ಮನಸ್ಸು ಇಲ್ಲದ ಮಾರ್ಗ

ಮನಸ್ಸು ಇಲ್ಲದ ಮಾರ್ಗ

ಪುಸ್ತಕದ ಲೇಖಕ/ಕವಿಯ ಹೆಸರು
ಡಾ. ಮೀನಗುಂಡಿ ಸುಬ್ರಹ್ಮಣ್ಯಮ್
ಪ್ರಕಾಶಕರು
ನವಕರ್ನಾಟಕ ಪ್ರಕಾಶನ, ಬೆಂಗಳೂರು
ಪುಸ್ತಕದ ಬೆಲೆ
ರೂ. 300/-

ಈಗಾಗಲೇ 12 ಸಲ ಮುದ್ರಣವಾಗಿರುವ, ಪ್ರತಿಯೊಬ್ಬರೂ ಓದಿ ಅರ್ಥ ಮಾಡಿಕೊಳ್ಳಬೇಕಾದ ಪುಸ್ತಕ ಇದು - ಯಾಕೆ? ಎಂಬುದನ್ನು ಲೇಖಕರ ಮಾತಿನಲ್ಲೇ ಕೇಳೋಣ: “ಡಿಪ್ರೆಷನ್, ಇನ್‌ಪೀರಿಯಾರಿಟಿ ಕಾಂಪ್ಲೆಕ್ಸ್, ಆಂಕ್ಸೈಟಿ … ಮೊದಲಾದ ಅನುಭವಗಳಿಗೆ ಅಂಟಿಕೊಂಡು, ಸಂತೋಷ ಅನುಭವಿಸಬೇಕಾದ ಹರಯವನ್ನು ಸಂತೋಷವಿಲ್ಲದೆಯೇ ಕಳೆದ ನಂತರ, ಶಾಂತಿಯಾದರೂ ಸಿಕ್ಕೀತೇ ಎಂದು (ಹಿಂದಿನ ಬಾಗಿಲಿನಿಂದಲೋ? ಮುಖಕ್ಕೆ ಮುಸುಕು ಹಾಕಿಕೊಂಡೋ?) ಸೈಕಾಲಜಿಸ್ಟ್‌-ರನ್ನು ನೋಡುವ ಜನರೇ ಹೆಚ್ಚು ಇರುವ ಈ ಸಮಾಜದಲ್ಲಿ …. ಎಳೆ ಹರೆಯ ಇನ್ನೂ ಮಿಕ್ಕಿರುವಾಗ ಸಂಕೋಚವಿಲ್ಲದೆ ಸೈಕಾಲಜಿಯ ಶಿಬಿರಗಳಲ್ಲಿ ಭಾಗವಹಿಸಿ, ಜೀವನದ ಸುಖ ಪಡೆಯುವ ಸಾಮರ್ಥ್ಯ ಹೆಚ್ಚಿಸಿಕೊಂಡ ಭಾಗ್ಯವಂತರು …. ನನಗೆ ಖುಷಿ ಕೊಡುತ್ತಾರೆ.” ಅಂತಹ ಭಾಗ್ಯವಂತರಾಗಲು ಈ ಪುಸ್ತಕದ ಓದು ಮತ್ತು ಮರುಓದು ಖಂಡಿತ ಸಹಾಯ ಮಾಡುತ್ತದೆ.

“ಮೊದಲ ಹೆಜ್ಜೆ ಇಡುವ ಮುನ್ನ …" (ಮುನ್ನುಡಿ) ಲೇಖಕರು ಓದುಗರಿಗೆ ತಿಳಿಸುವ ಸಂಗತಿಗಳು: "ಈ ಪುಸ್ತಕದ ವಿಷಯ ಮನಸ್ಸು ಅಥವಾ ಮನಶ್ಶಾಸ್ತ್ರ ಅಲ್ಲ. ಈ ಪುಸ್ತಕ ಬರೆದಿರುವುದು ಮನುಷ್ಯರ ಬಗ್ಗೆ. ಎಂದರೆ ನಮ್ಮ ಬಗ್ಗೆ, ನಮ್ಮ ಸಹವರ್ತಿಗಳ ಬಗ್ಗೆ, ನಮ್ಮ ಸಮಸ್ಯೆಗಳ ಬಗ್ಗೆ, ನಮ್ಮ ಜೀವನಶೈಲಿಯ ಬಗ್ಗೆ.

ಮಾನಸಿಕ ಸಮಸ್ಯೆಗಳನ್ನು ಪರಿಹರಿಸಲು ಹಲವಾರು ವೈಜ್ನಾನಿಕ ಪಂಥಗಳು ಇವೆ. ಇವುಗಳಲ್ಲಿ ಪಾಶ್ಯಾತ್ಯ ದೇಶಗಳಲ್ಲಿ ಹೆಚ್ಚು ಜನಪ್ರಿಯವಾಗುತ್ತ ಮತ್ತು 1970ರಿಂದೀಚೆಗೆ ಭಾರತವೂ ಸೇರಿದಂತೆ ವಿಶ್ವಾದ್ಯಂತ ಪ್ರಬಲವಾಗಿ ಬೆಳೆಯುತ್ತಿರುವ ಎರಡು ಪಂಥಗಳು ಗೆಸ್ಟಾಲ್ಟ್ ಥೆರಪಿ ಮತ್ತು ಟ್ರ್ಯಾನ್ಸ್ಯಾಕ್ಶನಲ್ ಅನಾಲಿಸಿಸ್ (ಟಿ.ಎ.).

