ಮಧ್ಯಾಹ್ನ ಊಟದ ಬಳಿಕ ಪುಟ್ಟ ನಿದ್ರೆ !

ಮಧ್ಯಾಹ್ನ ಊಟದ ಬಳಿಕ ಪುಟ್ಟ ನಿದ್ರೆ !

ಬಹಳ ಮಂದಿಗೆ ಮಧ್ಯಾಹ್ನದ ಸುಗ್ರಾಸ ಭೋಜನದ ಬಳಿಕ ಒಂದು ಕೋಳಿ ನಿದ್ರೆ (ಪುಟ್ಟ) ಮಾಡುವ ಅಭ್ಯಾಸ ಇರುತ್ತದೆ. ಬೆಳಿಗ್ಗೆ ಬೇಗನೇ ಎದ್ದು ಕೃಷಿ ಕೆಲಸಕ್ಕೆ ಹೋಗುವ ಮಂದಿ ಮಧ್ಯಾಹ್ನದ ಪುಟ್ಟ ನಿದ್ರೆಗೆ ಶರಣಾಗುವುದು ಸಹಜ. ಏಕೆಂದರೆ ಅವರಿಗೆ ಆ ಸಮಯದಲ್ಲಿ ಅಧಿಕ ಕೆಲಸ ಇರುವುದಿಲ್ಲ. ನೆತ್ತಿಯನ್ನು ಸುಡುವ ಬಿಸಿಲು ಇರುವ ಕಾರಣ ತೋಟಕ್ಕೆ ಹೋಗಿ ಕೆಲಸ ಮಾಡುವುದು ಕಷ್ಟ. ಬೆಳಿಗ್ಗೆ ಹೊಲಕ್ಕೆ ನೀರು ಬಿಡುವ ಅಗತ್ಯದ ಕೆಲಸಗಳನ್ನು ಮುಗಿಸಿ ಆಗಿರುವುದರಿಂದ ಮಧ್ಯಾಹ್ನ ಒಂದು ಸಣ್ಣ ನಿದ್ರೆ ಮಾಡುವುದು ಅವರಿಗೆ ವಿಶ್ರಾಂತಿ ನೀಡುತ್ತದೆ. ಮತ್ತೆ ಲವಲವಿಕೆಯಿಂದ ಸಂಜೆಯ ಹೊತ್ತಿನ ಕೆಲಸ ಮಾಡಲು ಸಾಧ್ಯವಾಗುತ್ತದೆ. 

ಮಧ್ಯಾಹ್ನದ ಪುಟ್ಟ ನಿದ್ರೆ ಮಾಡುವುದರಿಂದ ಆರೋಗ್ಯದ ಮೇಲೆ ಏನೆಲ್ಲಾ ಪರಿಣಾಮಗಳು ಬೀಳಬಹುದು? ಕೆಲವು ತಜ್ಞರ ಪ್ರಕಾರ ಒಬ್ಬ ವ್ಯಕ್ತಿ ಸಾಮಾನ್ಯವಾಗಿ ೭ ರಿಂದ ೮ ಗಂಟೆಗಳು ನಿದ್ರೆ ಮಾಡುವುದು ಉತ್ತಮ ಎಂದು ಅಭಿಪ್ರಾಯ ಪಡುತ್ತಾರೆ. ಹೆಚ್ಚಿನ ಸಮಯದಲ್ಲಿ ನೀವು ಕೆಲಸ, ಕುಟುಂಬದ ಜವಾಬ್ದಾರಿಗಳು ಮತ್ತು ಇನ್ನಿತರ ಅಗತ್ಯದ ಕಾರಣಗಳಿಗಾಗಿ ಬೆಳಿಗ್ಗೆ ಬೇಗನೇ ಏಳಬೇಕಾಗುತ್ತದೆ. ಅಂತಹ ಸಮಯದಲ್ಲಿ ಮಧ್ಯಾಹ್ನ ಮಲಗಬೇಕು. ಹೆಚ್ಚುತ್ತಿರುವ ಕೆಲಸದ ಹೊರೆ, ಬಿಡುವಿಲ್ಲದ ಜೀವನ ಶೈಲಿ ಮತ್ತು ಕೆಲಸದ ಒತ್ತಡದ ಸಂದರ್ಭಗಳಲ್ಲಿ ಮಧ್ಯಾಹ್ನದ ನಿದ್ರೆ ಚೇತೋಹಾರಿ ಫಲಿತಾಂಶವನ್ನು ನೀಡುತ್ತದೆ. ಮಧ್ಯಾಹ್ನದ ನಿದ್ರೆ ಉಲ್ಲಾಸ ನೀಡುತ್ತದೆ, ಜೊತೆಗೆ ದಣಿವನ್ನೂ ನಿವಾರಣೆ ಮಾಡುತ್ತದೆ. ಈ ನಿದ್ರೆಯಿಂದ ನಮ್ಮ ದೇಹದ ಸ್ನಾಯುಗಳಿಗೆ ವಿರಾಮ ದೊರೆಯುತ್ತದೆ. ಆದರೆ ನೆನಪಿಡಿ, ಮಧ್ಯಾಹ್ನದ ಸಮಯದಲ್ಲಿ ಒಂದು ಗಂಟೆಗೂ ಹೆಚ್ಚಿನ ಕಾಲ ಮಲಗುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. 

