ಮನಮೋಹನ್ ಸಿಂಗ್ ಅವರಿಗೆ ಭಾವಪೂರ್ಣ ಅಶ್ರುತರ್ಪಣ…

ಮನಮೋಹನ್ ಸಿಂಗ್ ಅವರಿಗೆ ಭಾವಪೂರ್ಣ ಅಶ್ರುತರ್ಪಣ…

" Maybe an accidental prime minister but Accurate economist, a perfect gentleman and a real humanitarian......." - Vivekananda H K.......

ಭಾರತ ಸ್ವಾತಂತ್ರ್ಯ ಪಡೆದ 78 ವರ್ಷಗಳ ಆಡಳಿತದಲ್ಲಿ  ಭಾರತ ಇಂದಿನ ಸ್ಥಿತಿಗತಿಗೆ ನಿಜವಾದ ಅಡಿಪಾಯ ಹಾಕಿದ್ದು ಪಂಡಿತ್ ಜವಾಹರಲಾಲ್ ನೆಹರು. ಆ ಅಡಿಪಾಯದ ಮೇಲೆ ನಿಜಕ್ಕೂ ಭವ್ಯ ಕಟ್ಟಡ ನಿರ್ಮಿಸಿದ್ದು ಡಾಕ್ಟರ್ ಮನಮೋಹನ್ ಸಿಂಗ್. ಆ ಕಟ್ಟಡಕ್ಕೆ ಸಿಮೆಂಟ್ ಇಟ್ಟಿಗೆ ಇತರ ವಸ್ತುಗಳನ್ನ ಪೂರೈಸಿದ್ದು ಶ್ರೀಮತಿ ಇಂದಿರಾಗಾಂಧಿ, ಶ್ರೀ ರಾಜೀವ್ ಗಾಂಧಿ, ಶ್ರೀ ನರಸಿಂಹರಾವ್ ಮತ್ತು ಶ್ರೀ ಅಟಲ್ ಬಿಹಾರಿ ವಾಜಪೇಯಿ. ಶ್ರೀ ಲಾಲ್ ಬಹದ್ದೂರ್ ಶಾಸ್ತ್ರಿ, ವಿ ಪಿ ಸಿಂಗ್ ಮುಂತಾದ ಉಳಿದವರನ್ನು ನಿರ್ಲಕ್ಷಿಸುವಂತಿಲ್ಲ. ಅಲ್ಪಾವಧಿಯಲ್ಲಿ ಅವರುಗಳು ಸಹ ಭಾರತವೆಂಬ ಭವ್ಯ ಕಟ್ಟಡದ ಅಲಂಕಾರಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಆದರೆ ವಾಸ್ತವದಲ್ಲಿ ಇಡೀ ದೇಶದ ಮೇಲೆ ಒಟ್ಟು ಪರಿಣಾಮ ಮತ್ತು ಫಲಿತಾಂಶ ಹಾಗು ದೀರ್ಘಕಾಲದ ಸಕಾರಾತ್ಮಕ ಪ್ರಭಾವ ಮತ್ತು ಬೆಳವಣಿಗೆಯ ಆಧಾರದ ಮೇಲೆ ಈ ವಿಮರ್ಶೆ ಮತ್ತು ಅಭಿಪ್ರಾಯ ಅವಲಂಬಿತವಾಗಿದೆ.

