ಮನವೆಂಬ ಮಾಯಾಮೃಗ

ಡಾ. ಅರುಣಾ ಯಡಿಯಾಳ್ ಬರೆದ ಎರಡು ಪುಟ್ಟ ಕಾದಂಬರಿಗಳ ಸಂಕಲನವೇ ‘ಮನಸೆಂಬ ಮಾಯಾಮೃಗ’. ೧೮೧ ಪುಟಗಳ ಈ ವಿಶಿಷ್ಟ ಜಂಟಿ ಕಾದಂಬರಿಗೆ ಲೇಖಕಿ ಬರೆದ ಮುನ್ನುಡಿಯ ಎರಡು ಸಾಲುಗಳು ಹೀಗಿವೆ…
“ಮನಸ್ಸು ಎಂಬುದೊಂದು ದಟ್ಟ ಕಾನನ. ಅಲ್ಲಿ ವೈವಿಧ್ಯವಾದ ಭಾವ ಜೀವಿಗಳ ವಾಸ. ಕೆಲವೊಮ್ಮೆ ಅದ್ಯಾವುದೋ ವಿಶಿಷ್ಟ ಭಾವನೆ ಮಾಯಾಜಿಂಕೆಯಂತೆ ಮಿಂಚಿ ಮಾಯವಾಗುತ್ತೆ. ಈ ಭಾವನೆಗಳೇ ಅತಿರೇಕವಾಗಿ, ವಿಚಿತ್ರ ರೂಪ ತಾಳಿ, ಮನಸ್ಸೇ ಮಾಯಾಮೃಗವಾಗಿ, ವ್ಯಕ್ತಿಯನ್ನು, ವ್ಯಕ್ತಿತ್ವವನ್ನು, ವಾಸ್ತವಿಕ ಹಾಗು ನೈತಿಕ ನೆಲೆಗಳ ಎಲ್ಲೆ ಮೀರಿ ಹೋಗುವಂತೆ ಮಾಡಿಬಿಡುತ್ತದೆ. ಮನೋವ್ಯಾಕುಲತೆಗಳು ಮನವನ್ನು ಕಾಡಿದಾಗ, ಹೀಗಾಗುವುದು ನಿರೀಕ್ಷಿತವೇ! ಈ ಹಿನ್ನಲೆಯಲ್ಲಿ, ಎಲ್ಲರ ಅಚ್ಚು ಮೆಚ್ಚಿನ ಮನೋತಜ್ಞೆಯಾದ, ಡಾ ಮಯೂರಿ, ತನ್ನದೇ ಆಪ್ತವಲಯದಲ್ಲಿದ್ದ ವ್ಯಕ್ತಿಗಳಿಗೆ ಈ ಮನೋರೋಗ ಕಾಡಿದಾಗ, ಅದನ್ನು ಹೇಗೆ ನಿರ್ವಹಿಸುತ್ತಾಳೆ? ಮನೋರೋಗದ ಹಿಡಿತದಿಂದ ಬಳಲಿರುವ ಮನಸ್ಸುಗಳನ್ನು ಹೇಗೆ ಕಾಪಾಡಿಕೊಳ್ಳುತ್ತಾಳೆ? ಮನೋರೋಗಗಳನ್ನು, ಮನೋರೋಗಿಗಳನ್ನು, ಮನುಷ್ಯ ಸ್ವಭಾವವನ್ನು, ಮನೋವೈದ್ಯಕೀಯ ಕನ್ನಡಿಯಲ್ಲಿ ತೋರಿಸುವ ಆಶಯದೊಂದಿಗೆ ಬರೆದ ಈ ಎರಡು ಕಿರು ಕಾದಂಬರಿಗಳು (ಮನವೆಂಬ ಮಾಯಾಮೃಗ ಹಾಗು ಮನೋವ್ಯೂಹ) ಈ ಪ್ರಶ್ನೆಗಳಿಗೆ ಕಥಾರೂಪದಲ್ಲಿ ಉತ್ತರ ನೀಡುತ್ತದೆ. ಓದಿ ನೋಡಿ. ನಮ್ಮ ನಿಮ್ಮೊಳಗೇ ಇದ್ದು, ಮಾಯೆಯಂತೆ ಕಾಡುವ, ಕೆಲವೊಮ್ಮೆ ಮೃಗದಂತೆ ವರ್ತಿಸುವ, ಈ ಮನವನ್ನು ಒಂದಿಷ್ಟು ನಿರುಕಿಸಿ ಅರುಹಿ.”