ಮಧ್ಯಕಾಲೀನ ಯುಗದತ್ತ ಜಾಗತಿಕ ವಿದ್ಯಮಾನಗಳು ಚಲಿಸುತ್ತಿವೆ…!

ಮಧ್ಯಕಾಲೀನ ಯುಗದತ್ತ ಜಾಗತಿಕ ವಿದ್ಯಮಾನಗಳು ಚಲಿಸುತ್ತಿವೆ…!

ಪುರಾತನ ಕಾಲದಲ್ಲಿ ಮನುಷ್ಯ ಅನಾಗರಿಕನಾಗಿದ್ದು ನಾಗರೀಕ ಪ್ರಪಂಚಕ್ಕೆ ಮರಳಿದ ಮೇಲೆ ಬಹುತೇಕ ಎಲ್ಲ ನಾಗರಿಕತೆಗಳು ಒಂದಷ್ಟು ನೆಮ್ಮದಿಯಿಂದ ಬದುಕನ್ನು ಕಟ್ಟಿಕೊಂಡಿದ್ದವು. ಹಲವು ಯುದ್ಧಗಳು, ಅಕ್ರಮಣಗಳು ನಡೆಯುತ್ತಿದ್ದವು. ಆದರೆ ಇತಿಹಾಸದ ದಾಖಲೆಗಳ ಪ್ರಕಾರ ಅವುಗಳ ಪ್ರಮಾಣ ಕಡಿಮೆ ಇತ್ತು. ತಾನು ತನ್ನ ಸುರಕ್ಷತೆಗಾಗಿ ಮಾತ್ರ ರಕ್ಷಣಾತ್ಮಕವಾಗಿ ಹೋರಾಡುತ್ತಿದ್ದ. ಆದರೆ ಮಧ್ಯಕಾಲೀನ ಯುಗದಲ್ಲಿ ವಿಶ್ವದ ಬಹುತೇಕ ನಾಗರಿಕತೆಗಳಲ್ಲಿ ಹಿಂಸೆ ತಾಂಡವವಾಡುತ್ತಿತ್ತು. ಮನುಷ್ಯನ ವಿಸ್ತರಣಾ ಸ್ವಭಾವ ಮತ್ತು ತನ್ನ ಅಹಂ ಎಲ್ಲೆ ಮೀರಿತ್ತು. ಎಲ್ಲೆಲ್ಲಿಯೂ ರಕ್ತದ ಕೋಡಿಗಳು ಹರಿದವು.

ತದನಂತರ ಆಧುನಿಕ ಕಾಲದಲ್ಲಿ ಕೆಲವು ದೇಶಗಳು ಸಮಾಧಾನಕರವಾಗಿಯೂ, ಮತ್ತೆ ಕೆಲವು ದೇಶಗಳು ಯುದ್ಧದಲ್ಲಿ ನಿರತವಾಗಿದ್ದವು. ಆದರೆ 20ನೆಯ ಶತಮಾನದಲ್ಲಿ ನಡೆದ ಎರಡು ಮಹಾಯುದ್ಧಗಳ ನಂತರ ವಿಶ್ವದಲ್ಲಿ ಹೇಳಿಕೊಳ್ಳಬಹುದಾದಷ್ಟು ಶಾಂತಿ ನೆಲೆಸಿತು. ಆಗಲೂ ಆಗಾಗ ಕೆಲವು ದೇಶಗಳ ಮಧ್ಯೆ ದ್ವಿಪಕ್ಷೀಯವಾಗಿ ಸಾಕಷ್ಟು ಯುದ್ಧಗಳು ನಡೆದಿದೆ. ಒಟ್ಟಾರೆಯಾಗಿ ಇರುವುದರಲ್ಲಿ ಸಮಾಧಾನಕರ ಪರಿಸ್ಥಿತಿ ಇತ್ತು.