ಸಾಮಾನ್ಯವಾಗಿ ಭಾರತದ ಆರ್ಥಿಕತೆಯಲ್ಲಿ ಖಾಸಗಿಕರಣವನ್ನು ವಿರೋಧಿಸುವವರು ಸಹ ಮನಮೋಹನ್ ಸಿಂಗ್ ಅವರ ಆರ್ಥಿಕ ನೀತಿಗಳನ್ನು ಮೆಚ್ಚುತ್ತಾರೆ. ಕಾರಣ ಅವರ ಎಲ್ಲಾ ಆರ್ಥಿಕ ನೀತಿಗಳು ಸಾಮಾಜಿಕ ಮೌಲ್ಯಗಳನ್ನು, ಭಾರತದ ಪಾರಂಪರಿಕ ಆರ್ಥಿಕ ಕೌಶಲ್ಯಗಳನ್ನು, ಇಲ್ಲಿನ ಜನರ ಮನಸ್ಥಿತಿಯನ್ನು ಕೇಂದ್ರೀಕರಿಸಿಯೇ ರೂಪಿತವಾಗಿದ್ದವು. ಅವರೇ ಹೇಳಿದಂತೆ ಯಾವುದೇ ಆರ್ಥಿಕ ಅಭಿವೃದ್ಧಿಗೆ ಮಾನವೀಯತೆಯ ಮುಖ ಇರಲೇಬೇಕಾಗುತ್ತದೆ. ಅದನ್ನು ಹೊರತುಪಡಿಸಿ ಕೇವಲ ಜಿಡಿಪಿಯ ಬೆಳವಣಿಗೆಯೇ ಆರ್ಥಿಕ ಅಭಿವೃದ್ಧಿಯಲ್ಲ ಎಂಬುದನ್ನು ಅತ್ಯಂತ ಸ್ಪಷ್ಟವಾಗಿ ಹೇಳಿದ ವಿಶ್ವದ ಪ್ರಖ್ಯಾತ ಆರ್ಥಿಕ ತಜ್ಞರಾಗಿದ್ದವರು ಡಾಕ್ಟರ್ ಮನಮೋಹನ್ ಸಿಂಗ್.

ಏಕೆಂದರೆ ಭಾರತದಂತ ಬೃಹತ್ ಜನಸಂಖ್ಯೆಯ ವೈವಿಧ್ಯಮಯ ದೇಶದಲ್ಲಿ ಆರ್ಥಿಕ ಅಸಮಾನತೆಯನ್ನು ನಿವಾರಿಸುವುದು ಅಷ್ಟು ಸುಲಭದ ಮಾತಲ್ಲ. ಇಲ್ಲಿ ಎಲ್ಲರಿಗೂ ಸಲ್ಲುವ ನೀತಿಗಳನ್ನು ಮಾಡಿ ಯಶಸ್ವಿಯಾಗುವುದು ಬಹುದೊಡ್ಡ ಸವಾಲು. ಅಷ್ಟೊಂದು ವಿಭಿನ್ನತೆ ಈ ಸಮಾಜದಲ್ಲಿದೆ. ಏನೇ ಮಾಡಿದರೂ ಅದರ ದುರುಪಯೋಗದ ಸಾಧ್ಯತೆಯೇ ಹೆಚ್ಚು. ಮನಮೋಹನ್ ಸಿಂಗ್ ಅವರ ಆಡಳಿತಾತ್ಮಕ ವಿಷಯಗಳನ್ನು, ಅವರ ಕಾಲದಲ್ಲಿ ಜಾರಿಯಾದ ಯೋಜನೆಗಳನ್ನು, ಅವರ ಕಾಲದ ಸಾಧನೆಗಳನ್ನು , ವೈಫಲ್ಯಗಳನ್ನು, ಭ್ರಷ್ಟಾಚಾರವನ್ನು ಈ ಸಂದರ್ಭದಲ್ಲಿ ಎಲ್ಲಾ ಮಾಧ್ಯಮಗಳು ಚರ್ಚಿಸುತ್ತಿವೆ. ಅದು ಇನ್ನಷ್ಟು ದೀರ್ಘ ಸಮಯದ ನಂತರ ಅದರ ಫಲಿತಾಂಶಗಳನ್ನು ವಿಮರ್ಶಿಸಬಹುದು. ಆದರೆ ಅವರ ಸಭ್ಯತೆಯ, ಪ್ರಬುದ್ಧತೆಯ, ಮಾನವೀಯತೆಯ, ಸರಳ ವ್ಯಕ್ತಿತ್ವದ ಪ್ರಧಾನಿಯಾಗಿದ್ದರು ಎಂಬ ಅಂಶ ನಮಗೆ ಬಹಳ ಮುಖ್ಯವಾಗಬೇಕು.

