ಮನಸೇ ದೇವಾಲಯ

ಮನಸೇ ದೇವಾಲಯ

     ದೇವಸ್ಥಾನ, ಮಠ, ಚರ್ಚು, ಮಸೀದಿ ಇತ್ಯಾದಿಗಳ ಮೂಲ ಉದ್ದೇಶ ಮರೆಯಾಗಿಬಿಟ್ಟಿದೆಯೇನೋ ಎಂಬ ಭಾವನೆ ಈ ಲೇಖನಕ್ಕೆ ಪ್ರೇರಣೆಯಾಗಿದೆ. ದೇವಸ್ಥಾನವೆಂದರೆ ದೇವರು ಇರುವ ಸ್ಥಳ ಎಂಬ ಕಲ್ಪನೆಗೆ ಹೆಚ್ಚು ಒತ್ತು ಬಂದಿರುವುದು ಎಷ್ಟು ಸರಿ ಎಂಬುದು ವಿಚಾರ ಮಾಡಬೇಕಾದ ಸಂಗತಿಯಾಗಿದೆ. ವೇದಕಾಲ ಎಂದು ಪರಿಗಣಿಸುವ ಸಮಯದ ಆರಂಭದಲ್ಲಿ ದೇವಸ್ಥಾನಗಳಿರಲಿಲ್ಲ. ಆಗ ದೇವರಿಗೆ ಯಜ್ಞ, ಹೋಮ, ಹವನಗಳನ್ನು ಮಾಡುತ್ತಾ ಅಗ್ನಿಯ ಮೂಲಕವಾಗಿ ದೇವರಿಗೆ ಹವಿಸ್ಸು ಅರ್ಪಿಸುವುದು ಸಾಮಾನ್ಯವಾದ ಕ್ರಮವಾಗಿತ್ತು. ಈಗಲೂ ಈ ಕ್ರಿಯೆಗಳು ನಡೆಯುತ್ತಿವೆ. ಬೌದ್ಧಧರ್ಮದ ಉಗಮದ ಸಂದರ್ಭದಲ್ಲಿ ದೇವಸ್ಥಾನಗಳ ನಿರ್ಮಾಣ, ವಿಗ್ರಹಪೂಜೆಗಳಿಗೆ ಆದ್ಯತೆ ಸಿಕ್ಕಿತು. ಅದು ಈಗ ಉಚ್ಛ್ರಾಯ ಸ್ಥಿತಿಯಲ್ಲಿದೆಯೆನ್ನಿಸುತ್ತಿದೆ. ವಿಗ್ರಹಾರಾಧನೆಯನ್ನು ಒಪ್ಪದ ಮುಸ್ಲಿಮರೂ ಮಸೀದಿಗಳನ್ನು ಕಟ್ಟುತ್ತಾರೆ. ಏಕದೇವಾರಾಧನೆ ಮಾಡುವ ಕ್ರಿಶ್ಚಿಯನರೂ ಚರ್ಚುಗಳನ್ನು ನಿರ್ಮಿಸುತ್ತಾರೆ. ಬಹುದೈವಾರಾಧಕರಾದ ಹಿಂದೂಗಳೂ ಮಂದಿರಗಳ ನಿರ್ಮಾಣ ಮಾಡುತ್ತಾರೆ. ಅವರು ಬಹುದೇವಾರಾಧಕರಾದರೂ ಸಹ ದೇವರು ಒಬ್ಬನೇ, ಅವನನ್ನು ಅನೇಕ ಹೆಸರುಗಳಿಂದ ಕರೆಯುತ್ತಾರೆ ಎಂಬುದನ್ನು ಒಪ್ಪುವುದು ವಿಶೇಷವಾಗಿದೆ. (ಏಕಂ ಸತ್ ವಿಪ್ರಾಃ ಬಹುಧಾ ವದಂತಿ). ಹಿಂದೂ, ಮುಸ್ಲಿಮ್, ಕ್ರಿಶ್ಚಿಯನರು ನಿರ್ಮಿಸುವ ಮಂದಿರ, ಮಸೀದಿ, ಚರ್ಚುಗಳಲ್ಲಿ  ಒಂದು ಸಮಾನವಾದ ಅಂಶವನ್ನು ಗಮನಿಸಬಹುದು. ಅದೆಂದರೆ ಈ ಸ್ಥಳಗಳು ಎಲ್ಲವೂ ದೇವರನ್ನು ಆರಾಧಿಸುವ ಸ್ಥಳಗಳಾಗಿರುವುದು.

