ಮನಸ್ಸಿನ ಮನೆಗೆ ಮದ್ದು

ಮನಸ್ಸಿನ ಮನೆಗೆ ಮದ್ದು

"ಭಗವಂತನ ಅನುಸಂಧಾನದ ಮೂಲಕ ಸ್ಥಿರ ಪ್ರಜ್ಞೆ ಪಡೆದು ಸುಖ - ದುಃಖಗಳನ್ನು ಏಕರೂಪತೆಯ ದೃಷ್ಟಿಯಲ್ಲಿ ಸ್ವೀಕರಿಸಬೇಕು...!"

ನಮ್ಮ ಜೀವನದಲ್ಲಿ ಎದುರಾಗುವ ಯಾವುದೇ ಬಗೆಯ ಉತ್ತಮ ಘಟನೆಗಳಿಂದ ಸಂತೋಷಪಡಬೇಕಿಲ್ಲ. ಕೆಲವರು ತಮ್ಮ ಜೀವನದಿ ಘಟಿಸುವ ಉತ್ತಮ ಘಟನೆಗಳಿಂದ ಗರ್ವದಿಂದ ಮೆರೆಯಲು ಮುಂದಾಗುವರು. ಇಂತಹ ಹಾರಾಟವು ಅರ್ಥಶೂನ್ಯವಾಗಿರುವುದು. ಹಾಗೆಯೇ ನಮ್ಮ ಬದುಕಿನಲ್ಲಿ ಸಾಕಷ್ಟು ಬಾರಿ ಸರಿಯೆನಿಸದ ಘಟನೆಗಳು ನಡೆಯುವುದುಂಟು. ಇಂತಹ ಘಟನೆಗಳಿಂದ ನಮಗೆ ಮುಂದೆ ಒಳಿತಾಗುವ ಸಾಧ್ಯತೆ ಇರುವುದರಿಂದ ಅಶುಭ ಘಟನೆಗಳಿಂದ ವಿಚಲಿತಗೊಳ್ಳಬೇಕಿಲ್ಲ. ಇಂತಹ ಸಂದರ್ಭಗಳು ಸರ್ವರ ಬಾಳಿನಲ್ಲಿಯೂ ಅನುಭವಕ್ಕೆ ಬಂದಿರುತ್ತದೆ.

ನಮ್ಮ ಜೀವನದಲ್ಲಿ ಎದುರಾಗುವ ಅಹಿತಕರವಾದ ವಾತಾವರಣಗಳು ನಮಗೆ ಸಾಕಷ್ಟು ಜ್ಞಾನವನ್ನು ತಂದುಕೊಡುತ್ತದೆ. ಅಂದರೆ ನಗುವಿಗಿಂತಲೂ ಅಳು ಹೆಚ್ಚಾಗಿ ನಮಗೆ ಜೀವನ ಪಾಠವನ್ನು ತಿಳಿಸಿಕೊಡುತ್ತದೆ. ಇಲ್ಲಿ ಆರಂಭದಲ್ಲಿ ಅಳು ನಮಗೆ ವೈರಾಗ್ಯ ಭಾವನೆಯನ್ನು ತಂದಿಟ್ಟರೂ ಮುಂದೆ ನಿಧಾನವಾಗಿ ಅದರಿಂದಲೇ ನಮ್ಮ ನಾನಾ ಸಮಸ್ಯೆಗಳಿಗೆ ಪರಿಹಾರ ದೊರಕಬಲ್ಲದು. ಹಾಗಾಗಿ ನಗು ಬಂದಾಗ ಅತಿಯಾಗಿ ಅನುಭವಿಸಲು ಹಾಗೂ ಅಳು ಬಂದಾಗ ಅತಿಯಾಗಿ ವೈರಾಗ್ಯದ ಕಡೆಗೂ ಹೋಗಬಾರದು. ನಗು ಮತ್ತು ಅಳುವನ್ನು ಏಕರೂಪದೃಷ್ಟಿಯಿಂದ ಸ್ವೀಕರಿಸಬೇಕು. ನಾವು ಭಗವಂತನ ಅನುಸಂಧಾನದ ಮೂಲಕ ಹೋದಾಗ ಭಗವಂತನು ನೀಡುವ ಯಾವುದೇ ರೂಪದ ಫಲಗಳನ್ನು ಅನುಭವಿಸುತ್ತೇನೆಂಬ ಸ್ಥಿತಪ್ರಜ್ಞೆ ಹುಟ್ಟಿಕೊಳ್ಳುತ್ತದೆ. ಇದರಿಂದ ನಮಗೆ ಯಾವುದೇ ಮಾನಸಿಕ ಗೊಂದಲ ಬರುವುದಿಲ್ಲ. ನಮ್ಮ ಬದುಕಿನಲ್ಲಿ ಏನೇನು ಘಟಿಸಬೇಕೆಂಬುವುದನ್ನು ಆ ಭಗವಂತನೇ ನಿರ್ಧರಿಸುವಾಗ ನಮ್ಮ ಕರ್ಮಫಲಗಳ ಮೇಲೆ ಅತಿಯಾದ ಅವಲಂಬನೆ ಅಷ್ಟೊಂದು ಒಳ್ಳೆಯದಲ್ಲ. ತನ್ನ ಆತ್ಮದೊಳಗಿನ ಭಗವಂತನ ಪ್ರಜ್ಞೆ ಅರಿತವನು ಎಂದೆಂದಿಗೂ ತನ್ನ ಮನಸ್ಸನ್ನು ಸುಖ ಮತ್ತು ದುಃಖದ ಕಡೆಗಿಡದೆ ಭಗವಂತನ ಮೇಲಿಟ್ಟಿರುತ್ತಾನೆ. ಆತನಲ್ಲಿ ಭಗವಂತನು ನಮ್ಮನ್ನು ತಾಯಿಯು ತನ್ನ ಮಗುವನ್ನು ನೋಡಿಕೊಳ್ಳುವಂತೆ ನೋಡಿಕೊಳ್ಳುತ್ತಾನೆಂಬ ನಂಬಿಕೆ ಆವರಿಸಿರುತ್ತದೆ.

(ಆಧಾರ) -ರವೀಶ್ ಯೆಯ್ಯಾಡಿ,  ಮಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