ಮನಸ್ಸಿನ ಲವಲವಿಕೆಗೆ ಧೂಪ ಹಾಕಿ !

ಮನಸ್ಸಿನ ಲವಲವಿಕೆಗೆ ಧೂಪ ಹಾಕಿ !

ಬಹಳಷ್ಟು ಮನೆಗಳಲ್ಲಿ ಧೂಪವನ್ನು ಹಾಕುತ್ತಾರೆ. ಬಹುತೇಕ ಸಾಯಂಕಾಲದ ಹೊತ್ತಿಗೆ ಈ ಧೂಪವನ್ನು ಹಾಕಿದಾಗ ಅದರ ಸುಗಂಧ ಮನೆಯಲ್ಲೆಲ್ಲಾ ಪಸರಿಸಿ ಆಹ್ಲಾದಕರ ವಾತಾವರಣದ ನಿರ್ಮಾಣವಾಗುತ್ತದೆ. ಈ ಧೂಪದ ಪರಿಮಳವು ನಮ್ಮ ಮನಸ್ಸಿಗೆ ಹಾಗೂ ದೇಹಕ್ಕೆ ಒಂದು ರೀತಿಯ ಲವಲವಿಕೆಯನ್ನು ತರುತ್ತದೆ. ಧೂಪ ಹಾಕುವುದು ಕೇವಲ ದೇವರ ಪೂಜೆಗಾಗಿ ಮಾತ್ರ ಎಂದು ಬಹಳಷ್ಟು ಮಂದಿ ಅಂದುಕೊಂಡಿದ್ದಾರೆ. ದೈವಿಕ ಹಿನ್ನಲೆ ಇರುವ ಆಚರಣೆ ಎಂದು ತುಂಬಾ ಮಂದಿಯ ನಂಬಿಕೆ. ಒಂದು ರೀತಿಯಲ್ಲಿ ಇದು ಸತ್ಯವಾದರೂ ಧೂಪವನ್ನು ಹಾಕುವುದಕ್ಕೆ ವೈಜ್ಞಾನಿಕ ಕಾರಣಗಳೂ ಇವೆ. ಧೂಪದ ಕಾರಣದಿಂದ ನಕಾರಾತ್ಮಕ ಅಂಶಗಳು ನಮ್ಮ ಮನಸ್ಸಿನಿಂದ ತೊಲಗಿ ಸಕಾರಾತ್ಮಕ ಮನೋಭಾವ ಮನೆಮಾಡುತ್ತದೆ. ಮನೆಯಲ್ಲಿ ಶಾಂತಿ ಮತ್ತು ನೆಮ್ಮದಿಯ ವಾತಾವರಣ ಮೂಡುತ್ತದೆ. 

ಹಲವಾರು ಬಗೆಯ ಧೂಪಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ವಿವಿಧ ಧೂಪಗಳ ಪ್ರಯೋಜನಗಳು ಹೀಗಿವೆ…

ಬೇವಿನ ಎಲೆಗಳ ಧೂಪ: ಬೇವಿನ ಎಲೆಗಳ ಧೂಪ ಹಾಕುವುದು ಒಂದು ಪುರಾತನ ಕ್ರಮ. ಬೇವಿನ ಎಲೆಗಳು ತಮ್ಮ ಆಂಟಿ ಬ್ಯಾಕ್ಟೀರಿಯಲ್ ಮತ್ತು ಆಂಟಿ ವೈರಲ್ ಗುಣಗಳಿಂದಾಗಿ ಬಹಳ ಆರೋಗ್ಯಕಾರಕವೆಂದು ಹೆಸರುವಾಸಿಯಾಗಿದೆ. ಈ ಎಲೆಗಳ ಧೂಪ ಹಾಕುವುದರಿಂದ ಅದು ಬ್ಯಾಕ್ಟೀರಿಯಾದ ನಾಶ ಮಾಡುತ್ತದೆ. ಮನೆಯಲ್ಲಿರುವ ಆರೋಗ್ಯ ಸಮಸ್ಯೆಗಳು ಕಡಿಮೆಯಾಗುತ್ತದೆ. ಬೇವಿನ ಸೊಪ್ಪಿನ ಹೊಗೆಯು ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ. ಮನಸ್ಸಿಗೆ ನೆಮ್ಮದಿ ಮತ್ತು ಆರಾಮ ನೀಡುತ್ತದೆ. ಬೇವಿಗೆ ಋಣಾತ್ಮಕ ಅಂಶಗಳನ್ನು ಹೀರಿಕೊಳ್ಳುವ ಪ್ರಾಕೃತಿಕ ಗುಣಗಳಿರುವುದರಿಂದ ಅದು ಮನೆಯೊಳಗಿರುವ ನಕಾರಾತ್ಮಕ ವಾತಾವರಣವನ್ನು ತೆಗೆದುಹಾಕಿ ಸಂತೋಷದ ವಾತಾವರಣವನ್ನು ಸೃಷ್ಟಿಸುತ್ತದೆ.

