ಮನಸ್ಸಿನ ಮಾತುಗಳಿಗೆ ದನಿಯಾದ ತ್ರಿವೇಣಿ

ಮನಸ್ಸಿನ ಮಾತುಗಳಿಗೆ ದನಿಯಾದ ತ್ರಿವೇಣಿ

ತಿರುಮಲಾಂಬಾ, ತಿರುಮಲೆ ರಾಜಮ್ಮ, ತ್ರಿವೇಣಿ, ಸಾಯಿಸುತೆ, ಅನುಪಮಾ ನಿರಂಜನ, ಉಷಾ ನವರತ್ನರಾಮ್, ಪಂಕಜಾ ಮೊದಲಾದವರ ಕಾದಂಬರಿಗಳನ್ನೇ ಓದಿ ಬೆಳೆದ ಲಕ್ಷಾಂತರ ಮಂದಿ ಕನ್ನಡನಾಡಿನಲ್ಲಿದ್ದಾರೆ. ಇದರಲ್ಲಿ ಬಹುತೇಕ ಮಂದಿ ಮಹಿಳೆಯರು ಎನ್ನುವುದು ಉಲ್ಲೇಖನೀಯ. ಜನರ ಮನಸ್ಸಿನ ಭಾವನೆಗಳನ್ನು ಸುಂದರ ಅಕ್ಷರದಲ್ಲಿ ಪೋಣಿಸಿ, ಸೊಗಸಾದ ಕಥೆಯನ್ನು ಹೆಣೆದು ಓದುಗರಿಗೆ ಉಣಬಡಿಸಿದ ಖ್ಯಾತಿ ತ್ರಿವೇಣಿಯವರದ್ದು. ತ್ರಿವೇಣಿಯವರ ಕಾದಂಬರಿಗಳೆಂದರೆ ಮಹಿಳೆಯರಿಗೆ ಪಂಚ ಪ್ರಾಣವಾಗಿದ್ದ ಕಾಲವೊಂದಿತ್ತು. ಆಧುನಿಕತೆಯ ಭರಾಟೆಯಲ್ಲಿ ನಾವು ಈಗ ಪುಸ್ತಕಗಳನ್ನು ಓದುವುದನ್ನೇ ಕಮ್ಮಿ ಮಾಡಿದ್ದೇವೆ. ಆದರೆ ೫೦-೯೦ರ ದಶಕದಲ್ಲೆಲ್ಲಾ ಕಾದಂಬರಿಗಳನ್ನು ಓದುವುದೇ ಸ್ವರ್ಗ ಸುಖ, ಓದದವನೇ ಮಹಾ ಮೂರ್ಖ ಎಂಬ ಭಾವನೆಯಿತ್ತು. 

ತ್ರಿವೇಣಿಯವರು ಹುಟ್ಟಿದ್ದು ಸೆಪ್ಟೆಂಬರ್ ೧, ೧೯೨೮ರಂದು. ಇವರ ಹುಟ್ಟಿನ ಹೆಸರು ಭಾಗೀರಥಿ, ನಂತರ ಶಾಲೆಗೆ ಸೇರಿಸುವಾಗ ಅದು ಅನಸೂಯಾ ಆಯಿತು. ಶಂಕರ್ ಅವರನ್ನು ಮದುವೆಯಾದ ಬಳಿಕ ಅನಸೂಯಾ ಶಂಕರ್ ಆಗಿ ಬದಲಾಯಿತು. ಆದರೆ ಓದುಗರ ಮನದಲ್ಲಿ ಉಳಿದದ್ದು ತ್ರಿವೇಣಿ ಎಂಬ ಕಾವ್ಯನಾಮವೇ. ಇವರ ತಂದೆ ಪ್ರಸಿದ್ಧ ವಕೀಲರಾಗಿದ್ದ ಬಿ.ಎಮ್.ಕೃಷ್ಣಸ್ವಾಮಿ ಹಾಗೂ ತಾಯಿ ತಂಗಮ್ಮ. ಅಂದಿನ ಸಮಯದಲ್ಲಿ ಹೆಣ್ಣು ಮಗು ಶಾಲೆಯ ಮೆಟ್ಟಲು ಹತ್ತುವುದು ಬಹಳ ಕಷ್ಟಕರವಿತ್ತು, ಆದರೆ ತ್ರಿವೇಣಿಯವರ ತಂದೆಯವರಿಗೆ ತಮ್ಮ ಮಗಳು ಚೆನ್ನಾಗಿ ಕಲಿಯಬೇಕೆಂಬ ಆಸೆಯಿತ್ತು. ಅವರ ಪ್ರೋತ್ಸಾಹದಿಂದಲೇ ಮೈಸೂರಿನ ಮಹಾರಾಜಾ ಕಾಲೇಜಿನಲ್ಲಿ ಮನಃಶಾಸ್ತ್ರವನ್ನು ಐಚ್ಛಿಕ ವಿಷಯವನ್ನಾಗಿ ತೆಗೆದುಕೊಂಡು ಬಿಎ ಪದವಿಯನ್ನು ಪೂರ್ಣಗೊಳಿಸಿದರು. ನಂತರ ಒಂದು ವರ್ಷ ಶಿಕ್ಷಕಿಯಾಗಿ ಮಂಡ್ಯ ಜಿಲ್ಲೆಯ ಶಾಲೆಯೊಂದರಲ್ಲಿ ಕೆಲಸ ಮಾಡಿದರು. ಆದರೆ ಅವರನ್ನು ಪದೇ ಪದೇ ಕಾಡುತ್ತಿದ್ದ ಅನಾರೋಗ್ಯ ಅವರ ಉದ್ಯೋಗದ ಆಸೆಯನ್ನು ಮೊಟಕುಗೊಳಿಸಿತು. 

