ಮನಸ್ಸಿನ ಪರಿಣಾಮ

ಮನಸ್ಸಿನ ಪರಿಣಾಮ

ಇಂದು ಮನಸ್ಸಿನ ಪರಿಣಾಮದ ಬಗ್ಗೆ ತಿಳಿದುಕೊಳ್ಳೋಣ. ಪತಂಜಲಿ ಮಹರ್ಷಿಯ ಯೋಗ ಸೂತ್ರದ ಮೂರನೇ ಪಾದ ಸೂತ್ರ 9, 10 ಮತ್ತು 11 ಅದರಲ್ಲಿ ವಿವರಿಸಿದೆ. ಮನಸ್ಸು ಚಲನಶೀಲ. ಪ್ರತಿಕ್ಷಣ ಮನಸ್ಸು ಚಲಿಸುತ್ತದೆ. ಇದರಿಂದಾಗಿ ನಮಗೆ ವಸ್ತುಗಳ ಜ್ಞಾನ ಮತ್ತು ಅನುಭವ ಉಂಟಾಗುತ್ತದೆ. ಈ ರೀತಿ ಚಲನೆ ಇರುವುದರಿಂದ ನಮ್ಮಲ್ಲಿ ಅನೇಕ ಭಾವನೆ, ಕಲ್ಪನೆ ಮತ್ತು ಬಯಕೆ ಉಂಟಾಗುತ್ತದೆ. ಯಾವುದನ್ನು ನೋಡುತ್ತದೆಯೋ ಆ ಆಕಾರವನ್ನು ಮನಸ್ಸು ತಾಳುತ್ತದೆ. ನೋಡಿದ, ಕೇಳಿದ, ಮುಟ್ಟಿದ, ಮೂಸಿದ, ರುಚಿಸಿದ, ಭಾವಿಸಿದ ಮತ್ತು ಕಲ್ಪಿಸಿದ ರೂಪ ತಾಳುವುದೇ ಮನಸ್ಸಿನ ವೈಶಿಷ್ಟ್ಯ . ಮನಸ್ಸಿನಲ್ಲಿ ಮೂಡಿದ ಕಲ್ಪನೆಗಳಿಗೆ ತೆರೆಗಳು, ವೃತ್ತಿಗಳು ಎನ್ನುತ್ತೇವೆ. ದುಃಖದ ತೆರೆ, ಸುಖದ ತೆರೆ ಯಾವುದೇ ಆಗಲಿ ಮೂಡಿದ ತೆರೆಗಳು ಬಹಳ ಹೊತ್ತು ಇರುವುದಿಲ್ಲ. ಇದು ನಮಗೆ ಗೊತ್ತಿಲ್ಲದೆ ಇರುವುದರಿಂದ ತಾಪ ಉಂಟಾಗುತ್ತದೆ. ಯಾವುದೇ ತೆರೆ ಇರಲಿ ಸಮುದ್ರದ ತರಂಗಗಳು ಕಾಯಂ ಇರುತ್ತದೆಯೇ? ಒಂದು ಕ್ಷಣದಲ್ಲಿ ಅಡಗುತ್ತದೆ ಮತ್ತೊಂದು ತರಂಗ ಏಳುತ್ತದೆ. ಹಾಗೆಯೇ ಮನಸ್ಸು ಸುಖದ ತೆರೆಯು ಎದ್ದು ಅಡಗುತ್ತದೆ. ಹಾಗೆ ದುಃಖದ ತೆರೆಯು ಎದ್ದು ಅಡಗುತ್ತದೆ. ಯಾವುದು ಖಾಯಂ ಇರೋದಿಲ್ಲ. ಉದಾಹರಣೆಗೆ ಯಾರಾದರೂ ಸತ್ತರೆ ಅವರ ಹತ್ತಿರದವರಿಗೆ ಎರಡರಿಂದ ಮೂರು ದಿನ ಬಹಳ ದುಃಖವಾಗುತ್ತದೆ. ಮರುದಿನ ಯಾರಾದರೂ ಬಂದಾಗ ಅಳುವರು. ಅದರ ಮರುದಿನ ಸ್ವಲ್ಪ ಸ್ವಲ್ಪ ಅಳು. ನಂತರ ದಿನ ದುಃಖ ವ್ಯಕ್ತಪಡಿಸುತ್ತಾರೆ ಕಣ್ಣೀರಿಲ್ಲ. ಸ್ವಲ್ಪ ದಿನಗಳ ನಂತರ ಆರಾಮವಾಗುತ್ತಾರೆ. 

ಇನ್ನೊಂದು ಉದಾಹರಣೆ : ಒಬ್ಬ ವ್ಯಕ್ತಿ ನಗೆ ನಾಟಕ ನೋಡಲು ಹೋದನು. ಮೂರು ಗಂಟೆ ನಕ್ಕ. ಹೊರ ಬರುವಾಗ ಯಾರೋ ಜೇಬು ಕತ್ತರಿಸಿ ಹಣ ಎಗುರಿಸಿದ್ದರು. ಹೊರಬಂದು ನೋಡುತ್ತಾನೆ ಜೇಬಿನಲ್ಲಿ ಹಣ ಇಲ್ಲ. ನಗು ಹೋಯಿತು ದುಃಖ ಬಂತು. ನಾಟಕ ಹೇಗಿತ್ತು ಎಂದು ಮನೆಯವರು ಕೇಳಿದರು. ಈತ ನಾಟಕ ಬಿಟ್ಟ ಜೋಬು ಕತ್ತರಿಸಿದ ಕಥೆ ಹೇಳಿ ದುಃಖಿಸಿದ. ಇದನ್ನ ಕೇಳಿ ಮನೆಯವರು ಹೇಳಿದರು. ಯಾಕಾದರೂ ನಾಟಕ ನೋಡಲು ಹೋಗ್ತೀರಿ? ಅಂದರು. ಮೊದಲು ನಾಟಕ ನೋಡಿ ಚೆನ್ನಾಗಿದೆ ಎಂದು ಹೇಳಿದವರೇ ಮನೆಯವರು. ಹೀಗೆ ಸುಖ ದುಃಖ ಬರುತ್ತದೆ ಮತ್ತು ಹೋಗ್ತದೆ. ಅದನ್ನು ನಂಬಬಾರದು. ನೀನು ತಣ್ಣಗಿರು ಅಂತ ಪತಂಜಲಿ ಹೇಳಿದ್ದು. ಸ್ವಲ್ಪ ತಡೆದುಕೋ ಹೋಗೋದಿಕ್ಕೆ ಬಂದಿರೋದು ಇರೋದಿಕ್ಕಲ್ಲ ಅಂತ ತಿಳಿದಿರಬೇಕು. ಒಬ್ಬ ಸಿಟ್ಟಿಗೆದ್ದಿದ್ದಾನೆ ಎಂದು ಭಾವಿಸಿ. ಎಷ್ಟೊತ್ ತನಕ?. ಯಾರು ಪ್ರತಿಕ್ರಿಯೆ ನೀಡದೇ ಇದ್ದರೆ ಸುಮ್ಮನಾಗುತ್ತಾನೆ. ನಮಗೆ ತಡೆದುಕೊಳ್ಳುವುದಕ್ಕೆ ಆಗುವುದಿಲ್ಲ ಅದಕ್ಕೆ ಸಿಟ್ಟಿಗೇಳುತ್ತೇವೆ. ಕೆಲವರು ಬರುತ್ತಾರೆ ಸಿಟ್ಟಿಗೆದ್ದವನಿಗೆ ಹೇಳ್ತಾರೆ, ಬಿಡಬೇಡ ಅವನು ನಿನ್ನಷ್ಟು ಸಮರ್ಥನಲ್ಲ ಎಂದು ಹೇಳಿ ಸಿಟ್ಟನ್ನು ಉಳಿಸಲು ಪ್ರಯತ್ನಿಸುತ್ತಾರೆ. ಈತ ಇವನನ್ನು ಉಳಿಸಲು ಬಂದವನಲ್ಲ ಮುಗಿಸಲು ಬಂದವನು ಅಂತ ತಿಳಿದರೆ ತಣ್ಣಗಾಗುತ್ತಾನೆ. ಇಲ್ಲ ಹಾಳಾಗುತ್ತಾನೆ. ಅದನ್ನು ತಿಳಿದಿರಬೇಕು. ಯಾವ ಭಾವನೆಗಳು ಖಾಯಂ ಆಗಿ ಇರುವುದಿಲ್ಲ. ಏಳುತ್ತವೆ ಅಡಗುತ್ತವೆ. ಇದನ್ನೇ ಮನಸ್ಸಿನ ಪರಿಣಾಮ ಎಂದನು ಪತಂಜಲಿ. 