     ದೇವಾಲಯಗಳೆಂದರೆ ದೇವರು ವಾಸಿಸುವ ಸ್ಥಳ ಎಂಬುದು ತಪ್ಪು ಕಲ್ಪನೆ ಅಥವ ಗ್ರಹಿಕೆಯಾಗಿದೆ. ದೇವರು ಸರ್ವಾಂತರ್ಯಾಮಿ, ಸರ್ವವ್ಯಾಪಿ, ಸರ್ವಶಕ್ತ ಎಂದಿರುವಾಗ ಅವನು ಒಂದು ಪುಟ್ಟ ಸ್ಥಳದಲ್ಲಿ ಇರುತ್ತಾನೆ ಎಂಬ ಗ್ರಹಿಕೆಯೇ ಸರಿಯಲ್ಲ. ವಾಸ್ತವವಾಗಿ ದೇವಾಲಯಗಳು ಆ ಸರ್ವಶಕ್ತ ದೇವರನ್ನು ಕುರಿತು ಧ್ಯಾನಿಸುವ, ಪೂಜಿಸುವ, ಗೌರವಿಸುವ ಸ್ಥಳಗಳಷ್ಟೇ ಆಗಿವೆ. ಹಿಂದೂಗಳು ತಮ್ಮ ಮನೆಗಳಲ್ಲಿಯೂ ದೇವರನ್ನು ಆರಾಧಿಸಲು ಒಂದು ಸ್ಥಳವನ್ನು ನಿಗದಿಸಿರುತ್ತಾರೆ. ಅದನ್ನು ಪೂಜಾಗೃಹ, ಪೂಜಾಸ್ಙಳ ಎಂದು ಭಕ್ತಿಭಾವನೆಗಳಿಂದ ನಡೆದುಕೊಳ್ಳುತ್ತಾರೆ. ದೇವರ ವಿಗ್ರಹ, ಫೋಟೋ, ಇತ್ಯಾದಿಗಳನ್ನಿಟ್ಟು ಧೂಪ, ದೀಪ, ನೈವೇದ್ಯಗಳನ್ನು ಅರ್ಪಿಸುತ್ತಾರೆ. ಪೂಜೆ, ಪುನಸ್ಕಾರಗಳನ್ನು ನೆರವೇರಿಸುತ್ತಾರೆ. ದೇವಸ್ಥಾನಗಳಿಗೆ ವಿಶೇಷ ಸಂದರ್ಭಗಳಲ್ಲಿ ಹೋಗುತ್ತಾರೆ. ಮುಸ್ಲಿಮರು ಮತ್ತು ಕ್ರಿಶ್ಚಿಯನರು ನಿಗದಿತ ಅವಧಿ, ದಿನಗಳಲ್ಲಿ ಮಸೀದಿ, ಚರ್ಚುಗಳಿಗೆ ಭೇಟಿ ಕೊಡುವುದು ಕಡ್ಡಾಯವಾಗಿರುವಂತೆ, ಹಿಂದೂಗಳಿಗೆ ಅಂತಹ ಕಡ್ಡಾಯ ಸಂಪ್ರದಾಯಗಳಿಲ್ಲ. ಅವರು ಮನೆಯಲ್ಲೇ ಪೂಜೆ, ಪುನಸ್ಕಾರಗಳನ್ನು ಸಲ್ಲಿಸುತ್ತಾರೆ ಮತ್ತು ಮೊದಲು ಹೇಳಿರುವಂತೆ ವಿಶೇಷ ಹಬ್ಬ, ಹರಿದಿನ, ಶುಭ ಸಂದರ್ಭಗಳಲ್ಲಿ, ವಿಶೇಷ ದಿನಗಳಲ್ಲಿ ದೇವಸ್ಥಾನಗಳಿಗೆ ಹೋಗುತ್ತಾರೆ. ನಿಯಮಿತವಾಗಿ ದೇವಸ್ಥಾನಗಳಿಗೆ ಜನರು ಬರಲೆಂಬ ಕಾರಣದಿಂದ ದೇವಸ್ಥಾನಗಳಲ್ಲಿ ಭಜನಾಮಂಡಳಿಗಳ ಸ್ಥಾಪನೆ, ಸಂಕಷ್ಟಹರ ಗಣಪತಿ ಪೂಜೆ, ಸತ್ಯನಾರಾಯಣಪೂಜೆ, ಇಂತಹವುಗಳನ್ನು ಏರ್ಪಡಿಸುವುದು ಈಗ ರೂಢಿಯಾಗಿ, ಸಂಪ್ರದಾಯವಾಗಿ ಬೆಳೆದುಬರುತ್ತಿದೆ.

     ದೇವಸ್ಥಾನಗಳು ಜನರು ಒಂದೆಡೆ ಸೇರುವ, ಧಾರ್ಮಿಕ, ಸಾಮಾಜಿಕ, ಆಧ್ಯಾತ್ಮಿಕ ಶಕ್ತಿಗಳನ್ನು ಹೆಚ್ಚಿಸಿಕೊಳ್ಳುವ ಕೇಂದ್ರಗಳಾಗಿ ರೂಪುಗೊಳ್ಳುತ್ತಾ ಹೋದವು. ಪ್ರಾರಂಭದಲ್ಲಿ ಸಾಮಾನ್ಯವಾಗಿ ಊರಿನ ಪ್ರಧಾನ ಸ್ಥಳಗಳಲ್ಲಿ, ವಿಶೇಷವಾಗಿ ನದಿತಟಗಳಲ್ಲಿ, ಬೆಟ್ಟ-ಗಡ್ಡಗಳ ಮೇಲ್ಭಾಗದಲ್ಲಿ, ಸಮುದ್ರದ ದಡದ ಹತ್ತಿರದಲ್ಲಿ ನಿರ್ಮಿಸಲ್ಪಟ್ಟಿರುವುದನ್ನು ಗಮನಿಸಬಹುದು. ಈಗಂತೂ ಎಲ್ಲೆಂದರೆ ಅಲ್ಲಿ ಮಂದಿರ, ಮಸೀದಿ, ಚರ್ಚುಗಳು ತಲೆಯೆತ್ತುತ್ತಿವೆ. ರಸ್ತೆ ಬದಿಗಳಲ್ಲಿ, ಗಿಡಮರಗಳ ಕೆಳಗೆ, ಹೊಸ ಹೊಸ ಬಡಾವಣೆಗಳಲ್ಲಿ, ಹೇಳಬೇಕೆಂದರೆ ಪ್ರತಿ ಬಡಾವಣೆ, ಮೊಹಲ್ಲಾಗಳಲ್ಲಿ ಈ ಕಟ್ಟಡಗಳಿವೆ. ಜನರಿಗೆ ದೇವರ ಮೇಲಿನ ಭಕ್ತಿ ಜಾಸ್ತಿಯಾಯಿತೋ ಎಂಬಂತೆ ಪೈಪೋಟಿಯಲ್ಲಿ ಮಂದಿರ, ಮಸೀದಿ, ಚರ್ಚುಗಳು ನಿರ್ಮಾಣವಾಗುತ್ತಿವೆ ಮತ್ತು ಹಲವು ಸಲ ಇವು ಶಾಂತಿ, ಸೌಹಾರ್ದಗಳ ಕದಡುವಿಕೆಗೂ ಕಾರಣವಾಗಿ ಕಾನೂನು-ಸುವ್ಯವಸ್ಥೆಯ ಸಮಸ್ಯೆಗಳೂ ಉಂಟಾಗುವುದನ್ನೂ ಕಾಣುತ್ತಿದ್ದೇವೆ.