ಕಾಲೇಜಿನಲ್ಲಿ ಕಲಿಯುವಾಗ ಸಹಪಾಠಿಯಾಗಿದ್ದ ಶಂಕರ್ ಅವರನ್ನೇ ಮದುವೆಯಾದರು ತ್ರಿವೇಣಿ. ಬಾಲ್ಯದಿಂದಲೂ ತ್ರಿವೇಣಿಯವರಿಗೆ ಅಸ್ತಮಾ ಕಾಯಿಲೆಯ ಸಮಸ್ಯೆ ಇತ್ತು. ಬಾಲ್ಯದಿಂದಲೂ ಈ ತೊಂದರೆಯೊಂದಿಗೇ ಬೆಳೆದ ಇವರು ಶಾಲಾ ದಿನಗಳಲ್ಲಿ ಯಾವುದೇ ಆಟೋಟ ಸ್ಪರ್ಧೆಗಳಲ್ಲಿ ಭಾಗವಹಿಸಲು ಆಗುತ್ತಿರಲಿಲ್ಲ. ಚಳಿಗಾಲದ ರಾತ್ರಿಗಳಲ್ಲಿ ಕಾಡುವ ಉಬ್ಬಸದ ಸಮಸ್ಯೆ ಇವರನ್ನು ಅಂತರ್ಮುಖಿಯಾಗುವಂತೆ ಮಾಡಿತು. ಈ ಕಾರಣದಿಂದ ಅವರ ಮನಸ್ಸು ಪುಸ್ತಕಗಳತ್ತ ವಾಲಿತು. ತಮ್ಮ ಮನಸ್ಸಿನ ದುಗುಡ ಕಳೆಯಲು ಪುಸ್ತಕಗಳನ್ನು ಓದ ತೊಡಗಿದರು. 

ಸಾಹಿತ್ಯದ ಸಾಂಗತ್ಯ ಇವರಿಗೆ ಬಾಲ್ಯದಿಂದಲೇ ಇತ್ತು. ಖ್ಯಾತ ಸಾಹಿತಿ ಬಿ.ಎಂ.ಶ್ರೀಕಂಠಯ್ಯ ಅವರು ತ್ರಿವೇಣಿಯವರ ದೊಡ್ಡಪ್ಪನಾಗಿದ್ದರು. ಸಾಹಿತಿಗಳಾದ ವಾಣಿ, ಬಿ.ಸಿ.ರಾಮಚಂದ್ರ, ರಾಜಲಕ್ಷ್ಮಿ ರಾವ್ ಇವರೆಲ್ಲಾ ತ್ರಿವೇಣಿಯವರಿಗೆ ಸಂಬಂಧಿಗಳೇ. ಇವರ ಪುಸ್ತಕಗಳು, ವಿಮರ್ಶೆ, ಸಾಹಿತ್ಯ ವ್ಯಾಖ್ಯಾನಗಳನ್ನು ಕೇಳುತ್ತಾ, ಓದುತ್ತಾ ತ್ರಿವೇಣಿ ಬೆಳೆದಿದ್ದರು. 

ಹಿಂದಿನ ಕಾಲದಲ್ಲೆಲ್ಲಾ ಹೆಸರಿನ ಹಿಂದೆ ಓಡುವವರ ಸಂಖ್ಯೆ ಕಮ್ಮಿ ಇತ್ತು. ಬಹುತೇಕ ಖ್ಯಾತನಾಮರು ಕಾವ್ಯನಾಮದಲ್ಲೇ ಬರೆದು ತಮ್ಮ ಸಾಹಿತ್ಯ ಕೃಷಿ ಮಾಡಿದರು. ಅದರಂತೆ ಅನಸೂಯಾ ಶಂಕರ್ ‘ತ್ರಿವೇಣಿ' ಆದ ಬಗ್ಗೆ ಒಂದು ಪುಟ್ಟ ಹಿನ್ನಲೆ ಇದೆ. ‘ಮಹಾತ್ಮ ಗಾಂಧೀಜಿಯವರ ಅಸ್ಥಿಗಳನ್ನು ತ್ರಿವೇಣಿ ಸಂಗಮದಲ್ಲಿ ವಿಸರ್ಜಿಸಲಾಯಿತು’ ಎಂಬ ಪತ್ರಿಕೆಯಲ್ಲಿ ಮುದ್ರಿತವಾದ ಸಾಲುಗಳನ್ನು ಓದಿದಾಗ ಅನಸೂಯಾ ಅವರಿಗೆ ತ್ರಿವೇಣಿ ಎಂಬ ಪದ ಆಕರ್ಷಿಸಿತಂತೆ. ನಂತರ ತ್ರಿವೇಣಿ ಎಂಬ ಹೆಸರೇ ಇವರಿಗೆ ಪಕ್ಕಾ ಆಯಿತು. ತ್ರಿವೇಣಿ ಎಂಬ ಹೆಸರು ಎಷ್ಟು ಪ್ರಖ್ಯಾತವಾಯಿತೆಂದರೆ ಬಹುತೇಕರು ಈಗಲೂ ಅದೇ ಅವರ ನೈಜವಾದ ಹೆಸರು ಇರಬೇಕು ಎಂದು ತಿಳಿದುಕೊಂಡಿದ್ದಾರೆ. 

