ಮನಸ್ಸು ತಿಳಿಯಾಗಿರಲಿ
ಬಹು ಹಿಂದೆ ಇಟಲಿಯಲ್ಲಿ ಒಬ್ಬ ಪ್ರಾಮಾಣಿಕ ವ್ಯಾಪಾರಿಯಿದ್ದ. ಅವನು ತನ್ನ ಮಗಳ ಜತೆ ಸೇರಿಕೊಂಡು, ಅಂಗಡಿಯನ್ನು ನಡೆಸುತ್ತಾ, ಗೌರವಯುತವಾಗಿ ಜೀವಿಸುತ್ತಿದ್ದ. ಅಂದಿನ ದಿನಗಳಲ್ಲಿ ಇಟಲಿಯಲ್ಲಿ ಸಾಲಕ್ಕೆ ವಿಪರೀತ ಬಡ್ಡಿ. ವ್ಯಾಪಾರಿಯು ಒಬ್ಬ ಸಾಹುಕಾರನ ಬಳಿ ಅಂಗಡಿ ಆರಂಭಿಸುವಾಗ ಸಾಕಷ್ಟು ಸಾಲ ಮಾಡಿದ್ದ. ಪ್ರತಿ ತಿಂಗಳು ಬಡ್ಡಿ ಕಟ್ಟುತ್ತಿದ್ದ. ಆದರೇನು ಮಾಡುವುದು, ಎಷ್ಟು ವರ್ಷ ಕಳೆದರೂ ಅಸಲು ಹಾಗೆಯೇ ಇತ್ತು. ವ್ಯಾಪಾರಿ ಪ್ರತಿ ತಿಂಗಳು ಗಳಿಸಿದ ಲಾಭದ ಬಹುಪಾಲು ಬಡ್ಡಿಗೇ ಹೋಗುತ್ತಿತ್ತು. ವ್ಯಾಪಾರಿಯ ಸಾಲದ ಹೊರೆ ಇಳಿಯಲೇ ಇಲ್ಲ.
ಆತನಿಗೆ ಸಾಲ ಕೊಟ್ಟಿದ್ದ ಸಾಹುಕಾರನು ಚತುರ, ನಿರ್ದಯಿ. ಅತಿ ಎನಿಸುವ ಬಡ್ಡಿಯನ್ನು ತನ್ನ ಸಾಲಗಾರರಿಂದ ವಸೂಲು ಮಾಡುವುದೇ ಆತನ ಗುರಿ. ಆತನಿಗೆ ವಯಸ್ಸಾಗಿತ್ತು. ಆದರೂ ಚಪಲಗಳು ಸಾಕಷ್ಟಿದ್ದವು. ಒಂದು ದಿನ ಈ ವ್ಯಾಪಾರಿಯ ಬಳಿ ಬಂದು , "ನಿನ್ನ ಸಾಲವನ್ನು ಪೂರ್ತಿಯಾಗಿ ಮರುಪಾವತಿ ಮಾಡುವ ಒಂದು ಅವಕಾಶವಿದೆ. ಆದರೆ ಅದಕ್ಕೊಂದು ಷರತ್ತು ಇದೆ" ಎಂದ. ಪ್ರತಿ ತಿಂಗಳು ಬಡ್ಡಿ ಕಟ್ಟುವ ಹಿಂಸೆಯಿಂದ ದೂರಾಗುವ ದಾರಿಯನ್ನು ವ್ಯಾಪಾರಿ ಹುಡುಕುತ್ತಿದ್ದ. "ಹೇಳಿ ಸ್ವಾಮಿ, ಏನದು ಷರತ್ತು?" ಎಂದು ಆಸೆಯಿಂದ ಕೇಳಿದ.
"ನಿನ್ನ ಸಾಲ ಪೂರ್ತಿ ಮನ್ನಾ ಮಾಡುತ್ತೇನೆ. ನನ್ನ ಷರತ್ತು ಎಂದರೆ, ನಿನ್ನ ಮಗಳನ್ನು ನನಗೆ ಮದುವೆ ಮಾಡಿಕೊಡಬೇಕು." ಎಂದ ಬಡ್ಡಿ ಸಾಹುಕಾರ. ಆತನಿಗೆ ವಿಪರೀತ ವಯಸ್ಸಾಗಿತ್ತು. ಮಾತ್ರವಲ್ಲ, ಆತನ ನಿರ್ದಯಿ ಗುಣ ಊರಿನಲ್ಲೆಲ್ಲಾ ಪ್ರಚಾರವಾಗಿತ್ತು. ಈ ಷರತ್ತನ್ನು ವಿಧಿಸಿದಾಗ, ವ್ಯಾಪಾರಿಯ ಮಗಳು ಸಹ ಅಂಗಡಿಯಲ್ಲೇ ಇದ್ದಳು. ಅವಳು ತೀಕ್ಷ್ಣವಾಗಿ ಬಡ್ಡಿ ಸಾಹುಕಾರನನ್ನು ನೋಡಿದಳು. ವ್ಯಾಪಾರಿ ಮತ್ತು ಮಗಳು ಇಬ್ಬರೂ ಈ ಷರತ್ತನ್ನು ತಿರಸ್ಕರಿಸಿದರು.