ಆದರೆ ಕೊರೋನ ಅಥವಾ ಕೋವಿಡ್ 19 ರ ಕಾಲದ ನಂತರ ಏಕೋ ವಿಶ್ವ ಮತ್ತೊಮ್ಮೆ ಮಧ್ಯಕಾಲೀನ ಯುಗದ ದಿನಗಳಿಗೆ ಮರಳುವಂತೆ ಕಾಣುತ್ತಿದೆ. ಇತ್ತೀಚಿನ 2-3 ವರ್ಷಗಳ  ಘಟನೆಗಳನ್ನು ಅವಲೋಕಿಸುವುದಾದರೆ, ರಷ್ಯಾ ಉಕ್ರೇನ್ ಮೇಲೆ ಆಕ್ರಮಣ ಮಾಡಿದ ನಂತರ ಜಾಗತಿಕ ಪರಿಸ್ಥಿತಿ ತುಂಬಾ ಹದಗೆಡುತ್ತಿದೆ. ಈಗಲೂ ರಷ್ಯ ಉಕ್ರೇನ್ ನಡುವೆ ನಿರಂತರವಾಗಿ ಯುದ್ಧ ನಡೆಯುತ್ತಲೇ ಇದೆ. ಈ ಮಧ್ಯೆ ಹಮಾಸ್ ಮತ್ತು ಇಸ್ರೇಲ್ ನಡುವೆ ಪ್ರಾರಂಭವಾದ ಘರ್ಷಣೆ ಇದೀಗ ಲೆಬನಾನ್, ಇರಾನ್, ಸಿರಿಯ ಮುಂತಾದ ದೇಶಗಳಿಗೂ ಹಬ್ಬಿ ಅದು ಕೂಡ ಭಯಂಕರ ಸಾವು ನೋವುಗಳಿಗೆ ಮುನ್ನುಡಿ ಬರೆಯುತ್ತಿದೆ. ಇದರ ನಡುವೆ ಕೆಲವು  ತಿಂಗಳುಗಳ ಹಿಂದೆ ಶ್ರೀಲಂಕಾದಲ್ಲಿ ಆಂತರಿಕ ದಂಗೆ ಸಂಭವಿಸಿತು. ಪಾಕಿಸ್ತಾನದ ಕೆಲವು ಪ್ರಾಂತ್ಯಗಳಲ್ಲಿ ಸಹ ದಂಗೆಗಳಾಗುತ್ತಿವೆ. ಆಫ್ಘಾನಿಸ್ತಾನದಲ್ಲಿ ಸದಾ ಪ್ರಕ್ಷುಬ್ಧ ಪರಿಸ್ಥಿತಿಯೇ ಮುಂದುವರಿದಿದೆ. ಆಫ್ರಿಕಾದ ಕೆಲವು ದೇಶಗಳಲ್ಲಿ ಸರ್ಕಾರಗಳೇ ಇಲ್ಲದೆ ಖಾಸಗಿ ಸೈನ್ಯಗಳು ಅಥವಾ ದಂಗೆಕೋರರು ಅಥವಾ ಮಾಫಿಯಾ ಡಾನ್ ಗಳೇ ಆಡಳಿತ ನಡೆಸುತ್ತಿದ್ದಾರೆ ಅವರಿಗೆ ಇಷ್ಟ ಬಂದಂತೆ.

ಇದೀಗ ಬಾಂಗ್ಲಾದೇಶದಲ್ಲಿ ಸಹ ಆಂತರಿಕ ದಂಗೆ ಭುಗಿಲೆದ್ದಿದೆ. ಎಲ್ಲ ಘಟನೆಗಳಿಗೂ ನೂರಾರು, ಸಾವಿರಾರು ಕಾರಣಗಳಿರಬಹುದು. ಅವರ ತಪ್ಪು ಇವರ ಸರಿ ಅಥವಾ ಇವರ ತಪ್ಪು ಅವರ ಸರಿ, ಇವರ ದೌರ್ಬಲ್ಯ, ಅವರ ಪ್ರಾಬಲ್ಯ, ಅಹಂಕಾರ ಹೀಗೆ ನಾನಾ ರೀತಿಯಲ್ಲಿ ವಿಮರ್ಶೆಯನ್ನು ಮಾಡಬಹುದು. ಆದರೆ ಫಲಿತಾಂಶ ಮಾತ್ರ ಒಂದೇ ಅದು ಸಾಮಾನ್ಯ ಜನರ ಮಾರಣಹೋಮ. ಹೀಗೇಕಾಗುತ್ತಿದೆ ವಿಶ್ವ. ಎಷ್ಟೊಂದು ಒಳ್ಳೆಯ ಸಂದೇಶಗಳು, ಧರ್ಮಗಳು, ವಿಚಾರಗಳು, ಸಂವಿಧಾನಗಳು ನಮ್ಮ ನಡುವೆ ಇದೆ, ಎಷ್ಟೊಂದು ಆಧುನಿಕ ತಂತ್ರಜ್ಞಾನ ನಮ್ಮನ್ನು ಸುಖವಾಗಿ ಇಟ್ಟಿದೆ, ಎಷ್ಟೊಂದು ಸೌಕರ್ಯಗಳು ನಮಗಾಗಿ ಕಾದು ಕುಳಿತಿವೆ. ಇಷ್ಟೆಲ್ಲಾ ಸುಖಭೋಗಗಳನ್ನು ಅನುಭವಿಸದೆ ಅವರ ಮೇಲೆ ಇವರು ಬಾಂಬ್ ಹಾಕಿ, ಇವರ ಮೇಲೆ ಅವರು ಬಂದೂಕು ಹೊಡೆದು ತಮ್ಮನ್ನು ತಾವೇ ನಾಶಪಡಿಸಿಕೊಳ್ಳುವ ದುರಂತ ಸ್ಥಿತಿ ಏಕೆ?