     ಸಾಮಾನ್ಯವಾಗಿ ದೇವಸ್ಥಾನಗಳಲ್ಲಿ ಪ್ರಮುಖವಾಗಿ 6 ಭಾಗಗಳನ್ನು ಗುರುತಿಸಬಹುದು. ದೇವಸ್ಥಾನದ ಗೋಪುರ, ಗರ್ಭಗೃಹ, ಪ್ರಾಂಗಣ, ಮುಂಭಾಗ, ಪ್ರದಕ್ಷಿಣೆ ಬರುವ ಸ್ಥಳ ಮತ್ತು ಕಲ್ಯಾಣಿ - ಇವೇ ಆ ಆರು ಭಾಗಗಳು. ದೇವಸ್ಥಾನದ ಗೋಪುರಗಳು ಸಾಮಾನ್ಯವಾಗಿ ದೇವಸ್ಥಾನದ ವಿಸ್ತೀರ್ಣವನ್ನು ಅವಲಂಬಿಸಿ ಇರುತ್ತದೆ. ದೊಡ್ಡ ವಿಸ್ತೀರ್ಣದ ದೇವಸ್ಥಾನಗಳಲ್ಲಿ ದೊಡ್ಡ ಗೋಪುರಗಳು ಇರುತ್ತವೆ. ಗೋಪುರಗಳು ಆಕರ್ಷಣೀಯ ರೀತಿಯಲ್ಲಿ ಕೆತ್ತನೆಯ ಶಿಲ್ಪಗಳನ್ನು ಒಳಗೊಂಡಂತೆ ಎತ್ತರವಾಗಿದ್ದು ಮೇರು ಪರ್ವತವನ್ನು ಪ್ರತ್ತಿನಿಧಿಸುತ್ತದೆ ಎನ್ನುತ್ತಾರೆ. ಸಾಮಾನ್ಯವಾಗಿ ಗೋಪುರದ ತುದಿ ತ್ರಿಶೂಲದ ರೀತಿಯಲ್ಲಿ ಕಾಣುವಂತೆ ನಿರ್ಮಿಸಿರುತ್ತಾರೆ. ಅದೇನೇ ಇರಲಿ ಜನರಲ್ಲಿ ಔನ್ನತ್ಯದ ಭಾವನೆ ಜಾಗೃತವಾಗಲಿ ಎಂಬುದು ಇದರ ಉದ್ದೇಶವಿರಬಹುದು. ಗರ್ಭಗೃಹಗಳಲ್ಲಿ ದೇವರ ವಿಗ್ರಹ, ಮೂರ್ತಿಗಳನ್ನು ಪ್ರತಿಷ್ಠಾಪಿಸಿರುತ್ತಾರೆ. ಇಲ್ಲಿಗೆ ಸಾಮಾನ್ಯವಾಗಿ ಅರ್ಚಕರನ್ನು ಹೊರತುಪಡಿಸಿ ಉಳಿದವರಿಗೆ ಪ್ರವೇಶವಿರುವುದಿಲ್ಲ. ಗರ್ಭಗೃಹದ ಮುಂದಿನ ಸಭಾಂಗಣದಲ್ಲಿ ಜನರು ಕುಳಿತುಕೊಂಡು ಅಥವ ನಿಂತು ದೇವರಿಗೆ ಸಲ್ಲುವ ಪೂಜೆ, ಇತ್ಯಾದಿಗಳನ್ನು ವೀಕ್ಷಿಸಬಹುದಾಗಿರುತ್ತದೆ. ಮುಂಭಾಗದಲ್ಲಿ ಗಂಟೆಗಳನ್ನು ಇಳಿಬಿಡುವುದಿದ್ದು ದೇವಸ್ಥಾನಕ್ಕೆ ಆಗಮಿಸುವ ಮತ್ತು ನಿರ್ಗಮಿಸುವ ಭಕ್ತರು ಗಂಟಾನಾದ ಮಾಡಿ ಬರುತ್ತಾರೆ ಮತ್ತು ಹೋಗುತ್ತಾರೆ. ಗರ್ಭಗುಡಿಯ ಸುತ್ತಲೂ ಮತ್ತು ದೇವಸ್ಥಾನದ ಹೊರಭಾಗದಲ್ಲೂ ಅವಕಾಶವಿದ್ದರೆ ಭಕ್ತರು ಪ್ರದಕ್ಷಿಣೆ ಮಾಡುವ ಮಾರ್ಗವಿರುತ್ತದೆ. ಸಮೀಪದಲ್ಲಿ ಒಂದು ನೀರಿನ ಕೊಳ (ಕಲ್ಯಾಣಿ) ಇರುತ್ತದೆ. ಅಲ್ಲಿಯ ನೀರನ್ನು ದೇವಸ್ಥಾನದ ಪೂಜೆ, ಪುನಸ್ಕಾರಗಳಿಗೆ, ದೇವಸ್ಥಾನದ ಸ್ವಚ್ಛತೆಯ ಸಲುವಾಗಿ ಬಳಸಿಕೊಳ್ಳುತ್ತಾರೆ. ಈಗ ಎಲ್ಲೆಂದರಲ್ಲಿ, ಹೇಗೆಂದರೆ ಹಾಗೆ ನಿರ್ಮಾಣವಾಗುತ್ತಿರುವ ಮಂದಿರಗಳಲ್ಲಿ ಇವೆಲ್ಲವೂ ಇರುತ್ತದೆ ಎನ್ನಲಾಗುವದಿಲ್ಲ. ಕಲೆ, ಸೌಂದರ್ಯಗಳು ಮೇಳವಿಸಿರುವ ಅನೇಕ ದೇವಾಲಯಗಳು ವಿಶೇಷವಾಗಿ ದಕ್ಷಿಣ ಭಾರತದಲ್ಲಿ ಇದ್ದು ಭಕ್ತರ, ಪ್ರವಾಸಿಗರ ಆಕರ್ಷಣೆಯ ಕೇಂದ್ರಗಳಾಗಿವೆ. ವಿವಿಧ ಮತಗಳು, ಸಂಪ್ರದಾಯಗಳು, (ಶೈವ, ವೈಷ್ಣವ, ಶಾಕ್ತ ಮುಂತಾಗಿ) ಇತ್ಯಾದಿಗಳಿಗೆ ಅನುಸಾರವಾಗಿ ದೇವಸ್ಥಾನಗಳು ತಲೆಯೆತ್ತಿವೆ, ಎತ್ತುತ್ತಿವೆ. ಒಂದೊಂದು ದೇವಸ್ಥಾನಕ್ಕೂ ಒಂದೊಂದು ಸ್ಥಳ ಪುರಾಣ ರಚಿತವಾಗಿಬಿಟ್ಟಿದೆ.

