ಮನಸ್ಸು ಮಾಡಿದರೆ ಏನೂ ಮಾಡಬಹುದು !
ಒಂದು ದೊಡ್ಡ ಬಂಡೆಗಲ್ಲು ಇತ್ತು. ಅದರ ಪಕ್ಕ ಒಂದು ಬೀಜ ಗಾಳಿಗೆ ತೂರಿಕೊಂಡು ಬಂದು ಬಿತ್ತು. ಆ ಬೀಜವನ್ನು ನೋಡಿದ ಬಂಡೆಕಲ್ಲಿಗೆ ಕನಿಕರವಾಯ್ತು. ಬಂಡೆಗಲ್ಲು ಬೀಜಕ್ಕೆ ಹೇಳಿತು.. "ಏನಪ್ಪಾ ನಿನ್ನ ಪರಿಸ್ಥಿತಿ, ನಿನಗೆ ಕಾಯಂ ಸ್ಥಳವಿಲ್ಲ, ಗಾಳಿ ಬೀಸಿದ ಕಡೆ ಹೋಗುತ್ತಿ, ಹೀಗಾಗಬಾರದಿತ್ತು" ಎಂದಿತು. ಆಗ ಬೀಜ ಹೇಳಿತು.... "ಸ್ವಲ್ಪ ದಿನ ತಾಳು, ನಾಲ್ಕು ಹನಿ ಮಳೆ ಬೀಳಲಿ, ಆಗ ನಿನಗೆ ಗೊತ್ತಾಗುತ್ತದೆ" ಎಂದಿತು. ಮಳೆ ಬಂದಿತು. ಬೀಜ ಮೊಳಕೆಯೊಡೆದು ಬೆಳೆಯಲು ಪ್ರಾರಂಭಿಸಿತು. ದಿನಾ ದಿನಾ ಬೆಳೆದು, ಕಡೆಗೆ ಹೆಮ್ಮರವಾಯಿತು. ಹೂ, ಹಣ್ಣು ಬಿಟ್ಟು ವಿವಿಧ ಪಕ್ಷಿಗಳಿಗೆ ಆಹಾರ ಆಶ್ರಯ ನೀಡುವ ತಾಣವಾಯಿತು. ಪಕ್ಷಿಗಳು ಹಾರಾಡುತ್ತಾ, ಹಾಡಿಕೊಂಡು ಸಂತೋಷದಿಂದ ಮರದಲ್ಲಿ ವಾಸವಾಗಿದ್ದವು. ಇದನ್ನು ನೋಡಿದ ಬಂಡೆಕಲ್ಲು ಹೇಳಿತು. "ಬೀಜವಾಗಿದ್ದಾಗ ನೀನು ಹೀಗೆ ಮರವಾಗಿ ಬೆಳೆಯುತ್ತಿ ಎಂದು ಗೊತ್ತೇ ಆಗಲಿಲ್ಲ" ಎಂದಿತು. ಆಗ ಮರ ಹೇಳಿತು. "ನೀನೇನು ಕಡಿಮೆ ಅಲ್ಲ, ನೀನು ಶಿಲ್ಪಿ ಹತ್ತಿರ ಹೋಗು. ನೀನು ಸುಂದರ ಶಿಲ್ಪಿ ಆಗುತ್ತೀ, ನಿನ್ನಲ್ಲು ಅಂತಹ ಅದ್ಭುತ ಶಕ್ತಿ ಇದೆ ಎಂದಿತು". ಇದನ್ನು ಕೇಳಿದ ಬಂಡೆ ಕಲ್ಲು ಶಿಲ್ಪಿ ಬಳಿ ಹೋಯಿತು. ಅದ್ಭುತ ಶಿಲ್ಪವಾಗಿ ಮೂಡಿತು. ಅದನ್ನು ನೋಡಲು ಜನ ಸಾಗರವೇ ಬರುವಂತಾಯಿತು.