ಏಕೆಂದರೆ ಇಂದು ರಾಜಕೀಯದಲ್ಲಿ ಚುನಾವಣಾ ತಂತ್ರಗಾರಿಕೆ, ಕಾರ್ಪೊರೇಟ್ ಶೈಲಿಯ ಪ್ರಚಾರ ಇವುಗಳೇ ಹೆಚ್ಚು ಮೇಲುಗೈ ಪಡೆಯುತ್ತಿರುವ ಸಂದರ್ಭದಲ್ಲಿ ನಿಜವಾದ, ಆಳವಾದ ಚಿಂತನೆಯ ಮತ್ತು ನಡವಳಿಕೆಯ ವ್ಯಕ್ತಿಗಳು ರಾಜಕೀಯಕ್ಕೆ ತುಂಬಾ ಅವಶ್ಯಕತೆ ಇದೆ. ಮಾನವೀಯತೆಯನ್ನು ಪ್ರತಿಪಾದಿಸುತ್ತಲೇ ದೇಶದ ಅಭಿವೃದ್ಧಿಯನ್ನು ಸಾಧಿಸುವ ಚಾಣಾಕ್ಷತನದ ವ್ಯಕ್ತಿತ್ವ ಬೇಕಾಗಿದೆ.

ಸಿಂಗ್ ಅವರು ವಿಶ್ವವಿಖ್ಯಾತ ಅರ್ಥಶಾಸ್ತ್ರಜ್ಞರಾಗಿದ್ದರೂ ಸಹ ಸಾಮಾಜಿಕ ಮೌಲ್ಯಗಳನ್ನು ಮರೆತಿರಲಿಲ್ಲ. ತಮ್ಮ ನಡುವಳಿಕೆಯಲ್ಲಿ ಎಂದೂ  ಒರಟುತನ, ಅಸಭ್ಯ ಭಾಷೆ, ದ್ವೇಷಗಳನ್ನು ಪ್ರದರ್ಶಿಸಲಿಲ್ಲ ಅಥವಾ ಎಂದಿಗೂ ಅತಿರೇಕದ ಪ್ರಚಾರವನ್ನಾಗಲಿ, ಸಾಧನೆಯ ಸ್ವಯಂ ಪ್ರತಿಷ್ಠೆಯನ್ನಾಗಲಿ ಹೊರ ಹಾಕಲಿಲ್ಲ. ನಿಜಕ್ಕೂ ಭಾರತದ ಆರ್ಥಿಕತೆಯ ಸ್ವರ್ಣ ಯುಗ ಎಂದು ಅವರ ಆಡಳಿತದ ಕಾಲವನ್ನು ಸ್ವಲ್ಪಮಟ್ಟಿಗೆ ಗುರುತಿಸಬಹುದು. ಸಣ್ಣ ಸಣ್ಣ ಉದ್ದಿಮೆದಾರರು, ವ್ಯವಹಾರಸ್ಥರು, ಸಾಮಾನ್ಯ ಜನರು ನಿಜಕ್ಕೂ ಒಂದಷ್ಟು ಶ್ರೀಮಂತಿಕೆಯ, ಆರ್ಥಿಕ ಸ್ವಾವಲಂಬನೆ ಸಾಧಿಸಲು ಸಾಧ್ಯವಾಗಿದ್ದು ಅವರ ಆಡಳಿತ ಅವಧಿಯಲ್ಲಿ. ಅನೇಕ ಮಾಧ್ಯಮ ವರ್ಗದ ಜನರ ಜೀವನ ಮಟ್ಟ ಸುಧಾರಿಸಲು ಅವರ ಆರ್ಥಿಕ ನೀತಿಗಳು ಕಾರಣವಾದವು.

