ಮನದ ಕ್ಲೇಶವ ತೊಳೆಯೋಣ

ಮನದ ಕ್ಲೇಶವ ತೊಳೆಯೋಣ

ಕವನ

ಬಣ್ಣದೋಕುಳಿ ಆಡುತಲಿ ಚಿಣ್ಣರೆಲ್ಲ ಸೇರೋಣ

ಕೆಂಪು ಹಳದಿ ನೀಲ ಬಣ್ಣ ತನ್ನಿರಿ ಎಲ್ಲರು ಇಲ್ಲಿಗೆ ಅಣ್ಣ/

ಬಗೆಬಗೆ ಆಟವ ಆಡುತಲಿ ಬಣ್ಣದ ನೀರ ಎರಚೋಣ

ಹಿರಿಯರು ಕಿರಿಯರು ಬೆರೆಯುತಲಿ ಹೋಳಿ ಸಂಭ್ರಮ  ಮಾಡೋಣ//

 

ಬಿದಿರ ಬೊಂಬೆಯ ಮಾಡುತಲಿ  ಕಟ್ಟಿಗೆ ರಾಶಿ ಹಾಕೋಣ

ಹಳೆಯ ವಸ್ತ್ರವ ತೊಡಿಸುತಲಿ ಬೆಂಕಿಯನ್ನು ಹಚ್ಚೋಣ/

ಅರಿಷಡ್ವರ್ಗಗಳ ಮರೆಯುತಲಿ ಮನದ ಕ್ಲೇಶವ ತೊಳೆಯೋಣ

ಸಹನೆ ಶಾಂತಿ ದಾನವೆಲ್ಲ ಬದುಕಿನ ಅಂಗ ಎನ್ನೋಣ//

 

 

ಕಾಮದೇವನ ಪ್ರೀತಿ ಪ್ರೇಮ ರತಿದೇವಿಗೆ ವರದಾನ

ನೀಲಕಂಠನ ಕೃಪೆಯ  ಸಂಭ್ರಮ ಹೋಳಿ ಹುಣ್ಣಿಮೆ ಹಿರಿಮೆ/

ದುಷ್ಟ ಶಕ್ತಿ ಅಟ್ಟಹಾಸದಿ ಮೆರೆದು ಬೀಗಲು ಮೆಟ್ಟಿದನು 

ಷಣ್ಮುಖ ಸ್ವಾಮಿ ಕಾರ್ತಿಕೇಯನು ಜಗದ ಜೀವರ ರಕ್ಷಿಪನು//

 

ಬಾಳೆಎಲೆಯ ಹಾಸುತಲಿ ಖಾದ್ಯವನೆಲ್ಲ ಬಡಿಸೋಣ

ಹೋಳಿ ಹಬ್ಬಕೆ ಸಿಹಿ ಹೋಳಿಗೆ ತಿನ್ನುತ ತೇಗೋಣ/

ಪಾಯಸ ಕಡುಬು ಚಿತ್ರಾನ್ನ ಬಗೆಬಗೆ ಭಕ್ಷ್ಯ ನವಾನ್ನ

ನಾಲಿಗೆ ರುಚಿಯಲಿ ಸೇವಿಸಿ ಇಂದು ಸಂಭ್ರಮದಿಂದ ನಲಿಯೋಣ//

 

ದುಷ್ಕೃತ್ಯವನು ಅಟ್ಟುತಲಿ ಕ್ಷೇಮವ ಕರುಣಿಸು ಬೇಡೋಣ

ಹೃದಯದ ಗುಡಿಯಲಿ ದೇವನ ಪ್ರತಿಮೆಯನಿಟ್ಟು ಪೂಜಿಸೋಣ/ 

ಗಿರಿಜೆಯ ಪಾದಕೆ ನಮಿಸುತಲಿ ಮಹಾಶಿವನ ಭಜಿಸೋಣ

ಹಲಗೆಯ ಬಡಿಯುತ ಓಡುತಲಿ ಘೋಷಣೆಯನ್ನು ಕೂಗೋಣ//

-ರತ್ನಾ ಕೆ.ಭಟ್, ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್