ಒಂದು ಗಂಟೆಗೂ ಹೆಚ್ಚು ಸಮಯ ಮಧ್ಯಾಹ್ನದ ಹೊತ್ತು ನಿದ್ದೆ ಮಾಡಿದರೆ ನಮ್ಮ ಜೈವಿಕ ಗಡಿಯಾರದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ರಾತ್ರಿ ನೈಸರ್ಗಿಕವಾಗಿ, ಸಹಜವಾಗಿ ಬರುವ ನಿದ್ರೆಗೆ ಸಮಸ್ಯೆಯಾಗುತ್ತದೆ. ರಾತ್ರಿ ಸಾಕಷ್ಟು ಪ್ರಮಾಣದಲ್ಲಿ ನಿದ್ರೆ ಮಾಡುವವರು ಮಧ್ಯಾಹ್ನ ಅರ್ಧ ಗಂಟೆಗೂ ಹೆಚ್ಚು ಕಾಲ ಮಲಗಬಾರದು ಎನ್ನುತ್ತಾರೆ ತಜ್ಞರು. 

ಶಾಲೆಗೆ ಹೋಗುವ ಪುಟ್ಟ ಮಕ್ಕಳು ಹಿಂದೆ ಬಂದ ಬಳಿಕ ಮಧ್ಯಾಹ್ನದ ನಿದ್ರೆಗೆ ಶರಣಾಗುತ್ತಾರೆ. ಇದು ಅಷ್ಟೊಂದು ಉತ್ತಮವಾದ ಅಭ್ಯಾಸ ಅಲ್ಲ, ಹೀಗೆ ಮಧ್ಯಾಹ್ನ ಮಲಗುವ ಮಕ್ಕಳು ಬೇಗನೇ ಏಳುವುದಿಲ್ಲ, ಇದರಿಂದ ರಾತ್ರಿ ಮಲಗುವಾಗ ತಡವಾಗುತ್ತದೆ. ಸಹಜವಾದ ಅವರ ನಿದ್ರೆಗೆ ಸಮಸ್ಯೆಯಾಗುತ್ತದೆ. ಬೆಳಿಗ್ಗೆ ಬೇಗನೇ ಏಳಲು ಆಗುವುದಿಲ್ಲ. ಬರೇ ಪುಟ್ಟ ಮಕ್ಕಳಾದರೆ ಮಧ್ಯಾಹ್ನ ಮಲಗುವುದು ಸಹಜವಾಗಿರುತ್ತದೆ. 

(ಆಧಾರ)

ಚಿತ್ರ ಕೃಪೆ: ಅಂತರ್ಜಾಲ ತಾಣ