ಈ ಎರಡು ಪಂಥಗಳ ಸಿದ್ಧಾಂತಗಳ ಸ್ಥೂಲ ಪರಿಚಯ ಮತ್ತು ಈ ಸಿದ್ಧಾಂತಗಳನ್ನು ಆಧರಿಸಿ ಮಾನಸಿಕ ಸಮಸ್ಯೆಗಳನ್ನು ಹೇಗೆ
ವಾಸಿ ಮಾಡಲಾಗುತ್ತದೆ ಎಂಬುದನ್ನು ತಿಳಿಸಲು, ನನ್ನ ಉಪವೃತ್ತಿಯ, ಕೆಲವು ಚಿಕಿತ್ಸಾ ವರದಿಗಳನ್ನು ನಿಮ್ಮೊಡನೆ ಹಂಚಿಕೊಳ್ಳುವುದು ಈ ಪುಸ್ತಕದ ಉದ್ದೇಶ.

ತಮ್ಮ ಯೋಚನೆ, ಮಾತು, ಕೃತಿಗಳ ಅರ್ಥ (ಇನ್‌ಸೈಟ್) ತಿಳಿದಾಗ ಮಾನಸಿಕ ಸಮಸ್ಯೆ ಇರುವ ವ್ಯಕ್ತಿಗಳು ತಮ್ಮ ನಿಲುವನ್ನು ಹೇಗೆ ಬದಲಾಯಿಸಿಕೊಳ್ಳುತ್ತಾರೆ ಎಂಬುದನ್ನು ತಿಳಿಸಲು ಚಿಕಿತ್ಸೆಯ ಸಂವಾದಗಳನ್ನು, ಅವು ನಡೆದಂತೆಯೇ ಬರೆದಿದ್ದೇನೆ. ಗೋಪ್ಯ ಕಾಯ್ದಿಡಲು ಇವರೆಲ್ಲರ ಹೆಸರು ಬದಲಾಯಿಸಲಾಗಿದೆ. …”

ಈ ಪುಸ್ತಕ ಓದುವಾಗ, ಓದುಗ (ಬೇಕಿದ್ದರೆ) ಹೆಚ್ಚು ಪ್ರಯೋಜನ ಪಡೆಯಬಹುದಾದಂತಹ ಓದುವ ಬಗೆಯನ್ನು ಲೇಖಕರು ಮುನ್ನುಡಿಯಲ್ಲಿ ತಿಳಿಸಿದ್ದಾರೆ. ಅನಂತರ ಲೇಖಕರು ನಮ್ಮನ್ನು ಬೆಚ್ಚಿಬೀಳಿಸುವ ಸಂಗತಿಯನ್ನು ಬರೆದಿದ್ದಾರೆ: "ತಲೆ ಸರಿ ಇಲ್ಲದವರಿಗೆ ಮಾತ್ರ ಸೈಕಾಲಜಿ” ಎಂಬ ಸಾರ್ವತ್ರಿಕ ಕಲ್ಪನೆ ಪ್ರಬಲವಾಗಿ ಚಲಾವಣೆಯಲ್ಲಿದೆ. ಆದರೆ 'ತಲೆ ಸರಿ ಇರುವವರು” ಕೂಡ ಸೈಕಾಲಜಿ ತಿಳಿದು ತಮ್ಮ ‘ಸರಿಯಾದ"ಜೀವನ ಶೈಲಿಯನ್ನು ಇನ್ನಷ್ಟು ಸರಿಮಾಡಿಕೊಳ್ಳಬಹುದು ಎಂಬುದು ವಾಸ್ತವ. ಈ ವಾಸ್ತವವನ್ನು ಪರಿಚಯಿಸಲು ದೈನಂದಿನ ವಿದ್ಯಮಾನಗಳನ್ನು ಉದಾಹರಿಸಿ ಟಿ.ಎ.ಯನ್ನು ವಿವರಿಸಿದ್ದೇನೆ.”