ನೀವೆಲ್ಲ ಕವಿ ಕಾಳಿದಾಸನ ಕಥೆ ಕೇಳಿರಬಹುದು. ಆದರೆ ಮಂತ್ರಿಯ ಕುತಂತ್ರದಿಂದ ರಾಜಕುಮಾರಿಯನ್ನು ಮದುವೆಯಾದನು. ಮದುವೆಯಾದ ಮೇಲೆ ರಾಜಕುಮಾರಿಗೆ ಗೊತ್ತಾಯ್ತು ಗಂಡ ದಡ್ಡ ಎಂದು. ಆಗ ಗಂಡ ಕಾಳಿದಾಸನಿಗೆ ಹೇಳಿದಳು... "ನಿನ್ನಲ್ಲಿ ಅದ್ಭುತ ಶಕ್ತಿ ಇದೆ. ಹಾಗಾಗಿ ನೀನು ಜಾಣ ಆಗುವವರೆಗೆ ಮನೆಗೆ ಬರಬೇಡ" ಎಂದಳು. ಈಗಿನ ಕಾಲವಾಗಿದ್ದರೆ ವಿಚ್ಛೇದನವಾಗುತ್ತಿತ್ತು. ಇಲ್ಲವೇ ಜಗಳವೇ ಆಗುತ್ತಿತ್ತು. ಕಾಳಿದಾಸ ಹೇಳಿದ, "ನಾನು ಜಾಣನಾಗಿ ಬರುತ್ತೇನೆ" ಎಂದು ಕಾಡಿಗೆ ಹೋದನು. ಕಾಡಿನ ಸೌಂದರ್ಯ ತುಂಬಿಕೊಂಡ, ಕಾಡಿನಲ್ಲಿರುವ ಸುಗಂಧ ತುಂಬಿಕೊಂಡನು. ನದಿಯ ಜುಳು ಜುಳು ನಾದ ಕೇಳಿದ. ಸೂರ್ಯೋದಯ, ಚಂದ್ರೋದಯ, ಸೂರ್ಯಾಸ್ತ, ಚಂದ್ರಾಸ್ತ, ಮೇಘಗಳು, ನಕ್ಷತ್ರಗಳು ಎಲ್ಲವನ್ನು ವೀಕ್ಷಿಸಿದ. ನದಿಯ ತರಂಗಗಳನ್ನು ಗಮನಿಸಿದ. ಗಾಳಿ ಬೀಸಿದಾಗ ಬರುವ ಶಬ್ದ ಆಲಿಸಿದನು. ಮಳೆಯಲ್ಲಿ ನೆನೆದನು. ವಿವಿಧ ಋತುಗಳನ್ನು ಅನುಭವಿಸಿದನು. ಆತನ ಮನಸ್ಸಿನಲ್ಲಿ ಬರಿ ಸೌಂದರ್ಯ, ಮಾಧುರ್ಯ ತುಂಬಿತ್ತು. ಆತನ ಒಂದೊಂದು ಪದವು ಕವಿತೆಯಾಗಿತ್ತು. ಹಾಡಿಕೊಂಡು ಮನೆಗೆ ಬಂದ. ಆತ ಹೇಳಿದ್ದೆಲ್ಲ ಕವಿತೆಯಾಗಿತ್ತು.