ಪರಿಣಾಮ ಎಂದರೆ ಬದಲಾಗುವುದು ಎಂದರ್ಥ. ಈ ಮನಸ್ಸಿನ ಪರಿಣಾಮ ತಿಳಿದುಕೊಂಡರೆ ಆರಾಮವಾಗಿ ಇರಬಹುದು. ಪತಂಜಲಿ ಮಹರ್ಷಿ ಮನಸ್ಸಿನ ಪರಿಣಾಮಗಳು ಮೂರು ಪ್ರಕಾರ ಎಂದು ಹೇಳಿದನು.

1 ಸಮಾಧಿ ಪರಿಣಾಮ 

2. ಏಕಾಗ್ರತಾ ಪರಿಣಾಮ.

3. ನಿರೋಧ ಪರಿಣಾಮ.

1. ಸಮಾಧಿ ಪರಿಣಾಮ : ಸರ್ವಾರ್ಥ ಕಡಿಮೆಯಾಗಿ ಏಕಾರ್ಥ ಉಂಟಾದರೆ ಸಮಾಧಿ ಎನ್ನುವರು. ನಾವು ನೋಡುವಾಗ ಹಲವಾರು ವಸ್ತುಗಳು ಕಾಣುತ್ತವೆ. ಅಷ್ಟು ರೂಪ ಮನಸ್ಸು ತಾಳುತ್ತದೆ. ಕಂಡ ವಸ್ತುವಿನ ರೂಪ ತಾಳುವುದು ಮನಸ್ಸಿನ ಸ್ವಭಾವ. ಒಂದೇ ಕ್ಷಣಕ್ಕೆ ಎಲೆ, ಹೂವು, ಹಣ್ಣು ಮತ್ತು ವಸ್ತುಗಳ ರೂಪ ತಾಳುತ್ತದೆ. ಕ್ಷಣ ಕ್ಷಣ ಎಲ್ಲಾ ಕಡೆ ನೋಡುತ್ತೇವೆ. ಅದೇ ಕ್ಷಣ ನೋಡಿದ ರೂಪ ತಾಳುತ್ತದೆ. ಎಷ್ಟು ಚುರುಕಿದೆ ಮನಸ್ಸು?. ಒಂದು ಕ್ಷಣದಲ್ಲಿ ಈ ಎಲ್ಲಾ ರೂಪ ತಾಳುತ್ತದೆ. ಅದಕ್ಕೆ ಸರ್ವಾರ್ಥ ಎಂದು ಕರೆದನು ಪತಂಜಲಿ ಮಹರ್ಷಿ, ರೂಪ, ರಸ, ಗಂದ, ಶಬ್ದ ಮತ್ತು ಸ್ಪರ್ಶ ಎಲ್ಲಾ ರೂಪ ತಾಳುತ್ತದೆ. ಈ ಜಗತ್ತಿನಲ್ಲಿ ನಾವು ಬದುಕಬೇಕಾದರೆ ಸರ್ವಾರ್ಥ ಆಗಬೇಕು. ಇಲ್ಲದಿದ್ದರೆ ಬದುಕು ರಸಹೀನ ವಾಗುತ್ತದೆ. ಜೀವನಕ್ಕೆ ವೈವಿಧ್ಯತೆ ಬರುವುದಿಲ್ಲ. ಒಂದು ವಾರ, ಮೂರು ಹೊತ್ತು, ಬರೀ ಇಡ್ಲಿ ತಿಂದರೆ ಏನಾಗುತ್ತದೆ...?. ಹಾಗೆ ಜೀವನ ರಸ ಹೀನವಾಗುತ್ತದೆ. ಸರ್ವಾರ್ಥ ಆದರೆ ಜೀವನ ಸುಂದರವಾಗುತ್ತದೆ. ಮನಸ್ಸು ಚೆನ್ನಾಗಿರುತ್ತದೆ. ಮನಸ್ಸು ಸರ್ವಾರ್ಥವಾಗಿದ್ದರು ಯಾವುದೋ ಒಂದನ್ನು ಇಚ್ಛಿಸಿ ಉಳಿದು ಎಲ್ಲವನ್ನು ಬದಿಗೆ ಸರಿಸಿ ಒಂದೇ ರೂಪ ಉಳಿಸಿಕೊಳ್ಳುತ್ತದೆ. ಅದಕ್ಕೆ ಯಾವುದು ಹಿಡಿಸುತ್ತದೆ ಅದರ ಕಡೆ ಲಕ್ಷ್ಯ ಹೋಗುತ್ತದೆ. ಉದಾಹರಣೆಗೆ : ಮಗುವಿನ ಜೊತೆ ಕಾಯಿ ಪಲ್ಯ ತರಲು ಒಂದು ದೊಡ್ಡ ಮಾಲ್ ಗೆ ಹೋದರೆ ಮಗು ಮೊದಲು ಎಲ್ಲಾ ನೋಡ್ತದೆ ಆದರೆ ಬಲೂನಿನ ಹತ್ತಿರ ಹೋಗಿ ನಿಲ್ಲುತ್ತದೆ. ಬೇರೆ ಕಡೆ ಲಕ್ಷ ಇರುವುದಿಲ್ಲ. ನಾವು ಎಲ್ಲಾ ನೋಡುತ್ತೇವೆ ನಮ್ಮ ಲಕ್ಷ್ಯ ಕಾಯಿಪಲ್ಲೆ. ಆದುದರಿಂದ ನಾವು ಅಲ್ಲಿಗೆ ಹೋಗುತ್ತೇವೆ. ಎಲ್ಲಾ ಕಾಯಿಪಲ್ಯ ನೋಡಿ ನಮಗೆ ಯಾವುದು ಇಷ್ಟವಾಯಿತು, ಮನೆಯವರಿಗೆ ಯಾವುದು ಇಷ್ಟವೋ, ಅದರ ಕಡೆ ಗಮನ ಹರಿಸುತ್ತೇವೆ. ಉಳಿದ ಕಡೆ ಗಮನಹರಿಸುವುದಿಲ್ಲ. ಕೊಳ್ಳಲು ಹೋದವರು ನೋಡುವುದಿಲ್ಲ . ನೋಡಲು ಹೋದವರು ಕೊಳ್ಳುವುದಿಲ್ಲ. ಮನಸ್ಸು ಹೀಗೆ ಒಮ್ಮೆ ಸರ್ವಾರ್ಥ ಆಗುತ್ತದೆ ಮತ್ತೊಮ್ಮೆ ಏಕಾರ್ಥವಾಗುತ್ತದೆ. ಸರ್ವಾರ್ಥ ಅಡಗಿ ಏಕಾರ್ಥ ಉಳಿದರೆ ಸಮಾಧಿ ಪರಿಣಾಮ. ಹಲವಾರು ವಸ್ತುಗಳ ಕಡೆ ಗಮನಹರಿಸಿ, ಒಂದೇ ವಸ್ತುವಿನ ಕಡೆ ಲಕ್ಷ್ಯ ಹರಿಸಿದರೆ ಸಮಾಧಿ ಪರಿಣಾಮ. ಮನಸ್ಸು ಬಹಳ ವಸ್ತುಗಳ ರೂಪ ತಾಳದೆ ಒಂದೇ ರೂಪ ತಾಳಬೇಕು ಅದು ಸಮಾಧಿ ಪರಿಣಾಮ. ಏಕಾರ್ಥಕತೆ ಹೆಚ್ಚಾದಂತೆ ಮನುಷ್ಯ ದೊಡ್ಡ ವಿದ್ವಾಂಸನಾಗುತ್ತಾನೆ. ಮೊದಲ 10 ವರ್ಷ ಕನ್ನಡ, ಇಂಗ್ಲಿಷ್, ಹಿಂದಿ, ಸಮಾಜ ವಿಜ್ಞಾನ ಮತ್ತು ಗಣಿತ ಓದುತ್ತಾನೆ. ಪಿಯುಸಿಯಲ್ಲಿ ಕಲೆ ಅಥವಾ ವಿಜ್ಞಾನ ಅಥವಾ ಕಾಮರ್ಸ್ ಓದುತ್ತಾನೆ. ಪದವಿಯಲ್ಲಿ ವಿಜ್ಞಾನದಲ್ಲಿ ಇ ಪಿ ಸಿ ಎಂ ಅಥವಾ ಸಿಬಿಜಡ್ ಹೀಗೆ ಎಂ ಎಸ್ ಸಿ ಯಲ್ಲಿ ಭೌತಶಾಸ್ತ್ರ ಅಥವಾ ರಸಾಯನಶಾಸ್ತ್ರ ಅಥವಾ ಗಣಿತ. ಅದಕ್ಕೂ ಮುಂದೆ ಆ ವಿಷಯದ ಯಾವುದೋ ಒಂದರಲ್ಲಿ ಸಂಶೋಧನೆ ಮಾಡುತ್ತಾನೆ ವಿದ್ವಾಂಸನಾಗುತ್ತಾನೆ. ಮನಸ್ಸು ಮೊದಲು ಸರ್ವಾರ್ಥ ಆಗಬೇಕು. ನಂತರ ಒಂದನ್ನು ಬಿಟ್ಟು ಉಳಿದದ್ದೆಲ್ಲ ಅಡಗಿ ಏಕಾಂತಾಗಬೇಕು.