ತ್ರಿವೇಣಿಯವರು ಪ್ರಾರಂಭದಲ್ಲಿ ಸಣ್ಣ ಕಥೆಗಳನ್ನು ಬರೆದರು. ಆದರೆ ತಾವು ಬರೆದುದನ್ನು ಯಾರಿಗೂ ತೋರಿಸಲು ಹಿಂಜರಿಕೆಯಾಗುತ್ತಿತ್ತು. ಅನಿರೀಕ್ಷಿತವಾಗಿ ಈ ಕಥೆಗಳು ಅವರ ತಾಯಿಯ ಕಣ್ಣಿಗೆ ಬಿದ್ದುವು. ಅವರಿಗೆ ಈ ಕಥೆಗಳು ಬಹಳ ಮೆಚ್ಚುಗೆಯಾದವು. ನಂತರ ತಾಯಿಯ ಪ್ರೋತ್ಸಾಹದಿಂದ ಹಲವಾರು ಸಣ್ಣ ಕಥೆಗಳನ್ನು ಬರೆದು ಪತ್ರಿಕೆಗಳಿಗೆ ಕಳುಹಿಸಿದರು. ಅವುಗಳು ಪ್ರಕಟವಾಗಿ ಓದುಗರ ಮೆಚ್ಚುಗೆಗೂ ಪಾತ್ರವಾದುವು. ಆ ಸಮಯದಲ್ಲಿ ಕಾದಂಬರಿಯ ಪ್ರಕಾರವನ್ನು ಎಲ್ಲರೂ ಇಷ್ಟ ಪಡುತ್ತಿದ್ದರು, ಅದಕ್ಕಾಗಿ ತ್ರಿವೇಣಿಯವರು ‘ಅಪಸ್ವರ' ಎಂಬ ಕಾದಂಬರಿಯನ್ನು ಬರೆದರು. ಆದರೆ ತ್ರಿವೇಣಿಯವರ ದುರಾದೃಷ್ಣ. ಈ ಕಾದಂಬರಿಯನ್ನು ಪ್ರಕಟಿಸಲು ಯಾರೂ ಮುಂದೆ ಬರಲಿಲ್ಲ. ಬಹು ಸಮಯದವರೆಗೆ ಈ ಕಾದಂಬರಿಯು ಹಸ್ತಪ್ರತಿಯಾಗಿಯೇ ಉಳಿದು ಬಿಟ್ಟಿತು. ಆದರೆ ಕನ್ನಡ ಸಾಹಿತ್ಯ ಪ್ರೇಮಿಗಳ ಸೌಭಾಗ್ಯದ ದಿನ ಬಂದೇ ಬಿಟ್ಟಿತು. ಮಿತ ದರದಲ್ಲಿ ಕಾದಂಬರಿಯನ್ನು ಮುದ್ರಿಸುವ ವಾಹಿನಿ ಪ್ರಕಾಶನದವರು ತ್ರಿವೇಣಿಯವರ ಕಾದಂಬರಿಯನ್ನು ಪ್ರಕಟಿಸಲು ಮುಂದೆ ಬಂದರು. ಮೊದಲು ಬರೆದದ್ದು ‘ಅಪಸ್ವರ’ ವೇ ಆದರೂ ಮುದ್ರಿತವಾಗಿ ಮಾರುಕಟ್ಟೆಗೆ ಬಂದ ಮೊದಲ ಕಾದಂಬರಿ ‘ಹೂವು ಹಣ್ಣು’. ಇದರ ಎಲ್ಲಾ ಪ್ರತಿಗಳು ಕೆಲವೇ ವಾರಗಳಲ್ಲಿ ಮುಗಿದುಹೋದವು. ನಂತರದ ದಿನಗಳಲ್ಲಿ ತ್ರಿವೇಣಿಯವರ ಕಾದಂಬರಿಗಳ ಜನಪ್ರಿಯತೆ ಅಧಿಕವಾಗತೊಡಗಿತು. ಪ್ರಕಾಶಕರು ಸ್ವತಃ ಅವರ ಮನೆ ಬಾಗಿಲಿಗೆ ಬರಲಾರಂಭಿಸಿದರು. ‘ಬೆಕ್ಕಿನ ಕಣ್ಣು’ ಇವರ ನಾಲ್ಕನೆಯ ಕಾದಂಬರಿ. ಇದರ ಜೊತೆಗೆ ಸ್ವಲ್ಪ ಸಣ್ಣ ಕಥೆಗಳನ್ನೂ ಬರೆದರು. ವಿಮರ್ಶಕರ ಮೆಚ್ಚುಗೆ ಹಾಗೂ ಕೆಲವು ಪ್ರಶಸ್ತಿಗಳೂ ತ್ರಿವೇಣಿಯವರಿಗೆ ಲಭಿಸಿದವು. 

ತ್ರಿವೇಣಿಯವರು ಮೊದಮೊದಲು ಯಾವುದೇ ಸಭೆ ಸಮಾರಂಭದಲ್ಲಿ ಭಾಗವಹಿಸಲು ಹಿಂಜರಿಯುತ್ತಿದ್ದರು. ಕ್ರಮೇಣ ಅವರ ಖ್ಯಾತಿಯು ಹೆಚ್ಚಿದಂತೆಲ್ಲಾ ಅವರು ಅನಿವಾರ್ಯವಾಗಿ ಸಮಾರಂಭಗಳಲ್ಲಿ ಭಾಗವಹಿಸಬೇಕಾಯಿತು. ತಮ್ಮ ಕಾದಂಬರಿಗಳ ಬಗ್ಗೆ ವಿಚಾರ ವಿಮರ್ಶೆ ಮಾಡಬೇಕಾಯಿತು. 