ಪುಸ್ತಕ ಓದಲು ಶುರು ಮಾಡಿದರೆ ಕೆಳಗಿಡಲಾಗದಂತೆ ಓದಿಸಿಕೊಂಡು ಹೋಗುತ್ತದೆ. ಅಧ್ಯಾಯ 27ರಲ್ಲಿ ನೀವು-ನಾನು ಎಲ್ಲರೂ ಆಡುವ ಹಲವಾರು “ಮಾನಸಿಕ ಆಟ”ಗಳನ್ನು ಲೇಖಕರು ವಿವರಿಸಿದ್ದಾರೆ: ಆಟ: "ಸರಿ, ಆದರೆ”..., ಆಟ: ಹುಳುಕಾಟ; ಆಟ: ಮಹಾಯುದ್ಧ; ಆಟ: ನ್ಯಾಯಾಲಯ; ಆಟ: "ಬಾ, ಮಗನೆ”; ಆಟ: “ಅಂಥವಳಲ್ಲ"; ಆಟ: ರೇಪೊ; ಆಟ: “ಹಿತ್ತಿಲ ಬಾಗಿಲು”; ಆಟ: “ಉಗೀರಿ ನನಗೆ”; ಆಟ: ಹೆಡ್ಡ. ಹಾಗೆಯೇ ಪಿಗ್ಮಿ, ಛತ್ರಿ ಇತ್ಯಾದಿ ವರ್ತನೆಗಳನ್ನೂ ವಿಶ್ಲೇಷಿಸಿದ್ದಾರೆ. ಇವೆಲ್ಲ ಆಟಗಳನ್ನು ನಾವು ಮತ್ತು ಇತರರು ಆಡುವಾಗ ಅವನ್ನು ಗುರುತಿಸಲಾಗದೆ, ಆಟಗಳ ಸುಳಿಯಲ್ಲಿ ಮತ್ತೆಮತ್ತೆ ಸಿಲುಕುತ್ತಾ ಕೊನೆಯ ವರೆಗೂ ನಮ್ಮ ಬದುಕನ್ನು ಹೈರಾಣಾಗಿಸಿಕೊಳ್ಳುವ ದುರಂತ ನಮ್ಮದು. ಇಲ್ಲಿನ ವಿವರಣೆಯಿಂದ ಈ ಆಟಗಳನ್ನು ಇತರರು ಆಡುವಾಗ ಗುರುತಿಸಲು ಸಾಧ್ಯವಾದರೆ, ಅದರ ಸುಳಿಯಲ್ಲಿ ಸಿಲುಕದೆ ಪಾರಾಗಲು ನಾವು ಕಲಿಯಬಹುದು.

ಇವನ್ನು ಓದುತ್ತಿದ್ದಂತೆ, ನಮ್ಮ ಬದುಕನ್ನು ನಾವೇ ನರಕ ಮಾಡಿಕೊಂಡಿರುವುದು ನಮ್ಮ ಅರಿವಿಗೆ ಬರುತ್ತದೆ. ನಮ್ಮ ವರ್ತನೆಗಳನ್ನು ಬದಲಾಯಿಸಿಕೊಂಡು, ಆ “ನರಕ"ದಿಂದ ಪಾರಾಗುವ ಸಾಧ್ಯತೆಗಳು ಇದ್ದಾಗಲೂ ನರಕದಲ್ಲೇ ಬದುಕುತ್ತೇನೆ  ಎಂದು ಹಟಕ್ಕೆ ಬಿದ್ದವರಂತೆ ಇರುವವರನ್ನು ಕಂಡು ಅಯ್ಯೋ ಅನಿಸುತ್ತದೆ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ,
ಜೀವನದಲ್ಲಿ ಸಂತೋಷ ಅನುಭವಿಸುವ ಸಾಮರ್ಥ್ಯ ಹೆಚ್ಚಿಸುವುದನ್ನು ನಾವೆಲ್ಲರೂ ಈ ಪುಸ್ತಕದ ಓದು ಮತ್ತು ಇದರಲ್ಲಿನ ಚಿಕಿತ್ಸಾ ವಿಧಾನಗಳನ್ನು ನಮ್ಮ ಮೇಲೆಯೇ ಪ್ರಯೋಗಿಸಿಕೊಳ್ಳುವ (ಅಗತ್ಯವಿದ್ದರೆ ಸೈಕೋಥೆರಪಿಸ್ಟ್ ಸಹಾಯ ಪಡೆದು) ಮೂಲಕ ಸಾಧಿಸಲು ಸಾಧ್ಯವಿದೆ.

ಪುಸ್ತಕದ ಭಾಷೆಯ ಬಗ್ಗೆ ಒಂದು ಮಾತನ್ನು ಬರೆಯಲೇ ಬೇಕು. ಇಡೀ ಪುಸ್ತಕದಲ್ಲಿ ಅನಗತ್ಯವಾದ ಒಂದೇ ಒಂದು ಪದ ಇಲ್ಲ ಎನ್ನಬಹುದು. ಜೊತೆಗೆ,  ಬಿಗಿಯಾದ ಭಾಷೆಯಲ್ಲಿ ಬರೆಯುವುದು ಹೇಗೆ? ಎಂಬುದಕ್ಕೆ ಅತ್ಯುತ್ತಮ ಮಾದರಿ ಇಲ್ಲಿದೆ. “ಇದ್ದದ್ದನ್ನು ಇದ್ದ ಹಾಗೆ ಮಾತಾಡುವುದು ಮತ್ತು ಬರೆಯುವುದು ಹೇಗೆ?” ಎಂಬುದನ್ನು ಈ ಪುಸ್ತಕದಿಂದ ಖಂಡಿತವಾಗಿ ಕಲಿಯಬಹುದು.