ಮನದಲ್ಲಿ, ಮನೆಯಲ್ಲಿ, ಮತದಲ್ಲಿ...

ಮನದಲ್ಲಿ, ಮನೆಯಲ್ಲಿ, ಮತದಲ್ಲಿ...

ಬದಲಾವಣೆಗಾಗಿ ಒಂದಷ್ಟು ಬರಹ, ಒಂದಷ್ಟು ಕಾಲ್ನಡಿಗೆ, ಒಂದಷ್ಟು ಸಂವಾದ, ಒಂದಷ್ಟು ಚರ್ಚೆ, ಒಂದಷ್ಟು ಕಷ್ಟ ಸಹಿಷ್ಣುತೆ, ಒಂದಷ್ಟು ಸಣ್ಣ ತ್ಯಾಗ, ಒಂದಷ್ಟು ದೈಹಿಕ ಮತ್ತು ಮಾನಸಿಕ ನೋವು, ಒಂದಷ್ಟು ಹೇಳಲಾಗದ ತೊಳಲಾಟ, ಒಂದಷ್ಟು ಓದು, ಒಂದಷ್ಟು ಅಧ್ಯಯನ, ಒಂದಷ್ಟು ಚಿಂತನೆ, ಒಂದಷ್ಟು ಮನಸ್ಸುಗಳ ಅಂತರಂಗದ ಚಳವಳಿ, ಇನ್ನೊಂದಷ್ಟು ಏನೇನೋ...

ವಿಜಯನಗರ ನಗರ ಜಿಲ್ಲೆಯ ಕೊಟ್ಟೂರಿನಲ್ಲಿ ಮಳೆಯ ಮೋಡಗಳ ನಡುವೆ ನಿಂತಾಗ ನನ್ನ ಮನಸ್ಸಿನೊಂದಿಗೆ ಕೆಲ ಕಾಲ ಮಾತನಾಡಿದೆ.

ಒಳ್ಳೆಯವರು ತಮ್ಮ ಪಾಡಿಗೆ ತಾವು ಒಳ್ಳೆಯವರಾಗಿರಲು ಸಾಧ್ಯವಾಗದ ಸಾಮಾಜಿಕ ವಾತಾವರಣ ನಿರ್ಮಾಣವಾಗಿದೆ. ದೇಹ ಮನಸ್ಸುಗಳು ಸಾಕಷ್ಟು ಭ್ರಷ್ಟಗೊಂಡಿವೆ. ಸಂತೋಷ ಮತ್ತು ನೆಮ್ಮದಿಯ ಮಟ್ಟ ಕುಸಿಯುತ್ತಾ ಅಸಹನೆ, ಅತೃಪ್ತಿ, ಅಸಮಾಧಾನ, ಅಸೂಯೆಗಳು ಮನಸ್ಸನ್ನು ಆಕ್ರಮಿಸಿಕೊಳ್ಳುತ್ತಿವೆ.

ಕೊರೋನಾ ಎರಡನೆಯ ಅಲೆ ಹೀಗೆ ಮಾಧ್ಯಮಗಳು ವರದಿ ಮಾಡುತ್ತಿರುವಂತೆ ಮುಂದುವರೆದರೆ ಸಾಮಾನ್ಯ ಜನರ ಜೀವನ ಮಟ್ಟ ಮತ್ತಷ್ಟು ಕುಸಿಯುವ ಸಾಧ್ಯತೆಯೇ ಹೆಚ್ಚು. ಈ ನಡುವೆ ದೆಹಲಿಯಲ್ಲಿ ನಡೆಯುತ್ತಿರುವ ರೈತರ ಮುಷ್ಕರ, ಕರ್ನಾಟಕದ ಬಸ್ ನೌಕರರ ಮುಷ್ಕರ, ಲಾಕ್ ಡೌನ್ ಕಾರಣದಿಂದಾಗಿ ಶಿಕ್ಷಣ ವ್ಯವಸ್ಥೆಯ ಅವ್ಯವಸ್ಥೆ ಮತ್ತು ಅದರಿಂದಾಗಿಯೇ ಸೃಷ್ಟಿಯಾಗಿರುವ ನಿರುದ್ಯೋಗ ಮುಂತಾದ ಸಾಲು ಸಾಲು ಸಮಸ್ಯೆಗಳಿಂದಾಗಿ ಪರಿಸ್ಥಿತಿ ಮತ್ತಷ್ಟು ಹದಗೆಡುವುದು ನಿಶ್ಚಿತ.