ಇದಕ್ಕೆಲ್ಲ ಕಾರಣ ಮನಸ್ಸು. ಮನಸ್ಸನ್ನು ಸರಿಯಾಗಿ ಬಳಸಿದರೆ ಏನು ಬೇಕಾದರೂ ಮಾಡಲು ಸಾಧ್ಯ. ಕಾಳಿದಾಸ ಮೇಘಧೂತ, ಅಭಿಜ್ಞಾನ ಶಾಕುಂತಲ ಮುಂತಾದ ಕವಿತೆಗಳನ್ನು ಬರೆದ. ಇದಕ್ಕೆ ಕಾರಣ ಮನಸ್ಸು. ಬೀಜದಲ್ಲಿ ಮರ ಕಾಣುತ್ತದೆಯೇ...? ಬಂಡೆಗಲ್ಲಿನಲ್ಲಿ ಶಿಲ್ಪ ಕಾಣುತ್ತದೆಯೇ...? ಇಲ್ಲ. ಆದರೆ ಅದರಲ್ಲಿ ಹುದುಗಿದೆ. ಕಣ್ಣಿಗೆ ಕಾಣುವುದಿಲ್ಲ. ಹಾಗೆಯೇ ಮಕ್ಕಳೇ, ನಮ್ಮಲ್ಲಿ ನಿಸರ್ಗ ಯಾವುದೋ ಶಕ್ತಿಯನ್ನು ಹುದುಗಿಸಿ ಇಟ್ಟಿದೆ. ಶಿಲ್ಪಿ ಅಂತ ಗುರು ಬೇಕು. ಆತ ರೂಪ ಕೊಡುತ್ತಾನೆ. ಬೀಜ ಬೆಳೆಯಲು ನೀರು, ಗಾಳಿ ಗೊಬ್ಬರ, ಬೇಲಿ ಹೇಗೋ ಹಾಗೆ ತಂದೆ ತಾಯಿಗಳು ಪೋಷಣೆ ಮಾಡುತ್ತಾರೆ. ಇಷ್ಟೆಲ್ಲ ಇದ್ದಮೇಲೆ ನಮ್ಮೊಳಗಿರುವ ಶಕ್ತಿಯನ್ನು ಹೊರ ತೆಗೆಯಬೇಕು. ನಿಸರ್ಗ ಮಾಡಿರುವುದರಲ್ಲಿ ಉಪಯೋಗಕ್ಕೆ ಬಾರದ ಒಂದು ವಸ್ತೂ ಇಲ್ಲ. ನಾವು ನಿಸರ್ಗದ ಕೊಡುಗೆ ಅಂದಮೇಲೆ ನಾವು ಉಪಯೋಗಕ್ಕೆ ಬರಬೇಕಲ್ಲ.... ನಾವೆಲ್ಲ ಸಣ್ಣವರು ಅನ್ನಬಾರದು. ಯಾವುದೋ ಒಂದು ವಿಶೇಷ ಶಕ್ತಿ ಇರುತ್ತದೆ. ಅದು ಹುದುಗಿರುತ್ತದೆ ಕಾಣುವುದಿಲ್ಲ. ಅದನ್ನು ಗುರುತಿಸಬೇಕು. ನಿರುಪಯುಕ್ತ ಅನ್ನುವುದು ಜಗತ್ತಿನಲ್ಲಿ ಇಲ್ಲ. ಯಾವುದೂ ಕೀಳಲ್ಲ. ಯಾವುದೂ ನಿರುಪಯುಕ್ತವಲ್ಲ ಎನ್ನುವುದನ್ನು ತಿಳಿದಿರಬೇಕು. ಇದಕ್ಕೆ ಪತಂಜಲಿ ಮಹರ್ಷಿ ಹೇಳುತ್ತಾರೆ, "ಸತು ದೀರ್ಘಕಾಲ ನೈರಂತರ್ಯ ಆಸತ್ಕಾರ ಆ ಸೇವಿತಹ". ಅಂದರೆ ನಿರಂತರ ಪ್ರಯತ್ನ ಮಾಡಬೇಕು. ನಮ್ಮೊಳಗಿರುವ ಶಕ್ತಿ ಹೊರ ಬರಬೇಕಾದರೆ ನಿರಂತರ ಅಭ್ಯಾಸ ಮಾಡಬೇಕು. ಒಂದು ಬೀಜದಲ್ಲಿ ಮರವಾಗುವ ಶಕ್ತಿ ಇದ್ದರೆ, ಅದು ಒಂದೇ ದಿನದಲ್ಲಿ ಮರವಾಗುವುದಿಲ್ಲ. ಕೆಲವು ವರ್ಷ ಬೇಕಾಗುತ್ತದೆ. ಅಲ್ಲಿಯವರೆಗೂ ಬೆಳೆಯುತ್ತದೆ. ಬೆಳೆದ ನಂತರವೂ ಸುಮ್ಮನೆ ಇರುವುದಿಲ್ಲ. ಪ್ರತಿ ದಿನ ಹೊಸ ಎಲೆ, ಹೂವು, ಹಣ್ಣು ಬಿಡುತ್ತಲೇ ಇರುತ್ತದೆ. ಹಾಗೆ ನಾವು ಸರಿಯಾದ ಗುರಿ ತಲುಪುವವರೆಗೂ ಅಭ್ಯಾಸ ಮಾಡಬೇಕು. ಗುರಿ ತಲುಪಿದ ನಂತರವೂ ಅಭ್ಯಾಸ ಮಾಡುತ್ತಿರಬೇಕು. ಇದು ಜೀವನ ಪರ್ಯಂತ ನಡೆಯುತ್ತಿರಬೇಕು. ಅಭ್ಯಾಸ ಎಂದರೆ ಸರಿಯಾಗಿ ಬರುವವರೆಗೆ ಪದೇ- ಪದೇ, ಪದೇ- ಪದೇ, ಮಾಡುತ್ತಿರಬೇಕು. ಮಕ್ಕಳೇ, ನಿಮಗೆಲ್ಲ ನೆನಪಿನಲ್ಲಿ ಉಳಿಯುವುದಿಲ್ಲ ಎನ್ನುತ್ತೀರಿ. ಓದಿದ್ದು ಒಂದು ಬಾರಿ, ಅದು ಹೇಗೆ ನೆನಪಿನಲ್ಲಿ ಉಳಿಯುತ್ತದೆ?. ನಮ್ಮ ಅಭ್ಯಾಸ ಹೇಗಿರಬೇಕೆಂದರೆ ನೆನಪಿನಲ್ಲಿ ಉಳಿಯುವ ತನಕ ಪದೇ ಪದೇ ಓದುವುದು. ಎಷ್ಟು ಬಾರಿ ಓದಬೇಕು?. ಇಷ್ಟು ಬಾರಿ ಅಂತ ಅಲ್ಲ. ನೆನಪಿನಲ್ಲಿ ಉಳಿಯುವವರೆಗೆ ಓದಬೇಕು. ಅದು ಒಂದು ಬಾರಿ, ಐದು ಬಾರಿ, ಹತ್ತು ಬಾರಿ, ಸಾವಿರ ಬಾರಿಯಾದರೂ ಸರಿಯೇ ಓದುತ್ತೇನೆ ಎಂದು ಕುಳಿತರೆ ಯಾಕೆ ನೆನಪಿನಲ್ಲಿ ಉಳಿಯುವುದಿಲ್ಲ. ಒಮ್ಮೆ ಓಡಿ ಯಾರು ಶ್ರೇಷ್ಠ ಆಟಗಾರನಾಗಿಲ್ಲ. ಒಮ್ಮೆ ಹಾಡಿ, ಯಾರು ಶ್ರೇಷ್ಠ ಸಂಗೀತಗಾರನಾಗಿಲ್ಲ. ಅಸಾಧ್ಯ ಅನ್ನುವುದನ್ನು ಮನಸ್ಸಿನಿಂದ ತೆಗೆಯಬೇಕು. ನನ್ನ ಕೈಯಲ್ಲಿ ಸಾಧ್ಯ. ಮಾಡೇ ತೀರುತ್ತೇನೆ ಎಂದು ಅಭ್ಯಾಸ ಮಾಡಿದರೆ ಖಂಡಿತವಾಗಿ ಯಶಸ್ಸು ನಮ್ಮದೇ. ಹೀಗೆ ಮನಸ್ಸನ್ನು ಬಳಸಿದರೆ ನಮ್ಮೊಳಗಿರುವ ಶಕ್ತಿ ವಿಕಾಸವಾಗಿ ನಾನೊಬ್ಬ ವಿಜ್ಞಾನಿ, ತತ್ವಜ್ಞಾನಿ, ವಕೀಲ, ವೈದ್ಯ, ತತ್ವಶಾಸ್ತ್ರಜ್ಞ, ಸಂಗೀತಜ್ಞ, ಶ್ರೇಷ್ಠ ಶಿಲ್ಪಿ, ಶ್ರೇಷ್ಠ ಕ್ರೀಡಾಪಟು, ಶ್ರೇಷ್ಠ ಕವಿ, ಶ್ರೇಷ್ಠ ಸಾಹಿತಿ ಅಥವಾ ಶ್ರೇಷ್ಠ ನೃತ್ಯಗಾರ ಯಾವುದಾದರೂ ಒಂದರಲ್ಲಿ ಶ್ರೇಷ್ಠ ಸಾಧನೆ ಮಾಡಬಹುದು.
