ಮನವು ಅರಳಲಿ

ಮನವು ಅರಳಲಿ

ಪುಸ್ತಕದ ಲೇಖಕ/ಕವಿಯ ಹೆಸರು
ಡಾ. ಗಣಪತಿ ಹೆಗಡೆ
ಪ್ರಕಾಶಕರು
ವಿಕ್ರಮ್ ಪ್ರಕಾಶನ, ಬೆಂಗಳೂರು
ಪುಸ್ತಕದ ಬೆಲೆ
ರೂ. ೧೦೦.೦೦, ಮುದ್ರಣ: ೨೦೨೩

ವ್ಯಕ್ತಿತ್ವ ವಿಕಸನದ ಬಗ್ಗೆ ಡಾ. ಗಣಪತಿ ಹೆಗಡೆ ಇವರು ಬರೆದಿರುವ ಕಥೆಗಳು “ಮನವು ಅರಳಲಿ” ಎಂಬ ಹೆಸರಿನ ಪುಸ್ತಕವಾಗಿ ಇತ್ತೀಚೆಗೆ ಬಿಡುಗಡೆಯಾಗಿದೆ. ‘ವಿಜಯವಾಣಿ’ ದಿನ ಪತ್ರಿಕೆಯಲ್ಲಿ  ‘ಮನೋಲ್ಲಾಸ' ಎಂಬ ಅಂಕಣದ ಮೂಲಕ ಹೊರಹೊಮ್ಮಿದ ಮನಸ್ಸಿಗೆ ಮುದ ನೀಡಿದ ಕಥೆಗಳು ಈ ಪುಸ್ತಕದಲ್ಲಿವೆ. ಈ ಪುಸ್ತಕಕ್ಕಾಗಿ ಲೇಖಕರು ಬರೆದ ತಮ್ಮ ಮನದಾಳದ ಮಾತುಗಳ ಒಂದು ಝಲಕ್ ನಿಮಗಾಗಿ...

“ಮನವು ಅರಳಲಿ' ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿಸಿದ ಕೆಲವು ಕಥೆಗಳ ಸಂಗ್ರಹದ ಈ ಕಿರುಪುಸ್ತಕವನ್ನು ತಮ್ಮ ಕೈಗಿಡಲು ಬಹಳವೇ ಸಂತಸವಾಗುತ್ತಿದೆ. ಈ ಸಂದರ್ಭದಲ್ಲಿ ಪುಸ್ತಕದ ನಿರ್ಮಾಣಕ್ಕೆ ಸಹಕಾರಿಯಾದವರನ್ನು ನೆನೆಯುವುದು ನನ್ನ ಕರ್ತವ್ಯ.

ಕಿರುಬರಹಗಳ ಮೂಲಕ, ನೈಜ ಅಥವಾ ಕಾಲ್ಪನಿಕ ವಿಷಯವೊಂದನ್ನು ವಿವರಿಸಿ, ಮನಸ್ಸಿಗೆ ನಾಟುವಂತಹ ಬರಹಗಳನ್ನು ನಾನು ಬರೆಯಬಲ್ಲೆನೆಂಬ ವಿಶ್ವಾಸವನ್ನು ಮೊದಲು ಹುಟ್ಟಿಸಿದ್ದು ವಿಜಯವಾಣಿಯ ಪ್ರಧಾನ ಸಂಪಾದಕರಾಗಿದ್ದ ಹರಿಪ್ರಕಾಶ ಕೋಣೆಮನೆಯವರು. ವಿಜಯವಾಣಿ ದಿನಪತ್ರಿಕೆಯಲ್ಲಿ 'ಮನೋಲ್ಲಾಸ' ಎಂಬ ಅಂಕಣವನ್ನು ಅವರು ಪರಿಚಯಿಸದೇ ಇದ್ದರೆ ಬಹುಶಃ ಇಂದು ಈ ಕೃತಿ ಹೊರಬರುತ್ತಿರಲಿಲ್ಲ. ಅಂದು ಅವರು ಹೇಳಿದ ಮಾತುಗಳೇ ಇಂದು ನನ್ನನ್ನೊಬ್ಬ ಬರಹಗಾರನನ್ನಾಗಿ ಮಾಡಿರುವುದರಲ್ಲಿ ಅತಿಶಯೋಕ್ತಿಯಿಲ್ಲ. ಸಾಮಾನ್ಯರನ್ನೂ ಅಸಾಮಾನ್ಯರನ್ನಾಗಿಸುವ ಅವರ ಉದಾರತೆಗೆ, ಪ್ರೇರಕಶಕ್ತಿಗೆ, ಅವರು ತೋರುವ ಪ್ರೀತಿಗೆ ಸಾವಿರ ಬಾರಿ ಕೃತಜ್ಞತೆಗಳನ್ನರ್ಪಿಸಿದರೂ ಸಾಲದು.