ತ್ರಿವೇಣಿಯವರ ಪತಿ ಶಂಕರ್ ಅವರು ಇವರ ಸಾಹಿತ್ಯ ಸೇವೆಗೆ ಸದಾ ಕಾಲ ಬೆಂಬಲ ನೀಡುತ್ತಿದ್ದರು. ಅವರ ವೈವಾಹಿಕ ಜೀವನವೂ ಸಂತಸದಾಯಕವಾಗಿತ್ತು. ಆದರೆ ಕೊರತೆಯಿದ್ದದ್ದು ಮಕ್ಕಳದ್ದೇ. ತಂದೆ ತಾಯಿಯಂತೇಯೇ ಅತ್ತೆ ಮಾವನವರೂ ತ್ರಿವೇಣಿಯವರನ್ನು ಅಪಾರವಾಗಿ ಪ್ರೀತಿಸುತ್ತಿದ್ದರು. ತ್ರಿವೇಣಿಯವರ ಆಗಾಗ ಕಾಡುವ ಅನಾರೋಗ್ಯವನ್ನು ಗಮನಿಸಿ ಅವರು ಹಾಗೂ ಶಂಕರ್ ತಮಗೆ ಮಕ್ಕಳು ಬೇಡವೆಂದೇ ಒಂದು ಘಟ್ಟದಲ್ಲಿ ನಿರ್ಣಯಿಸಿದ್ದರು. ಆದರೆ ಆದರೆ ಸಮಯ ಕಳೆದಂತೆ ತ್ರಿವೇಣಿಯವರಲ್ಲಿ ಮಕ್ಕಳ ಹಂಬಲ ಹೆಚ್ಚಾಗುತ್ತಾ ಹೋದ ಕಾರಣದಿಂದ ಅವರು ಮಗುವನ್ನು ಪಡೆಯಲು ಬಯಸಿದರು. ಆದರೆ ದುರಾದೃಷ್ಟ ನೋಡಿ. ಮೊದಲ ಮಗು ಹುಟ್ಟುವಾಗಲೇ ನಿರ್ಜೀವವಾಗಿತ್ತು. ಎರಡನೇ ಹಾಗೂ ಮೂರನೇ ಮಕ್ಕಳ ಕತೆಯೂ ಅದೇ ಆಯಿತು. ತ್ರಿವೇಣಿಯವರು ಮಾನಸಿಕವಾಗಿಯೂ, ದೈಹಿಕವಾಗಿಯೂ ಜರ್ಜರಿತರಾದರು. ಇನ್ನು ಮಕ್ಕಳಾದರೆ ಇವರ ಜೀವಕ್ಕೇ ಅಪಾಯವಿದೆ ಎಂದು ವೈದ್ಯರೂ ಹೇಳಿದರು. ಆದರೂ ತಾಯ್ತನದ ಹಂಬಲದಿಂದ ನಾಲ್ಕನೇ ಸಲ ಮತ್ತೆ ಗರ್ಭಿಣಿಯಾಗುವಾಗ ಅವರಿಗೆ ೩೫ ವರ್ಷ. ಆಗಲೇ ಮದುವೆಯಾಗಿ ೧೩ ವರ್ಷಗಳಾಗಿದ್ದವು. ಸಿಸರಿಯನ್ ಮೂಲಕ ಹೆರಿಗೆ ಮಾಡಿಸಬೇಕಾಯಿತು. ಈ ಕಾರಣದಿಂದ ಮೊದಲೇ ಬಲಹೀನವಾಗಿದ್ದ ದೇಹ ಇನ್ನಷ್ಟು ಜರ್ಜರಿತವಾಯಿತು. ಹೆಣ್ಣು ಮಗು ಹುಟ್ಟಿತಾದರೂ ತ್ರಿವೇಣಿಯವರು ಮಗುವನ್ನು ನೋಡಿ, ಆನಂದಿಸಲು ಹೆಚ್ಚು ದಿನ ಬದುಕಿ ಉಳಿಯಲಿಲ್ಲ. ಮಗು ಹುಟ್ಟಿ ಒಂಬತ್ತು ದಿನಗಳ ನಂತರ ಅಂದರೆ ಜುಲೈ ೨೯, ೧೯೬೩ರಲ್ಲಿ ಕನ್ನಡ ಸಾಹಿತ್ಯ ಲೋಕವನ್ನು ಬಿಟ್ಟು ಮತ್ತೆ ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿಯೇ ಬಿಟ್ಟರು. ತ್ರಿವೇಣಿಯವರ ಸಾವಿನ ನಂತರ ಅವರ ಮೊದಲ ಕಾದಂಬರಿ ‘ಅಪಸ್ವರ' ಇದರ ಕಥಾನಾಯಕಿ ಮೀರಾ ಅವಳ ಹೆಸರನ್ನೇ ಇವರ ಮಗಳಿಗೆ ಇಡಲಾಯಿತು.  