2. ಏಕಾಗ್ರತಾ ಪರಿಣಾಮ: ಎಲ್ಲಾ ರೂಪ ಹೋಗಿ ಒಂದೇ ರೂಪ ಇಟ್ಟುಕೊಂಡಿದ್ದೇನೆ, ಸ್ವಲ್ಪ ಸಮಯದ ನಂತರ ಅದು ಅಡಗುತ್ತದೆ. ಮತ್ತೆ ಅದೇ ರೂಪ ತೆರೆ ಮೂಡುತ್ತಿದ್ದರೆ ಏಕಾಗ್ರತೆಯ ಪರಿಣಾಮ. ಒಂದು ವಿಚಾರ ಬಂದ್ರೆ ಅಡಗುತ್ತದೆ. ಮತ್ತೆ ಮತ್ತೆ ವಿಚಾರ ಮೂಡುತ್ತಿದ್ದರೆ ಏಕಾಗ್ರತೆ ಪರಿಣಾಮ. ಉದಾಹರಣೆ ನಾವು ಧ್ಯಾನ ಮಾಡಲು ಕುಳಿತಾಗ ಅನೇಕ ಚಿತ್ರಗಳು ಮನಸ್ಸಿನಲ್ಲಿ ಮೂಡುತ್ತವೆ. ನಾವು ಅದರಲ್ಲಿ ಒಂದನ್ನು ಇಚ್ಚಿಸಿ ಉಳಿದ ಎಲ್ಲಾ ಚಿತ್ರಗಳನ್ನು ಮರೆಯುತ್ತೇವೆ. ಉಳಿಸಿಕೊಂಡ ಚಿತ್ರ ಸ್ವಲ್ಪ ಸಮಯದ ನಂತರ ಅಡಗುತ್ತದೆ. ನಾವು ಮತ್ತೆ ಅದೇ ಚಿತ್ರ ಮೂಡಿಸಿಕೊಳ್ಳುತ್ತೇವೆ. ಹೀಗೆ ಅಡಗುವುದು ಮತ್ತೆ ಮತ್ತೆ ಮೂಡಿಸಿಕೊಳ್ಳುತ್ತೇವೆ ಹೀಗೆ. ದ್ರೋಣಾಚಾರ್ಯರ ಬಳಿ ಪಾಂಡವರು ಬಿಲ್ಲಿನ ವಿದ್ಯೆ ಕಲಿಯುತ್ತಿದ್ದರು. ಒಂದು ಮರದ ಮೇಲಿನ ಕೊಂಬೆಯ ಮೇಲಿರುವ ಎಲೆಯನ್ನು ಹೊಡೆಯಬೇಕಿತ್ತು. ಒಬ್ಬೊಬ್ಬರನ್ನಾಗಿ ದ್ರೋಣಾಚಾರ್ಯರು ಪ್ರಶ್ನಿಸುತ್ತಿದ್ದರು. ನಿನಗೇನು ಕಾಣುತ್ತದೆ? ಒಬ್ಬ ಹೇಳಿದ ಇಡೀ ಮರ ಕಾಣುತ್ತದೆ. ಇನ್ನೊಬ್ಬ ಹೇಳಿದ ಕೊಂಬೆ ಎಲೆ ಕಾಣುತ್ತದೆ. ಹೀಗೆ ಆದ ಮೇಲೆ ಅರ್ಜುನ ಬಂದ. ಆತನಿಗೂ ಅದೇ ಪ್ರಶ್ನೆ ಕೇಳಿದ. ಆಗ ಅರ್ಜುನ ಹೇಳಿದ... ಎಲೆ ಬಿಟ್ಟು ಬೇರೇನು ಕಾಣುತ್ತಿಲ್ಲ ಎಂದನು. ಮಕ್ಕಳೇ ನಾವು ಕಲಿಯುವ ವಿಷಯದಲ್ಲಿ ಹೀಗೆ ಏಕಾಗ್ರ ಮೂಡಿದರೆ ಯಶಸ್ಸು ಖಂಡಿತವಾಗಿಯೂ ಆಗುತ್ತದೆ. ಮೂಡಿದ ಚಿತ್ರ ಪದೇ ಪದೇ ಮೂಡಬೇಕು. ಅದಕ್ಕೆ ಏಕಾಗ್ರತ ಪರಿಣಾಮ ಎನ್ನುವರು.