ಮರುದಿನ ಸಾಹುಕಾರ ಪುನಃ ಬಂದ. "ನನ್ನನ್ನು ಕ್ರೂರಿ ಎಂದು ತಿಳಿಯಬೇಡಿ, ನಿಮ್ಮ ಕಷ್ಟ ನನಗೆ ಅರ್ಥವಾಗುತ್ತದೆ. ನಿಮ್ಮ ಸಾಲ ವಜಾ ಮಾಡಲು ನನಗೆ ಆಸಕ್ತಿ ಇದೆ. ನಾನು ಇನ್ನೊಂದು ಪರೀಕ್ಷೆ ಕೊಡುತ್ತೇನೆ. ನಿನ್ನ ಮಗಳು ತೀಕ್ಷ್ಣವಾಗಿದ್ದಾಳೆ ಮತ್ತು ಬುದ್ಧಿವಂತೆ. ನೀವಿಬ್ಬರೂ ನಿಮ್ಮ ಬುದ್ಧಿಯನ್ನು ಉಪಯೋಗಿಸಿದರೆ, ಈ ಪರೀಕ್ಷೆಯಲ್ಲಿ ಪಾಸಾಗಬಹುದು. ಆಗ ನಿಮ್ಮ ಸಾಲ ಮನ್ನಾ ಮಾಡುತ್ತೇನೆ." ಎಂದ.
"ಏನದು ಬುದ್ದಿಮತ್ತೆಯ ಪರೀಕ್ಷೆ?" ಎಂದ ವ್ಯಾಪಾರಿ.
"ನದಿ ತೀರಕ್ಕೆ ಹೋಗೋಣ. ಒಂದು ಚೀಲದಲ್ಲಿ ಕಪ್ಪು ಮತ್ತು ಬಿಳಿಯ ದುಂಡುಕಲ್ಲುಗಳನ್ನು ಹಾಕುತ್ತೇನೆ. ನಿಮ್ಮ ಮಗಳು ಕೈ ಹಾಕಿ ಒಂದು ಕಲ್ಲು ತೆಗೆಯಬೇಕು. ಕಪ್ಪು ಕಲ್ಲು ತೆಗೆದರೆ, ಸಾಲ ವಜಾ. ಆದರೆ ಅವಳು ನನ್ನನ್ನು ಮದುವೆಯಾಗಬೇಕು. ಬಿಳಿ ಕಲ್ಲು ತೆಗೆದರೆ ಸಾಲ ವಜಾ, ಆದರೆ ಮದುವೆಯಾಗಬೇಕಿಲ್ಲ." ಎಂದ ಬಡ್ಡಿ ಸಾಹುಕಾರ.
ಈ ಮೂವರು ಹಾಗೂ ತೀರ್ಪುಗಾರರಾಗಿ ಓರ್ವ ಊರಿನ ಹಿರಿಯ ಮುಖಂಡರು ಎಲ್ಲರೂ ನದಿ ತೀರಕ್ಕೆ ಹೋದರು. ಅಲ್ಲೆಲ್ಲಾ ಸಾಕಷ್ಟು ಕಪ್ಪು ಮತ್ತು ಬಿಳಿ ಕಲ್ಲುಗಳು ಬಿದ್ದಿದ್ದವು. ಬಡ್ಡಿ ಸಾಹುಕಾರನು ಎರಡೂ ಕಲ್ಲುಗಳನ್ನು ಆಯ್ದು ತನ್ನ ಕೈಲಿದ್ದ ಚೀಲಕ್ಕೆ ಹಾಕಿದ. ವ್ಯಾಪಾರಿಯ ಮಗಳ ದೃಷ್ಟಿ ತೀಕ್ಷ್ಣ. ಕುಟಿಲ ಬುದ್ಧಿಯ ಸಾಹುಕಾರನು ಎರಡೂ ಕಪ್ಪುಕಲ್ಲುಗಳನ್ನು ಆಯ್ದು ಚೀಲದೊಳಕ್ಕೆ ಸೇರಿಸಿದ್ದನ್ನು ಅವಳು ನೋಡಿದಳು. ಯಾವ ಕಲ್ಲನ್ನು ತೆಗೆದರೂ ಕಪ್ಪು ಕಲ್ಲು ಸಿಗುತ್ತದೆ ! ಸಾಹುಕಾರನ ಸಂಚು ಯಶಸ್ವಿಯಾಗುತ್ತದೆ.