ಸುಗಂಧ ದ್ರವ್ಯಗಳ ಧೂಪ: ಈ ಧೂಪವನ್ನು ಬಹುತೇಕರು ತಮ್ಮ ಮನೆಗಳಲ್ಲಿ ಪೂಜೆಯ ಸಮಯದಲ್ಲಿ ಬಳಸುತ್ತಾರೆ. ಇದಕ್ಕೆ ಲೋಬಾನದ ಹೊಗೆ ಅಂತಲೂ ಕರೆಯುತ್ತಾರೆ. ಇದು ಸುಗಂಧಿತವಾಗಿದ್ದು, ಇದರ ಧೂಪವನ್ನು ಹಾಕುವುದರಿಂದ ಮನೆಯೊಳಗೆ ದೈವಿಕವಾದ ವಾತಾವರಣ ನಿರ್ಮಾಣವಾಗುತ್ತದೆ. ಇದರಲ್ಲಿ ಶ್ರೀಗಂಧ, ಚಂದನ ಮೊದಲಾದುವುಗಳನ್ನು ಬಳಸುತ್ತಾರೆ. ಆಯುರ್ವೇದದ ಪ್ರಕಾರ ನಿಮಗೆ ಉಸಿರಾಟದ ತೊಂದರೆ ಇದ್ದರೆ ಹಸುವಿನ ಸಗಣಿಗೆ ಸ್ವಲ್ಪ ಲೋಬಾನ ಅಥವಾ ಶ್ರೀಗಂಧ ಮತ್ತು ತುಪ್ಪ ಸೇರಿಸಿ ಮನೆಯೊಳಗೆ ಹೊಗೆಯಾಡಿಸಬೇಕು. ಹೀಗೆ ಮಾಡುವುದರಿಂದ ಉಸಿರಾಟದ ಸಮಸ್ಯೆ ನಿವಾರಣೆಯಾಗಬಲ್ಲದು. ಮನಸ್ಸಿನಲ್ಲಿರುವ ನಕಾರಾತ್ಮಕ ಅಂಶಗಳು ಕಡಿಮೆಯಾಗುತ್ತವೆ.

ಲವಂಗ ಮತ್ತು ಕರ್ಪೂರದ ಧೂಪ: ಲವಂಗ ಮತ್ತು ಕರ್ಪೂರದ ಧೂಪ ಹಾಕುವುದು ಒಂದು ಹಳೆಯ ಕ್ರಮ. ಲವಂಗ ಬ್ಯಾಕ್ಟೀರಿಯಾ ನಿವಾರಕ ಅಂಶಗಳನ್ನು ಹೊಂದಿರುವುದರಿಂದ ಈ ರೀತಿಯ ಧೂಪ ಬಹಳ ಆರೋಗ್ಯಕಾರಿ. ಈ ಧೂಪದಿಂದ ಹೊರಹೊಮ್ಮುವ ಪರಿಮಳವು ಮಾನಸಿಕ ಶಾಂತಿಯನ್ನು ನೀಡುತ್ತದೆ. 

ದಾಲ್ಚಿನ್ನಿ ಧೂಪ: ದಾಲ್ಚಿನ್ನಿ ಎಲೆಗಳು ಅಥವಾ ಬೇ ಎಲೆಗಳು ಧೂಪಕ್ಕೆ ಬಳಸಿದಾಗ ಬಹಳ ಪರಿಮಳವನ್ನು ಸೂಸುತ್ತವೆ. ಈ ಧೂಪದಿಂದಲೂ ಮನಸ್ಸು ನಿರಾಳವಾಗುತ್ತದೆ ಮತ್ತು ಆರಾಮ ಸಿಗುತ್ತದೆ. ದಾಲ್ಚಿನ್ನಿ ಎಲೆಯ ಧೂಪವು ನಮ್ಮ ದೇಹದ ಉರಿಯೂತದ ಸಮಸ್ಯೆಯನ್ನು ನಿವಾರಣೆ ಮಾಡುವ ಶಕ್ತಿಯನ್ನು ಹೊಂದಿದೆ. ಈ ಧೂಪದಿಂದ ಆರೋಗ್ಯವೂ ಸುಧಾರಿಸುತ್ತದೆ.

ಸಂಜೆ ಹೊತ್ತು ಧೂಪ ಹಾಕುವುದರಿಂದ ಮಾನಸಿಕ ಒತ್ತಡ ಮತ್ತು ಖಿನ್ನತೆ ದೂರವಾಗುತ್ತದೆ. ದೇಹದ ಶುದ್ಧೀಕರಣವಾಗುತ್ತದೆ. ಬೇವಿನ ಎಲೆಗಳು, ಲವಂಗ ಮತ್ತು ಕರ್ಪೂರದಂತಹ ವಸ್ತುಗಳು ರಕ್ತದ ಪರಿಚಲನೆಯನ್ನು ಶುದ್ಧೀಕರಿಸುತ್ತದೆ. ಧೂಪ ಹಾಕುವುದರಿಂದ ಮನೆಯಲ್ಲಿರುವ ನಕಾರಾತ್ಮಕ ಅಂಶಗಳು ದೂರವಾಗುವುದರಿಂದ ಮನೆಯಲ್ಲಿ ಶಾಂತಿ ನೆಲೆಸುತ್ತದೆ.

(ಆಧಾರ)

ಚಿತ್ರ ಕೃಪೆ: ಅಂತರ್ಜಾಲ ತಾಣ