     ಅತಿ ಪುರಾತನ ಕಾಲದ ದೇವಸ್ಥಾನಗಳು ಕಲ್ಲು, ಇಟ್ಟಿಗೆಗಳಿಂದ ರಚಿತವಾದುದ್ದಾಗಿರದೆ ಮಣ್ಣಿನ ಗೋಡೆಗಳು ಮತ್ತು ತಡಿಕೆಗಳನ್ನು ಹಾಕಿದ, ಹುಲ್ಲು, ಎಲೆಗಳ ಛಾವಣಿಗಳಿಂದ ಕೂಡಿದ್ದುದಾಗಿದ್ದವು. ಆ ಸಮಯದಲ್ಲಿ ವಾಸದ ಮನೆಗಳೂ ಸಹ ಗುಡಿಸಲುಗಳ ರೀತಿಯಲ್ಲಿರುತ್ತಿದ್ದವು, ನಾಡಹೆಂಚುಗಳ ಬಳಕೆಯೂ ಇದ್ದಿತು. ಕಾಲಕ್ರಮೇಣ ಶಿಲಾಮಯವಾದ ದೇವಸ್ಥಾನಗಳು, ಇಟ್ಟಿಗೆಗಳನ್ನು ಬಳಸುವುದು ಪ್ರಾರಂಭವಾಯಿತು. ಹಿಂದಿನ ರಾಜ-ಮಹಾರಾಜರುಗಳು ದೇವಸ್ಥಾನಗಳನ್ನು ಕಟ್ಟಿಸುವುದು, ಜೀರ್ಣೋದ್ಧಾರ ಮಾಡಿಸುವುದುಗಳನ್ನು ಆದ್ಯತೆಯ ಮೇಲೆ ಮಾಡುತ್ತಿದ್ದರು. ಚೋಳರು, ಪಲ್ಲವರು, ಚಾಲುಕ್ಯರು, ಹೊಯ್ಸಳರು ಮುಂತಾದವರ ಕಾಲದಲ್ಲಿ ರಚಿತವಾದ ದೇವಾಲಯಗಳು ತಮ್ಮದೇ ಆದ ರೀತಿಯ ಶೈಲಿಗಳಿಂದಾಗಿ ಪ್ರಸಿದ್ಧವಾಗಿವೆ. ಬೌದ್ಧ ಮಂದಿರಗಳು, ಜೈನ ಬಸದಿಗಳು, ಗುರುದ್ವಾರಗಳು, ಮಸೀದಿಗಳು, ಚರ್ಚುಗಳು ತಮ್ಮ ರಚನಾಶೈಲಿ, ಆಕರ್ಷಕ ಚಿತ್ರಗಳು, ಕೆತ್ತನೆಗಳು, ಇತ್ಯಾದಿಗಳ ಕಾರಣದಿಂದ ಹೆಸರುವಾಸಿಯಾಗಿದ್ದು ಪ್ರವಾಸಿಗರನ್ನು ಸೆಳೆಯುತ್ತಿವೆ.