ಸರ್ಕಾರಗಳು ಮತ್ತು ವ್ಯವಸ್ಥೆಯ ಅಸಮರ್ಥ ಮತ್ತು ಅಸಮರ್ಪಕ ನಿರ್ವಹಣೆ ಹೀಗೆಯೇ ಮುಂದುವರಿದರೆ ಬಹುಶಃ ಇನ್ನು ಕೆಲವೇ ವರ್ಷಗಳಲ್ಲಿ ಒಂದು ಸಾಮಾಜಿಕ ಮತ್ತು ರಾಜಕೀಯ ಕ್ರಾಂತಿ ಸಂಭವಿಸಬಹುದು. ಅದಕ್ಕಾಗಿ ಜನರನ್ನು ಮಾನಸಿಕವಾಗಿ ಸಿದ್ದ ಮಾಡುವ ಸಾಧ್ಯತೆಯ ಬಗ್ಗೆಯೂ ಯೋಚಿಸಬೇಕಾಗಿದೆ.

ಹೋರಾಟಗಾರರು ಎಂದು ಕರೆಯಲ್ಪಡುವ ಅನೇಕರು ಹೋರಾಟದಲ್ಲಿಯೇ ತಮ್ಮ ಬದುಕನ್ನು ಕಳೆಯುವ ಸನ್ನಿವೇಶದಲ್ಲಿ ಒಂದಷ್ಟು ಬದಲಾವಣೆ ಮಾಡಿಕೊಂಡು ಹೋರಾಟಗಾರರು ಆಡಳಿತಗಾರರಾಗುವ ದಿಕ್ಕಿನತ್ತ ಯೋಚಿಸುವುದು ಇಂದಿನ ಅವಶ್ಯಕತೆಯಾಗಿದೆ. ಏಕೆಂದರೆ ಹೋರಾಟಗಾರರು ಸದಾ ಜನರ ಒಳಿತಿಗಾಗಿ ಹೋರಾಡುತ್ತಾ ಇರುವಾಗ ಆಡಳಿತಗಾರರು ಭಾರತದ ಸಂಕೀರ್ಣ ಸಾಮಾಜಿಕ ವ್ಯವಸ್ಥೆಯನ್ನು ದುರುಪಯೋಗ ಪಡಿಸಿಕೊಂಡು ಒಡೆದು ಆಳುವ ನೀತಿಯಿಂದ ಸದಾ ಅಧಿಕಾರ ಪಡೆಯುತ್ತಾ ತಮ್ಮ ಸ್ವಾರ್ಥ ಮತ್ತು ಅಜ್ಞಾನದಿಂದ ‌ಇಡೀ ದೇಶವನ್ನು ಅಸಹನೆಯತ್ತ ದೂಡುತ್ತಿದ್ದಾರೆ.

ಮೇಲ್ನೋಟಕ್ಕೆ ದೇಶ ಅಭಿವೃದ್ಧಿ ಹೊಂದುತ್ತಿರುವಂತೆ ಕಾಣುತ್ತಿದ್ದರು ಆಂತರಿಕವಾಗಿ ಅದರ ಅಂತಃ ಸತ್ವ ಕುಸಿಯುತ್ತಿದೆ. ಮಾನವೀಯ ಮೌಲ್ಯಗಳು ನಾಶವಾಗುತ್ತಿರುವುದು ಮಾತ್ರವಲ್ಲದೆ ಅದರ ವಿರುದ್ಧ ಮೌಲ್ಯಗಳು ಮಾನ್ಯತೆ ಪಡೆಯುತ್ತಿವೆ. ಮೋಸ ವಂಚನೆ ಭ್ರಷ್ಟಾಚಾರ ಅನೈತಿಕತೆ ಸುಳ್ಳು ಎಲ್ಲವೂ ಸಹಜ ಸಾಮಾನ್ಯ ಮತ್ತು ಇಂದಿನ ಜೀವನದ ಅವಶ್ಯಕತೆ ಎನ್ನುವಷ್ಟು ಮಾನ್ಯತೆ ಪಡೆದಿವೆ. ಇದು ಆತಂಕಕಾರಿ.