ಬಹುಶಃ ಜಾಗತೀಕರಣದ ಪರಿಣಾಮ, ವಿಶ್ವ ಒಂದು ಮಾರುಕಟ್ಟೆಯಾದ ನಂತರ ಕಾರ್ಪೊರೇಟ್ ಸಂಸ್ಕೃತಿ, ವಸ್ತು ಸಂಸ್ಕೃತಿಯನ್ನು ಕೊಳ್ಳುಬಾಕ ಸಂಸ್ಕೃತಿಯಾಗಿ ಪರಿವರ್ತಿಸಿ ಉದ್ಯೋಗ ನೀಡುವ ನೆಪದಲ್ಲಿ, ಗುಲಾಮಿ ಮನೋಭಾವವನ್ನು ಬೆಳೆಸಿ, ಅತಿಯಾದ ಬೆಲೆ ಏರಿಕೆಯಿಂದ ಜೀವನವನ್ನು ದುಸ್ಥಿತಿಗೆ ತಳ್ಳಿ, ಜನರ ಮಾನಸಿಕ ಪರಿಸ್ಥಿತಿಯನ್ನು ಅಸಹನೀಯಗೊಳಿಸಿ, ಇತರರ ಬಗ್ಗೆ ಅಸಹಿಷ್ಣುತೆ ಬೆಳೆಸಿದ ಪರಿಣಾಮ ಇದೀಗ ಅದು ಸ್ಪೋಟಗೊಳ್ಳುವ ಹಂತ ತಲುಪಿದೆ.

ಪ್ರಾರಂಭದಲ್ಲಿ ಉದ್ಯೋಗ ನೀಡುವ ನಂಬಿಕೆ ಹುಟ್ಟಿಸುವ ಈ ಕಂಪನಿಗಳು, ನಿರುದ್ಯೋಗಕ್ಕೂ ಕಾರಣವಾಗುತ್ತಿವೆ. ಅವರು ನೀಡುವ ಉದ್ಯೋಗಗಳು ತಾತ್ಕಾಲಿಕ ಪರಿಸ್ಥಿತಿಯನ್ನಷ್ಟೇ ನಿಭಾಯಿಸುತ್ತದೆ. ದೀರ್ಘಕಾಲದಲ್ಲಿ ಇವು ನಮ್ಮ  ಸಹಜ ಬದುಕನ್ನೇ ಕಸಿಯುತ್ತಿದೆ. ಅದನ್ನು ಮತ್ಯಾರೋ ದುಷ್ಟ ಶಕ್ತಿಗಳು ದುರುಪಯೋಗ ಪಡಿಸಿಕೊಳ್ಳುತ್ತವೆ. ಬಾಂಗ್ಲಾದೇಶದ ಬೆಳವಣಿಗೆ ಸಹ ಇದಕ್ಕೆ ತತ್ತಕ್ಷಣದ ಉದಾಹರಣೆ. ಸಮೃದ್ಧ ಉದ್ಯೋಗಗಳು ಸೃಷ್ಟಿಯಾದರೆ ಯಾರಿಗೂ ಅಸಮಾಧಾನ ವಾಗುವುದಿಲ್ಲ. ಆದರೆ ಉದ್ಯೋಗಗಳ ಬೇಡಿಕೆ ಹೆಚ್ಚಾಗಿ ಅದನ್ನು ಪೂರೈಸಲು ಸಾಧ್ಯವಾಗದಿದ್ದಾಗ ಸಣ್ಣಪುಟ್ಟ ಅಸಮಾನತೆಗಳು ಬೃಹದಾಕಾರವಾಗಿ ಕಾಣುತ್ತದೆ. ಮಾಧ್ಯಮಗಳು ಅದನ್ನು ಕಪೋಲ ಕಲ್ಪಿತವಾಗಿ ವಿಜೃಂಭಿಸುತ್ತದೆ.

