ಮನಸ್ಸುಗಳ ಅಂತರಂಗದ ಚಳವಳಿ ನಿಮ್ಮೊಂದಿಗೆ...

ಮನಸ್ಸುಗಳ ಅಂತರಂಗದ ಚಳವಳಿ ನಿಮ್ಮೊಂದಿಗೆ...

ಸುಮಾರು ನೂರು ವರುಷಗಳು ಉರುಳಿವೆ. ೭ ಮಿಲಿಯನ್ ನಾಗರಿಕರು, ೧೦ ಮಿಲಿಯನ್ ಸೈನಿಕರು ಸತ್ತು ಅಥವಾ ಕೊಲೆಯಾಗಿ ಮತ್ತು ೩೭ ಮಿಲಿಯನ್ ಜನರು ಗಾಯಾಳುಗಳಾಗಿ, ಅದೇ ಮೊದಲನೇ ಮಹಾಯುದ್ಧದ ಅಂತ್ಯ ಮತ್ತು ಎರಡನೇ ಮಹಾಯುದ್ಧದ ಅಡಿಗಲ್ಲು. ಬಹುಶಃ ಈಗಿನ ವಿಶ್ವ ಜನಸಂಖ್ಯೆಯ ಸುಮಾರು ಶೇಕಡಾ ೩೦% - ೩೫% ರಷ್ಟು ಇದ್ದ ದಿನಗಳಲ್ಲೇ ಇಷ್ಟೊಂದು ಸಾವು ನೋವುಗಳು, ಅತ್ಯಂತ ಭೀಕರ ಮತ್ತು ಮನುಷ್ಯ ಪ್ರಾಣಿಯ ಅಜ್ಞಾನಕ್ಕೆ ಉದಾಹರಣೆ.

ಇದು ನಡೆದು ಸುಮಾರು ೨೫ ವರ್ಷಗಳ ನಂತರ ಮತ್ತೊಂದು ಮಹಾಯುದ್ಧ ಆಗಿ ಇನ್ನೂ ಹೆಚ್ಚಿನ ಅನಾಹುತಗಳು ಸಂಭವಿಸಿದವು. ಹಿರೋಷಿಮಾ ಮತ್ತು ನಾಗಸಾಕಿಯ ಅಣುಬಾಂಬಿನ ಹತ್ಯೆಗಳು ಇದರಲ್ಲಿ ಸೇರಿದೆ. ಅಲ್ಲಿಂದ ಈ ಕ್ಷಣ ೨೦೨೧ ರ ನವೆಂಬರ್ ವರೆಗೆ ಮಹಾಯುದ್ಧ ನಡೆದಿಲ್ಲವಾದರೂ ಅದಕ್ಕಿಂತ ಹೆಚ್ಚಿನ ದ್ವಿರಾಷ್ಟ್ರ ಯುದ್ಧ ಮತ್ತು  ಭಯೋತ್ಪಾದನೆಯಿಂದ ಜನರು ಸಾಯುತ್ತಿದ್ದಾರೆ. ಭೂಕಂಪ ಸುನಾಮಿ ಜ್ವಾಲಾಮುಖಿ ಕಾಡ್ಗಿಚ್ಚು ಚಂಡಮಾರುತ ಮುಂತಾದ ನೈಸರ್ಗಿಕ ವಿಕೋಪದಿಂದ ಜೀವಿಗಳು ಸತ್ತರೆ ಅದು ಪ್ರಕೃತಿಯ ನಿರ್ಧಾರ. ಖಾಯಿಲೆ ಅಪಘಾತ ಆತ್ಮಹತ್ಯೆ ಮುಂತಾದ ಕಾರಣಗಳಿಂದ ಸತ್ತರೆ ಅದು ಆಕಸ್ಮಿಕ, ನಿರ್ಲಕ್ಷ್ಯ , ದುರಾದೃಷ್ಟ ಎನ್ನಬಹುದು.

ಆದರೆ ಈ ಯುದ್ಧ ಮತ್ತು ಭಯೋತ್ಪಾದನೆ ಇದೆಯಲ್ಲ ಇದು ಮನುಷ್ಯನ ಅಜ್ಞಾನ ದುರಾಸೆ ದುರಹಂಕಾರ ಮತ್ತು ರಾಕ್ಷಸೀ ಪ್ರವೃತ್ತಿಯ ಸ್ವಯಂಕೃತ ಅಪರಾಧ. ಜಾಗಕ್ಕಾಗಿಯೋ, ಧರ್ಮಕ್ಕಾಗಿಯೋ, ದ್ವೇಷಕ್ಕಾಗಿಯೋ, ಮಾಡುವ ಯುದ್ದಗಳು ಯಾವ ಕಾರಣಕ್ಕೂ ಸಮರ್ಥನೀಯವಲ್ಲ. ಭಯೋತ್ಪಾದನೆಯಂತೂ ಇನ್ನೂ ಅಸಹ್ಯ.