ವ್ಯಾಪಾರಿಯ ಮಗಳು ಒಂದು ಕ್ಷಣ ಯೋಚಿಸಿ, ನಿಧಾನವಾಗಿ ಚೀಲದೊಳಗೆ ಕೈ ಹಾಕಿ ಒಂದು ಕಲ್ಲನ್ನು ತೆಗೆದಳು. ಹೊರತೆಗೆದ ತಕ್ಷಣ, ಕೈಜಾರಿದ ರೀತಿಯ ನಟನೆ ಮಾಡಿ, ಆ ಕಲ್ಲನ್ನು ನೆಲಕ್ಕೆ ಬೀಳಿಸಿದಳು. ನದಿ ತೀರದಲ್ಲಿ ನೂರಾರು ಕಪ್ಪು ಬಿಳಿ ಕಲ್ಲುಗಳಿದ್ದವು ಬಿದ್ದ ಕಲ್ಲು ಆ ಕಲ್ಲುಗಳ ನಡುವೆ ಸೇರಿಹೋಯಿತು. "ಓಹ್" ಎಂದಳು ಯುವತಿ. ಸಾಹುಕಾರನು ಪ್ರಶ್ನಾರ್ಥಕವಾಗಿ ನೋಡಿದ. "ಕ್ಷಮಿಸಿ ಸಾಹುಕಾರರೇ, ಕಲ್ಲು ಬಿದ್ದು ಹೋಯಿತು. ಆದರೆ ತೊಂದರೆ ಇಲ್ಲ. ಈಗ ಚೀಲದಲ್ಲಿ ಉಳಿದ ಕಲ್ಲಿನ ಬಣ್ಣ ನೋಡಿ ನಾನು ಬೀಳಿಸಿದ ಕಲ್ಲಿನ ವರ್ಣ ತಿಳಿದುಕೊಳ್ಳಬಹುದು." ಎಂದಳು. ಸಾಹುಕಾರನಿಗೆ ಫಚೀತಿಯಾಯಿತು. ಅವರೆಲ್ಲರ ಮುಖಗಳನ್ನು ನೋಡಿದ. ತೀರ್ಪುಗಾರ ಮುಖಂಡನೂ ಹುಡುಗಿಯ ಮಾತಿಗೆ ಸಮ್ಮತಿಸಿದ. ಬೇರೆ ದಾರಿಯಿಲ್ಲದೇ ಸಾಹುಕಾರನು ಅನಿವಾರ್ಯವಾಗಿ ಚೀಲದ ಒಳಗೆ ಉಳಿದಿದ್ದ ಕಲ್ಲನ್ನು ಹೊರತೆಗೆದ. ಅದು ಕಪ್ಪು ಕಲ್ಲು ! ಆದ್ದರಿಂದ ಬಿಳಿ ಕಲ್ಲನ್ನು ಮಗಳು ತೆಗೆದದ್ದು ಎಂದಾಯಿತು. ತೀರ್ಪುಗಾರನೂ ಇದನ್ನೇ ಅನುಮೋದಿಸಿದ ಹಾಗೂ ವ್ಯಾಪಾರಿಯ ಸಾಲ ಮನ್ನಾ ಆಗಿದೆ ಎಂದು ಘೋಷಿಸಿದ.
ಬದುಕಿನಲ್ಲಿ ಎಂತಹದೇ ಕಷ್ಟದ ಸನ್ನಿವೇಶ ಎದುರಾದರೂ, ತಿಳಿಯಾದ ಮನಸ್ಸಿನಿಂದ ಯೋಚಿಸಿದರೆ ಪರಿಹಾರ ದೊರಕಬಲ್ಲುದು ಎಂಬುದೇ ಈ ಕಥೆಯ ಸಾರ.
-ಶಶಾಂಕ್ ಮುದೂರಿ (ವಿಶ್ವವಾಣಿ ಪತ್ರಿಕೆಯಿಂದ)
ಚಿತ್ರ ಕೃಪೆ: ಅಂತರ್ಜಾಲ ತಾಣ