"ಮನಃಶಾಂತಿಯೇ ಅತ್ಯುನ್ನತ ಶ್ರೀಮಂತಿಕೆ",

"ಮನಃಶಾಂತಿಯೇ ಅತ್ಯುನ್ನತ ಶ್ರೀಮಂತಿಕೆ",

ನನ್ನ ನಾಳೆಯ ಕುರಿತು ನನಗಲ್ಲ, ಈ ಭೂಮಿ ಯಾವುದೇ ಜೀವಿಗೂ ಪ್ರವಚಿಸಲು ಸಾಧ್ಯವಿಲ್ಲ. ಅಷ್ಟಕ್ಕೂ ಯಾವತ್ತೂ ಬಾರದ ನಾಳೆಯ ಬಗ್ಗೆ ನಂಗೇನು ಅಷ್ಟು ಕುತೂಹಲವಿಲ್ಲ. ಈ ಬದುಕು ಈ ಕ್ಷಣದ್ದು ಅಷ್ಟೇ ಎಂದು ನಂಬುವವನು ನಾನು. ನಾ ಈ ಪದವನ್ನು ಬೆರೆಯುವ ವೇಳೆ 'ಈ ಕ್ಷಣ' ಆಗಿದ್ದ ಈ ಹೊತ್ತನ್ನು ಇನ್ನೈದು ನಿಮಿಷದ ಬಳಿಕ ನಾ ತಿರುಗಿ ನೋಡಬಹುದು. ಅಂಥಹ ನನ್ನ ದೃಷ್ಟಿ ಪರದೆಯಲ್ಲಿ ಶಾಶ್ವತವಾಗಿ ಉಳಿಯುವ, ನನ್ನನ್ನು ಸದಾ ಜೀವಂತವಿರಿಸುವ ಪ್ರೇರಣೆಯಾಗಿ, ಒಂಟಿಯಾದಾಗ ದಿಕ್ಕಾಗಿ, ದುಃಖಕ್ಕೆ ಸಾಂತ್ವನವಾಗಿ, ಭಾರಕ್ಕೊಂದು ಹೆಗಲಾಗಿ, ಅತ್ತ ಕ್ಷಣವ ನಗುವಾಗಿ, ನಕ್ಕ ಕ್ಷಣ ಅಳುವಾಗಿ, ಮಳೆಯ ನಂತರ ತೊಟ್ಟಿಕ್ಕುವ ಹನಿಯಾಗಿ, ಬದುಕು ಇಷ್ಟೆಯಾ ಎಂದೆನಿಸುವ ವೇಳೆ ನೀಲಾಗಸದ ತುಂಬಾ ಕಾಮನಬಿಲ್ಲಾಗಿ ಮೂಡುವ ನನ್ನ ನೆನಪುಗಳು, ಅಂತಹ ನೆನಪುಗಳ ವ್ಯಸನಿ ನಾನು. ಆ ಕಾರಣಕ್ಕೇ ಇರಬಹುದು ನಿನ್ನೆಗಳಲ್ಲೇ ಹೆಚ್ಚು ಬದುಕುತ್ತೇನೆ. ಅಂತಹ ಒಂದಿಷ್ಟು ಬೊಗಸೆ ನೆನಪುಗಳನ್ನು ಈ ಸಂಚಿಯೊಳಗೆ ತುಂಬಿದ್ದೇನೆ..

