪ್ರೀತಿಯೊನಪು

ಇನಿದನಿಯ ಜೋಗುಳದ ಅಕ್ಕರೆಯ ಕುಡಿನೋಟ
ಒಲವಿನಕ್ಕರೆಯ ಆ ತುತ್ತಿನೂಟ

ಮಗುವಿನಕ್ಕರೆಯ ತೊದಲು ನುಡಿಗಳ ತಂಟೆ
ವಿಶ್ವಕೋಶದಕ್ಕರಕೂ ಕಡಿಮೆಯುಂಟೇ

ಬದುಕಿನೋಣಿಯ ತುಂಬ ಒಲುಮೆಯಮೃತ ಹನಿಸಿ
ನನ್ನ ಭಾಗ್ಯವ ಬರೆದೆ   ಪ್ರೀತಿಯುಣಿಸಿ

ಮನೆಯ ಕಜ್ಜದ ಹೊರೆಯ ಹೊತ್ತು ಪ್ರೀತಿಯ ಹೊಸೆದು
ನನ್ನ ಬೆಳೆಸಿದೆ ನಿನ್ನ ನೆತ್ತರೆರೆದು

ಉಕ್ಕಿತೆನ್ನಯ ಅಕ್ಷಿಪಟಲದಾಚೆಯು ಸತ್ಯ
ಇಳೆಯ ದೇವರು ನೀನೆ  ಸತ್ಯ ನಿತ್ಯ

ಕಣ್ಣಾಳದಲ್ಲೆಲ್ಲ ಹರಿಯಿತೊಲುಮೆಯ ಜಲವು
ನಿನ್ನ ತ್ಯಾಗವ ನೆನಸಿ ಅಮ್ಮ ನಿಜವು