ಹಾಗೆಂದು ಅವರ ಆಡಳಿತದಲ್ಲಿ ದೌರ್ಬಲ್ಯಗಳೇನು ಇಲ್ಲವೆಂದಲ್ಲ. ಖಂಡಿತವಾಗಲೂ ಸಾಕಷ್ಟು ಆಡಳಿತಾತ್ಮಕ, ರಾಜಕೀಯ ವೈಫಲ್ಯಗಳು ಇದ್ದವು. ಅದು ಸಾರ್ವಜನಿಕವಾಗಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಅದರಿಂದಲೇ ಅವರ ಹತ್ತು ವರ್ಷಗಳ ಅಧಿಕಾರದ ನಂತರ ಚುನಾವಣೆಯಲ್ಲಿ ಹೀನಾಯ ಸೋಲಾಯಿತು. ಆದರೆ ಇಡೀ ದೇಶದ ಸಮಗ್ರ, ಸುಸ್ಥಿರ ಅಭಿವೃದ್ಧಿಯ ಮಾನದಂಡಲ್ಲಿ ನೋಡಿದಾಗ ಮನಮೋಹನ್ ಸಿಂಗ್ ಅವರನ್ನು ನೆಹರು ನಂತರದ ಅತ್ಯಂತ ಯಶಸ್ವಿ ಪ್ರಧಾನ ಮಂತ್ರಿ ಎಂದು ಹೇಳಬಹುದು. ಬಿಡಿ ಬಿಡಿಯಾಗಿ ಇತರ ಪ್ರಧಾನ ಮಂತ್ರಿಗಳ ಸಾಧನೆಯನ್ನು ನೋಡಿದಾಗ ಅವರುಗಳು ಸಹ ಕಡಿಮೆ ಏನಲ್ಲ. ಮೊದಲೇ ಹೇಳಿದಂತೆ ಇಡೀ ವ್ಯವಸ್ಥೆಯ ಮೇಲೆ, ಆಡಳಿತದ ನೀತಿ ನಿಯಮಗಳು ಬೀರಿದ ಒಟ್ಟು ಪ್ರಭಾವ ಮತ್ತು ಫಲಿತಾಂಶಗಳನ್ನು ಆಧರಿಸಿದಾಗ ಮನಮೋಹನ್ ಸಿಂಗ್ ಮುಂಚೂಣಿಯಲ್ಲಿ ನಿಲ್ಲುತ್ತಾರೆ. ಇದರಲ್ಲಿ ವ್ಯಕ್ತಿಗತ ನಡವಳಿಕೆಯಿಂದ ಪ್ರಾರಂಭಿಸಿ ಅವರ ಇಡೀ ಸಮಗ್ರ ವ್ಯಕ್ತಿತ್ವ ಮತ್ತು ದೇಶದ ಮೇಲೆ ಅವರ ಪ್ರಭಾವವನ್ನು ಗಮನಿಸಿದಾಗ ಈ ಮಾತು ವಾಸ್ತವಕ್ಕೆ ಹತ್ತಿರವಾಗುತ್ತದೆ.

ಆರ್ಥಿಕ ನೀತಿಗಳು, ರಾಜಕೀಯ ತಂತ್ರಗಳು, ಸಾಮಾಜಿಕ ವ್ಯವಸ್ಥೆ ಮತ್ತು ಧಾರ್ಮಿಕ ನಂಬಿಕೆಗಳು ಭಾರತದಲ್ಲಿ ತುಂಬಾ ಸೂಕ್ಷ್ಮ ಸಂವೇದನೆಯನ್ನು ಹೊಂದಿರುತ್ತವೆ. ಎಂತಹ ಪ್ರಖಾಂಡ ಪಂಡಿತರು ಸಹ ಈ ವಿಷಯದಲ್ಲಿ ಪರಿಪೂರ್ಣತೆ ಸಾಧಿಸಿರುತ್ತಾರೆ ಎಂದು ಹೇಳಲು ಸಾಧ್ಯವಾಗುವುದಿಲ್ಲ. ಅದು ಕೇವಲ ವೈಯಕ್ತಿಕ ಪ್ರತಿಭೆಯನ್ನು ಮಾತ್ರ ಅವಲಂಬಿಸಿರುವುದಿಲ್ಲ. ವಿಶಾಲ ದೃಷ್ಟಿಕೋನದ, ನಾಗರಿಕ ಪ್ರಜ್ಞೆಯ, ಫಲಿತಾಂಶ ಆಧಾರಿತವಾಗಿ ಇರಬೇಕಾಗುತ್ತದೆ. ಇಲ್ಲದಿದ್ದರೆ ಅದು ಯಶಸ್ವಿಯಾಗುವುದು ಕಷ್ಟ ಸಾಧ್ಯ.