ತ್ರಿವೇಣಿಯವರು ಬದುಕಿದ್ದು ಕೇವಲ ೩೫ ವರ್ಷ. ಆದರೆ ಇಂದು ಸುಮಾರು ೬ ದಶಕಗಳ ಬಳಿಕವೂ ತ್ರಿವೇಣಿಯವರು ನಮ್ಮ ನಡುವೆ ಅವರ ಕಾದಂಬರಿಗಳ ಮೂಲಕ ಜೀವಂತವಾಗಿದ್ದಾರೆ. ಇವರ ತಂಗಿ ಹಾಗೂ ಖ್ಯಾತ ಬರಹಗಾರ್ತಿ ಆರ್ಯಾಂಬಾ ಪಟ್ಟಾಭಿ ಇವರು ತ್ರಿವೇಣಿ ಬಗ್ಗೆ ಹೇಳುವುದು ಹೀಗೆ “ ನನ್ನ ಅಕ್ಕನಿಗೆ ಬದುಕಿನಲ್ಲಿ ಮೂರು ಆಸೆಗಳಿದ್ದುವು. ಒಂದು ಪುಟ್ಟ ಸ್ವಂತ ಮನೆಯನ್ನು ಕಟ್ಟಿಕೊಳ್ಳುವುದು, ಎರಡನೆಯದ್ದು ವಿದೇಶ ಪ್ರವಾಸ ಮಾಡಿ ಅಲ್ಲಿಯ ಅನುಭವವನ್ನು ಬರೆಯುವುದು ಹಾಗೂ ಮೂರನೆಯದ್ದು ತನ್ನ ಒಂದಾದರೂ ಕಾದಂಬರಿ ಚಲನ ಚಿತ್ರವಾಗಬೇಕು.” ದುರಂತವೆಂದರೆ ತ್ರಿವೇಣಿಯವರು ಜೀವಂತವಿದ್ದಾಗ ಅವರ ಮೂರೂ ಆಸೆಗಳು ಈಡೇರಲಿಲ್ಲ. ಆದರೆ ಅವರ ನಿಧನದ ನಂತರ ಅವರ ಒಂದಲ್ಲ, ಐದು ಕಾದಂಬರಿಗಳು ಚಲನಚಿತ್ರವಾಗಿ ಅಪಾರ ಯಶಸ್ಸು ಪಡೆದುಕೊಂಡವು. ಅವರ ಕಾದಂಬರಿಗಳಾದ ಬೆಳ್ಳಿ ಮೊಡ, ಹಣ್ಣೆಲೆ ಚಿಗುರಿದಾಗ, ಶರಪಂಜರ ಹಾಗೂ ಕಂಕಣ ಕನ್ನಡದಲ್ಲೂ, ಬೆಕ್ಕಿನ ಕಣ್ಣು ತೆಲುಗು ಹಾಗೂ ಮಲಯಾಳಂ ಭಾಷೆಯಲ್ಲಿ ಚಲನಚಿತ್ರವಾಗಿ ಅಪಾರ ಯಶಸ್ಸು ಗಳಿಸಿತು. 

ತ್ರಿವೇಣಿಯವರು ತಮ್ಮ ಕಾದಂಬರಿಗಳಲ್ಲಿ ಮನಃಶಾಸ್ತ್ರದ ಬಗ್ಗೆ ಅಪಾರವಾದ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಅವರು ತಾವು ಕಲಿತ ಮನಃಶಾಸ್ತ್ರವನ್ನು ಬಹಳ ಸೊಗಸಾಗಿ ತಮ್ಮ ಕಾದಂಬರಿಯ ಪಾತ್ರಗಳಲ್ಲಿ ಬಳಸಿಕೊಂಡಿದ್ದಾರೆ. ಮಾನಸಿಕ ಹಿಂಸೆಯಿಂದ ಏನೆಲ್ಲಾ ಆಗುತ್ತದೆ ಎನ್ನುವುದನ್ನು ಶರಪಂಜರದಲ್ಲಿ ಬಹಳ ಚೆನ್ನಾಗಿ ಹೇಳಿದ್ದಾರೆ. ಚಲನ ಚಿತ್ರವಾದ ಬಳಿಕ ಇದು ಬಹಳ ಖ್ಯಾತಿಯನ್ನು ಪಡೆಯಿತು. ನಟಿ ಕಲ್ಪನಾ ಅವರು ಮಾನಸಿಕ ರೋಗಿಯ ಪಾತ್ರದಲ್ಲಿ ಬಹಳ ಮನೋಜ್ಞವಾದ ನಟನೆ ಮಾಡಿದ್ದರು. ತ್ರಿವೇಣಿಯವರ ಬಹುತೇಕ ಕಾದಂಬರಿಗಳು ಸ್ತ್ರೀಯ ಸ್ಥಾನಮಾನ, ಸಮಾಜದಲ್ಲಿ ಹಾಗೂ ಮನೆಯಲ್ಲಿ ಅವಳ ಕರ್ತವ್ಯ, ಮಾನಸಿಕ ತೊಳಲಾಟಗಳು ಎಲ್ಲವನ್ನೂ ತೋರಿಸುತ್ತವೆ. 