     ಮಾನವನ ಉತ್ಕರ್ಷದಲ್ಲಿ ಜ್ಞಾನ, ಕರ್ಮ, ಉಪಾಸನೆಗಳು ಮಹತ್ವದ ಪಾತ್ರ ವಹಿಸುತ್ತವೆ. ಉಪಾಸನೆ ಅರ್ಥಾತ್ ದೇವರ ಕುರಿತ ಅರಿವು, ದೇವರ ಚಿಂತನೆ, ಧ್ಯಾನಗಳಿಗಾಗಿ ದೇವಸ್ಥಾನಗಳು ಆಶ್ರಯತಾಣಗಳಾಗಬೇಕು. ಆದರೆ ಇಂದು ದೇವಸ್ಥಾನಗಳು ಇದಕ್ಕೆ ಸಹಕಾರಿಯಾಗಿವೆಯೇ ಎಂದರೆ ಇಲ್ಲವೆಂದೇ ವಿಷಾದದಿಂದ ಅಭಿಪ್ರಾಯಿಸಬೇಕಾಗುತ್ತದೆ. ಏಕಾಂತದ ಸ್ಥಳಗಳು, ಪ್ರಶಾಂತವಾದ ಪರಿಸರ ಉಪಾಸನೆಗೆ ಸೂಕ್ತವಾಗಿರುತ್ತದೆ. ಮನೆಗಳಲ್ಲಿ, ಕೆಲಸ ಮಾಡುವ ಸ್ಥಳಗಳಲ್ಲಿ ಇಂತಹ ವಾತಾವರಣ ಸಿಗಲಾರದಾಗಿದ್ದು ಕನಿಷ್ಠ ದೇವಸ್ಥಾನಗಳಲ್ಲಾದರೂ ಇದಕ್ಕೆ ಅವಕಾಶವಿರಬೇಕಾದುದು ಸೂಕ್ತವಾಗಿರುತ್ತದೆ. ಇಂದು ದೇವಸ್ಥಾನಗಳು ವ್ಯಾವಹಾರಿಕ ಕೇಂದ್ರಗಳಂತೆ ಆಗಿವೆ. ಪ್ರವೇಶಕ್ಕೆ ಹಣ, ಹಣ್ಣು-ಕಾಯಿ ನೈವೇದ್ಯಕ್ಕೆ ಹಣ, ವಿವಿಧ ರೀತಿಯ ಪೂಜೆಗಳಿಗೆ ವಿವಿಧ ರೀತಿಯ ಶುಲ್ಕಗಳನ್ನು ನಿಗದಿಸಿ ಫಲಕಗಳನ್ನು ಪ್ರದರ್ಶಿಸಿರುತ್ತಾರೆ. ದೇವಸ್ಥಾನಗಳ ನಿರ್ವಹಣೆಗೆ. ಅರ್ಚಕರ ಮತ್ತು ಇತರ ಪರಿಚಾರಕರ ಸಂಬಳ, ಇತ್ಯಾದಿಗಳಿಗಾಗಿ ಹಣದ ಅಗತ್ಯವನ್ನು ಈ ರೀತಿ ಭರಿಸಿಕೊಳ್ಳುತ್ತಾರೇನೋ! ಕೋಟಿಗಟ್ಟಲೆ ಆದಾಯವಿರುವ ಶ್ರೀಮಂತ ದೇವಸ್ಥಾನಗಳು ಇರುವಂತೆ, ದೇವರಿಗೆ ದೀಪ ಹಚ್ಚಲು ಎಣ್ಣೆಗೂ ಕಷ್ಟವಿರುವ ದೇವಸ್ಥಾನಗಳೂ ಇವೆ. ಒಂದೇ ಊರಿನಲ್ಲಿ ಹಾಳು ಬಿದ್ದ ದೇವಸ್ಥಾನಗಳೂ ಇರುತ್ತವೆ, ವೈಭವೋಪೇತವಾದ ಮಂದಿರಗಳೂ ಇರುತ್ತವೆ. ಜನ ಮರುಳೋ, ಜಾತ್ರೆ ಮರುಳೋ ಎಂಬಂತೆ ಜನರು ಶ್ರೀಮಂತ ದೇವಸ್ಥಾನಗಳನ್ನೇ ಮತ್ತಷ್ಟು ಶ್ರೀಮಂತಗೊಳಿಸುತ್ತಿದ್ದಾರೆ. ಅಲ್ಲಿ ಸೇರುವ ಜನರ ಗಿಜಿ ಗಿಜಿ, ನೂಕುನುಗ್ಗಲುಗಳನ್ನು ನೋಡಿದರೆ ಅಲ್ಲಿ ವ್ಯವಧಾನದಿಂದ ದೇವರಿಗೆ ಕೈಮುಗಿಯುವುದೂ ಕಷ್ಟವೆಂಬಂತೆ ಇರುತ್ತದೆ. ಆದರೂ ಜನರು ಅಂತಹ ದೇವಸ್ಥಾನಗಳಿಗೆ ಹೋಗಿ ಧನ್ಯರಾದೆವೆಂದುಕೊಳ್ಳುತ್ತಾರೆ.