ಡಾಕ್ಟರ್ ಮನಮೋಹನ್ ಸಿಂಗ್ ಅವರಿಗೆ ಅರ್ಥಶಾಸ್ತ್ರದಲ್ಲಿ ನಿಜಕ್ಕೂ ಅತ್ಯುತ್ತಮ ಹಿಡಿತ ಮತ್ತು ನಿಯಂತ್ರಣವಿತ್ತು. ಯಾವ ಯಾವ ಹಂತದಲ್ಲಿ, ಯಾವ ಯಾವ ರೀತಿಯ ಕ್ರಮಗಳನ್ನು ಕೈಗೊಂಡರೆ ದೇಶದ ಆರ್ಥಿಕತೆ, ಮುನ್ನಡೆದು ಜನರ ಜೀವನಶೈಲಿ ಉತ್ತಮವಾಗಬಹುದು ಎಂಬ ವೈಜ್ಞಾನಿಕ ತಿಳುವಳಿಕೆ ಅವರಿಗಿತ್ತು‌. ಆ ಕಾರಣದಿಂದಾಗಿಯೇ ಇಡೀ ದೇಶದ ಮೇಲೆ ಅವರ ನೀತಿಗಳು ಸಾಕಷ್ಟು ಪರಿಣಾಮ ಬೀರಿ ಯಶಸ್ಸಿನ ಹಾದಿಯಲ್ಲಿ ಮುನ್ನಡೆದವು‌. ಇತ್ತೀಚಿನ ವರ್ಷಗಳಲ್ಲಿ ಕೆಲವರು ಸಾಮಾಜಿಕ ನ್ಯಾಯವನ್ನೇ ಗುರಿಯಾಗಿಟ್ಟುಕೊಂಡು ಗ್ಯಾರಂಟಿಗಳನ್ನು ಮಾತ್ರ ಘೋಷಿಸುತ್ತಾ ಆರ್ಥಿಕತೆಯನ್ನು ದುರ್ಬಲಗೊಳಿಸುತ್ತಿದ್ದರೆ, ಇನ್ನೂ ಕೆಲವರು ಕೇವಲ ಬಂಡವಾಳಶಾಹಿಗಳ ಪರವಾಗಿ ಅಂಬಾನಿ ಅದಾನಿಗಳನ್ನು ಬೆಳೆಸುತ್ತಾ ಇನ್ನೊಂದು ಮುಖದ ಆರ್ಥಿಕತೆಯನ್ನು ಪೋಷಿಸುತ್ತಾ ಅಸಮಾನತೆಯನ್ನು ಹೆಚ್ಚಿಸುತ್ತಿದ್ದಾರೆ. ಇದು ಸಹ ದೇಶದ ಆರ್ಥಿಕ ಪ್ರಗತಿಗೆ ಮಾರಕ.

ಈ ಎರಡರ ಸಮ್ಮಿಶ್ರಣದ ಆರ್ಥಿಕತೆಯನ್ನು ಯಶಸ್ವಿಯಾಗಿ ಪ್ರಯೋಗಿಸಿದವರು ಡಾಕ್ಟರ್ ಮನಮೋಹನ್ ಸಿಂಗ್. ಅವರೇ ಹೇಳಿದಂತೆ ಸಮಕಾಲಿನ ಮಾಧ್ಯಮಗಳು ಅವರನ್ನು ಗುರುತಿಸುವುದಕ್ಕಿಂತ ಮುಂದೆ ಇತಿಹಾಸದಲ್ಲಿ ಜನಸಾಮಾನ್ಯರು ಅವರನ್ನು ಹೆಚ್ಚಾಗಿ ನೆನಪಿಸಿಕೊಳ್ಳಬಹುದು. ಏನೇ ಆಗಲಿ ಒಬ್ಬ ಅತ್ಯುತ್ತಮ ಪ್ರಜ್ಞಾವಂತ, ಬುದ್ಧಿವಂತ, ಸಭ್ಯ ನಡವಳಿಕೆಯ ವ್ಯಕ್ತಿ 10 ವರ್ಷಗಳ ಕಾಲ ಈ ದೇಶವನ್ನು ಮುನ್ನಡೆಸಿದ್ದು ಖಂಡಿತವಾಗಲೂ ಹೆಮ್ಮೆಯ ವಿಷಯ. ದೇಶ ಅವರಿಗೆ ಋಣಿಯಾಗಿರುತ್ತದೆ. ಡಾಕ್ಟರ್ ಮನಮೋಹನ್ ಸಿಂಗ್ ಅವರಿಗೆ ಭಾವಪೂರ್ಣ ಅಶ್ರುತರ್ಪಣ.

-ವಿವೇಕಾನಂದ. ಎಚ್. ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