ಮಧುರ ನೆನಪುಗಳು
ಕವನ
ಅಪ್ಪನ ಹೆಗಲೇರಿ ಹಳ್ಳಿ ಮನೆಯಲ್ಲಿ
ಕೂಸುಮರಿ ಆಡಿದ ಸವಿನೆನಪು|
ತಾಯ ಸೆರಗಿನ ಮಮತೆಯ ಮರೆಯಲ್ಲಿ
ವಾತ್ಸಲ್ಯದ ಜೋಗುಳ ಲಾಲಿ ಹಾಡಿನಲಿ||
ಗದ್ದೆ ಬಯಲು ತೋಟ ಹಳ್ಳದ ಹಾದಿಯಲಿ
ಗೆಳತಿಯರ ಜೊತೆಗೂಡಿ ಶಾಲೆಗ್ಹೋದ ಪರಿಯಲ್ಲಿ|
ಮಗ್ಗಿ ಲೆಕ್ಕ ಪದ್ಯ ಬಾಯಿಪಾಠ ನೃತ್ಯದಲಿ
ಕಲಿಕೆಯ ಸಂಭ್ರಮದ ಚೆಲುಕೂಟದಲಿ||
ಸೀಬೆ ಬಾಳೆ ಸಿಹಿ ಮಾವು ಕಿತ್ತಳೆ
ಗಿಡಮರಕೆ ಹತ್ತಿಬಿದ್ದ ತರಚು ಗಾಯ|
ಕುಂಟಬಿಲ್ಲೆ ಕಲ್ಲು ನೋಂಡಿ ಟೊಪ್ಪಿಯಾಟ
ಮರೆಯುವುದೆಂತು ಮಧುರ ನೆನಪುಗಳ ಓಟ||
ಮಲ್ಲೆ ಮೊಗ್ಗನ್ನು ಮುಡಿಸಿದ ನಲ್ಲನ
ಸಪ್ತಪದಿ ಸಂಭ್ರಮದ ಓಕುಳಿಯಾಟ|
ಚಂದಿರನ ಹಾಲು ಬೆಳದಿಂಗಳ ತಂಪಿನಲಿ
ಬಿಗಿದಪ್ಪಿ ಪಿಸುಮಾತ ಉಸುರಿದ ಲಾಸ್ಯದಲಿ||
*ರತ್ನಾ ಕೆ.ಭಟ್, ತಲಂಜೇರಿ*
ಚಿತ್ರ್