ಮಧ್ಯಮ ವರ್ಗದವರ ಜೀವನೋತ್ಸಾಹ ಮತ್ತು ನಿರಾಶಾವಾದ

ಮಧ್ಯಮ ವರ್ಗದವರ ಜೀವನೋತ್ಸಾಹ ಮತ್ತು ನಿರಾಶಾವಾದ

ಭಾರತದ ಬಹಳಷ್ಟು ಮಧ್ಯಮ ವರ್ಗದ ಜನರಲ್ಲಿ ಜೀವನೋತ್ಸಾಹ ಕಡಿಮೆಯಾಗುತ್ತಿದೇಯೇ ಎಂಬ ಅನುಮಾನ ಶುರುವಾಗಿದೆ. ನಿಜಕ್ಕೂ ಬೃಹತ್ ಸಂಖ್ಯೆಯ ಮಧ್ಯಮ ವರ್ಗದವರು ಈ ಆಧುನಿಕ ಕಾಲದಲ್ಲಿ ಎಲ್ಲ ರೀತಿಯ ತಂತ್ರಜ್ಞಾನದ ಸೌಕರ್ಯಗಳನ್ನು ಉಪಯೋಗಿಸಿಕೊಂಡು, ಚೈತನ್ಯದ ಚಿಲುಮೆಗಳಂತೆ ಬದುಕನ್ನು ಸಾಗಿಸಿಕೊಂಡು, ಎಲ್ಲೆಲ್ಲೂ ಸಂತೋಷ, ಸಂಭ್ರಮ, ಮನೋಲ್ಲಾಸದಿಂದ ಪುಟಿದೇಳುತ್ತಿರುವಂತಿರಬೇಕಿತ್ತು, ಅವರಿಗಿರುವ ಸೌಲಭ್ಯಗಳನ್ನು ಉಪಯೋಗಿಸಿಕೊಂಡು ಜಿಂಕೆ ಮರಿಗಳಂತೆ ಕುಣಿಯುತ್ತಾ, ನಲಿಯುತ್ತಾ ಇರಬೇಕಿತ್ತು.

ಆದರೆ ಕೊರೋನಾ ಉಂಟುಮಾಡಿದ ಆ ಭಯಾನಕ ಪರಿಸ್ಥಿತಿ, ಸಾವು ಬದುಕಿನ ತಲ್ಲಣಗಳು, ಅದಕ್ಕೂ ಮೊದಲು ನೋಟ್ ಬ್ಯಾನ್ ಆದ ಕಾರಣದಿಂದಾಗಿ , ಚಿನ್ನ, ಭೂಮಿ ಬೆಲೆ ಜಾಸ್ತಿಯಾಗಿ, ಹಾಗೆಯೇ ಸಂಬಳಗಳು ಹೆಚ್ಚಾಗಿ, ಜಿ ಎಸ್ ಟಿ ಜಾರಿಗೆ ಬಂದಿದ್ದರಿಂದ ಎಲ್ಲಾ ವಸ್ತುಗಳ ಬೆಲೆ ಏರಿಕೆಯೂ ದುಬಾರಿಯಾಗಿ, ಆಸ್ಪತ್ರೆಗಳು, ವಾಹನಗಳು ಹೈಟೆಕ್ ಆಗಿ, ಎಲ್ಲೆಲ್ಲೋ ಟೋಲ್ ಗಳು ಸಹ ಹಣ ವಸೂಲಿ ಕೇಂದ್ರಗಳಾಗಿ, ಒಳ್ಳೆಯ ಐಷಾರಾಮಿ ರಸ್ತೆಗಳು, ಹೋಟೆಲ್ ಗಳು, ಬಟ್ಟೆಗಳು, ಮಾಲ್ ಗಳು, ಐಪಿಎಲ್ ಮ್ಯಾಚ್ಗಳು, ಸಾಮಾನ್ಯ ಜನರ ಕೈಗೆಟಕುತ್ತಿರುವ ಈ ಸಂದರ್ಭದಲ್ಲಿ, ಮೊಬೈಲ್, ಲ್ಯಾಪ್ ಟಾಪ್, ಫೈವ್ ಜಿ ಸಂಪರ್ಕ ಹೀಗೆ ವೇಗವಾಗಿ ಬೆಳವಣಿಗೆ ಹೊಂದುತ್ತಿರುವ ಸಂದರ್ಭದಲ್ಲಿ, ಜನರ ಜೀವನೋತ್ಸಾಹ ಕಡಿಮೆಯಾಗಿ ಅದರ ವಿರುದ್ಧ ದಿಕ್ಕಿನಲ್ಲಿ ಸ್ಮಶಾನ ಸನ್ಯಾಸ ಆವರಿಸಿಕೊಳ್ಳುತ್ತಿದೆಯೇನೋ ಎಂದೆನಿಸುತ್ತಿದೆ.