ಕೀಲುಗೊಂಬೆ, ಹೃದಯ ಗೀತೆ, ಬಾಳು ಬೆಳಗಿತು, ಅವಳ ಮನೆ, ಕಾಶೀ ಯಾತ್ರೆ ಮೊದಲಾದ ಕಾದಂಬರಿಗಳನ್ನು ರಚಿಸಿದ್ದಾರೆ. ಎರಡು ಮನಸ್ಸು ಹಾಗೂ ಸಮಸ್ಯೆಯ ಮಗು ಇವರ ಕಥಾ ಸಂಕಲನಗಳು. ತ್ರಿವೇಣಿಯವರಿಗೆ ರಾಜ್ಯ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ದೊರೆತಿದೆ. ಇವರ ಶರಪಂಜರ ಕಾದಂಬರಿ ‘The Mad Woman’ ಎಂಬ ಹೆಸರಿನಲ್ಲಿ ಇಂಗ್ಲಿಷ್ ಭಾಷೆಗೆ ಅನುವಾದಗೊಂಡಿದೆ. ತ್ರಿವೇಣಿಯವರು ತಾವು ಬದುಕಿದ್ದ ಅಲ್ಪ ಕಾಲದಲ್ಲೇ ೨೦ ಕಾದಂಬರಿಗಳನ್ನು ಬರೆದಿದ್ದಾರೆ. ಅವರ ೨೧ನೆಯ ಕಾದಂಬರಿ ‘ಅವಳ ಮಗಳು' ಅರ್ಧ ಮುಗಿದಾಗ ತ್ರಿವೇಣಿಯವರ ಬಾಳಿನ ಪಯಣ ಮುಗಿದಿತ್ತು. ಅದನ್ನು ನಂತರದ ದಿನಗಳಲ್ಲಿ ಸಾಹಿತಿ ಎಂ.ಸಿ.ಪದ್ಮಾ ಅವರು ಪೂರ್ಣಗೊಳಿಸಿದರು. 

ಸುಮಾರು ೬೦-೭೦ ವರ್ಷಗಳ ಹಿಂದೆ ಮಹಿಳೆಯೊಬ್ಬಳು ಮನೋ ವೈಜ್ಞಾನಿಕ ಕಾದಂಬರಿಗಳನ್ನು ಬರೆಯುವುದನ್ನು ಕಲ್ಪಿಸಲೂ ಅಸಾಧ್ಯವಾಗಿತ್ತು. ಆದರೆ ತ್ರಿವೇಣಿಯವರು ಹೆಣ್ಣೊಬ್ಬಳ ಮಾನಸಿಕ ತೊಳಲಾಟವನ್ನು ಬಹಳ ಮನೋಜ್ಞವಾಗಿ ತಮ್ಮ ಕಾದಂಬರಿಗಳಲ್ಲಿ ಚಿತ್ರಿಸಿದ್ದು, ಈಗಲೂ ಜನ ಮಾನಸದಲ್ಲಿ ಅಮರವಾಗಿದೆ. ತಮ್ಮ ಕಾದಂಬರಿಗಳ ಮೂಲಕ ತ್ರಿವೇಣಿ ಇನ್ನೂ ಜೀವಂತವಾಗಿದ್ದಾರೆ. 

ಚಿತ್ರ ಕೃಪೆ: ಅಂತರ್ಜಾಲ ತಾಣ