ಗಾಳಿ ನೀರು ಆಹಾರ ಮಲಿನವಾಗುವುದರ ಜೊತೆಗೆ ಶಿಕ್ಷಣ ಆರೋಗ್ಯ ರಾಜಕೀಯ ಧಾರ್ಮಿಕ ಪತ್ರಿಕೋದ್ಯಮ ಎಲ್ಲವೂ ವ್ಯಾಪರೀಕರಣವಾಗಿ ದೇಹ ಮನಸ್ಸುಗಳು ಭ್ರಷ್ಟಗೊಂಡಿವೆ.

ಸಾಮಾನ್ಯ ಜನ ಎಂದಿನಂತೆ ಬದುಕಿನ ಬವಣೆಗಳಲ್ಲಿ ಮುಳುಗಿ ಹೋಗಿರುವಾಗ ಜಾಗೃತ ಮನಸ್ಥಿತಿಯ ಕೆಲವು ಜನರಾದರೂ ಎಚ್ಚೆತ್ತುಕೊಂಡು ಈ ವ್ಯವಸ್ಥೆಗೆ ಕಾಯಕಲ್ಪ ಮಾಡಲು ಪ್ರಯತ್ನಿಸುವಂತೆ ಮಾಡುವ ಒಂದು ಪ್ರಯತ್ನ ಈ ದೀರ್ಘ ಕಾಲ್ನಡಿಗೆ.

ಅದಕ್ಕಾಗಿ,....

ಮನಗಳಲ್ಲಿ,

ಮನೆಗಳಲ್ಲಿ,

ಮತಗಳಲ್ಲಿ,

ಬದಲಾವಣೆಗಾಗಿ ನಿರಂತರ ಪ್ರಯತ್ನ ಮಾಡಲು 158 ದಿನಗಳ ಪಾದಯಾತ್ರೆಯ ನಂತರ ಆತ್ಮಾವಲೋಕನ ಮಾಡಿಕೊಳ್ಳುತ್ತಾ...

ನಿರೀಕ್ಷಿತ ಸಮಯಕ್ಕಿಂತ ಎರಡು ಪಟ್ಟು ಹೆಚ್ಚು ಸಮಯ ಮತ್ತು ದೂರ ಆಗುತ್ತಿರುವುದರಿಂದ ವೈಯಕ್ತಿಕವಾಗಿ ದೈಹಿಕ, ಆರ್ಥಿಕ, ಮಾನಸಿಕ, ಕೌಟುಂಬಿಕ ಒತ್ತಡ ನಿಭಾಯಿಸುವ ಸವಾಲು ಎದುರಾಗಿದೆ. ಹಣ ಪಡೆಯದೆ, ಹಣ ಖರ್ಚು ಮಾಡದೆ, ವಾಹನ ಉಪಯೋಗಿಸದೆ ಇರುವ‌ ಸಂಕಲ್ಪದಲ್ಲಿ ಯಾವುದೇ ಸಂದರ್ಭದಲ್ಲಿ ಯಾವುದೇ ಸನ್ನಿವೇಶದಲ್ಲಿ ರಾಜಿಯಾಗದೆ ದೃಢ ನಿರ್ಧಾರದಿಂದ ಕಾಲ್ನಡಿಗೆ ಮುಂದುವರಿಸಲು ಮತ್ತಷ್ಟು ಆತ್ಮ ಶಕ್ತಿಯನ್ನು ಒಗ್ಗೂಡಿಸಿ ಮುಂದುವರೆಯಲು ನನ್ನ ಮನಸ್ಸಿಗೆ ಒಪ್ಪಿಸುತ್ತಾ...

  • ಜ್ಞಾನ ಭಿಕ್ಷಾ ಪಾದಯಾತ್ರೆಯ 158 ನೆಯ ದಿನ ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲ್ಲೂಕಿನಲ್ಲಿಯೇ ವಾಸ್ತವ್ಯ.

-ವಿವೇಕಾನಂದ. ಹೆಚ್.ಕೆ., ಬೆಂಗಳೂರು

ಚಿತ್ರದಲ್ಲಿ: ಕೊಟ್ಟೂರು ತಾಲೂಕಿನಲ್ಲಿ ಸಂವಾದ ಕಾರ್ಯಕ್ರಮದ ನಂತರ ಶಾಲಾ ಮಕ್ಕಳ ಜೊತೆಯಲ್ಲಿ