ಏಕೆಂದರೆ ಮಾಧ್ಯಮಗಳ ಮುಖಾಂತರ ಎಲ್ಲರಿಗೂ ಹಂಚಿಕೆಯಾಗುತ್ತಿರುವ ಪುನೀತ್ ರಾಜಕುಮಾರ್ ಸೇರಿ ಅನೇಕರ ದಿಢೀರನೆ ಉಂಟಾಗುತ್ತಿರುವ ಅಸಹಜ ಸಾವು ನೋವುಗಳು, ಅಪಘಾತಗಳು, ಆತ್ಮಹತ್ಯೆಗಳು, ಕೊಲೆಗಳು, ಎಷ್ಟೇ ದುಡಿದರೂ ಖರ್ಚು ನಿಭಾಯಿಸಲು ಸಾಧ್ಯವಾಗುತ್ತಿಲ್ಲದಿರುವುದು, ಮನುಷ್ಯ ಸಂಬಂಧಗಳು, ವೈವಾಹಿಕ ಜೀವನಗಳು ವಾಣಿಜ್ಯೀಕರಣವಾಗಿರುವುದು, ಈ ಎಲ್ಲವೂ ಅವರ ಜೀವನೋತ್ಸಾಹ ಕುಗ್ಗಲು ಕಾರಣವಾಗುತ್ತಿದೆ.

ಇದರ ಜೊತೆ ಪರಿಸರ ನಾಶದಿಂದ ನೀರು, ಗಾಳಿ, ಮಲಿನವಾಗಿ ಆಹಾರಗಳು ರಾಸಾಯನಿಕಯುಕ್ತವಾಗಿ ದೇಹ, ಮನಸ್ಸು ಒಂದು ರೀತಿಯಲ್ಲಿ ಜಿಡ್ಡು ಕಟ್ಟುತ್ತಿವೆ. ನರನಾಡಿಗಳು, ಶ್ವಾಸಕೋಶಗಳು, ರಕ್ತನಾಳಗಳು, ಕಣ್ಣು, ಕಿವಿ, ಮೂಗು ತಮ್ಮ ಸಂವೇದನೆಯನ್ನು ಕಳೆದುಕೊಳ್ಳುತ್ತಿವೆ. ಬಿಪಿ ಶುಗರ್, ಥೈರಾಯ್ಡ್, ಗ್ಯಾಸ್ಟ್ರಿಕ್, ಚರ್ಮರೋಗ, ಬೆನ್ನು ನೋವು, ತಲೆನೋವು ಮುಂತಾದ ಕಾಯಿಲೆಗಳು ಎಲ್ಲರನ್ನೂ ಬಹಳ ಚಿಕ್ಕ ವಯಸ್ಸಿಗೇ ಕಾಡತೊಡಗಿವೆ.

ಈ ಎಲ್ಲದರ ಪರಿಣಾಮ ಮಧ್ಯಮ ವರ್ಗ ಎಷ್ಟು ಚಟುವಟಿಕೆಯಿಂದ, ಖುಷಿ ಖುಷಿಯಾಗಿ ಇರಬೇಕಾಗಿತ್ತೋ ಅಷ್ಟರಮಟ್ಟಿಗೆ ಇಲ್ಲ ಎಂದು ಅನಿಸುತ್ತಿದೆ. ಯಾವಾಗ, ಯಾರಿಗೆ, ಏನು ಅಪಾಯ ಕಾದಿದೆಯೋ, ಯಾವಾಗ ಸಾವು ಬರುತ್ತದೆಯೋ ಏನೋ ಎಂಬ ಆತಂಕದಲ್ಲಿಯೇ ಜನರು ಸದಾ ಮಾತನಾಡಿಕೊಳ್ಳುತ್ತಾ ಬದುಕುವುದು ಕೇಳಿ ಬರುತ್ತಿದೆ. ಎಲ್ಲರೂ ಅಲ್ಲದಿದ್ದರೂ ಬಹಳಷ್ಟು ಜನರು ನಿರುತ್ಸಾಹದಿಂದ ಮಾತನಾಡುತ್ತಿದ್ದಾರೆ. ನೆಮ್ಮದಿಯನ್ನು ಕಳೆದುಕೊಂಡು ರೆಸ್ಟ್ಲೆಸ್ ಆಗುತ್ತಿದ್ದಾರೆ. ತಾಳ್ಮೆ ಗುಣಮಟ್ಟ ಕಡಿಮೆಯಾಗುತ್ತಿದೆ. ಕೋಪ, ತಾಪಗಳು ಅಧಿಕವಾಗುತ್ತಿವೆ. ಈ ಎಲ್ಲವೂ ನಿರಾಶಾವಾದದ ಭಾಗವಾಗಿ ಆ ಗುಣಲಕ್ಷಣಗಳನ್ನು ಹೊರ ಹಾಕುತ್ತಿದೆ‌.