ನನ್ನ ಬಗ್ಗೆ ನನ್ನ ಬರಹಗಳೇ ಹೆಚ್ಚು ಮಾತನಾಡುವುದರಿಂದ ಇಲ್ಲಿ ಹೇಳಲು ಹೆಚ್ಚು ಉಳಿದಿಲ್ಲ. ಇಳಿಸಂಜೆಯಲ್ಲಿ ಕಾಡುಮಧ್ಯೆಯೋ, ಕಡಲ ತೀರದಲ್ಲೋ ಕಳೆದುಹೋಗಲು ಸದಾ ಹಂಬಲಿಸುವ ಮನ, ಬಾನ ಮಡಿಲಿನಿಂದ ಒಂದಿಷ್ಟು ವರ್ಷಧಾರೆಯೂ ಸೇರಿಕೊಂಡರೆ ಕಥೆ ಮುಗಿಯುತು;ನೆನಪುಗಳನ್ನೆಲ್ಲ ನೇವರಿಸಿ ಮಾತಿಗೆ ಕೂತು, ಮನಸ್ಸು ಮೌನವಾಗಿ ಅದ್ಯಾವುದೋ ಲೋಕದ ವಾಸಿಯಾಗುತ್ತದೆ. ಅಲ್ಲಿ ಬದುಕಿನ ಜಂಜಡವಿಲ್ಲ. ಗಾಳಿ, ನೀರು, ಬೆಳಕು ಉಚಿತವಾಗಿ ಸಿಗೋ ಜಗದಲಿ ಬದುಕನ್ನು ದುಸ್ತರ ಮಾಡಿಕೊಂಡ ನಿಮ್ಮಗಳ ಸಿನಿಕ ಜಗದಾಚೆಯ ಅನೂಹ್ಯ ಲೋಕವದು. ಹಕ್ಕಿಗಳ ಕಲರವಕ್ಕೆ ಸಾಥಿಯಾದ ಜೀರುಂಡೆಗಳ ನಾದ. ಪಕ್ಕದಲ್ಲೇ ಹರಿವ ತೋಡಿನ ಝುಳು-ಝುಳು. ರಾತ್ರಿಯ ನಿಶೀಥತೆ, ದೂರದಲ್ಲಿ ಒದರುವ ಗೂಬೆ, ಊಳಿಡುವ ನರಿ. ನನ್ನದೇ ಲೋಕವದು. ಕತ್ತಲಿಗೂ ಬೆಳಕನ್ನು ತೊಡಿಸಿ ಉನ್ಮಾದವನ್ನು ಉಣ್ಣುವ ಬೆಳಕಿನ ಜನರ ವಿಕ್ಷಿಪ್ತತೆಗೆ ಅಲ್ಲಿ ಜಾಗವಿಲ್ಲ. ಕತ್ತಲನ್ನು ಕತ್ತಲಾಗಿಯೂ ಬೆಳಕನ್ನು ಬೆಳಕಾಗಿಯೂ ಆಸ್ವಾದಿಸುತ್ತೇನೆ, ಅಲ್ಲಷ್ಟೇ ನಾನು ನಾನಾಗಿ ಹೆಚ್ಚು ಬದುಕುತ್ತೇನೆ. ಅದರಿಂದಲೋ ಏನೋ ನಾನು ಎಂದೂ ಸಲ್ಲದ ಈ ಬೆಳಕಿನ ಜಗದ ಬಗ್ಗೆ ತೀರದ ಅಸಹ್ಯತನವಿದೆ. ಕೋಪವಿದೆ, ಪರಿತಾಪವಿದೆ. ಆದರೇನು ? ಒಲ್ಲದೆಯೂ ನಾನು ಕೂಡ ಈ ಜಗದ ಕ್ಷುಲ್ಲಕತೆಯ ಭಾಗವಾಗಿದ್ದೇನೆ. ಅದರಿಂದಾಚೆ ಹೊರಬರಲು ಪ್ರಯತ್ನಿಸಿದಷ್ಟೂ ತೀವ್ರವಾಗಿ ನನ್ನನ್ನು ಸೆಳೆಯುತ್ತದೆ ಅದು. ಮನುಷ್ಯನೊಂದಿಗೆ ಹುಟ್ಟಿದ ಅಥವಾ ಹೇರಲ್ಪಟ್ಟ ಒಂದಷ್ಟು ಜವಾಬ್ದಾರಿಗಳೆಂಬ ಕಟ್ಟುಪಾಡುಗಳು, ಸಂಭಂದಗಳೆಂಬ ಬೇಲಿ. ಖುಷಿಯನ್ನು ವಸ್ತುಗಳ ಗಾತ್ರಕ್ಕೂ ಬೆಲೆಗೂ ನಿಗುದಿಗೊಳಿಸಿ, ಆ ವಸ್ತು ಸಿಕ್ಕರೆಷ್ಟೇ ಖುಷಿ ಎಂದು ಬದುಕಿಗೆ ನಿಯಮ ಹಾಕಲಾಗಿದೆ ಇಲ್ಲಿ. ಭೌತ ವಸ್ತುಗಳ ವ್ಯಾಮೋಹದಲ್ಲಿ ಬಾಲ್ಯವನ್ನೂ, ಕೌಮಾರವನ್ನೂ, ಯವ್ವನವನ್ನೂ ಅನುಭವಿಸಲು ಸಾಧ್ಯವಿಲ್ಲವಾಗಿದೆ. ಇದೆಲ್ಲದರಿಂದ ಮುಕ್ತಿಗಾಗಿ ಸದಾ ಹಂಬಲಿಸುತ್ತೇನೆ. ನೀ ಕಟ್ಟಿಕೊಂಡ ಸೌಧವೋ, ಕೋಟೆವೋ, ನೀನುಡುವ ವಸ್ತ್ರದ ಬೆಲೆಯೋ, ಸಂಚರಿಸುವ ವಾಹನದ ಮೌಲ್ಯವೋ, ಬ್ಯಾಂಕಿನ ಲಾಕರಿನಲ್ಲಿಟ್ಟಿರುವ ಒಡವೆಯೊ, ನಿನ್ನ ಹಿಂಬಾಲಕ ಪಡೆಯೋ ನಿನ್ನ ಮನಸಿನ ಸಂತೃಪ್ತಿಯನ್ನೂ ಖುಷಿಯನ್ನೂ ಅಲೆಯುವ ಮಾಪಕವಲ್ಲ. ಇದ್ಯಾವುದರಲ್ಲೂ ಪೂರ್ಣ ಸಂತೋಷವನ್ನು ಪಡೆದವರ್ಯಾರು ನಾನು ಕಂಡದ್ದಿಲ್ಲ, ಕೇಳಿದ್ದಿಲ್ಲ. "ಮನಃಶಾಂತಿಯೇ ಅತ್ಯುನ್ನತ ಶ್ರೀಮಂತಿಕೆ", ಈ ಬೆಳಕಿನ ಜಗದ ತುಂಬೆಲ್ಲಾ ಯಾವುದೊ ಕರ್ಕಶ ಸಂಗೀತಕ್ಕೆ ಕಿವುಡಾದ ಮಂದಿಯ ಮಧ್ಯೆ ಈ ಸತ್ಯವನ್ನು ಕೂಗಿ ಕೂಗಿ ಹೇಳುವ ಪ್ರಯತ್ನದಲ್ಲಿದ್ದೇನೆ..

Comments

Submitted by Ashwin Rao K P Mon, 05/25/2020 - 16:29

ಫೆಬ್ರವರಿ ೨೦೧೯ರ ನಿಮ್ಮ ಮೇಲಿನ ಲೇಖನ ಓದಿದೆ. ಬಹಳಷ್ಟು ಮಾಹಿತಿ ಪೂರ್ಣವಾಗಿದೆ. ಇಂತಹ ವಿಚಾರದಲ್ಲಿ ಇನ್ನಷ್ಟು ಬರೆಯಬಹುದಲ್ಲವೇ? ಅಭಿನಂದನೆಗಳು