ಹಿಟ್ಲರ್, ಸದ್ದಾಂ ಹುಸೇನ್‌, ಬಿನ್ ಲಾಡೆನ್, ಇದಿ ಅಮೀನ್ ಮುಂತಾದವರ ಕ್ರೌರ್ಯ ಮತ್ತು ಅಜ್ಞಾನಕ್ಕೆ ಬಲಿಯಾದವರು ಕೋಟಿಗಳ ಲೆಕ್ಕದಲ್ಲಿದ್ದಾರೆ.

ಭಾರತ - ಪಾಕಿಸ್ತಾನ,

ಇರಾನ್ - ಇರಾಕ್,

ಅಮೆರಿಕ - ವಿಯೆಟ್ನಾಂ,

ಚೀನಾ - ಭಾರತ,

ಅಮೆರಿಕಾ - ಇರಾಕ್,

ಅಮೆರಿಕಾ - ಆಪ್ಘಾನಿಸ್ತಾನ,

ಆಫ್ರಿಕಾದ ದೇಶಗಳು, ಕೋರಿಯನ್ ಯುದ್ಧ , ಸಿರಿಯಾದ ಆಂತರಿಕ ಕಲಹ ಹೀಗೆ ಆಧುನಿಕ ಕಾಲದಲ್ಲಿ ಸಹ ಯುದ್ದಗಳು ನಿರಂತರವಾಗಿ ನಡೆಯುತ್ತಲೇ ಇದೆ. ಈಗಲೂ ಮೂರನೇ ಮಹಾಯುದ್ಧದ ಆ ಭಯ ಎಲ್ಲರನ್ನೂ ಕಾಡುತ್ತಲೇ ಇದೆ. ಶಸ್ತ್ರಾಸ್ತ್ರಗಳ ತಯಾರಿಕೆ ಮತ್ತು ಮಾರಾಟ ವಿಶ್ವದ ಬಹುದೊಡ್ಡ ವ್ಯಾಪಾರಗಳಲ್ಲಿ ಒಂದಾಗಿ ಮುನ್ನಡೆಯುತ್ತಿದೆ. ಜನ ಸಾಮಾನ್ಯರಾದ ನಮ್ಮ ಅಭಿಪ್ರಾಯ ‌ಈ ವಿಷಯದಲ್ಲಿ ಹೆಚ್ಚಿನ ಪ್ರಾಮುಖ್ಯತೆ ಪಡೆಯುವುದಿಲ್ಲ. ವಿಕೃತ ಮನಸ್ಸುಗಳ ಮತ್ತು ಶಸ್ತ್ರಾಸ್ತ್ರ ವ್ಯಾಪಾರಿಗಳ ಕಿರಾತಕ ಮನಸ್ಥಿತಿ ಮತ್ತು ಮಹತ್ವಾಕಾಂಕ್ಷೆಯೇ ಯುದ್ದದ ಮೂಲ ಕಾರಣ. ಆಂತರಿಕವಾಗಿ ನಾವು ಎಷ್ಟೇ ನಾಗರಿಕ ಪ್ರಜ್ಞೆ ಬೆಳೆಸಿಕೊಂಡರೂ ಒಂದೇ ಒಂದು ಮಹಾಯುದ್ಧ ಇಡೀ ವಿಶ್ವವನ್ನೇ ನಾಶಪಡಿಸುವುದು.

ಇತಿಹಾಸದಿಂದ ನಾವು ಕಲಿಯಬೇಕಾದ ಪಾಠ ಇನ್ನೂ ಸಾಕಷ್ಟಿದೆ. ಕೊರೋನಾ ನಂತರದ ಬದುಕು, ಪುನೀತ್ ರಾಜ್‍ಕುಮಾರ್ ಅನಿರೀಕ್ಷಿತ ಸಾವು, ಈ ಕ್ಷಣದ ಮಳೆಯೆಂಬ ಪ್ರಕೃತಿಯ ಮುನಿಸು, ಇದೆಲ್ಲದರ ಪರಿಣಾಮ ಆರ್ಥಿಕ ಕುಸಿತ ಬಹುತೇಕ ಸಾಮಾನ್ಯ ಜನರ ಜೀವನೋತ್ಸಾಹವನ್ನೇ ಕುಸಿಯುವಂತೆ ಮಾಡಿದೆ. ಇದು ವ್ಯಕ್ತಿಗತವಾಗಿರದೆ ಸಾಮೂಹಿಕ ಮನಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಹೊರಬರಲು ಮತ್ತೊಮ್ಮೆ ನಾವು ಬದುಕಿನ ಶೈಲಿಯ - ಆಡಳಿತ ವ್ಯವಸ್ಥೆಯ - ಮಾನಸಿಕ ದೃಷ್ಟಿಕೋನ ಎಲ್ಲವನ್ನೂ ಆತ್ಮ ವಿಮರ್ಶೆಗೆ ಒಳಪಡಿಸಬೇಕಾಗಿದೆ. ಆ ನಿಟ್ಟಿನಲ್ಲಿ ಮನಸ್ಸುಗಳ ಅಂತರಂಗದ ಚಳವಳಿ ನಿಮ್ಮೊಂದಿಗೆ...

-ವಿವೇಕಾನಂದ. ಹೆಚ್.ಕೆ., ಬೆಂಗಳೂರು 

ಚಿತ್ರ ಕೃಪೆ: ಇಂಟರ್ನೆಟ್ ತಾಣ