ಜೊತೆಗೆ ಯುವಕ ಯುವತಿಯರ ಮದುವೆಗಳು ಸಹ ನಿಧಾನವಾಗುತ್ತಿದೆ. ಗಂಡುಗಳಿಗೆ ಅಥವಾ ಹೆಣ್ಣುಗಳಿಗೆ ತಮ್ಮ ಆಯ್ಕೆಯ ಜೊತೆಗಾರರು ದೊರೆಯುವುದು ಕಷ್ಟವಾಗುತ್ತಿದೆ. ಇದು ಸಹ ಒಂದು ರೀತಿ ಕೆಲವರಲ್ಲಿ ಅಸಹನೆ ಮೂಡಲು ಕಾರಣವಾಗಿದೆ. ಹಾಗೆಯೇ, ಈ ಕೊಳ್ಳುಬಾಕ ಸಂಸ್ಕೃತಿಯಿಂದ ಎಷ್ಟು ದುಡಿದರೂ ಸಾಕಾಗುತ್ತಿಲ್ಲ, ಮಕ್ಕಳೊಂದಿಗೆ, ಕುಟುಂಬದೊಂದಿಗೆ ಸಮಯ ಕಳೆಯಲು ಸಾಧ್ಯವಾಗುತ್ತಿಲ್ಲ, ಅತಿಯಾದ ಸಾಮಾಜಿಕ ಜಾಲತಾಣಗಳ ಉಪಯೋಗ, ಸಮೂಹ ಸಂಪರ್ಕ ಮಾಧ್ಯಮಗಳ ಬೆಳವಣಿಗೆ, ಮನರಂಜನಾ ಉದ್ಯಮದ ಅತಿರೇಕದ ವರ್ತನೆಗಳು, ಜನರಲ್ಲಿ ವ್ಯಕ್ತಿಗತ ಅನಾಥ ಪ್ರಜ್ಞೆಯನ್ನು ಉಂಟುಮಾಡುತ್ತಿದೆ.

ಹೀಗೆ ಒಂದಲ್ಲ ಒಂದು ಕಾರಣದಿಂದ 20-25 ವರ್ಷಗಳ ಹಿಂದೆ ಇದ್ದ ದೇಹ, ಮನಸ್ಸಿನ ಆರೋಗ್ಯ, ಜೀವನೋತ್ಸಾಹ, ಧೈರ್ಯ, ಬದುಕುವ, ಸಾಧಿಸುವ ಛಲ, ಆಸಕ್ತಿ ಈಗ ಕಡಿಮೆಯಾಗುತ್ತಿರುವುದು ನಮ್ಮೆಲ್ಲರ ಅನುಭವಕ್ಕೆ, ಗಮನಕ್ಕೆ ಬರುತ್ತಿದೆ. ನಿಜಕ್ಕೂ ಇದೊಂದು ಆತಂಕ ಮೂಡಿಸುವ ಪರಿಸ್ಥಿತಿ ಎಂದು ನನಗನಿಸುತ್ತದೆ. ನಿಧಾನವಾಗಿ ಜೀವನೋತ್ಸಾಹ ಹೆಚ್ಚಿಸುವ ವಿವಿಧ ಮಾರ್ಗಗಳ ಹುಡುಕಾಟ ಮಾಡಬೇಕಾಗಿದೆ. ಇಲ್ಲದಿದ್ದರೆ ಸಾಮಾಜಿಕ ವ್ಯವಸ್ಥೆ ದುರ್ಬಲವಾಗಬಹುದು. 

ಇದನ್ನು ಹೀಗೆಯೇ ಎಂದು ಸ್ಪಷ್ಟವಾಗಿ ಹೇಳುವುದು ಸಾಧ್ಯವಿಲ್ಲ. ಕೆಲವರು ಮೊದಲಿಗಿಂತ ಹೆಚ್ಚು ಜೀವನೋತ್ಸಾಹದಿಂದ, ವ್ಯಾಪಾರ ವಹಿವಾಟು, ಕಲೆ, ವಿಜ್ಞಾನ, ಸಾಹಿತ್ಯ, ಸಂಗೀತ, ಕ್ರೀಡೆಗಳಲ್ಲಿ ತೊಡಗಿಸಿಕೊಂಡು ಹೆಚ್ಚು ಚಟುವಟಿಕೆಯಿಂದ ಇರುವವರನ್ನು ಕಾಣಬಹುದು. ಆದರೆ ಒಟ್ಟು ವ್ಯವಸ್ಥೆಯನ್ನು ನೋಡಿದಾಗ ನನಗೆ ಸಮಾಜದ, ವ್ಯಕ್ತಿಗಳ ಜೀವನೋತ್ಸಾಹ ಕಡಿಮೆಯಾಗುತ್ತಿರುವುದು ಕಂಡು ಬರುತ್ತಿದೆ. ಇದನ್ನು ಅರಿತುಕೊಂಡು ಮತ್ತೆ ಪುಟಿದೇಳುವ ಜೀವನೋತ್ಸಾಹ ರೂಪಿಸಿಕೊಳ್ಳೋಣ. ಅದಕ್ಕಾಗಿ ಆಂತರಿಕವಾಗಿ ಒಂದಷ್ಟು ಮನೋಚೈತನ್ಯ ಬೆಳೆಸಿಕೊಳ್ಳೋಣ. ಅನೇಕ ಮಾರ್ಗಗಳು ನಮ್ಮ ಮುಂದಿವೆ ಅದನ್ನು ಅಳವಡಿಸಿಕೊಳ್ಳೋಣ.

-ವಿವೇಕಾನಂದ. ಎಚ್. ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