     ಉಪಾಸನೆಗೆ ನೆರವಾಗಬೇಕಾದ ಹೆಚ್ಚಿನ ದೇವಾಲಯಗಳ ಇಂದಿನ ಸ್ಥಿತಿ-ಗತಿಗಳು ಜನರನ್ನು ಆಧ್ಯಾತ್ಮಿಕತೆಗೆ ಪ್ರೇರಿಸುವ ಬದಲಿಗೆ ದೇವಸ್ಥಾನದಲ್ಲಿ ಸೇವೆ ಸಲ್ಲಿಸಿದರೆ ಸಾಕು, ಒಳ್ಳೆಯದಾಗುತ್ತದೆ ಎಂಬುದಕ್ಕೆ ಒತ್ತು ಕೊಡುತ್ತಿವೆ. ಭಗವದ್ಗೀತೆ ಬೋಧಿಸುವ ಕರ್ಮ ಸಿದ್ಧಾಂತಕ್ಕೆ, ವೇದದ ಆಶಯಗಳಿಗೆ ಇದು ಪೂರಕವಾಗದು. ಈ ವೇದಮಂತ್ರ ಗಮನಿಸಿ:  ನ ಕಿಲ್ಬಿಷಮತ್ರ ನಾಧಾರೋ ಅಸ್ತಿ ನ ಯನ್ಮಿತ್ರೈಃ ಸಮಮಮಾನ ಏತಿ | ಅನೂನಂ ಪಾತ್ರಂ ನಿಹಿತಂ ನ ಏತತ್ಪಕ್ತಾರಂ ಪಕ್ವಃ ಪುನರಾವಿಶಾತಿ ||  (ಅಥರ್ವ.೧೨.೩.೪೮)      ದೇವರ ನ್ಯಾಯವಿಧಾನದಲ್ಲಿ ಯಾವ ಒಡಕೂ, ದೋಷವೂ ಇಲ್ಲ. ಬೇರೆ ಯಾವ ಆಧಾರವೂ ಇಲ್ಲ. ಸ್ನೇಹಿತರ, ಮಧ್ಯವರ್ತಿಗಳ, ಬಂಧುಗಳ ಸಹಾಯದಿಂದ ನಾನು ರಕ್ಷಿತನಾಗಿದ್ದು ಮೋಕ್ಷಕ್ಕೆ ಸೇರುತ್ತೇನೆ ಎಂಬುದೂ ಕೂಡ ಇಲ್ಲ. ನಮ್ಮ ಈ ಒಡಕಿಲ್ಲದ ಅಂತಃಕರಣದ ಪಾತ್ರೆ ಗೂಢವಾಗಿ ಇಡಲ್ಪಟ್ಟಿದ್ದು, ಬೇಯಿಸಿದ ಅನ್ನ, ಕರ್ಮಫಲವಿಪಾಕವು ಅಡಿಗೆ ಮಾಡಿದವನನ್ನು ಪುನಃ ಮರಳಿ ಪ್ರವೇಶಿಸಿಯೇ ತೀರುತ್ತದೆ ಎಂಬುದು ಇದರ ಅರ್ಥ. ವಿಷಯ ಸ್ಷಷ್ಟ - ಮಾಡಿದ್ದುಣ್ಣೋ ಮಹರಾಯ! ಅವನು ಕಟ್ಟಿಕೊಂಡ ಬುತ್ತಿ ಅವನದೇ ಆಗಿದ್ದು ಅವನೇ ತಿನ್ನಬೇಕು! ಹೀಗಿರುವಾಗ ನಮಗೆ ಒಳ್ಳೆಯದಾಗಬೇಕೆಂದರೆ ನಾವು ಒಳ್ಳೆಯ ಕೆಲಸಗಳನ್ನು ಮಾಡಬೇಕಷ್ಟೆ! ಹಲವರ ತಲೆ ಒಡೆದು ಅನ್ಯಾಯ ಮಾರ್ಗದಲ್ಲಿ ಹಣ ಸಂಪಾದಿಸಿ ದೇವರ ವಿಗ್ರಹಕ್ಕೆ ಚಿನ್ನದ ಆಭರಣಗಳನ್ನು ಮಾಡಿಸಿಕೊಟ್ಟರೆ ಪಾಪ ಪರಿಹಾರವಾಗುವುದಾದರೆ ಎಲ್ಲರೂ ಈ ಮಾರ್ಗವನ್ನೇ ಆರಿಸಿಕೊಳ್ಳುತ್ತಾರಲ್ಲವೇ?