3. ನಿರೋಧ ಪರಿಣಾಮ : ಈಗ ಒಂದೇ ಚಿತ್ರ ಪದೇ ಪದೇ ಮೂಡುತ್ತಿದೆ. ಕ್ರಮೇಣ ಆ ಚಿತ್ರ ಅಡಗುತ್ತದೆ. ಆಗ ಮನಸ್ಸಿನಲ್ಲಿ ಯಾವ ರೂಪ ಇರುವುದಿಲ್ಲ. ವಸ್ತುರಹಿತ ಸ್ಥಿತಿ ಆಗಿರುತ್ತದೆ. ಬರೀ ಶೂನ್ಯ ಅನುಭವಕ್ಕೆ ಬರುತ್ತದೆ. ಇದಕ್ಕೆ ಯೋಗ ಎನ್ನುವರು. ಚಿತ್ತ ವೃತ್ತ ನಿರೋಧವೇ ಯೋಗ. ಈಗ ಯಾವುದೇ ತೆರೆಯಿಲ್ಲ. ಈ ಸ್ಥಿತಿಗೆ ಪ್ರಶಾಂತ ಸ್ಥಿತಿ ಎನ್ನುವರು. ಮನಸ್ಸು ಆ ನಿರೋಧ ರೂಪ ತಾಳುತ್ತದೆ. ಮನುಷ್ಯ ಈ ಮನಸ್ಸಿನ ಸ್ವರೂಪ ಅರಿತರೆ, ಇದನ್ನು ಹೇಗೆ ಬಳಸಬೇಕು ಎಂಬ ಜ್ಞಾನ ಉಂಟಾಗುತ್ತದೆ. ಸರಿಯಾಗಿ ಬಳಸಿದರೆ ಜಯಶೀಲರಾಗುತ್ತೇವೆ. ಎಲ್ಲಾ ನೋಡಬೇಕು ಒಂದು ಮಾಡಬೇಕು. ಎಲ್ಲಾ ತಿಳಿದುಕೊಳ್ಳಬೇಕು ಒಂದನ್ನು ಅನುಭವಿಸಬೇಕು. ಎಲ್ಲಾ ತಿಳಿದುಕೊಂಡು ಒಂದನ್ನು ಮಾಡಿದರೆ ಬದುಕು ಶ್ರೀಮಂತವಾಗುತ್ತದೆ. ಮನುಷ್ಯನ ದುಃಖ ಸಂಕಟ ಕಡಿಮೆಯಾಗುತ್ತದೆ. ಅಲ್ಲವೇ?

-ಎಂ.ಪಿ. ಜ್ಞಾನೇಶ್, ಮಂಗಳೂರು

ಚಿತ್ರ ಕೃಪೆ: ಇಂಟರ್ನೇಟ್ ತಾಣ