ಬಾಂಗ್ಲಾದೇಶದ ವಿದ್ಯಮಾನಗಳನ್ನು ಭಾರತದ ಟೆಲಿವಿಷನ್ ಮಾಧ್ಯಮಗಳು ಅದೊಂದು ಮೀಸಲಾತಿಯ ಸಮಸ್ಯೆ ಎಂದು ಅತಿಯಾಗಿ ವರ್ಣಿಸಿ ಭಾರತದ ಮೀಸಲಾತಿ ವಿರೋಧಿಗಳನ್ನು ಪ್ರಚೋದಿಸುತ್ತಿವೆ. ಬಾಂಗ್ಲಾದೇಶದ ಉದ್ಯೋಗ ಮೀಸಲಾತಿ ಮತ್ತು ಭಾರತದ ಜಾತಿ ಬೇಧ ಮೀಸಲಾತಿಗೂ ಸಾಕಷ್ಟು ಭಿನ್ನತೆ ಇದೆ. ಅಜಗಜಾಂತರ ವ್ಯತ್ಯಾಸವಿದೆ. ಆದರೆ ಮಾಧ್ಯಮಗಳು ಇದೀಗ ಪ್ರಚೋದಿಸುವ ಕೆಲಸ ಮಾಡುತ್ತಿವೆ.

ದಯವಿಟ್ಟು ಯಾರು ಪ್ರಚೋದನೆಗೆ ಒಳಗಾಗಬೇಡಿ. ಬಾಂಗ್ಲಾದೇಶದಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಅರ್ಥಾತ್ ಯುದ್ಧದಲ್ಲಿ ಭಾಗವಹಿಸಿದವರಿಗಾಗಿ ನೀಡುತ್ತಿರುವ ಮೀಸಲಾತಿ, ಮಹಿಳೆಯರಿಗೆ, ಗ್ರಾಮೀಣ ಭಾಗದ ಜನರಿಗೆ, ವಿಕಲಚೇತನರಿಗೆ, ಲೈಂಗಿಕ ಮತ್ತು ಧಾರ್ಮಿಕ ಅಲ್ಪಸಂಖ್ಯಾತರಿಗೆ ಹೀಗೆ ಮೀಸಲಾತಿಯನ್ನು ನೀಡಲಾಗಿದೆ. ಆದರೆ ಭಾರತದ ಮೀಸಲಾತಿ ಜಾತಿ ಅಸಮಾನತೆ, ಅಮಾನವೀಯತೆಯ ಅಸ್ಪೃಶ್ಯ ಜನಾಂಗಕ್ಕೆ ನೀಡಿರುವುದು. ಇದು ನಮ್ಮೆಲ್ಲರ ಕರ್ತವ್ಯ ಜವಾಬ್ದಾರಿ ಮತ್ತು ಪರಿಶಿಷ್ಟ ಜಾತಿ ಪಂಗಡಗಳ ಹಕ್ಕು. ಆದ್ದರಿಂದ ಉದ್ಯೋಗ ಸೃಷ್ಟಿಗೆ, ಸಮಾನತೆಗೆ, ಜಾತಿ ನಿರ್ಮೂಲನೆಗೆ ಶ್ರಮ ಪಡಬೇಕೆ ಹೊರತು ಮೀಸಲಾತಿಯನ್ನು ಅಸೂಯೆಯಿಂದ, ದ್ವೇಷದಿಂದ ನೋಡುವುದಲ್ಲ. ಮೀಸಲಾತಿಯನ್ನು ನೀಡಿರುವುದು ನಮ್ಮದೇ ಜನರಿಗೆ ಹೊರತು ಪರರಿಗಲ್ಲ. ಯಾವಾಗಲೂ ದುರ್ಬಲ ವರ್ಗದವರಿಗೆ ಸಬಲಗೊಳ್ಳಲು ಕಲ್ಪಿಸುವ ಒಂದು ಸುವರ್ಣ ಅವಕಾಶ ಮೀಸಲಾತಿ. ಆದ್ದರಿಂದ ದಯವಿಟ್ಟು ಅದರ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳದೆ ನಿಜವಾದ ಸಮಾನ ಸುಸ್ಥಿರ ಅಭಿವೃದ್ಧಿಗೆ ಎಲ್ಲರೂ ಪ್ರಯತ್ನಿಸೋಣ.