     ದೇವರಲ್ಲಿ ಭಕ್ತಿ, ಪೂಜೆ ಇತ್ಯಾದಿ ಹೆಸರುಗಳಿಂದ ಹೇಳಲಾಗುವ ಉಪಾಸನೆಯ ಮೂಲ ಉದ್ದೇಶವೆಂದರೆ ಮಾನವ ತನ್ನ ಚಿತ್ತವನ್ನು ಬಾಹ್ಯ ವಿಷಯಗಳಿಂದ ಹೊರತಂದು, ರೂಪ, ರಸ, ಗಂಧ, ಶಬ್ದ, ಸ್ಪರ್ಷ -  ಈ ಪಂಚೇಂದ್ರಿಯಗಳ ವಿಷಯಗಳಿಂದಲೂ ಅದನ್ನು ಒಳಕ್ಕೆಳೆದುಕೊಂಡು, ಏಕಾಗ್ರಗೊಳಿಸಿ ಅದನ್ನು ಪರಮಾತ್ಮನಲ್ಲಿ ನಿಲ್ಲಿಸಿ, ದೇವರ ಸಾಮೀಪ್ಯವನ್ನು ಅನುಭವಿಸಿ ಸಿಗುವ ಆನಂದವನ್ನು ಪಡೆಯುವ ಕ್ರಿಯೆಯಾಗಿದೆ. ಇದಕ್ಕೆ ಅನುಕೂಲವಾಗುವಂತೆ ದೇವಾಲಯಗಳಲ್ಲಿ ಏಕಾಂತದಲ್ಲಿ ಧ್ಯಾನ ಮಾಡಲು ಅವಕಾಶವಿರುವ ಧ್ಯಾನಮಂದಿರಗಳು, ಕುಟೀರಗಳ ಅಗತ್ಯವಿರುತ್ತದೆ. ಗೌಜು, ಗದ್ದಲಗಳಿಗಿಂತ ಶಾಂತತೆ, ನಿಶ್ಶಬ್ದತೆಗಳಿಗೆ ಅಲ್ಲಿ ಆದ್ಯತೆ ಇರಬೇಕಾಗುತ್ತದೆ. ಅಧ್ಯಯನಕ್ಕೆ ಅನುಕೂಲವಾಗುವಂತೆ ವೇದಮಂತ್ರಗಳು, ಧಾರ್ಮಿಕ ಗ್ರಂಥಗಳ ಅಧ್ಯಯನ, ಕಲಿಕೆ, ಚಿಂತನ, ಮಂಥನಗಳಿಗೆ ಅವಕಾಶ ಮಾಡಿಕೊಡಬೇಕಿರುತ್ತದೆ. ಈ ತತ್ವ ಚರ್ಚು, ಮಸೀದಿಗಳಿಗೂ ಅನ್ವಯವಾಗುತ್ತದೆ. ಬೈಬಲ್ಲು, ಕುರಾನುಗಳ ಅಧ್ಯಯನಕ್ಕೆ ಅಲ್ಲಿ ಆದ್ಯತೆ ಸಿಗಬೇಕಿರುತ್ತದೆ. ನಾವು ತಿರುಳನ್ನು ಅವಗಣಿಸಿ, ಸಿಪ್ಪೆಗೆ ಮಹತ್ವ ಕೊಡುತ್ತಿದ್ದೇವೆ. ತಿರುಳಿನ ರಕ್ಷಣೆಗೆ ಸಿಪ್ಪೆ ಇರಬೇಕು, ಆದರೆ ಸಿಪ್ಪೆಯೇ ಪ್ರಧಾನವಾಗಬಾರದು.

     ದೇವಾಲಯಗಳು ಕೇವಲ ಸಾಧನಾಪಥದಲ್ಲಿನ ಮೆಟ್ಟಲಾಗಿವೆಯೇ ಹೊರತು ಅದೇ ಗಮ್ಯವಲ್ಲವೆಂಬ ಅರಿವು ನಮ್ಮಲ್ಲಿ ಮೂಡಬೇಕು. 'ಮನೆಯೇ ಮಂತ್ರಾಲಯ, ಮನಸೇ ದೇವಾಲಯ' ಎಂಬ ಹಾಡಿನ ಸಾಲು ಅರ್ಥಪೂರ್ಣವಾಗಿದೆ. ಬಸವಣ್ಣನವರು ಹೇಳಿದಂತೆ, 'ಎನ್ನ ಕಾಲೇ ಕಂಬ, ದೇಹವೇ ದೇಗುಲ, ಶಿರವೇ ಹೊನ್ನ ಕಳಶವಯ್ಯಾ' ಎಂಬುದರ ಒಳಾರ್ಥವೂ ಇದೇ ಆಗಿದೆ. ಪರಮಾತ್ಮನ ನಿರ್ಮಿತಿಯಾದ ಜೀವಿಯ ಶರೀರವೆಂಬ ನವರಸಗಳ ದೇಗುಲವನ್ನು ಸ್ವಚ್ಛ, ಸುಂದರವಾಗಿರಿಸಿಕೊಂಡರೆ ಆ ದೇಗುಲದೊಳಗೆ ಸ್ವತಃ ಪರಮಾತ್ಮನೇ ಬಂದು ನೆಲೆಸುತ್ತಾನೆ. ಹೀಗಾದಾಗ ಹೊರಗಿನ ದೇವಾಲಯಗಳ ಅವಶ್ಯಕತೆ ಬರುವುದಿಲ್ಲ.

ರಾಗರಹಿತ ಮನ ದೀಪದ ಕಂಬವಾಗಿ

ಸಂಸ್ಕಾರ ಬತ್ತಿಯನು ಭಕ್ತಿತೈಲದಿ ನೆನೆಸಿ |

ದೇವನ ನೆನೆವ ಮನ ಬತ್ತಿಯನು ಹಚ್ಚಲು

ಜ್ಞಾನಜ್ಯೋತಿ ಬೆಳಗದಿಹದೆ ಮೂಢ ||

-ಕ.ವೆಂ.ನಾಗರಾಜ್.