ವಿಜಯವಾಣಿಯಲ್ಲಿ ಮೊದಲೆರಡು ಲೇಖನಗಳು ಪ್ರಕಟವಾದಾಗ ಭಯದಲ್ಲಿಯೇ ಪ್ರತಿಕ್ರಿಯೆಗಳನ್ನು ಓದುತ್ತಿದ್ದೆ. ಆದರೆ ಸಾವಿರಾರು ಜನರು ಒಳ್ಳೆಯ ಲೇಖನವಿದು ಎಂದು ಶುಭ ಹಾರೈಸಿ ಹೇಳಿದಾಗ ನನ್ನೊಳಗಿನ ಉತ್ಸಾಹ ಇಮ್ಮಡಿಯಾಯಿತು. ಇನ್ನಷ್ಟು ಮತ್ತಷ್ಟು ಲೇಖನಗಳನ್ನು ಬರೆಯಲು ಪ್ರೇರೇಪಣೆ ನೀಡಿದ ಎಲ್ಲ ಓದುಗ ಸಹೃದಯರಿಗೂ ಅನಂತಾನಂತ ಕೃತಜ್ಞತೆಗಳು.

ವಿಜಯವಾಣಿಯ ಮಾಲೀಕರಾದ ವಿಜಯ ಸಂಕೇಶ್ವರ ಅವರಿಗೆ ಹೃದಯಪೂರ್ವಕ ಕೃತಜ್ಞತೆಗಳು, ಪ್ರಧಾನ ಸಂಪಾದಕರಾದ ಶ್ರೀ ಚನ್ನೇಗೌಡರಿಗೂ ನಾಗರಾಜ ಭಟ್ ಇಳೆಗುಂಡಿಯವರಿಗೂ, ರಾಘವೇಂದ್ರ ಗಣಪತಿಯವರಿಗೂ, ರಾಜಶೇಖರ ಹೆಗಡೆಯವರಿಗೂ ತುಂಬುಮನಸ್ಸಿನ ಧನ್ಯವಾದಗಳು. ಇಂದು ಓದುಗರಿಗೆ ಇಂತಹ ಸಾವಿರಾರು ಲೇಖನಗಳ ಮೂಲಕ ಪುಸ್ತಕಗಳನ್ನು ಸಮಾಜಕ್ಕೆ ಅರ್ಪಿಸಿದ ಮಹನೀಯರಿರುವಾಗ ನನ್ನ ಈ ಕಿರುಕೃತಿಯನ್ನು ತಮಗರ್ಪಿಸಲು ಸಂಕೋಚವೆನಿಸಿದರೂ ತಮ್ಮೆಲ್ಲರ ಪ್ರೀತಿಯನ್ನು ಬಯಸಿ ಇದನ್ನು ಅರ್ಪಿಸುತ್ತಿದ್ದೇನೆ. ಈ ಪುಸ್ತಕದಲ್ಲಿ ಕೆಲವು ಕಥೆಗಳಿವೆ. ಇವುಗಳಲ್ಲಿ ಎಲ್ಲವೂ ನನ್ನ ಸ್ವಂತದ್ದೇನೂ ಅಲ್ಲ. ಕೆಲವು ನನ್ನ ಕಲ್ಪನೆಯಲ್ಲಿ ಅರಳಿದ್ದರೂ ಇನ್ನು ಕೆಲವು ಎಲ್ಲೋ ಓದಿದ, ಯಾರಿಂದಲೋ ಕೇಳಿದ ವಿಷಯಗಳಿಗೆ ನನ್ನ ಮನಸ್ಸಿಗೆ ತೋಚಿದ ಬಣ್ಣವನ್ನು ಹಾಕಿದ್ದೇನೆ.