ಹಾಗೆಯೇ ಗುಂಪು ಅಥವಾ ಮಾಸ್ ಎಂದು ಕರೆಯಲ್ಪಡುವ ತಕ್ಷಣದ ಸಂಘಟನೆಗೆ ವಿವೇಚನೆ ಇರುವುದಿಲ್ಲ. ಶ್ರೀಲಂಕಾ, ಪಾಕಿಸ್ತಾನ, ಬಾಂಗ್ಲಾದೇಶ ಮುಂತಾದ ಸಣ್ಣಪುಟ್ಟ ದೇಶಗಳ ದಂಗೆ ಅಷ್ಟೇನೂ ದೊಡ್ಡ ಪರಿಣಾಮ ಬೀರುವುದಿಲ್ಲ‌. ಅವರು ಅಧ್ಯಕ್ಷರು ಅಥವಾ ಪ್ರಧಾನ ಮಂತ್ರಿಗಳ ಮನೆಗೆ ನುಗ್ಗಿ ದಾಳಿ ಮಾಡಬಹುದು. ಆದರೆ ಭಾರತದತ್ತ ದೇಶಕ್ಕೆ ಗುಂಪು ಅತ್ಯಂತ ಅಪಾಯಕಾರಿಯಾಗಬಹುದು. ಇಡೀ ದೇಶದಲ್ಲಿ ರಕ್ತದ ಕೋಡಿಯೇ ಹರಿಯಬಹುದು.

ಭಾರತ ಬಹುತ್ವದ ವೈವಿಧ್ಯಮಯ ದೇಶ. ಸರ್ವ ಜನಾಂಗದ ಶಾಂತಿಯ ತೋಟ. ಆದ್ದರಿಂದ ನಾವುಗಳು ಆ ಘಟನೆಯಿಂದ ಪ್ರಚೋದನೆಗೆ ಒಳಗಾಗುವುದು ಬೇಡ. ಬಾಂಗ್ಲಾದೇಶದಲ್ಲಿ ಹಿಂದೂ ಮತ್ತು ಹಿಂದೂ ದೇವಸ್ಥಾನಗಳ ಮೇಲೆ ನಡೆಯುತ್ತಿರುವ ಹಲ್ಲೆಯನ್ನು ಪ್ರಬಲವಾಗಿ ಖಂಡಿಸೋಣ ಮತ್ತು ಅವರ ಹೇಡಿತನಕ್ಕೆ, ಅಮಾನವೀಯತೆಗೆ ಧಿಕ್ಕಾರ ಹೇಳೋಣ. ಹಾಗೆಂದು ಅಂತಹ ದುಷ್ಟತನದ ಕೃತ್ಯವನ್ನು ನಾವುಗಳು ಮಾಡುವುದು ಬೇಡ. ಎಲ್ಲಾ ದೇವಸ್ಥಾನ, ಮಂದಿರ, ಮಸೀದಿ, ಚರ್ಚು, ಗುರುದ್ವಾರ, ಬೌದ್ಧಗೃಹ, ಜೈನ ಭವನ ಎಲ್ಲವನ್ನು ಒಟ್ಟಾಗಿ ನಿಂತು ರಕ್ಷಿಸೋಣ. ಭಾರತ ವಿಶ್ವಕ್ಕೆ ಗುರುವಾಗುವುದು ಮಾನವೀಯತೆ, ಸಮಾನತೆ, ತ್ಯಾಗ, ಬಲಿದಾನ, ಕ್ಷಮಾ ಗುಣಗಳಿಂದಲೇ ಹೊರತು ಹಿಂಸೆಯಿಂದಲ್ಲ ಎಂಬುದನ್ನು ಸದಾ ನೆನಪಿಟ್ಟುಕೊಳ್ಳೋಣ. ಪ್ರಚೋದನೆಗೆ ಒಳಗಾಗುವುದಾದರೆ ಸತ್ಯ, ನ್ಯಾಯ, ಅಹಿಂಸೆ, ಸರಳತೆಯಿಂದ ಪ್ರಚೋದನೆಗೊಳಗಾಗೋಣ ಹಿಂಸೆಯಿಂದಲ್ಲ...

-ವಿವೇಕಾನಂದ. ಎಚ್. ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