******************

ಸಂಪದಿಗರ ಮಾಹಿತಿಗೆ:  ಇದು ಸಂಪದದಲ್ಲಿ ನನ್ನ 550ನೆಯ ಬರಹ.

Comments

Submitted by Nagaraj Bhadra Thu, 07/02/2015 - 22:12

ಅಭಿನಂದನೆಗಳು ಸರ್.ನಿಮ್ಮ ಬರವಣಿಗೆ ಹೀಗೆ ಮುಂದುವರೆಯಲ್ಲಿ ಸರ್

Submitted by ಗಣೇಶ Thu, 07/02/2015 - 23:16

ಕವಿನಾಗರಾಜರೆ,
೫೫೦ನೇ ಬರಹ! ಶುಭಾಶಯಗಳು...
>>>ನಾವು ತಿರುಳನ್ನು ಅವಗಣಿಸಿ, ಸಿಪ್ಪೆಗೆ ಮಹತ್ವ ಕೊಡುತ್ತಿದ್ದೇವೆ. ತಿರುಳಿನ ರಕ್ಷಣೆಗೆ ಸಿಪ್ಪೆ ಇರಬೇಕು, ಆದರೆ ಸಿಪ್ಪೆಯೇ ಪ್ರಧಾನವಾಗಬಾರದು.
-ನೀವೇನೇ ಹೇಳಿ..ನಾವು ಬದಲಾಗುವುದಿಲ್ಲ..ಗತಾನುಗತಿಕೋ ಲೋಕಃ....

Submitted by lpitnal Sun, 07/05/2015 - 06:56

ಹಿರಿಯರು ಚಿಂತಕ ಬರಹಗಾರ ಕವಿನಾಗರಾಜ್ ಸರ್ ಶುಭ ಮುಂಜಾವು, ತಮ್ಮ ಇಂತಹ ಉತ್ಕೃಷ್ಟ ಬರಹದ ಮೂಲಕ ನಮಗೆ ತಮ್ಮ ವಿದ್ವತ್ಪೂರ್ಣ 550 ಬರಹವನ್ನು ನಮಗೆಲ್ಲ ನೀಡಿದ್ದು ಸ್ತುತ್ಯಾರ್ಹ. ದೇವ, ದೇವಾಲಯಗಳ ಉಗಮ,ಸಾಗಬೇಕಾದ ದಾರಿಗಳ ಕುರಿತ ಚಿಂತನಾಪರ ಬರಹಕ್ಕೆ ವಂದನೆಗಳು ಸರ್, ಅಂದಹಾಗೆ ನಮ್ಮೆಲ್ಲ ಸಂಪದಿಗರೆಲ್ಲರ ಪರವಾಗಿ ಪ್ರೀತಿಪೂರ್ವಕ ಅಭಿನಂದನೆಗಳು ಸರ್, ನಮ್ಮೆಲ್ಲರೊಡನೆ ತಮ್ಮ ಸಂಬಂಧದ ಅನುಬಂಧ ಹೀಗೆ ಮುಂದುವರೆಯಲಿ ಸರ್, 550 ರಿಂದ ಸಾವಿರಕ್ಕೆ ಸಾವಿಲ್ಲದಿರಲಿ, ಧನ್ಯವಾದಗಳು.

Submitted by ನಾಗೇಶ್ ಪೈ ಕುಂದಾಪುರ Sun, 07/05/2015 - 09:15

ಸು೦ದರವಾಗಿದೆ ಅ೦ತರಜಾಲದಲ್ಲಿ ಕನ್ನಡ ಪ್ರಚಾರ‌
ಕು೦ದಾಪುರ‌ ನಾಗೇಶ ಪೈ

Submitted by partha1059 Mon, 07/06/2015 - 17:09

ದೇವಾಲಯಗಳ‌ ನಿಜ‌ ಅರ್ಥವನ್ನು ತಿಳಿಸಿದ್ದೀರಿ, ದೇವನ್ನು ಎಲ್ಲ‌ ಕಡೆಯೂ ಇದ್ದಾನೆ, ನಾವು ಅವನನ್ನು ಪೂಜಿಸಲು , ದ್ಯಾನಿಸಲು ಆರಿಸಿಕೊಂಡಿರುವ‌ ಸ್ಥಳ‌ ದೇವಾಲಯ‌ !!!!
ವಂದನೆಗಳು ನಾಗರಾಜ‌ ಸರ್,

Submitted by H A Patil 1 Sat, 07/11/2015 - 11:32

ಕವಿ ನಾಗರಾಜರವರಿಗೆ ವಂದನೆಗಳು
ಮನಸೆ ದೇವಾಲಯ ತಮ್ಮ ಉತ್ತಮ ಚಿಂತನೆಯ ಒಂದು ಅಭಿವ್ಯಕ್ತಿ ಜೊತೆಗೆ ಇದು ತಮ್ಮಲೇಖನ ಸರಣಿಯ 550 ನೇ ಬರಹ ಎನ್ನುವುದು ಸಂತಸದ ಸಂಗತಿ, ತಮ್ಮ ಬರಹ ಸಾವಿರದ ಕಂತನ್ನು ದಾಟಿ ಮುಂದುವರಿಯಲಿ ಎನ್ನುವ ಸದಾಶಯದೊಂದಿಗೆ ಧನ್ಯವಾದಗಳು.