ಒಮ್ಮೆ ಭೂಮಿ ಬೆಳೆಯಲಿಲ್ಲ ಅಂದರೆ ಬೆಳೆಯುವುದೇ ಬೇಡ ಅನ್ನುತ್ತೇವೆ. ಭೂಮಿ ಹೇಳುತ್ತದೆ ನಾನು ಬೆಳೆಯುತ್ತೇನೆ, ಬೆಳೆದು ಜಗತ್ತು ಉಳಿಯುವಷ್ಟು ಅನ್ನ ಕೊಡುತ್ತೇನೆ. ಬೆಳೆಯುತ್ತೇನೆ. ಆದರೆ ಸ್ವಲ್ಪ ನಿಧಾನವಾಗಿರು, ನಿರಾಸೆಯಾಗ ಬೇಡ ಅನ್ನುತ್ತದೆ. ನಿರಾಸೆ ಅನ್ನುವುದೇ ಮಹಾ ಪಾಪ. ಏನೇ ಆಗಲಿ ನಿರಾಸೆಯಾಗಬಾರದು. ನನಗೆ ಸಾಧ್ಯವಿದೆ, ಉತ್ಸಾಹವಿದೆ ಅನ್ನುವುದು ಬಹಳ ಮುಖ್ಯ. ಅದಕ್ಕೆ ಅರವಿಂದ ಮಹರ್ಷಿಗಳು ಹೇಳಿದ್ದು "ಅಭಿಪ್ಸ" ಇರಬೇಕು. ಅಂದರೆ ನಾನು ಬೆಳೆಯಬೇಕು. ಎತ್ತರ ಎತ್ತರ ಬೆಳೆಯಬೇಕು. ಹಾಗೆ ಮನಸ್ಸನ್ನು ಬೆಳೆಸಬೇಕು. ಬಳಸದಿದ್ದರೆ, ಅಭ್ಯಾಸ ಮಾಡದಿದ್ದರೆ, ಬಡವನಾಗಿ, ದರಿದ್ರನಾಗಿ, ಅಜ್ಞಾನಿಯಾಗಿ ಅಂಧಕಾರದಲ್ಲಿ ಬದುಕಬೇಕಾಗುತ್ತದೆ. ಈ ಮನಸ್ಸು ಸಾಮಾನ್ಯವಲ್ಲ. ಒಂದು ಸುಂದರ ಸಾಧನ. ಇದರಲ್ಲಿ ಅಡಗಿರುವ ಶಕ್ತಿ ಕಾಣುವುದಿಲ್ಲ. ಅತ್ಯದ್ಭುತ ಶಕ್ತಿ ಅಡಗಿದೆ. ಈ ಮನಸ್ಸನ್ನು ಸುಂದರವಾಗಿ ಬಳಸಿ ಸ್ವರ್ಗ ಸುಖ ಕಾಣಬಹುದು. ಶ್ರೇಷ್ಠ ಜೀವನ ಸಾಧಿಸಬಹುದು. ಅಲ್ಲವೇ?
-ಎಂ.ಪಿ. ಜ್ಞಾನೇಶ್, ಮಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